ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಟೆಸ್ಟ್ ಕಮ್‌ಬ್ಯಾಕ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಚೆನ್ನೈ: 632 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕಮ್‌ಬ್ಯಾಕ್ ಟೆಸ್ಟ್ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್ ಪಂತ್, ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಐಪಿಎಲ್, ಅಂ.ರಾ.ಟಿ20, ಏಕದಿನ ಪಂದ್ಯಗಳನ್ನಾಡಿದ್ದರು. ಇದೀಗ 632 ದಿನಗಳ ಬಳಿಕ ಚೆನ್ನೈ ಟೆಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್ ಮಾದರಿಗೆ ವಾಪಾಸ್ಸಾಗಿದ್ದರು.
ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಒಂದು ಹಂತದಲ್ಲಿ 67 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಆಸರೆಯಾದರು. ಆರಂಭದಲ್ಲಿ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಪಂತ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿಬಿಟ್ಟು ಬ್ಯಾಟ್ ಬೀಸಿದರು. ರಿಷಭ್ ಪಂತ್ 124 ಎಸೆತಗಳನ್ನು ಎದುರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.
ಧೋನಿ ದಾಖಲೆ ಸರಿಗಟ್ಟಿದ ಪಂತ್:
ಭಾರತ ಪರ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ದಾಖಲೆ ಇಲ್ಲಿಯವರೆಗೂ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಧೋನಿ 144 ಟೆಸ್ಟ್ ಇನಿಂಗ್ಸ್‌ಗಳನ್ನಾಡಿ 6 ಶತಕ ಸಿಡಿಸಿದ್ದರು. ಆದರೆ ಇದೀಗ ಪಂತ್ ಕೇವಲ 58 ಟೆಸ್ಟ್ ಇನಿಂಗ್ಸ್ಗಳನ್ನಾಡಿ 6 ಟೆಸ್ಟ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವೃದ್ದಿಮಾನ್ ಸಾಹ 54 ಟೆಸ್ಟ್ ಇನಿಂಗ್ಸ್‌ಗಳಿಂದ 3 ಟೆಸ್ಟ್ ಶತಕ ಸಿಡಿಸಿದ್ದಾರೆ.
ಅಂತಿಮವಾಗಿ ರಿಷಭ್ ಪಂತ್ 128 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 109 ರನ್ ಗಳಿಸಿ ಮೆಹದಿ ಹಸನ್ ಮಿರಾಜ್‌ಗೆ ವಿಕೆಟ್ ಒಪ್ಪಿಸಿದರು.
