ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಭಾರತ ಪಾಕಿಸ್ತಾನಕ್ಕೆ ಬರದಿದ್ದರೇ, ಪಾಕಿಸ್ತಾನ ಕೂಡಾ ಐಸಿಸಿ ಟೂರ್ನಿಯನ್ನಾಡಲು ಭಾರತಕ್ಕೆ ಬರುವುದಿಲ್ಲ ಎನ್ನುವ ಪಿಸಿಬಿ ಬೇಡಿಕೆಗೆ ಬಿಸಿಸಿಐ ಖಡಕ್ ತಿರುಗೇಟು ಕೊಟ್ಟಿದೆ.
ನವದೆಹಲಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ವಿಚಾರವಾಗಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಸಾಗಿದ್ದು, ಇದೀಗ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಪಡೆದುಕೊಂಡಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ ಎಂದು ವರದಿಯಾಗಿದೆ. ಸಂಪೂರ್ಣ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲೇ ಆಯೋಜನೆಗೊಳ್ಳಬೇಕು ಎಂದು ಪಟ್ಟುಹಿಡಿದಿರುವ ಪಾಕಿಸ್ತಾನಕ್ಕೆ ಬಿಸಿಸಿಐ ಮತ್ತೊಂದು ಶಾಕ್ ನೀಡಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಮುಂಬರುವ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದೆ. ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿ ಬಳಿ ಮನವಿ ಮಾಡಿಕೊಂಡಿದೆ. ಭದ್ರತೆಯ ಕಾರಣದಿಂದ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ಪಾಕಿಸ್ತಾನದಿಂದಾಚೆ ಆಯೋಜಿಸುವಂತೆ ಬಿಸಿಸಿಐ ಮನವಿ ಮಾಡಿಕೊಂಡಿದೆ. ಆದರೆ ಬಿಸಿಸಿಐ ಅವರ ಈ ವಾದವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದು, ಸಂಪೂರ್ಣ ಟೂರ್ನಿ ಪಾಕಿಸ್ತಾನದಲ್ಲೇ ಆಯೋಜಿಸುತ್ತೇವೆ ಎಂದು ಪಟ್ಟು ಹಿಡಿದಿದೆ.
ಸರ್ ಡಾನ್ ಬ್ರಾಡ್ಮನ್ ಭಾರತ ವಿರುದ್ದ ಪಂದ್ಯದಲ್ಲಿ ಧರಿಸಿದ್ದ ಬ್ಯಾಗಿ ಗ್ರೀನ್ ₹2.63 ಕೋಟಿಗೆ ಹರಾಜು!
ಈ ವಿಚಾರವಾಗಿ ಹಲವು ಸುತ್ತಿನ ಮಾತುಗಳು ಬಿಸಿಸಿಐ, ಪಿಸಿಬಿ ಹಾಗೂ ಐಸಿಸಿ ನಡುವೆ ನಡೆದಿದ್ದು, ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಹೀಗಿರುವಾಗಲೇ, ಒಂದು ವೇಳೆ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಭಾರತಕ್ಕೆ ಬರದಿದ್ದರೇ, ಪಾಕಿಸ್ತಾನ ತಂಡ ಕೂಡಾ ಬಿಸಿಸಿಐ ಆಯೋಜಿಸುವ ಯಾವುದೇ ಐಸಿಸಿ ಹಾಗೂ ಇನ್ನಿತರ ಟೂರ್ನಿಗಳನ್ನಾಲು ಭಾರತಕ್ಕೆ ಬರುವುದಿಲ್ಲ ಎಂದು ಹೊಸ ಕಂಡೀಷನ್ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈಗ ಪಾಕಿಸ್ತಾನದ ಮರ್ಯಾದಿ ಕಳೆದ ಬಿಸಿಸಿಐ:
ಮುಂಬರುವ ವರ್ಷಗಳಲ್ಲಿ ಪಾಕಿಸ್ತಾನ ತಂಡವು ಭಾರತದಲ್ಲಿ ಕ್ರಿಕೆಟ್ ಆಡದೇ ತಟಸ್ಥ ಸ್ಥಳದಲ್ಲಿ ಪಂದ್ಯವನ್ನಾಲಿದೆ ಎನ್ನುವ ಪಾಕಿಸ್ತಾನದ ಡಿಮ್ಯಾಂಡ್ ಕುರಿತಂತೆ ಬಿಸಿಸಿಐ, ಐಸಿಸಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಭಾರತದಲ್ಲಿ ಕ್ರಿಕೆಟ್ ಆಡಲು ಯಾವುದೇ ಭದ್ರತೆಯ ಭೀತಿಯಿಲ್ಲ. ಹೀಗಾಗಿ ಪಾಕಿಸ್ತಾನದ ಇಂತಹ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಐಸಿಸಿ ಗಮನಕ್ಕೆ ತಂದಿದೆ. ಇದರೊಂದಿಗೆ ಪಾಕಿಸ್ತಾನದ ಭದ್ರತೆಯ ವಿಚಾರಕ್ಕೂ ಭಾರತದ ಭದ್ರತೆ ವಿಚಾರಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಭಾರತ ಜಾಗತಿಕ ಮಟ್ಟದಲ್ಲಿ ಮನವರಿಕೆ ಮಾಡಿಕೊಟ್ಟಿದೆ.
ಪಟ್ಟು ಸಡಿಲಿಸದ ಬಿಸಿಸಿಐ-ಪಿಸಿಬಿ: ಇಂದೂ ನಡೆಯುತ್ತೆ ಹೈಬ್ರಿಡ್ ಸಭೆ
ಭಾರತವು ಮುಂದಿನ ಒಂದು ದಶಕದಲ್ಲಿ ಹಲವು ಐಸಿಸಿ ಟೂರ್ನಿಗಳ ಆತಿಥ್ಯದ ಹಕ್ಕನ್ನು ಹೊಂದಿದೆ. ಈ ಪೈಕಿ 2025ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ, ಇನ್ನು 2026ರಲ್ಲಿ ಶ್ರೀಲಂಕಾದ ಜತೆಗೂಡಿ ಭಾರತ ಜಂಟಿಯಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಇದಾದ ಬಳಿಕ 2029ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ.
