ಟೀಂ ಇಂಡಿಯಾ ಪರ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಜಡೇಜಾ ತಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಹೈದರಾಬಾದ್(ಜ.25): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಆಂಗ್ಲರಿಗೆ ಶಾಕ್ ನೀಡುವಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡವನ್ನು ಕೇವಲ 246 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ಇದೀಗ ಮೊದಲ ದಿನದಾಟದಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿದ್ದುಮ ಇನ್ನು ಕೇವಲ 127 ರನ್ ಹಿನ್ನಡೆಯಲ್ಲಿದೆ.
ಇಲ್ಲಿನ ಶ್ರೀ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಚುರುಕಿನ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 11 ಓವರ್‌ಗಳಲ್ಲಿ 55 ರನ್ ಜತೆಯಾಟವಾಡಿತು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ಹೀಗಾಗಿ ಇದಾದ ಬಳಿಕ ಇಂಗ್ಲೆಂಡ್ ತನ್ನ ಖಾತೆಗೆ ಕೇವಲ 5 ರನ್ ಸೇರಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು.
ಕ್ರಾಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಡಕೆಟ್ 35 ರನ್ ಬಾರಿಸಿ ಅಶ್ವಿನ್‌ಗೆ ಎರಡನೇ ಬಲಿಯಾದರು. ಇನ್ನು ಓಲಿ ಪೋಪ್ ಕೇವಲ 1 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಜೋ ರೂಟ್ ಹಾಗೂ ಜಾನಿ ಬೇರ್‌ಸ್ಟೋವ್ ಕೊಂಚ ಆಸರೆಯಾಗುವ ಯತ್ನ ನಡೆಸಿದರು. ಈ ಜೋಡಿ 4ನೇ ವಿಕೆಟ್‌ಗೆ 61 ರನ್‌ಗಳ ಜತೆಯಾಟವಾಡಿದರು.
ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು. ಬೇರ್‌ಸ್ಟೋವ್ 37 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರೆ, ರೂಟ್‌ಗೆ ಜಡ್ಡು ಪೆವಿಲಿಯನ್ ಹಾದಿ ತೋರಿಸಿದರು.
ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟ: ಒಂದು ಕಡೆ ಪದೇ ಪದೇ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಬೆನ್ ಸ್ಟೋಕ್ಸ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಬೆನ್ ಸ್ಟೋಕ್ಸ್ 88 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್ ಬಾರಿಸಿ ಕೊನೆಯವರಾಗಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಪರ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಜಡೇಜಾ ತಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇಂಗ್ಲೆಂಡ್ ಬಜ್‌ಬಾಲ್ ಆಟಕ್ಕೆ ಟೀಂ ಇಂಡಿಯಾ ತಿರುಗೇಟು:
ಟೆಸ್ಟ್ ಕ್ರಿಕೆಟ್‌ನಲ್ಲೂ ಆಕ್ರಮಣಕಾರಿ ಆಟದ ರಣತಂತ್ರ ಮಾಡುವ ಬಜ್‌ಬಾಲ್ ಮಾದರಿಗೆ ಟೀಂ ಇಂಡಿಯಾ ಬ್ಯಾಟರ್‌ಗಳು ಕೂಡಾ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ 12.2 ಓವರ್‌ಗಳಲ್ಲಿ 80 ರನ್‌ಗಳ ಜತೆಯಾಟವಾಡಿದರು.
ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 70 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 76 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇನ್ನು ಶುಭ್‌ಮನ್ ಗಿಲ್ ಕೂಡಾ 14 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
