ಮೆಲ್ಬರ್ನ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 184 ರನ್‌ಗಳಿಂದ ಭಾರತವನ್ನು ಸೋಲಿಸಿದೆ. 340 ರನ್‌ಗಳ ಗುರಿ ಬೆನ್ನತ್ತಿದ ಭಾರತ 155 ರನ್‌ಗಳಿಗೆ ಆಲೌಟ್ ಆಗಿದೆ. ಜೈಸ್ವಾಲ್(84) ಮತ್ತು ಪಂತ್(30) ಹೊರತುಪಡಿಸಿ ಭಾರತದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶ ಕಠಿಣವಾಗಿದೆ.
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 184 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲು 340 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಕೊನೆಯ ದಿನ 155 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-1ರ ಮುನ್ನಡೆ ಸಾಧಿಸಿದೆ. ಮೆಲ್ಬರ್ನ್ ಟೆಸ್ಟ್ ಸೋಲಿನೊಂದಿಗೆ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸುವ ಕನಸು ಬಹುತೇಕ ಭಗ್ನವಾಗಿದೆ.
ಇಲ್ಲಿನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಗೆಲ್ಲಲು ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮತ್ತೊಮ್ಮೆ ಬ್ಯಾಟಿಂಗ್ ವೈಪಲ್ಯದಿಂದಾಗಿ ಪಂದ್ಯವನ್ನು ಕೈಚೆಲ್ಲಿತು. ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಹೊರತುಪಡಿಸಿ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿ ಜೈಸ್ವಾಲ್ 208 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 84 ರನ್ ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 104 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 30 ರನ್ ಗಳಿಸಿ ಟ್ರ್ಯಾವಿಸ್ ಹೆಡ್‌ಗೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾಗೆ ಮಹಾಮೋಸ; ಅನ್ಯಾಯದ ತೀರ್ಪಿಗೆ ಯಶಸ್ವಿ ಬಲಿ?
ಜೈಸ್ವಾಲ್ ಹಾಗೂ ಪಂತ್ ಹೊರತುಪಡಿಸಿ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟರ್ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ರೋಹಿತ್ ಶರ್ಮಾ(9), ಕೆ ಎಲ್ ರಾಹುಲ್(0), ವಿರಾಟ್ ಕೊಹ್ಲಿ(5), ರವೀಂದ್ರ ಜಡೇಜಾ(2), ನಿತೀಶ್ ರೆಡ್ಡಿ(1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 45 ಎಸೆತಳನ್ನು ಎದುರಿಸಿ ಅಜೇಯರಾಗುಳಿದರೂ, ಮತ್ತೊಂದು ತುದಿಯಲ್ಲಿ ಸೂಕ್ತ ಸಾಥ್ ಸಿಗಲಿಲ್ಲ.
2021ರ ಐಪಿಎಲ್ ಗೆಲ್ಲಲು ಸಿಎಸ್‌ಕೆಗೆ ಹೆಲ್ಪ್ ಮಾಡಿದ್ರಾ ನಿತೀಶ್ ರೆಡ್ಡಿ? ಇಲ್ಲಿದೆ ಡೀಟೈಲ್ಸ್
ಆಸ್ಟ್ರೇಲಿಯಾ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೊಲೆಂಡ್ ತಲಾ 3 ವಿಕೆಟ್ ಪಡೆದರೆ, ನೇಥನ್ ಲಯನ್ 2 ಹಾಗೂ ಟ್ರ್ಯಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
