ಪಿಚ್‌ಗಳನ್ನು ಈಗಾಗಲೇ ಫ್ಲೋರಿಡಾ, ಟೆಕ್ಸಾಸ್ ಹಾಗೂ ನ್ಯೂಯಾರ್ಕ್ ಕ್ರೀಡಾಂಗಣಗಳಿಗೆ ಅಡವಡಿಸಲಾಗಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದ್ದು, ಇತರ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ.
ನ್ಯೂಯಾರ್ಕ್(ಏ.29): ಜೂನ್ 01ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯ ವಹಿಸಿದೆ. ಹೀಗಾಗಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ, ಇದೀಗ ದೂರದ ಆಸ್ಟ್ರೇಲಿಯಾದಿಂದ ಡ್ರಾಪ್ ಇನ್ ಪಿಚ್‌ಗಳನ್ನು ತರಿಸಿಕೊಂಡು ಸುದ್ದಿಯಾಗಿದೆ.
ಹೌದು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಮೆರಿಕದ ಮೂರು ಸ್ಟೇಡಿಯಂಗಳು ಆತಿಥ್ಯ ವಹಿಸಿವೆ. ಅಮೆರಿಕದ ಮೂರು ಕ್ರೀಡಾಂಗಣಗಳಿಗೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್ ಬಳಸಗಾಗುತ್ತದೆ. ಪಿಚ್ ಸಂಪೂರ್ಣವಾಗಿ ಅಡಿಲೇಡ್‌ನಲ್ಲಿ ತಯಾರಿಸಲಾಗಿದ್ದು, ಅದನ್ನು ಹಡಗಿನಲ್ಲೇ 22,500 ಕಿಲೋಮೀಟರ್ ದೂರದ ಫ್ಲೋರಿಡಾ ಮೂಲಕ ನ್ಯೂಯಾರ್ಕ್‌ಗೆ ತರಲಾಗಿದೆ.
ಪಿಚ್‌ಗಳನ್ನು ಈಗಾಗಲೇ ಫ್ಲೋರಿಡಾ, ಟೆಕ್ಸಾಸ್ ಹಾಗೂ ನ್ಯೂಯಾರ್ಕ್ ಕ್ರೀಡಾಂಗಣಗಳಿಗೆ ಅಡವಡಿಸಲಾಗಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದ್ದು, ಇತರ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದ ಜೂನ್ 29ರ ವರೆಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ತಂಡವು ಕೆನಡಾ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು 9 ವಿವಿಧ ಸ್ಟೇಡಿಯಂಗಳಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಿವೆ. ಫೈನಲ್ ಪಂದ್ಯವು ಜೂನ್ 29ರಂದು ಬಾರ್ಬಡಾಸ್‌ನಲ್ಲಿ ನಡೆಯಲಿದೆ.
ಪಾಕಿಸ್ತಾನಕ್ಕೆ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಕೋಚ್
ಲಾಹೋರ್: 2011ರಲ್ಲಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಪಾಕಿಸ್ತಾನ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ಮಾರ್ಗದರ್ಶಕರಾಗಿರುವ ಕರ್ಸ್ಟನ್, ಶೀಘ್ರದಲ್ಲೇ ಪಾಕ್ ಟಿ20, ಏಕದಿನ ತಂಡದ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಪ್ಸಿ ಪಾಕ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಸೋತ ಬಳಿಕ ತಂಡದ ಎಲ್ಲಾ ಕೋಚ್‌ಗಳನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಪಾಕಿಸ್ತಾನ-ನ್ಯೂಜಿಲೆಂಡ್ ಟಿ20 ಸರಣಿ 2-2ರಲ್ಲಿ ಅಂತ್ಯ
ಲಾಹೋರ್: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ 2-2ರಲ್ಲಿ ಅಂತ್ಯಗೊಂಡಿದೆ. ಶನಿವಾರ ರಾತ್ರಿ ನಡೆದ ಕೊನೆ ಟಿ20 ಪಂದ್ಯದಲ್ಲಿ ಪಾಕ್ 9 ರನ್ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕ್, ನಾಯಕ ಬಾಬರ್ ಆಜಂ(69), ಫಾಕರ್ ಜಮಾನ್(43) ಹೋರಾಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 178 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 19.2 ಓವರ್‌ಗಳಲ್ಲಿ 169ಕ್ಕೆ ಸರ್ವಪತನ ಕಂಡಿತು. ಟಿಮ್ ಸೀಫರ್ಟ್(52) ಹೋರಾಟ ವ್ಯರ್ಥವಾಯಿತು. ಶಾಹೀನ್ ಅಫ್ರಿದಿ 4 ವಿಕೆಟ್ ಕಿತ್ತರು.
