ಮುಂಬೈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 25 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ

ಮುಂಬೈ: ಬ್ಯಾಟರ್‌ಗಳ ದಯನೀಯ ಬ್ಯಾಟಿಂಗ್ ವೈಫಲ್ಯಕ್ಕೆ ಭಾರತಕ್ಕೆ ತವರಿನಲ್ಲಿ ಮತ್ತೊಂದು ಹೀನಾಯ ಸೋಲು ಎದುರಾಗಿದೆ. ಗೆಲ್ಲಲು 147 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಟಾಮ್ ಲೇಥಮ್ ಪಡೆ 25 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡವು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತವರಿನಲ್ಲಿ ಇದೇ ಮೊದಲ ಬಾರಿಗೆ ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲ್ಲಲು ಸಾಧಾರಣ ಗುರಿ ಪಡೆದ ಟೀಂ ಇಂಡಿಯಾ ಏಜಾಜ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. 29 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ರಿಷಭ್ ಪಂತ್ ಒಂದು ತುದಿಯಲ್ಲಿ 57 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 64 ರನ್‌ಗಳಿಸುವ ಮೂಲಕ ಕಿವೀಸ್‌ ದಾಳಿಗೆ ದಿಟ್ಟ ತಿರುಗೇಟು ನೀಡಿದರು. ಆದರೆ ಪಂತ್ ವಿಕೆಟ್ ಪತನವಾಗುತ್ತಿದ್ದಂತೆಯೇ ಮತ್ತೆ ಸೋಲಿನತ್ತ ಮುಖ ಮಾಡಿತು. ಟೀಂ ಇಂಡಿಯಾ ಪರ ರಿಷಭ್ ಪಂತ್, ರೋಹಿತ್ ಶರ್ಮಾ(11) ಹಾಗೂ ವಾಷಿಂಗ್ಟನ್ ಸುಂದರ್(12) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕನಿಷ್ಠ 9 ರನ್ ಗಳಿಸಲು ಯಶಸ್ವಿಯಾಗಲಿಲ್ಲ.

Scroll to load tweet…

ಭಾರತ vs ನ್ಯೂಜಿಲೆಂಡ್: 29ಕ್ಕೆ 5 ವಿಕೆಟ್, ವಾಂಖೆಡೆಯಲ್ಲಿ ಕುಸಿದ ಟಾಪ್ ಆರ್ಡರ್! ಪಂತ್ ಮೇಲೆ ಎಲ್ಲರ ಕಣ್ಣು

ಕೈಕೊಟ್ಟ ಟೀಂ ಇಂಡಿಯಾ ಬ್ಯಾಟರ್ಸ್‌: ನಾಯಕ ರೋಹಿತ್ ಶರ್ಮಾ 11, ಯಶಸ್ವಿ ಜೈಸ್ವಾಲ್ 5 ರನ್ ಗಳಿಸಿದರೆ, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಹಾಗೂ ಸರ್ಫರಾಜ್ ಖಾನ್ ತಲಾ ಒಂದೊಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ರವೀಂದ್ರ ಜಡೇಜಾ 6 ಹಾಗೂ ರವಿಚಂದ್ರನ್ ಅಶ್ವಿನ್ 8 ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.