ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿದೆ. 91 ರನ್‌ಗೆ 6 ವಿಕೆಟ್ ಕಳೆದುಕೊಂಡಿದೆ. ಬುಮ್ರಾ 44ನೇ ಟೆಸ್ಟ್‌ನಲ್ಲೇ 200 ವಿಕೆಟ್ ಪೂರ್ಣಗೊಳಿಸಿ, ಕಪಿಲ್ ದೇವ್ ದಾಖಲೆ ಮುರಿದರು. 19.56 ಸರಾಸರಿಯಲ್ಲಿ 200 ವಿಕೆಟ್ ಪಡೆದ ಜಗತ್ತಿನ ಮೊದಲ ಬೌಲರ್ ಎನಿಸಿಕೊಂಡರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 29 ವಿಕೆಟ್‌ಗಳೊಂದಿಗೆ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ.

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡವು 91 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಇದೇ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಹಲವು ದಿಗ್ಗಜ ವೇಗಿಗಳನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.

ಹೌದು, ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದ ಆಸೀಸ್ ಎಡಗೈ ಬ್ಯಾಟರ್ ಟ್ರ್ಯಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಬುಮ್ರಾ ಇತರೆ ದಿಗ್ಗಜ ಬೌಲರ್‌ಗಳನ್ನು ಹಿಂದಿಕ್ಕಿ ಅತ್ಯುತ್ತಮ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ಕೇವಲ 19.56ರ ಸರಾಸರಿಯಲ್ಲಿ 200 ವಿಕೆಟ್ ಬಲಿ ಪಡೆದಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 20ಕ್ಕಿಂತ ಕಡಿಮೆ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಬೌಲರ್ ಎನ್ನುವ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ.

Scroll to load tweet…

ಕಪಿಲ್ ದೇವ್ ದಾಖಲೆ ಮುರಿದ ಬುಮ್ರಾ:

ಆಸೀಸ್ ನೆಲದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ವೇಗಿ ಬುಮ್ರಾ ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ 50 ಪಂದ್ಯಗಳನ್ನಾಡಿ ಅತಿವೇಗವಾಗಿ 200 ವಿಕೆಟ್ ಕಬಳಿಸಿದ ಭಾರತೀಯ ವೇಗಿ ಎನಿಸಿಕೊಂಡಿದ್ದರು. ಆದರೆ ಇದೀಗ ಬುಮ್ರಾ ಕೇವಲ 44ನೇ ಟೆಸ್ಟ್ ಪಂದ್ಯದಲ್ಲೇ 200 ವಿಕೆಟ್ ಕಬಳಿಸುವ ಮೂಲಕ ಕಪಿಲ್ ದೇವ್ ದಾಖಲೆ ಬ್ರೇಕ್ ಮಾಡಿದ್ದಾರೆ.

Scroll to load tweet…

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಬಿರುಗಾಳಿ:

2024-25ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ಮುಂದುವರೆದಿದೆ. 4ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬುಮ್ರಾ, 12.34ರ ಬೌಲಿಂಗ್ ಸರಾಸರಿಯಲ್ಲಿ 29 ವಿಕೆಟ್ ಕಬಳಿಸಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಬುಮ್ರಾ ಹೊರತುಪಡಿಸಿ ಉಭಯ ತಂಡಗಳಿಂದ ಯಾವೊಬ್ಬ ಬೌಲರ್ ಕೂಡಾ ಇನ್ನೂ 20 ವಿಕೆಟ್‌ಗಳ ಗಡಿ ದಾಟಿಲ್ಲ. ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ 17 ವಿಕೆಟ್ ಕಬಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.