ಬೆಂಗಳೂರು(ಮಾ.24): ಕೊರೋನಾ ವಿರುದ್ಧ ಸಮರಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯ ಕಟ್ಟಡದಲ್ಲಿ ದಿನ 24 ಗಂಟೆ ನಿಗಾ ವಹಿಸುವುದಕ್ಕೆ ಸಿದ್ಧಪಡಿಸಲಾಗಿರುವ ‘ಕೊರೋನಾ ವಾರ್‌ ರೂಮ್‌’ಗೆ ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ ಸೋಮವಾರ ಚಾಲನೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದ ಒಂದು ಅಪ್ಲಿಕೇಷನ್‌ ಬಳಸಿಕೊಂಡು ನಗರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಸೋಂಕು ದೃಢಪಟ್ಟಪ್ರದೇಶ ನಕ್ಷೆ ಸಿದ್ಧಪಡಿಸುವುದು, ಬಿಬಿಎಂಪಿ ಕೈಕೊಂಡ ಕ್ರಮಗಳು ವಲಯ ಮಟ್ಟದಲ್ಲಿ ಜಾರಿಯಾಗಿವೆಯೇ ಎಂಬುದನ್ನು ವಾರ್‌ರೂಂನಿಂದ ನಿಗಾ ವಹಿಸಲಾಗುತ್ತದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೊರೋನಾ ವಾರ್‌ರೂಂ

ಜತೆಗೆ ದತ್ತಾಂಶ ಸಂಗ್ರಹ, ಸೋಂಕು ದೃಢಪಟ್ಟಪ್ರದೇಶದಲ್ಲಿ ಎಷ್ಟುಕುಟುಂಬಗಳಿವೆ, ಎಷ್ಟುಮಂದಿ ವಾಸವಾಗಿದ್ದಾರೆ ಎಂಬ ಮಾಹಿತಿ ಪಟ್ಟಿಸಿದ್ಧಪಡಿಸುವುದು ಸೇರಿದಂತೆ ಇತರೆ ಕಾರ್ಯ ನಡೆಯಲಿದೆ. ಒಟ್ಟು 15 ಮಂದಿ ತಲಾ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ವಾರ್‌ ರೂಮ್‌ ಪ್ರಮುಖ ಅಂಶಗಳು

* ನಗರದಲ್ಲಿ ಸೋಂಕು ದೃಢಪಟ್ಟಪ್ರದೇಶ ನಕ್ಷೆ ಸಿದ್ಧಪಡಿಸುವುದು

* ಹೋಮ್‌ ಕ್ವಾರಂಟೈನ್‌ ಸೀಲ್‌ (ಗೃಹ ನಿಬಂರ್‍ಧ ಮುದ್ರೆ) ಹಾಕಿದವರ ಮೇಲೆ ನಿಗಾ ವಹಿಸುವುದು.

* ವಲಯವಾರು ಹೋಮ್‌ ಕ್ವಾರಂಟೈನ್‌ ಸೀಲ್‌ ಒಳಗಾದವರ ಪ್ರದೇಶದ ನಕ್ಷೆ ಸಿದ್ಧಪಡಿಸಿ, ಟ್ರ್ಯಾಕಿಂಗ್‌.

* ಎಷ್ಟುಆಸ್ಪತ್ರೆಗಳಿವೆ, ಎಷ್ಟುಹಾಸಿಗೆಗಳಿಗೆ ಎಂಬ ಮಾಹಿತಿ.

* ನಕ್ಷೆಯನ್ನು ವಲಯವಾರು ನಿರ್ಮಿಸಿದ್ದು, ಕೊರೋನಾ ವೈರೆಸ್‌ ಸೋಂಕಿತರು, ಶಂಕಿತರು, ಆಸ್ಪತ್ರೆಗಳನ್ನು ಬಣ್ಣಗಳ ಆಧಾರದ ಮೇಲೆ ಗುರುತಿಸುವುದು.

* ಕೊರೋನಾ ಸೋಂಕಿತರನ್ನು ಕೆಂಪು ಬಣ್ಣ, ಕೊರೋನಾ ಶಂಕಿತರಿರುವ ಪ್ರದೇಶವನ್ನು ಹಳದಿ ಬಣ್ಣ, ಆಸ್ಪತ್ರೆಗಳಿರುವ ಸ್ಥಳವನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗಿದೆ.