ಬೀಜಿಂಗ್‌(ಮಾ.27): ಚೀನಾದ ಹುಬೈ ಪ್ರಾಂತ್ಯ ಕೊರೋನಾ ಮುಕ್ತವಾಗುತ್ತಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಳ್ಳುತ್ತಿರುವ ನಡುವೆಯೇ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. 

ಸೋಂಕಿನಿಂದ ಮುಕ್ತಿ ಹೊಂದಿ ಆರೋಗ್ಯವಂತರಾಗಿದ್ದಾರೆ ಎಂದು ಘೋಷಿಸಲ್ಪಟ್ಟ ಶೇ.14ರಷ್ಟು ಜನರಿಗೆ  ಮತ್ತೆ ಸೋಂಕು ತಗುಲಿದೆ ಎಂದು ಗೊತ್ತಾಗಿದೆ. ‘147 ರೋಗಿಗಳು ಗುಣಮುಖರಾಗಿದ್ದರು. ಆದರೆ ಇವರಲ್ಲಿ ಮತ್ತೆ ಶೇ.5ರಷ್ಟು ಜನರಿಗೆ ಕೊರೋನಾ ಪಾಸಿಟಿವ್‌ ಎಂದು ದೃಢಪಟ್ಟಿದೆ’ಎಂದು ವುಹಾನ್‌ ಟಾಂಗಿ ಆಸ್ಪತ್ರೆಯ ನಿರ್ದೇಶಕ ವಾಂಗ್‌ ಯಿ ತಿಳಿಸಿದ್ದಾರೆ. 

ಇನ್ನು ಕೆಲವು ವರದಿಗಳ ಪ್ರಕಾರ 3ನೇ 1ರಷ್ಟುಜನರಿಗೆ ಪುನಃ  ರೋಗ ಅಂಟಿದೆ. ಇವರ ತಪಾಸಣೆ ಮಾಡಿದಾಗ ಇವರಲ್ಲಿ ರೋಗಲಕ್ಷಣಗಳು ಕಂಡುಬಂದಿಲ್ಲ. ಆದರೂ ಫಲಿತಾಂಶ ಪಾಸಿಟಿವ್‌ ಎಂದು ದೃಢಪಟ್ಟಿದೆ. ಇವರ ಕುಟುಂಬದವರ ಫಲಿತಾಂಶ ನೆಗೆಟಿವ್‌ ಎಂದು ಸಾಬೀತಾಗಿದ್ದು, ಇವರಿಗೆ ಹೇಗೆ ಸೋಂಕು ತಗುಲಿದೆ ಎಂದು ಗೊತ್ತಾಗಿಲ್ಲ. 2 ವಾರ ಕ್ವಾರಂಟೈನ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಸಾವಿನ ಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಸ್ಪೇನ್‌ 

ಮ್ಯಾಡ್ರಿಡ್‌: ಕೊರೋನಾ ಸಾವಿನ ಸಂಖ್ಯೆಯಲ್ಲಿ ಇದೀಗ ಸ್ಪೇನ್‌ ಕೂಡ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್‌ನಲ್ಲಿ 24 ತಾಸುಗಳ ಅವಧಿಯಲ್ಲಿ 738 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 3434ಕ್ಕೇರಿದೆ. ಚೀನಾದ ಒಟ್ಟು ಸಾವಿನ ಸಂಖ್ಯೆ 3281ಕ್ಕೆ ಹೋಲಿಸಿದರೆ ಇದು ಅಧಿಕ. ಇತ್ತೀಚೆಗೆ ಇಟಲಿ ಕೂಡ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿತ್ತು. ಇದೀಗ ಸ್ಪೇನ್‌ 2ನೇ ಸ್ಥಾನದಲ್ಲಿದೆ. ಯುರೋಪ್‌ನಲ್ಲಿ 2.50 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, ಆ ಪೈಕಿ ಅರ್ಧದಷ್ಟುಜನರು ಇಟಲಿ, ಸ್ಪೇನ್‌ ದೇಶದವರಾಗಿದ್ದಾರೆ. ಯುರೋಪ್‌ನ ಸಾವಿನ ಸಂಖ್ಯೆ 14640ಕ್ಕೆ ಹೆಚ್ಚಳವಾಗಿದೆ.