ಕೋವಿಡ್ ಟೆಸ್ಟ್: ವೈರಲ್ ಲೋಡ್ ಇಲ್ಲದೆ ಜಿನೋಮ್ ಪರೀಕ್ಷೆಗೆ ಅಡ್ಡಿ..!
ಪರೀಕ್ಷೆಗೆ ಸರ್ಕಾರ ಸಿದ್ಧವಿದ್ದರೂ ಸ್ಯಾಂಪಲ್‌ಗಳ ಕೊರತೆ, ಒಮಿಕ್ರೋನ್ ಅಪಾಯಕಾರಿ ಅಲ್ಲ ಎಂದು ಪರೀಕ್ಷೆಗೆ ಬರದ ಜನ
ರಾಕೇಶ್ ಎನ್.ಎಸ್.
ಬೆಂಗಳೂರು(ಡಿ.24): ಕೋವಿಡ್ ಹೊಸ ಪ್ರಕರಣಗಳೆಲ್ಲದರ ಜಿನೋಮಿಕ್ ಸಿಕ್ವೇನ್ಸಿಂಗ್ (ತಳಿ ಪತ್ತೆ ಪರೀಕ್ಷೆ) ನಡೆಸುವಂತೆ ಕೇಂದ್ರ ಸರ್ಕಾರ ಪತ್ರ ಬರೆದ ಬಳಿಕ ಇದೀಗ ರಾಜ್ಯ ಸರ್ಕಾರ ಕೂಡ ಎಲ್ಲ ಪ್ರಕರಣಗಳ ಜಿನೋಮಿಕ್ ಸಿಕ್ವೇನ್ಸಿಂಗ್ ನಡೆಸಲು ತೀರ್ಮಾನಿಸಿದೆ. ಆದರೆ ಸದ್ಯ ಪ್ರಚಲಿತದಲ್ಲಿರುವ ಒಮಿಕ್ರೋನ್ ಪ್ರಭೇದ ಹೆಚ್ಚು ಅಪಾಯಕಾರಿಯಾಗಿಲ್ಲದ ಕಾರಣ ಜನ ಕೋವಿಡ್ ಪರೀಕ್ಷೆ ನಡೆಸಲು ಹಿಂದೇಟು ಹಾಕುತ್ತಿರುವುದರಿಂದ ತಳಿ ಪತ್ತೆ ಪರೀಕ್ಷೆಗೆ ಅಗತ್ಯವಾದ ಸ್ಯಾಂಪಲ್‌ಗಳ ಕೊರತೆ ಆರೋಗ್ಯ ಇಲಾಖೆಯನ್ನು ಕಾಡುತ್ತಿದೆ.
ಕೊರೋನಾ ವೈರಾಣುವಿನ ರೂಪಾಂತರ ಸುಲಭವಾಗಿ ಪತ್ತೆಯಾಗಬೇಕಾದರೆ ಸ್ಯಾಂಪಲ್‌ನ ಸಿಟಿ ವ್ಯಾಲ್ಯೂ (ವೈರಲ್ ಲೋಡ್) 25ಕ್ಕಿಂತ ಕಡಿಮೆ ಇರಬೇಕು. ಸಾಮಾನ್ಯವಾಗಿ ಸಿಟಿ ವ್ಯಾಲ್ಯೂ ಕಡಿಮೆ ಇದ್ದ ಸಂದರ್ಭದಲ್ಲಿ ಸೋಂಕಿತನ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಆಗ ಆತ ಕೋವಿಡ್ ಪರೀಕ್ಷೆಗೆ ಒಳಗಾಗುವುದೋ ಅಥವಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾನೆ. ಆದರೆ ಒಮಿಕ್ರೊನ್‌ನ ಪ್ರಭಾವದಿಂದ ಸೋಂಕು ಹಬ್ಬಿರುವವವರಲ್ಲಿ ಆರೋಗ್ಯ ವಿಷಮಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಅವರು ಕೋವಿಡ್ ಪರೀಕ್ಷೆಗೆಯೇ ಒಳಗಾಗುತ್ತಿಲ್ಲ ಎಂದು ಆರೋಗ್ಯ ತಜ್ಞರೊಬ್ಬರು ಹೇಳುತ್ತಾರೆ.
ಮತ್ತೆ ಕೋವಿಡ್ ಭೀತಿ: ಬೆಂಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ
ಇಡೀ ರಾಜ್ಯದಲ್ಲಿ ಸದ್ಯ ಕೇವಲ 1,272 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ ನಾಲ್ವರು ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತೀವ್ರ ನಿಗಾ ವಿಭಾಗದಲ್ಲಿ ಕೊರೋನಾ ಸೋಂಕಿತರು ದಾಖಲಾಗಿಲ್ಲ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಹೇಳುವ ಪ್ರಕಾರ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ ಸೋಂಕಿತರು ಸಹ ಅಸ್ವಸ್ಥತೆ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ದಾಖಲಾಗಿದ್ದಾರೆ. ಅವರು ಆರೋಗ್ಯ ಸ್ಥಿತಿ ಉಲ್ಬಣಿಸಲು ಕೋವಿಡ್ ಕಾರಣವಲ್ಲ. ಆದರೆ ಅಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢ ಪಟ್ಟಿದೆ. ಇಂತವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸಿಟಿ ವ್ಯಾಲ್ಯೂ ಹೆಚ್ಚು ಬಂದಿದೆ ಎನ್ನುತ್ತಾರೆ.
ಹಾಗೆಯೇ ಜಿನೋಮಿಕ್ ಸಿಕ್ವೇನ್ಸಿಂಗ್ ಅನ್ನು ಪ್ರತಿಯೊಂದು ಸ್ಯಾಂಪಲ್‌ಗೆ ಪ್ರತ್ಯೇಕವಾಗಿ ನಡೆಸಲು ಸಾಧ್ಯವಿಲ್ಲ. ಇದಕ್ಕೆ ನಿರ್ದಿಷ್ಟಸಂಖ್ಯೆಯ ಸ್ಯಾಂಪಲ್‌ಗಳು ಅತ್ಯಗತ್ಯ. ಅಷ್ಟೊಂದು ಸ್ಯಾಂಪಲ್‌ಗಳು ಸಿಗುವ ತನಕ ಪ್ರಯೋಗಾಲಯಗಳು ಕಾಯಬೇಕಾಗುತ್ತದೆ. ಕಳೆದ ಕೆಲ ದಿನಗಳಿಂದ 20ಕ್ಕಿಂತ ಕಡಿಮೆ ಪ್ರಕರಣಗಳು ವರದಿ ಆಗುತ್ತಿದೆ. ಇಷ್ಟೊಂದು ಕಡಿಮೆ ಪಾಸಿಟಿವ್ ಪ್ರಕರಣಗಳಿದ್ದಾಗ ಸೂಕ್ತ ಸಿಟಿ ವ್ಯಾಲ್ಯೂ ಇರುವ ಸ್ಯಾಂಪಲ್‌ಗಳಿಗಾಗಿ ಕನಿಷ್ಟಪಕ್ಷ 8-10 ದಿನ ಕಾಯಬೇಕಾಗಬಹುದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಡಿಸೆಂಬರ್ ತಿಂಗಳಿನಲ್ಲಿ ಈ ವರೆಗೆ ಕೇವಲ 441 ಪ್ರಕರಣ ಪತ್ತೆಯಾಗಿದ್ದು ಮೂವರು ಸೋಂಕಿತರು ಅಸುನೀಗಿದ್ದಾರೆ. ನವೆಂಬರ್ ತಿಂಗಳಿನಲ್ಲಿ 2,542 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಅದೇ ರೀತಿ ಕೋವಿಡ್ ಪರೀಕ್ಷೆಯ ಸಂಖ್ಯೆ ಕೂಡ 4,000ಕ್ಕೆ ಇಳಿದಿದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಪ್ರಕ್ರಿಯೆ ಯಶ ಕಾಣಬೇಕಾದರೆ ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಿ ತನ್ಮೂಲಕ ಆರಂಭದಲ್ಲೇ ಸೋಂಕಿತರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಸರ್ಕಾರದ ಜಿನೊಮಿಕ್ ಸಿಕ್ವೆನ್ಸಿಂಗ್ ನಡೆಸುವ ಪ್ರಯತ್ನ ನಿರೀಕ್ಷಿತ ಯಶ ಕಾಣಲಾರದು ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ಪಡುತ್ತಾರೆ.
ವಿದೇಶಗಳಲ್ಲಿ ಕೋವಿಡ್ ಹೆಚ್ಚಳ, ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ
ದಿನಕ್ಕೆ ನಲ್ವತ್ತು ಐವತ್ತು ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದ ದಿನಗಳಲ್ಲಿಯೂ ರಾಜ್ಯದಲ್ಲಿ ಜಿನೋಮಿಕ್ ಸಿಕ್ವೆನ್ಸಿಂಗ್ ನಡೆಸಲಾಗುತ್ತಿತ್ತು. ಆದರೆ ಈವರೆಗೆ ಕೇವಲ 19,088 ಪರೀಕ್ಷೆ ಮಾತ್ರ ನಡೆಸಲಾಗಿದೆ. 2021ರ ಡಿಸೆಂಬರ್ ವರೆಗೆ ಕೇವಲ 4,441 ಪರೀಕ್ಷೆ ನಡೆದಿತ್ತು. ಈ ವರ್ಷ ಜನವರಿಯಿಂದ ಅಕ್ಟೋಬರ್ ತನಕ 14,134 ಪರೀಕ್ಷೆ ನಡೆದಿದೆ. ಕಳೆದ ತಿಂಗಳು 513 ಪರೀಕ್ಷೆ ಜರುಗಿದೆ. ಡಿಸೆಂಬರ್ ತಿಂಗಳಿನಲ್ಲಿ ಈವರೆಗೂ ಪರೀಕ್ಷಾ ವರದಿ ಬಂದಿಲ್ಲ.
ಬೆಂಗಳೂರಿನಲ್ಲಿ ಎಕ್ಸ್‌ಬಿಬಿ ಅಬ್ಬರ
ರಾಜ್ಯದಲ್ಲಿ ಈವರೆಗೆ ಅತಿ ಹೆಚ್ಚು ಒಮಿಕ್ರೋನ್ (13,135) ಪ್ರಬೇಧ ಪತ್ತೆಯಾಗಿದೆ. ಅಂದರೆ ಒಟ್ಟು ಸ್ಯಾಂಪಲ್‌ಗಳಲ್ಲಿ ಶೇ.68 ಒಮಿಕ್ರೋನ್ ಪ್ರಬೇಧಕ್ಕೆ ಸೇರಿದೆ. ಅದರಲ್ಲಿಯೂ ಒಮಿಕ್ರೋನ್‌ನ ಉಪ ತಳಿ ಬಿಎ2 9,878 ಮಂದಿಯಲ್ಲಿ ಪತ್ತೆಯಾಗಿದೆ. ಬಿಎ5 1,130 ಪ್ರಕರಣ ವರದಿಯಾಗಿದೆ. ರಾಜ್ಯ ಜಿನೋಮಿಕ್ ಸರ್ವೇಕ್ಷಣಾ ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್ ಅವರು ನೀಡಿದ ಮಾಹಿತಿ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅಂದರೆ ನವೆಂಬರ್‌ನಲ್ಲಿ ಎಕ್ಸ್‌ಬಿಬಿ ಪ್ರಬೇಧ ಹೆಚ್ಚಾಗಿ ವರದಿ ಆಗುತ್ತಿದೆ. ಬೆಂಗಳೂರಿನಲ್ಲಿ ಶೇ.16ರಷ್ಟಿದ್ದ ಎಕ್ಸ್‌ಬಿಬಿ ಮತ್ತದರ ಉಪಪ್ರಬೇಧಗಳು ಈಗ ಶೇ. 57ಕ್ಕೆ ಏರಿದೆ. ಎಕ್ಸ್‌ಬಿಬಿಯ ಉಪಪ್ರಬೇಧ ಎಕ್ಸ್‌ಬಿಬಿ.3 ಶೇ.50.4, ಎಕ್ಸ್‌ಬಿಬಿ ಶೇ. 22, ಎಕ್ಸ್‌ಬಿಬಿ.1 ಶೇ. 14.5 ಮತ್ತು ಎಕ್ಸ್‌ಬಿಬಿ.2 ಶೇ. 9.7 ಪತ್ತೆಯಾಗಿದೆ. ಇದರ ಜೊತೆಗೆ ಬಿಕ್ಯೂ 1.1 ಮತ್ತು ಸಿಎಚ್ 1.1 ತಳಿ ಬೆಂಗಳೂರಿನಲ್ಲಿ ಪತ್ತೆಯಾಗಿದೆ.