Asianet Suvarna News Asianet Suvarna News

'ಕೊರೋನಾ ಹೋರಾಟಕ್ಕೆ ಪೂರ್ಣ ಸಹಕಾರ, ಈ ವಿಚಾರದಲ್ಲಿ ರಾಜಕೀಯ ಇಲ್ಲ'

ಕೊರೋನಾ ಹೋರಾಟಕ್ಕ ಪೂರ್ಣ ಸಹಕಾರ: ಡಿಕೆಶಿ| ಸೋಂಕು ತಡೆ ವಿಚಾರದಲ್ಲಿ ರಾಜಕೀಯ ಇಲ್ಲ|  ಸುವರ್ಣನ್ಯೂಸ್‌ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ

There Will Not Be Politics We Will Provide Complete Cooperation Says KPCC President DK Shivakumar
Author
Bangalore, First Published Apr 4, 2020, 7:44 AM IST

ಬೆಂಗಳೂರು(ಏ.04): ‘ಕೊರೋನಾ ಪಿಡುಗು ನಾಡಿನ ಮುಂದಿರುವ ಅತಿ ದೊಡ್ಡ ಸವಾಲು. ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರವನ್ನು ಕಾಂಗ್ರೆಸ್‌ ನೀಡಲಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ.’

ಹೀಗಂತ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ರಾಜ್ಯ ಸರ್ಕಾರಕ್ಕೆ ಅಭಯ ನೀಡಿದ್ದಾರೆ.

‘ಸುವರ್ಣ ನ್ಯೂಸ್‌’ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸೋಂಕು ನಿಯಂತ್ರಿಸುವುದು ಪ್ರಸ್ತುತ ಸರ್ಕಾರದ ಮುಂದಿರುವ ಅತಿ ದೊಡ್ಡ ಸವಾಲಾಗಿದ್ದು, ಸರ್ಕಾರಕ್ಕೆ ಜನರ ಆರೋಗ್ಯ ಕಾಪಾಡುವುದು ಮುಖ್ಯ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್‌ ಯಾವುದೇ ರಾಜಕೀಯ ಮಾಡದೇ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಲಾಕ್‌ಡೌನ್‌: ಕಾಂಗ್ರೆಸಿಂದ ಹಸಿದವರ ಹೊಟ್ಟೆ ತುಂಬಿಸಲು ಆಹಾರ ವಿತರಣೆ

ಪ್ರಸ್ತುತ ನಾವು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ಸಾಂಕ್ರಾಮಿಕ ರೋಗ ನಿವಾರಣೆ ವಿಚಾರವನ್ನು ಜಾತಿ, ಧರ್ಮ ಮತ್ತು ಪಕ್ಷದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಕೂಲಿ ಮಾಡುವವರಿಂದ ಹಿಡಿದು ಕೂಲಿ ಕೊಡುವವರೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಎಲ್ಲರನ್ನು ರಕ್ಷಣೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದರು. ಈ ದಿಸೆಯಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳುವುದೋ ಅದಕ್ಕೆಲ್ಲ ಕಾಂಗ್ರೆಸ್‌ನ ಸಹಕಾರ ಇರುತ್ತದೆ.

ಆದರೆ, ಈ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ, ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಬಹುದಿತ್ತು, ಎಲ್ಲಿ ತಪ್ಪುಗಳನ್ನು ಮಾಡಿದೆ ಎಂಬುದರ ಬಗ್ಗೆ ಮಾತನಾಡುತ್ತೇವೆ. ಸರ್ಕಾರದ ಎಲ್ಲ ವೈಫಲ್ಯಗಳನ್ನು ಜನರ ಮುಂದಿಡಲು ಪ್ರಯತ್ನ ಮಾಡುತ್ತೇವೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದರು.

ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಪ್ರಕ್ರಿಯೆಗೆ ಯಾವ ಸಚಿವರು ನೇತೃತ್ವ ವಹಿಸಬೇಕು ಎಂಬ ಬಗ್ಗೆಯೇ ದೊಡ್ಡಮಟ್ಟದ ಪೈಪೋಟಿ ನಡೆಯುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ಅಧಿಕಾರವನ್ನು ಮತ್ತೊಬ್ಬ ಸಚಿವರು ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಸಚಿವರ ಮಾತುಗಳನ್ನು ಪಾಲಿಸುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ವಿಫಲ:

ಹೊರ ದೇಶದಿಂದ ಬಂದಿರುವ ಒಂದು ಲಕ್ಷ ಜನರನ್ನು ಕ್ವಾರಂಟೈನ್‌ ಮಾಡಿದ್ದರೆ ದೇಶದಲ್ಲಿ ಲಾಕ್‌ಡೌನ್‌ ಮಾಡುವ ಸನ್ನಿವೇಶ ಎದುರಾಗುತ್ತಿರಲಿಲ್ಲ. ಅವರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು, ಇದೀಗ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ 130 ಕೋಟಿ ಜನತೆ ತೊಂದರೆ ಅನುಭವಿಸುವಂತಾಗಿದೆ. ಈ ಎಲ್ಲ ನಿಯಂತ್ರಣಗಳನ್ನು ಮಾಡಬೇಕಾದ ಪ್ರಧಾನ ಮಂತ್ರಿಗಳು ಚಪ್ಪಾಳೆ ತಟ್ಟಿ, ಜಾಗಟೆ ಹೊಡೆಯಿರಿ, ದೀಪ ಹಚ್ಚಿ ಎನ್ನುತ್ತಿದ್ದಾರೆ. ಇದು ಎಷ್ಟುಸರಿ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಪ್ರತಿ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಬಿಜೆಪಿಯ ಯೋಜನೆಗಳಾಗಿ ಬಿಂಬಿಸಲಾಗುತ್ತಿದೆ. ಎಲ್ಲ ಯೋಜನೆಗಳ ನಿರ್ವಹಣೆಗೆ ಪಕ್ಷದ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಗೊಂದಲದಲ್ಲಿ ಸರ್ಕಾರದ ಯೋಜನೆಗಳು ಅನ್ಯರ ಪಾಲಾಗುವ ಸಂಶಯ ಕಾಡುತ್ತಿದೆ ಎಂದರು.

ಸರ್ಕಾರದ ಪರಿಹಾರ ಕಾರ್ಯ ತೃಪ್ತಿ ಇಲ್ಲ, ಪ್ರತಿ ಶಾಸಕರಿಂದ 1 ಲಕ್ಷ ರೂ ಸಂಗ್ರಹಕ್ಕೆ ನಿರ್ಧರಿಸಿದ ಡಿಕೆಶಿ!

ಕೇಂದ್ರ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದೆ. ಅದರೆ, ಅವು ಈವರೆಗೂ ಸಾಮಾನ್ಯ ಜನರಿಗೆ ತಲುಪಿಲ್ಲ. ಅಗತ್ಯ ಮಾಸ್ಕ್‌ಗಳು, ಸ್ಯಾನಿಟೈಜರ್‌ಗಳು, ಸ್ವಯಂ ರಕ್ಷಣಾತ್ಮಕ ಕಿಟ್‌(ಪಿಪಿಇ)ಗಳು ಬಂದಿಲ್ಲ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೆಲ ಸಂಸದರು ತಮ್ಮ ನಿಧಿಯನ್ನು ಪ್ರಧಾನಿ ಪರಿಹಾರ ನಿಧಿಗೆ ಕಳುಹಿಸುತ್ತಿದ್ದಾರೆ. ಹೀಗಾದರೆ ಮತ ಹಾಕಿ ಗೆಲ್ಲಿಸಿದ ಜನರು ಏನಾಗಬೇಕು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಪಕ್ಷದ ಪ್ರತಿಯೊಬ್ಬ ನಾಯಕನೂ ಜನರಿಗೆ ತನ್ನಿಂದಾದ ಸಹಾಯ ಮಾಡುತ್ತಿದ್ದಾರೆ. ಪಕ್ಷದಲ್ಲಿರುವ ಮಾಜಿ ಆರೋಗ್ಯ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಕೃಷ್ಣಭೈರೇಗೌಡ ನೇತೃತ್ವದಲ್ಲಿ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಕಾಲ್‌ ಸೆಂಟರ್‌ ಪ್ರಾರಂಭ ಮಾಡಲಾಗಿದ್ದು, ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ ಎಂದರು.

ಕೇರಳ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಲಿ:

ರಾಜ್ಯದಲ್ಲಿ ಲಾಕ್‌ಡೌನನ್ನು ಶೇ.95ರಷ್ಟುಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ, ಶೇ.5ರಷ್ಟುಜನ ಸಹಕಾರ ಕೊಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಲ್ಲದೆ, ಹೊರ ರಾಜ್ಯಗಳಿಂದ ಬಂದವರಲ್ಲಿ ಶೇ.65ರಷ್ಟುಜನರು ಸರ್ಕಾರದ ಆದೇಶಗಳನ್ನು ಪಾಲಿಸದೆ ನುಣುಚಿಕೊಳ್ಳುತ್ತಿದ್ದಾರೆ. ರೋಗ ವ್ಯಾಪಕವಾಗಿ ಹರಡುವ ಆತಂಕ ಇರುವುದರಿಂದ ಅವರನ್ನು ನಿಯಂತ್ರಿಸಬೇಕಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕ್ಯಾಬ್‌ ಚಾಲಕರು, ಕ್ಷೌರಿಕರು ಸೇರಿದಂತೆ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಸರ್ಕಾರ ತಕ್ಷಣ ಬರಬೇಕಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿದ್ದು, ಜನರು ತೊಂದರೆಗೆ ಸಿಲುಕಿದ್ದಾರೆ. ಇದಕ್ಕೆಲ್ಲಾ ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗಬೇಕು. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕೇರಳ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios