Asianet Suvarna News Asianet Suvarna News

ಲಾಕ್‌ಡೌನ್‌ ಮಧ್ಯೆಯೂ ಮಾಂಸ ಮಾರಾಟಕ್ಕೆ ಸಿಕ್ತು ಪರ್ಮಿಷನ್!

ಮೀನು, ಚಿಕನ್‌, ಮಟನ್‌ ಮಾರಾಟಕ್ಕೆ ಅನುಮತಿ| ಜನರ ಕೋರಿಕೆ ಮೇರೆಗೆ ಜಿಲ್ಲಾಡಳಿತ ಅನುಮತಿ ಪಡೆದು ಕ್ರಮ: ಎಸಿ ನಾಗರಾಜ್‌| ಮಾರಾಟಗಾರರು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ|

Permission to Sell Meat in Sagara in Shivamogga district
Author
Bengaluru, First Published Apr 4, 2020, 3:19 PM IST

ಸಾಗರ(ಏ.04): ಪಟ್ಟಣದಲ್ಲಿ ಮೀನು, ಕೋಳಿ ಮಾಂಸ, ಮಟನ್‌ ಮಾರಾಟಕ್ಕೆ ಕೆಲವು ನಿಯಮಗಳನ್ನು ವಿಧಿಸಿ ಶನಿವಾರದಿಂದ ಅನುಮತಿ ನೀಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ನಾಗರಾಜ್‌ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮೀನು, ಕೋಳಿ ಮಾಂಸ, ಮಟನ್‌ ಮಾರಾಟಗಾರರ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಜನರ ಕೋರಿಕೆಯ ಮೇರೆಗೆ ಜಿಲ್ಲಾಡಳಿತದ ಅನುಮತಿ ಪಡೆದು ಪಟ್ಟಣದಲ್ಲಿ ಮೀನು, ಕೋಳಿ, ಕುರಿ ಮಾಂಸ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಮಾರಾಟಗಾರರು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಅಂಗಡಿಯ ಪರವಾನಿಗೆ ರದ್ದುಪಡಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಡಿಕೇರಿಯಲ್ಲಿ ಜೋಳಿಗೆ ಹಿಡಿದು ತಿರುಗ್ತಿದ್ದಾರೆ 9 ಮಂದಿ ತಬ್ಲಿಘಿಗಳು

ಮೀನು, ಕೋಳಿ, ಕುರಿ ಮಾಂಸ ಮಾರಾಟಗಾರರು ಎಲ್ಲರಂತೆ ಬೆಳಗ್ಗೆ 7ರಿಂದ 12ಗಂಟೆಯವರೆಗೆ ಮಾತ್ರ ಮಾರಾಟ ಮಾಡಬೇಕು. ಮಾರಾಟ ಪ್ರತಿನಿಧಿಗಳು ಮಾಸ್ಕ್‌, ಗ್ಲೌಸ್‌, ತಲೆಗೆ ಟೊಪ್ಪಿಯನ್ನು ಕಡ್ಡಾಯವಾಗಿ ಹಾಕಿಕೊಳ್ಳಲೇಬೇಕು, ಅಂಗಡಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಬೇಕು. ಈ ಬಗ್ಗೆ ಗ್ರಾಹಕರಿಗೆ ಸೂಚನೆ ನೀಡಬೇಕು. ಗುಂಪು ಸೇರಿಸಿಕೊಳ್ಳುವಂತಿಲ್ಲ. ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡುವಂತಿಲ್ಲ. ಟೋಕನ್‌ ವ್ಯವಸ್ಥೆಯೊಂದಿಗೆ ಗ್ರಾಹಕರ ಮನೆಗೆ ಸರಬರಾಜು ಮಾಡಿದರೆ ಒಳ್ಳೆಯದು ಎಂದು ಸೂಚನೆ ನೀಡಿದರು.

ಮೀನು ಮಾಂಸ ಮಾರಾಟಗಾರರು ಈಗಿರುವ ತಮ್ಮ ಮಳಿಗೆಯಲ್ಲಿ ಮಾರುವಂತಿಲ್ಲ. ಅಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾದ್ದರಿಂದ ಮಾರುಕಟ್ಟೆಯ ಹೊರಗಿನ ಬಯಲು ಪ್ರದೇಶದಲ್ಲಿ ತಾತ್ಕಾಲಿಕ ಅಂಗಡಿ ನಿರ್ಮಿಸಿಕೊಂಡು ಮಾರಾಟ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಗುರುತು ಹಾಕುವುದು ಕಡ್ಡಾಯ. ಸಗಟು ಮೀನು ವ್ಯಾಪಾರಿಗಳು ಬೆಳಗ್ಗೆ 6 ಗಂಟೆಯಿಂದ ಬಂದಿರುವ ಮೀನುಗಳನ್ನು ಅನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ತಳ್ಳುಗಾಡಿಯಲ್ಲಿ ಮಾಂಸ ಮಾರಾಟಕ್ಕೆ ಮುಂದಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಯಾವುದೇ ನಿಯಮಗಳನ್ನು ಪಾಲಿಸದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಶಾಸಕ ಎಚ್‌. ಹಾಲಪ್ಪ ಮಾತನಾಡಿ, ನಿಯಮ ಮೀರಿದರೆ ಮೊದಲು ನಿಮಗೆ ತೊಂದರೆಯಾಗುತ್ತದೆ. ಆ ನಂತರ ಉಳಿದವರಿಗೆ ತೊಂದರೆಯಾಗುವುದರಿಂದ ದಯಮಾಡಿ ನಿಯಮ ಪಾಲಿಸಿ. ಮೊದಲು ನಮ್ಮ ಜಿಲ್ಲೆಯಲ್ಲಿ ದೊರಕುವ ಕೋಳಿಗಳನ್ನು ಖಾಲಿ ಮಾಡಿ. ನಂತರ ಬೇರೆಡೆಯಿಂದ ತರಿಸಿಕೊಳ್ಳಿ. ಈಗಾಗಲೇ ಹಕ್ಕಿಜ್ವರ ಬಂದಿರುವ ಊರುಗಳಿಂದ ಕೋಳಿಗಳನ್ನು ತರಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಬಡವರಿಗೆ ಹಾಲು ವಿತರಣೆ

ಶನಿವಾರದಿಂದ ಕಡುಬಡವರಿಗೆ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ತಲಾ ಒಂದು ಲೀಟರ್‌ನಂತೆ ಹಾಲು ವಿತರಿಸಲಾಗುವುದು. ಈಗಾಗಲೇ ಪಟ್ಟಣದಲ್ಲಿ 4500, ಜೋಗ ಕಾರ್ಗಲ್‌ನಲ್ಲಿ 500 ಕುಟುಂಬಗಳನ್ನು ಗುರುತಿಸಲಾಗಿದ್ದು ಶನಿವಾರ ಅಂತಹ ಎಲ್ಲ ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ಹೋಗಿ ಹಾಲು ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದೆರಡು ದಿನ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಜನರು ಅದನ್ನು ಸುಧಾರಿಸಿಕೊಂಡು ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ತಹಸೀಲ್ದಾರ್‌ ಚಂದ್ರಶೇಖರ್‌ ನಾಯಕ್‌, ಡಿವೈಎಸ್‌ಪಿ ವಿನಾಯಕ್‌ ಎಸ್‌. ಶೆಟ್ಟಿಗಾರ್‌, ನಗರಸಭೆ ಅಭಿಯಂತರ ಎಚ್‌.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.
 

Follow Us:
Download App:
  • android
  • ios