Asianet Suvarna News Asianet Suvarna News

ಕೊರೋನಾ ಕಾಟ: ತಾವಿದ್ದ ಸ್ಥಳದಲ್ಲಿಯೇ ಮುಸ್ಲಿಂ ಬಾಂಧವರಿಂದ ನಮಾಜ್‌

ಕೊರೋನಾ ಭೀತಿಯಿಂದ ಜಿಲ್ಲೆ ಸಂಪೂರ್ಣ ಸ್ತಬ್ಧ| ಬಿಕೋ ಎಂದ ರಸ್ತೆಗಳು| ಗದಗ ಎಪಿಎಂಸಿಯಲ್ಲಿ ತರಕಾರಿಗಾಗಿ ಮುಗಿಬಿದ್ದ ಜನರು| ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಸೀದಿಗಳು ಬಂದ್‌| ತರಕಾರಿ ಕಿರಾಣಿ ತಲುಪಿಸಲು ಹರಸಾಹಸ| ಮತ್ತಷ್ಟು ಗ್ರಾಮಸ್ಥರಿಂದ ಸ್ವಯಂ ನಿರ್ಬಂಧ| ಗ್ರಾಮ ಪ್ರವೇಶಿಸದಂತೆ ದಾರಿ ಬಂದ್‌|
 

Muslim People Did Namaj in Thier Home on Gadag District
Author
Bengaluru, First Published Mar 28, 2020, 12:32 PM IST

ಗದಗ(ಮಾ.28): ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕರೆ ನೀಡಿರುವ ಲಾಕ್‌ಡೌನ್‌ಗೆ ಶುಕ್ರವಾರ ಗದಗ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದು ಗದಗ, ಬೆಟಗೇರಿ ಅವಳಿ ನಗರ ಸೇರಿದಂತೆ ಯಾವ ತಾಲೂಕುಗಳಲ್ಲಿಯೂ ಜನ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕಳೆದೆರಡು ದಿನಗಳಿಂದ ಅಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾರ್ವಜನಿಕರೂ ಸರ್ಕಾರದ ಆದೇಶದಂತೆ ಬಂಧನವಾಗುವ ಭೀತಿಯಿಂದ ಮನೆಯಿಂದ ಆಚೆ ಬರಲೇ ಇಲ್ಲ.

ಗದಗ

ನಗರದಲ್ಲಿ ಮನೆ ಮನೆಗೆ ರವಾನೆ ಮಾಡುವ ತರಕಾರಿಯನ್ನು ಗದಗ ನಗರದ ಎಪಿಎಂಸಿ ಆವರಣದಲ್ಲಿ ಲೀಲಾವು ಮಾಡುವ ಪ್ರಕ್ರಿಯೆಗೆ ಶುಕ್ರವಾರದಿಂದ ಚಾಲನೆ ನೀಡಲಾಗಿದ್ದು, ಈ ವಿಷಯ ಸಾರ್ವಜನಿಕರಿಗೆ ಗೊತ್ತಾಗುತ್ತಿದಂತೆ ಮುಖ್ಯ ಮಾರುಕಟ್ಟೆಗೆ ಸಾಕಷ್ಟುಸಂಖ್ಯೆಯಲ್ಲಿ ಜನರು ಮುಗಿಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಎಸ್ಪಿ, ಡಿಸಿ ಸ್ಥಳಕ್ಕೆ ಆಗಮಿಸಿದ ಮೇಲೆ ಕಡಿಮೆಯಾಯಿತು. ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲ ಅಂಗಡಿಗಳು ಶುಕ್ರವಾರ ಸಂಪೂರ್ಣ ಬಂದ್‌ ಆಗಿದ್ದು ಗಮನಾರ್ಹವಾಗಿತ್ತು. ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ನಿಗದಿತ ಸಮಯಾವಕಾಶ ಕಲ್ಪಿಸಲಾಗಿತ್ತು.

ಕೊರೋನಾ ಭೀತಿ ಮಧ್ಯೆಯೂ ಕೆಲವರಿಗೆ ಗಾಂಜಾದ್ದೇ ಚಿಂತೆ: ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು

ಶಿರಹಟ್ಟಿ 

ಪಟ್ಟಣದಲ್ಲಿ ಬೆಳಗ್ಗೆ 4 ರಿಂದ 9ರ ವರೆಗೆ ವ್ಯಾಪಾರಕ್ಕೆ ಯಾವುದೇ ನಿರ್ಬಂಧವೇ ಇಲ್ಲದಂತಾಗಿತ್ತು. ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಮಾರುಕಟ್ಟೆಗೆ ಬಂದು ಗೊಂದಲ ಸೃಷ್ಟಿಸಿದರು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರ್ಕಾರ ನೀಡಿರುವ ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿದಂತಾಗಿತ್ತು. ಇದನ್ನು ನಿಯಂತ್ರಿಸಬೇಕಿದ್ದ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ ಕೈಕಟ್ಟಿಕುಳಿತಿತ್ತು. ಬೆಳಗ್ಗೆ 8ರಿಂದ 9.30ರ ವರೆಗೂ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು. ನಂತರ ಪೊಲೀಸರು ಬಂದು ಮನೆಗೆ ತೆರಳಲು ಸಾರ್ವಜನಿಕರಿಗೆ ಸೂಚಿಸುತ್ತಿದ್ದಂತೆ ಸಾರ್ವಜನಿಕರು ಮನೆಯತ್ತ ಸಾಗಿದರು. ದಿನವಿಡಿ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿತ್ತು.

ನರಗುಂದ 

ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಬೆಳಗ್ಗೆ 8 ರಿಂದ 11ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದರೊಟ್ಟಿಗೆ ಮನೆ ಮನೆಗೂ ಸಾಮಗ್ರಿ ಕಳಿಸುವ ವ್ಯವಸ್ಥೆಗೂ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತಾದರೂ ನಂತರ ಪೊಲೀಸರು ಎಲ್ಲರಿಗೆ ಮನೆಗೆ ತೆರಳಲು ಸೂಚಿಸಿದರು. ದಿನವಿಡಿ ಪಟ್ಟಣ ಬಿಕೋ ಎನ್ನುತ್ತಿತ್ತು. ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುವವರನ್ನು ತಡೆದು, ಮನೆಯಲ್ಲಿರಲು ಸೂಚಿಸಿದರು. ಪೊಲೀಸ್‌ ಹಾಗೂ ತಾಲೂಕು ಆಡಳಿತ ಜಾಗೃತಿ ಕೈಗೊಂಡರು.

ಕೊರೋನಾ ಸಮರಕ್ಕೆ 20000 ಎನ್‌ಆರ್‌ಐ ವೈದ್ಯರ ಬಳಕೆ ಸಾಧ್ಯತೆ!

ರೋಣ 

ಪಟ್ಟಣದಲ್ಲಿ ಬೆಳಗ್ಗೆ 10ರ ವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅನುಮತಿಸಲಾಗಿತ್ತು. ಈ ವೇಳೆ ಮಾರುಕಟ್ಟೆಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಂಡರು. ನಂತರ ದಿನವಿಡಿ ಸಾರ್ವಜನಿಕ ಸಂಚಾರವಿರಲಿಲ್ಲ. ರಸ್ತೆಗಿಳಿದವರನ್ನು ಪೊಲೀಸರು ವಿಚಾರಿಸಿ ಮನೆಗೆ ಕಳಿಸಿದರು. ಪುರಸಭೆಯ ಸಿಬ್ಬಂದಿ ಅಲ್ಲಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗಿದ್ದು ವಿಶೇಷವಾಗಿತ್ತು.

ಲಕ್ಷ್ಮೇಶ್ವರ

ಪಟ್ಟಣದಲ್ಲಿ ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 6ರಿಂದ 8ರ ವರೆಗೆ ಸಮಯಾವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಖರೀದಿಗೆ ಮುಂದಾದರು. ಈ ವೇಳೆಯಲ್ಲಿ ಸಾಕಷ್ಟುಗೊಂದಲದ ವಾತಾವರಣ ನಿರ್ಮಾಣವಾಯಿತಲ್ಲದೇ ಜನರು ಮಾಸ್ಕ್‌ಗಳನ್ನು ಧರಿಸದೇ ಮಾರುಕಟ್ಟೆಬಂದಿದ್ದು, ಅಲ್ಲಲ್ಲಿ ಕಂಡು ಬಂದಿತು. ಇನ್ನು ಮನೆ ಮನೆಗೆ ತರಕಾರಿ ಹಾಗೂ ದಿನಸಿ ವಸ್ತುಗಳನ್ನು ರವಾನಿಸುವ ನಿಟ್ಟಿನಲ್ಲಿ ಪುರಸಭೆ, ತಾಲೂಕು ಆಡಳಿತ ಪೊಲೀಸ್‌ ಇಲಾಖೆಯ ವಿಶೇಷ ಸಭೆ ನಡೆಸಿ ಚರ್ಚಿಸಲಾಯಿತು. ದಿನವಿಡಿ ಜನಸಂಚಾರವಿಲ್ಲದೇ ಪಟ್ಟಣ ಬಿಕೋ ಎಂದಿತು. ಕೆಲ ಮಾನಸಿಕ ಅಸ್ವಸ್ಥರಿಗೆ ಪೊಲೀಸರೆ ಆಹಾರ ನೀರು ಒದಗಿಸಿದರು.

ಮುಂಡರಗಿ:

ಪಟ್ಟಣದಲ್ಲಿ ಬೆಳಗ್ಗೆ 6ರಿಂದ 10ರ ವರೆಗೆ ದಿನಸಿ, ಕಾಯಿಪಲ್ಲೆ ಸೇರಿದಂತೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸಮಯಾವಕಾಶ ಕಲ್ಪಿಸಲಾಗಿತ್ತು. ನಂತರ ಎಲ್ಲರನ್ನು ಪೊಲೀಸರು ಮನೆಗೆ ಕಳಿಸಿದರು. ಕೆಲಸವಿಲ್ಲದಿದ್ದರೂ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿ ಕಳುಹಿಸಿದರು.

ಗಜೇಂದ್ರಗಡ:

ಪಟ್ಟಣದಲ್ಲಿ ಬೆಳಗ್ಗೆ 6 ರಿಂದ 10ರ ವರೆಗೆ ಮಾರುಕಟ್ಟೆತೆರೆದಿತ್ತು. ಸಾರ್ವಜನಿಕರು ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು. ದಿನವಿಡೀ ಜನ ಸಂಚಾರವಿರಲಿಲ್ಲ. ಇನ್ನು ಮುಳಗುಂದ, ನರೇಗಲ್ಲ ಪಟ್ಟಣದಲ್ಲೂ ನಿಗದಿತ ಅವಧಿ ಹೊರತುಪಡಿಸಿ ಜನಸಂಚಾರ ನಿರ್ಬಂಧವಾಗಿತ್ತು.

ಜಿಲ್ಲೆಯ ಗಜೇಂದ್ರಗಡ ಪಟ್ಟಣ ವ್ಯಾಪ್ತಿಯಲ್ಲಿಯೇ ಇರುವ ತಾಂಡಾ ಹಾಗೂ ಕಾಲಕಾಲೇಶ್ವರ ಗ್ರಾಮಗಳ ಜನರು ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸ್ವಯಂ ನಿರ್ಬಂಧ ವಿಧಿಸಿಕೊಂಡು ಗ್ರಾಮಕ್ಕೆ ಯಾರೂ ಪ್ರವೇಶ ಮಾಡಬಾರದು, ಇಲ್ಲಿಂದ ಯಾರೂ ಹೊರಗಡೆ ಹೋಗಬಾರದು ಎಂದು ಫಲಕಗಳನ್ನೇ ಅಳವಡಿಸಿದ್ದಾರೆ. ಇದರೊಟ್ಟಿಗೆ ಜಿಲ್ಲೆಯ ಇನ್ನು ಅನೇಕ ಗ್ರಾಮಗಳ ಗ್ರಾಮಸ್ಥರು ಈ ನಿರ್ಧಾರಕ್ಕೆ ಬರುತ್ತಿದ್ದು, ಜಿಲ್ಲಾಡಳಿತಕ್ಕೆ, ಆರೋಗ್ಯ ಇಲಾಖೆಗೆ ಹೆಚ್ಚು ಅನುಕೂಲಕಾರಿಯಾಗಿದೆ.

ಗದಗ ನಗರದಲ್ಲಿರುವ ದೊಡ್ಡ ಮಸೀದಿ ಸೇರಿದಂತೆ ಹಲವೆಡೆ ಸಾಕಷ್ಟುಜನರು ಪ್ರಾರ್ಥನೆಗಾಗಿ ಸೇರುತ್ತಿದ್ದರು. ಆದರೆ, ಶುಕ್ರವಾರ ಮಾತ್ರ ಎಲ್ಲ ಮಸೀದಿಗಳನ್ನು ಬಂದ್‌ ಮಾಡಲಾಗಿದ್ದು, ಪ್ರಾರ್ಥನೆಗೆ ಬರದೇ ತಾವಿದ್ದ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡಿದ್ದಾರೆ ಎಂದು ಹಿರಿಯ ಮೌಲ್ವಿಯೋರ್ವರು ತಿಳಿಸಿದರು.
 

Follow Us:
Download App:
  • android
  • ios