ಗದಗ(ಮಾ.29): ಕೊರೋನಾ ರೋಗಾಣು ತೀವ್ರವಾಗಿ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಅತೀ ಅವಶ್ಯಕ. ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆ ಸಹಯೋಗದಿಂದ ಜನರು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ. 

ಶನಿವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವಲ್ಲಿ ಇದುವರೆಗೆ ಜಿಲ್ಲಾಡಳಿತ, ಪೊಲೀಸ್‌ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಉತ್ತಮ ಕಾರ್ಯನಿರ್ವಹಿಸಿವೆ. ಸಳೀಯ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ, ವೈದ್ಯಾಧಿಕಾರಿಗಳು ಸಿಬ್ಬಂದಿಗಳವರೆಗೆ ಉತ್ತಮ ಗುಣಮಟ್ಟದ ಮಾಸ್ಕ್‌, ಸ್ಯಾನಿಟೈಸರ್ ಇತರೆ ಸಾಮಗ್ರಿಗಳನ್ನು ಒದಗಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕು.

ವಿದೇಶದಿಂದ ಬಂದವರಲ್ಲಿಲ್ಲ ಕೊರೋನಾ ಸೋಂಕು: ನಿಟ್ಟುಸಿರು ಬಿಟ್ಟ ಜನತೆ!

ಜಿಲ್ಲೆಯಲ್ಲಿ ಇಲ್ಲಿವರೆಗೆ ಯಾವುದೇ ಕೊರೋನಾ ಸೋಂಕು ಖಚಿತ ಪ್ರಕರಣಗಳು ಇಲ್ಲ. ಇದು ನೆಮ್ಮದಿಯ ವಿಷಯ. ಜಿಲ್ಲೆಯಲ್ಲಿ ಅನಗತ್ಯವಾಗಿ ಲಾಕ್‌ಡೌನ್‌ ಉಲ್ಲಂಘಿಸಿದವರ ವಿರುದ್ಧ ತಕ್ಷಣ ಕಾನೂನಿನ ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಸಿಬ್ಬಂದಿ ಕೊರತೆಯಾಗುತ್ತಿದ್ದಲ್ಲಿ ಕೆಎಸ್‌ಆರ್‌ಪಿ ತುಕುಡಿಗಳನ್ನು ನಿಯೋಜಿಸಲು ಪ್ರಸ್ತಾವನೆ ಸಲ್ಲಿಸಬೇಕು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಜೊತೆಗೆ ಕ್ರಿಮಿನಾಶಕ ಔಷಧಿ ಸಿಂಪಡಿಸುವುದನ್ನು ನಿಯಮಿತವಾಗಿ ಜರುಗಿಸಬೇಕು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ವೈರಸ್‌ ತಡೆಗಟ್ಟಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮಲ್ಲಸಮುದ್ರದ ಮೊರಾರ್ಜಿ ವಸತಿ ಶಾಲೆಯಲ್ಲಿ ಮನೆಯಲ್ಲಿಯೇ ನಿಗಾದಲ್ಲಿರುವವರು ನಿಯಮ ಉಲ್ಲಂಘಿಸಿದವರಿಗಾಗಿ 150 ಹಾಸಿಗೆಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಆಯುಷ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಈ ನೂರು ಹಾಸಿಗೆಗಳಿಗೆ ಆಕ್ಸಿಜನ್‌ ಪೈಪ್‌ ಅಳವಡಿಸಲಾಗಿದೆ. ಜಿಲ್ಲೆಗೆ ಅವಶ್ಯವಿರುವ ಮಾಸ್ಕ್‌, ಸ್ಯಾನಿಟೈಸರ್‌, ಸ್ವಯಂ ರಕ್ಷಣಾ ಕಿಟ್‌ಗಳ ಖರೀದಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇವುಗಳ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗದಗ ನಗರದಲ್ಲಿನ 349 ಪಡಿತರ ಅಂಗಡಿಗಳ ಹಾಗೂ ಸರಕಾರಿ ವಾಹನಗಳನ್ನು ಬಳಸಿಕೊಂಡು ಅರ್ಹ ಪಡಿತರ ಕುಟುಂಬಗಳಿಗೆ ಪಡಿತರವನ್ನು ಪೂರೈಸಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ಜಿಪಂ ಸಿಇಒ ಡಾ. ಆನಂದ ಕೆ., ಎಸ್ಪಿ ಎನ್‌. ಯತೀಶ, ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಎಂ. ಡಿಎಚ್‌ಒ ಡಾ. ಸತೀಶ ಬಸರಿಗಡದ, ಜಿಮ್ಸ್‌ ನಿರ್ದೇಶಕ ಪಿ.ಎಸ್‌. ಭೂಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.