Asianet Suvarna News Asianet Suvarna News

ಕೊರೋನಾ ಗಂಡಾಂತರ ನಿರ್ವಹಣೆಗೆ ಕ್ರಮ: ಬಿಎಸ್‌ವೈ ಅಭಯ!

ಕೊರೋನಾ ಗಂಡಾಂತರ ನಿರ್ವಹಣೆಗೆ ಕ್ರಮ: ಸಿಎಂ| ಸರ್ಕಾರಕ್ಕೆ ವಿಪಕ್ಷಗಳಿಂದ ಅನೇಕ ಸಲಹೆ| ಸರ್ವಪಕ್ಷಗಳ ಸಭೆಯಲ್ಲಿ ಬಿಎಸ್‌ವೈ ಅಭಯ| ಗಡಿಯಲ್ಲಿ ಸಿಲುಕಿರುವ ಜನರ ಕರೆತರಲು ವ್ಯವಸ್ಥೆ| ವೈದ್ಯಕೀಯ ತಪಾಸಣೆ ನಡೆಸಿ, ಆರೋಗ್ಯವಂತರು ಮಾತ್ರ ಊರಿಗೆ| ರೋಗಲಕ್ಷಣವಿದ್ದರೆ ನಿಗಾ ಕೇಂದ್ರಕ್ಕೆ: ಬಿಎಸ್‌ವೈ

Govt Will Take All The Possible Measures To Control Coronavirus Says BSY In Alll Party Meeting of Karnataka
Author
Bangalore, First Published Mar 30, 2020, 7:40 AM IST

ಬೆಂಗಳೂರು(ಮಾ.30): ಅಂತಾರಾಜ್ಯ ಸಂಚಾರ ನಿರ್ಬಂಧದಿಂದ ರಾಜ್ಯದ ಗಡಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ತವರಿಗೆ ಕರೆತರುವ ವ್ಯವಸ್ಥೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಅಲ್ಲದೆ, ವೈದ್ಯಕೀಯ ತಪಾಸಣೆ ವೇಳೆ ರೋಗ ಲಕ್ಷಣಗಳು ಕಾಣಿಸಿಕೊಂಡವರನ್ನು ನಿಗಾ ಕೇಂದ್ರಗಳಿಗೆ ಕಳುಹಿಸಲಾಗುವುದು. ಆರೋಗ್ಯವಂತರನ್ನು ಮಾತ್ರ ಊರುಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾನುವಾರ ಕೊರೋನಾ ವೈರಸ್‌ ಸೋಂಕು ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಿದ ನಂತರ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉಳಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರು, ಜಿಲ್ಲೆ ಹಾಗೂ ತಾಲೂಕು ಮಟ್ಟದ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ), ಮಾಸ್ಕ್‌, ಸ್ಯಾನಿಟೈಸರ್‌ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಸೋಂಕು ಪರೀಕ್ಷಾ ಕಿಟ್‌ ಒದಗಿಸುತ್ತೇವೆ ಎಂದು ಹೇಳಿದರು.

ರೈತರ ಕೃಷಿ ಉತ್ಪನ್ನ, ಸಾಗಣೆ, ಮಾರಾಟ ಹಾಗೂ ಬಳಕೆದಾರರಿಗೆ ಸೂಕ್ತ ವಿತರಣೆ ವ್ಯವಸ್ಥೆ ಮಾಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಪಡಿತರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಸಲಹೆಯನ್ನು ವಿರೋಧಪಕ್ಷದ ನಾಯಕರು ನೀಡಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರತಿ ಮನೆಗೂ ಪಡಿತರ ತಲುಪಿಸಿ- ಸಿದ್ದು:

ಸಭೆಯಲ್ಲಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸೋಂಕಿಗೆ ಸಂಬಂಧಿಸಿದಂತೆ ರಾಜ್ಯ ಪ್ರಮುಖ ಘಟ್ಟದಲ್ಲಿದ್ದು, ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು. ರೈತರು ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ರೈತರ ಕೃಷಿ ಉತ್ಪನ್ನ, ಸಾಗಣೆ, ಮಾರಾಟ ಹಾಗೂ ಬಳಕೆದಾರರಿಗೆ ವಿತರಣೆಗೆ ವ್ಯವಸ್ಥೆ ಮಾಡಬೇಕು. ಜತೆಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ನೀಡಲು ಉದ್ದೇಶಿಸಿರುವ ಪಡಿತರವನ್ನು ಮನೆ-ಮನೆಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.

4,500 ಮಂದಿಯನ್ನು ಪತ್ತೆ ಮಾಡಿ:

ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ. ವಿದೇಶದಿಂದ ಆಗಮಿಸಿರುವವರ ಪೈಕಿ 4,500 ಮಂದಿಯನ್ನು ಇನ್ನೂ ಗುರುತಿಸಿಲ್ಲ. ಅವರನ್ನು ಕೂಡಲೇ ಪತ್ತೆ ಮಾಡಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಎಚ್ಚರಿಸಿದರು.

ಇನ್ನು ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ನಮ್ಮಲ್ಲಿ ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಹಾಗೂ ಟೆಸ್ಟಿಂಗ್‌ ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿ ಇಲ್ಲ. ಹಾಲಿ ಇರುವವೂ ಸಹ ಗುಣಮಟ್ಟದಿಂದ ಕೂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್‌ ತಯಾರಿಕೆ ಕೆಲಸ ಭರದಿಂದ ಸಾಗಬೇಕು. ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೆ ಕೆಲಸ ವಹಿಸಬೇಕು. ಮೂರನೇ ಹಂತಕ್ಕೆ ಹೋಗುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯದ 6,020 ಪಂಚಾಯಿತಿಗಳಿಗೆ ಒಬ್ಬೊಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಬೇಕು. ಪೊಲೀಸರಿಗೂ ಇದು ಕಠಿಣವಾದ ಸಮಯ. ಹೀಗಾಗಿ ಅವರಿಗೂ ವಿಮೆ ಒದಗಿಸಬೇಕು ಎಂದು ಮನವಿ ಮಾಡಿದರು.

ಕ್ವಾರಂಟೈನ್‌ ಸರಿಯಾಗಿ ಮಾಡಿಲ್ಲ- ಎಚ್‌ಡಿಕೆ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಹೊರದೇಶದಿಂದ ಬಂದವರನ್ನು ತಿರುಗಾಡಲು ಬಿಟ್ಟು ನಾವು ಎಡವಿದ್ದೇವೆ. ವಿದೇಶದಿಂದ ಬಂದವರನ್ನು ಆಗಲೇ ಕ್ವಾರಂಟೈನ್‌ ಮಾಡಿದ್ದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ. ಜನ ಸೋಂಕಿನಿಂದ ಮಾತ್ರವಲ್ಲ ಆತಂಕದಿಂದಲೂ ಸಾಯುವಂತಾಗಿದೆ. ರಾಜ್ಯದಲ್ಲಿ ವೆಂಟಿಲೇಟರ್‌ ಕೊರತೆಯಿದೆ. ಪರೀಕ್ಷಾ ಸಾಧನಗಳ ಗುಣಮಟ್ಟವೂ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಪಕ್ಷಗಳ ಸಲಹೆ

1. ವಿದೇಶದಿಂದ ಬಂದವರ ಪೈಕಿ ಬಾಕಿ ಇರುವ 4500 ಜನರನ್ನು ಕೂಡಲೇ ಗುರುತಿಸಿ

2. ಸ್ವಯಂನಿವೃತ್ತಿ ಪಡೆದ, 60 ವರ್ಷದೊಳಗಿನ ವೈದ್ಯರನ್ನು ಮತ್ತೆ ನಿಯೋಜನೆ ಮಾಡಿ

3. ಕೃಷಿ ಉತ್ಪನ್ನ ಮಾರಾಟ, ರೈತರಿಗೆ ನ್ಯಾಯಯುತ ಬೆಲೆ ಸಿಗಲು ವ್ಯವಸ್ಥೆ ನಿರ್ಮಿಸಿ

4. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೃಷಿ ಚಟುವಟಿಕೆ ನಿಲ್ಲದಂತೆ ಕ್ರಮ ಕೈಗೊಳ್ಳಿ

5. ಯಾವುದೇ ಕಾರಣಕ್ಕೂ ಹಳ್ಳಿಗಳಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು

6. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನೆಗೇ ಪಡಿತರ, ಹಣ್ಣು-ತರಕಾರಿ ಪೂರೈಸಿ

7. ಅನಿವಾರ‍್ಯ ಸಂದರ್ಭ ಹೊರತಾಗಿ ಜನರ ಮೇಲೆ ಬಲಪ್ರಯೋಗ ಮಾಡಬಾರದು

ಸರ್ಕಾರದ ಭರವಸೆ

1. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತಿತರ ಸಿಬ್ಬಂದಿಗೆ ಪಿಪಿಇ ಕಿಟ್‌, ಮಾÓ್ಕ… ಹಾಗೂ ಸ್ಯಾನಿಟೈಸರ್‌ಗಳನ್ನು ತಕ್ಷಣ ಸರಬರಾಜು ಮಾಡಲು ಕ್ರಮ

2. ರಾಜ್ಯದ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ

3. ಸೋಂಕಿಗೆ ಒಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್‌ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ

4. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್‌ ಕಿಟ್‌ ವಿತರಣೆ

5. ರೈತರು ಬೆಳೆದ ಉತ್ಪನ್ನಗಳ ಸಾಗಣೆ, ಮಾರಾಟ ಮತ್ತು ಅವುಗಳನ್ನು ಬಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ

6. ಕೃಷಿ ಚಟುವಟಿಕೆಗಳಿಗೆ ಅಗತ್ಯವಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ

Follow Us:
Download App:
  • android
  • ios