ಕಾರ್ಮಿಕ ವರ್ಗದ ಬದುಕನ್ನೇ ಅಲುಗಾಡಿಸಿದ ಕೊರೋನಾ! ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲ

ದೇಶ ಸೇರಿದಂತೆ ಕರ್ನಾಟಕದಲ್ಲಿ ಜನತೆ ಕೊರೋನಾ ವೈರಸ್‌ ತಡೆಗಟ್ಟಲು ಶ್ರಮಿಸುತ್ತಿರುವವರಿಗೆ ಚಪ್ಪಾಳೆ ತಟ್ಟುವುದರೊಂದಿಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ. ಆದರೆ, ವಿವಿಧ ಕ್ಷೇತ್ರಗಳಿಗೆ ಬೆನ್ನೆಲುಬಾಗಿದ್ದ ತಳಮಟ್ಟದ ಅಸಂಘಟಿತ ವಲಯದ ಕಾರ್ಮಿಕ ವರ್ಗ ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗವೂ ಇಲ್ಲದೆ ಪರಿತಪಿಸಿದೆ.

 

daily wages working group suffers as Corona virus outbreak

ಬೆಂಗಳೂರು(ಮಾ.24): ದೇಶ ಸೇರಿದಂತೆ ಕರ್ನಾಟಕದಲ್ಲಿ ಜನತೆ ಕೊರೋನಾ ವೈರಸ್‌ ತಡೆಗಟ್ಟಲು ಶ್ರಮಿಸುತ್ತಿರುವವರಿಗೆ ಚಪ್ಪಾಳೆ ತಟ್ಟುವುದರೊಂದಿಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ. ಆದರೆ, ವಿವಿಧ ಕ್ಷೇತ್ರಗಳಿಗೆ ಬೆನ್ನೆಲುಬಾಗಿದ್ದ ತಳಮಟ್ಟದ ಅಸಂಘಟಿತ ವಲಯದ ಕಾರ್ಮಿಕ ವರ್ಗ ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗವೂ ಇಲ್ಲದೆ ಪರಿತಪಿಸಿದೆ.

ದಿನಕ್ಕೆ ಇಂತಿಷ್ಟುಕೂಲಿ ಪಡೆದು ಅಂದಿನ ಖರ್ಚು ವೆಚ್ಚಗಳಿಗೆ ಸರಿದೂಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಅಸಂಘಟಿತ ವಲಯದ ಸಾವಿರಾರು ಕಾರ್ಮಿಕರ ಬದುಕು ಇಂದು ಕೊರೋನಾ ಭೀತಿ ಹಾಗೂ ಸರ್ಕಾರದ ನಿರ್ಧಾರಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದ ‘ಜನತಾ ಕರ್ಫ್ಯೂ ’ನಿಂದ ವಿವಿಧ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ದುಡಿಯುವ ಕಾರ್ಮಿಕರ ಜೀವನವೇ ಸ್ತಬ್ಧವಾದಂತಾಗಿತ್ತು. ದಿನನಿತ್ಯದ ಸಂಪಾದನೆಗೆ ಹೊಡೆತ ಬಿದ್ದಿದ್ದು, ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಇನ್ನಷ್ಟುಕಷ್ಟಕ್ಕೆ ಸಿಲುಕುವ ಭಯ ಕಾರ್ಮಿಕ ವಲಯದಲ್ಲಿದೆ.

1 ದಿನದ ಎಫೆಕ್ಟ್: ಬೆಂಗ್ಳೂರಲ್ಲಿ ಕಡಿಮೆಯಾಯ್ತು ವಾಯು ಮಾಲೀನ್ಯ

ಪ್ರತಿದಿನ ಮಾರುಕಟ್ಟೆವಲಯ, ಪ್ರಮುಖ ರಸ್ತೆಗಳ ಬದಿ, ಮನೆಯ ಬಳಿ ಹೂವು, ಹಣ್ಣು, ಸೊಪ್ಪು ಮಾರಾಟ ಮಾಡುತ್ತಿದ್ದವರು, ರಸ್ತೆಗಳಲ್ಲಿ ಪೆನ್ನು, ಪೆನ್ಸಿಲ್‌, ಗಾಗಲ್ಸ್‌, ಮಕ್ಕಳ ಆಟಿಕೆಗಳ ವ್ಯಾಪಾರಿಗಳು, ಚಿಕ್ಕಪುಟ್ಟಮನೆ ಬಳಕೆ ವಸ್ತುಗಳ ಮಾರಾಟಗಳು, ಬೀದಿ ಬದಿಯ ವ್ಯಾಪಾರಿಗಳು, ಹಮಾಲಿಗಳು, ಆಟೋ- ಊಬರ್‌- ಟ್ಯಾಕ್ಸಿ ಚಾಲಕರು, ತಳ್ಳುಗಾಡಿ ವ್ಯಾಪಾರಿಗಳು, ಇತರೆ ಕೂಲಿ ಕಾರ್ಮಿಕರು, ಕಟ್ಟಡ ಹಾಗೂ ಇತರೆ ನಿರ್ಮಾಣ ವಲಯದ ಕಾರ್ಮಿಕರು ಸೇರಿದಂತೆ ಬಹುತೇಕ ಅಸಂಘಟಿತ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ.

ಮಾರುಕಟ್ಟೆಗಳಲ್ಲಿ ಸೊಪ್ಪು, ಹೂವು, ತರಕಾರಿ ಸೇರಿದಂತೆ ಇತರೆ ಪದಾರ್ಥಗಳು, ಸಾಮಾಗ್ರಿಗಳನ್ನು .1000ಕ್ಕೆ ಖರೀದಿಸಿ ಮಾರಾಟ ಮಾಡುತ್ತಿದ್ದವರು ಬಹಳ ಮಂದಿ ಇದ್ದಾರೆ. ದಿನಕ್ಕೆ .200-300ರಿಂದ 400 ದುಡಿಮೆ ಮಾಡುತ್ತಾರೆ. ವಿಧವೆಯರು, ವಯಸ್ಸಾದವರು, ಆರ್ಥಿಕವಾಗಿ ಹಿಂದುಳಿದವರು, ತಿಂಡಿ ತಿನಿಸು ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದೆ. ಬೆಂಗಳೂರು ನಗರದ ಕೆ.ಆರ್‌.ಮಾರುಕಟ್ಟೆಹೊರ ಹಾಗೂ ಒಳಾಂಗಣ, ಸುತ್ತಮುತ್ತ ಮತ್ತು ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಸುತ್ತಮುತ್ತ 800 ಮಂದಿ ವ್ಯಾಪಾರಿಗಳಿದ್ದಾರೆ. ಇನ್ನು ಕಲಾಸಿಪಾಳ್ಯ ಮುಖ್ಯರಸ್ತೆಯ ಬಸ್‌ ನಿಲ್ದಾಣದಿಂದ ವಿಕ್ಟೋರಿಯಾವರೆಗೆ 800ರಿಂದ 900ಕ್ಕೂ ಹೆಚ್ಚು ವ್ಯಾಪಾರಿಗಳು ದಿನದ ದುಡಿಮೆ ಅವಲಂಬಿಸಿದ್ದಾರೆ. ಬೆಂಗಳೂರಿನಲ್ಲಿ ಒಟ್ಟಾರೆ ಒಂದೂವರೆ ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಬಡ್ಡಿಗೆ ಹಣ ಪಡೆದು ವ್ಯಾಪಾರ ಮಾಡುವವರೇ ಹೆಚ್ಚಿದ್ದಾರೆ. ಈಗ ದಿನದ ದುಡಿಮೆಯೂ ಇಲ್ಲವಾಗಿದೆ. ಈಗಲಾದರೂ ಸರ್ಕಾರ ಬಡ ಕಾರ್ಮಿಕರ ಸಹಾಯಕ್ಕೆ ಬರಬೇಕು ಎಂದು ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಬಾಬು ಹೇಳಿದರು.

ಒಂದೊತ್ತಿನ ಊಟಕ್ಕೂ ಕುತ್ತು!

ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಲೈಸೆನ್ಸ್‌ ಪಡೆದಿರುವವರು 1000 ಮಂದಿ ಕೂಲಿ ಕಾರ್ಮಿಕರು (ಹಮಾಲಿ) ಸೇರಿದಂತೆ ಲಾರಿ, ಆಟೋ, ಅಂಗಡಿಗಳಿಗೆ ಬರುವ ಸಾಮಾನುಗಳನ್ನು ಲೋಡಿಂಗ್‌ ಮತ್ತು ಅನ್‌-ಲೋಡಿಂಗ್‌ ಮಾಡುವ 4 ಸಾವಿರಕ್ಕೂ ಹೆಚ್ಚು ಹಮಾಲಿಗಳು ಕಾರ್ಯ ನಿರ್ವಹಿಸುತ್ತಾರೆ. ನಮಗೆ ದಿನಗೂಲಿ .200ರಿಂದ 500 ಸಿಗುತ್ತದೆ. ಅಂದು ದುಡಿದು ಅಂದೇ ತಿನ್ನವವರೇ ಶೇ.75ರಷ್ಟಿದ್ದಾರೆ. ಈಗ ದಿನದ ಕಾರ್ಯಕ್ಕೂ ಕುತ್ತು ಬಂದೊದಗಿದೆ. ಭಾನುವಾರ ಜನತಾ ಕಫä್ರ್ಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಆದರೆ, ಶನಿವಾರ ದಿಢೀರ್‌ ಆಗಿ ಕ್ಯಾಂಟೀನ್‌ ಅನ್ನು ಎಪಿಎಂಸಿ ಕಾರ್ಯದರ್ಶಿಗಳು ಬಂದ್‌ ಮಾಡಿದರು. ಇದರಿಂದ ಊಟವಿಲ್ಲದೆ ಕಾರ್ಮಿಕರು ದುಡಿದರು. ಸುಮಾರು 15, 20 ಕಿಲೋ ಮೀಟರ್‌ ದೂರದಿಂದ ಬರುವವರು ರಸ್ತೆ ಬದಿಯ ಚಿಕ್ಕ ಪುಟ್ಟಕ್ಯಾಂಟೀನ್‌ಗಳನ್ನು ಅವಲಂಬಿಸಿದ್ದಾರೆ. ಈಗ ದುಡಿಮೆಯೂ ಇಲ್ಲ, ಊಟವೂ ಇಲ್ಲದಂತಾಗಿದೆ. ವ್ಯಕ್ತಿಗೆ ಆಹಾರವೇ ಸಿಗದಿದ್ದರೆ ದುಡಿಯುವುದಾದರೂ ಹೇಗೆ? ನಮಗೆ ಯಾವುದೇ ಪರಿಹಾರವೂ ಇಲ್ಲ, ಪರ್ಯಾಯ ಮಾರ್ಗವೂ ದೊರಕುತ್ತಿಲ್ಲ ಎಂದು ಯಶವಂತಪುರ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಕುಮಾರೇಶನ್‌ ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿ!

ರಾಜ್ಯದಲ್ಲಿ ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಸೇರಿದಂತೆ 3 ಕೋಟಿಗೂ ಹೆಚ್ಚು ಕಾರ್ಮಿಕರಿದ್ದಾರೆ. ಬೆಂಗಳೂರಿನಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. 1.50 ಲಕ್ಷ ಆಟೋಗಳಿವೆ, 50 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ, ಲಾರಿ ಇನ್ನಿತ್ಯಾದಿಗಳಿವೆ. ಸುಮಾರು 5 ಲಕ್ಷ ಜನರು ಆರ್ಥಿಕ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಬಹುಪಾಲು ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕ್ಷೇತ್ರಗಳೂ ನಷ್ಟದಲ್ಲಿ ನಡೆಯುತ್ತಿರುವುದರಿಂದ ಕಾರ್ಮಿಕರಿಗೆ ಸಾಲ ನೀಡುವವರ ಸಂಖ್ಯೆಯೂ ಕಡಿಮೆಯಾಗಿದೆ. ದಿನನಿತ್ಯದ ಬಳಕೆ ವಸ್ತುಗಳನ್ನು ಖರೀದಿಸಲು ಸಹ ಹಿಂದೆ ಮುಂದೆ ನೋಡುವ ಸ್ಥಿತಿ ಕಾರ್ಮಿಕರದ್ದಾಗಿದೆ. ಈಗಾಗಲಾದರೂ ಸರ್ಕಾರ ಎಚ್ಚೆತ್ತು ಕೇರಳ ಮಾದರಿಯಲ್ಲಿ ಕಾರ್ಮಿಕರ ಸಹಾಯಕ್ಕೆ ಬರಬೇಕಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್‌ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios