ಹುಬ್ಬಳ್ಳಿ(ಏ.08): ಕೊರೋನಾ ಹಿನ್ನೆಲೆ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ವಿವಿಧ ಇಲಾಖೆಗಳ ನೌಕರರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗಾಗಿ ಕೇಂದ್ರ ಸರ್ಕಾರ ಆರೋಗ್ಯ ವಿಮೆಯನ್ನೂ ಘೋಷಿಸಿದೆ. ಆದರೆ ಅದರಲ್ಲಿ ಪೌರಕಾರ್ಮಿಕರನ್ನು ಸೇರಿಸಿಲ್ಲ. ಇದು ಅವರಲ್ಲಿ ಆಕ್ರೋಶವನ್ನುಂಟು ಮಾಡಿದೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಪ್ರಶ್ನಿಸುತ್ತಿದ್ದಾರೆ ಪೌರ ಕಾರ್ಮಿಕರು.

ಹೌದು, ಕೊರೋನಾ ಹಿನ್ನೆಲೆ ಇಡೀ ದೇಶಾದ್ಯಂತ ಲಾಕ್‌ಡೌನ್‌ ಮಾಡಿ ಬರೋಬ್ಬರಿ 10 ದಿನಗಳಿಗೂ ಹೆಚ್ಚು ಕಾಲ ಗತಿಸಿದೆ. ಜೀವದ ಹಂಗನ್ನು ತೊರೆದು ವೈದ್ಯರು, ಪೊಲೀಸರು, ಪ್ಯಾರಾ ಕಮಾಂಡೋ, ಪೌರಕಾರ್ಮಿಕರು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಹತ್ತು ಇಲಾಖೆಗಳ ನೌಕರರು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ ವಾರ ವಿಶೇಷ ಆರೋಗ್ಯ ವಿಮೆಯನ್ನು ಘೋಷಿಸಿದೆ. 5 ಲಕ್ಷ ವಿಶೇಷ ವಿಮೆಯಾಗಿರುವ ಇದರಡಿಯಲ್ಲಿ ವೈದ್ಯರು, ಪೊಲೀಸರು, ಪ್ಯಾರಾ ಕಮಾಂಡೋಗಳು ಸೇರಿದ್ದಾರೆ. ಆದರೆ ಪ್ರತಿದಿನ ಬೆಳಗ್ಗೆ ಎದ್ದು ನಗರಗಳನ್ನು ಸ್ವಚ್ಛ ಮಾಡುವ ಸಫಾಯಿ ಕರ್ಮಚಾರಿಗಳನ್ನು ಸೇರ್ಪಡೆ ಮಾಡಿಲ್ಲ.

ಕಸದ ಜೊತೆಯಲ್ಲೇ ಗ್ಲೌಸ್, ಮಾಸ್ಕ್: ಪೌರ ಕಾರ್ಮಿಕರಿಗೆ ಆತಂಕ

‘ನಾವು ಪ್ರತಿದಿನ ಬೆಳಗ್ಗೆಯಿಂದಲೇ ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮನ್ನೇ ವಿಮೆ ವ್ಯಾಪ್ತಿಗೆ ಸೇರ್ಪಡಿಸಿಲ್ಲ ಎಂದರೆ ಹೇಗೆ’ ಎಂಬ ಪ್ರಶ್ನೆ ಪೌರಕಾರ್ಮಿಕರದ್ದು. ಪ್ರಧಾನ ಮಂತ್ರಿಗಳೇ ತಮ್ಮ ಭಾಷಣದಲ್ಲಿ ಸಫಾಯಿ ಕರ್ಮಚಾರಿಗಳನ್ನು ಹೊಗಳಿದ್ದಾರೆ. ಆದರೆ ತಮ್ಮ ವಿಮೆಯಲ್ಲಿ ಮಾತ್ರ ನಮ್ಮನ್ನು ಸೇರಿಸಿಲ್ಲ. ನಮ್ಮನ್ನು ಈ ವಿಮೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಇವರು.

ರಾಜ್ಯ ಸರ್ಕಾರ ಘೋಷಿಸಿಲ್ಲ:

ದೆಹಲಿ ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪ್ರತ್ಯೇಕ ವಿಮೆ ಘೋಷಿಸಿದೆ. .1 ಕೋಟಿ ಮೊತ್ತದ ವಿಮೆ ಇದಾಗಿದೆ. ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರು ಈ ವಿಮೆಯಲ್ಲಿ ಬರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಕರ್ನಾಟಕ ಸರ್ಕಾರ ಈವರೆಗೂ ಇಂತಹ ವಿಮೆಯನ್ನೂ ಘೋಷಿಸಿಲ್ಲ. ಕರ್ನಾಟಕ ಸರ್ಕಾರವೂ ಕೊರೋನಾದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ವಿಮೆ ವ್ಯಾಪ್ತಿಯೊಳಗೆ ಬರುವಂತೆ ಕ್ರಮ ಕೈಗೊಳ್ಳಬೇಕು. ಕೂಡಲೇ ರಾಜ್ಯ ಸರ್ಕಾರವೂ ಕನಿಷ್ಠ .1 ಕೋಟಿ ಮೌಲ್ಯದ ವಿಮೆ ಘೋಷಿಸಬೇಕು ಎಂದು ಆಗ್ರಹ ಕೇಳಿ ಬರುತ್ತಿದೆ.

ಕೇಂದ್ರ ಸರ್ಕಾರ ಘೋಷಿಸಿರುವ ವಿಮೆಯಲ್ಲಿ ಪೌರಕಾರ್ಮಿಕರನ್ನು ಸೇರ್ಪಡೆ ಮಾಡಿಲ್ಲ. ಕೂಡಲೇ ಪೌರಕಾರ್ಮಿಕರನ್ನು ಸೇರ್ಪಡೆ ಮಾಡಬೇಕು. ಜತೆಗೆ ಕೊರೋನಾ ಹಿನ್ನೆಲೆ ಕೆಲಸ ಮಾಡುತ್ತಿರುವವರಿಗೆ ಪ್ರತ್ಯೇಕವಾದ ವಿಮೆಯನ್ನು ರಾಜ್ಯ ಸರ್ಕಾರವೂ ಘೋಷಿಸಲಿ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ ಕಿನಕೇರಿ ಅವರು ಹೇಳಿದ್ದಾರೆ. 

ನಾವೇನು ತಪ್ಪು ಮಾಡಿದ್ದೇವೆ ಅಂತ ನಮ್ಮನ್ನು ವಿಮೆ ವ್ಯಾಪ್ತಿಯಿಂದ ಕೈ ಬಿಟ್ಟಿದ್ದಾರೆ. ನಾವು ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿಲ್ಲವೇ? ನಮ್ಮನ್ನು ಕೇಂದ್ರ ಘೋಷಿಸಿರುವ ವಿಮೆ ವ್ಯಾಪ್ತಿಗೆ ಸೇರಿಸಲಿ ಎಂದು ಪೌರಕಾರ್ಮಿಕ ಮಹಿಳೆ ಗಂಗಮ್ಮ ಅವರು ತಿಳಿಸಿದ್ದಾರೆ.