Asianet Suvarna News Asianet Suvarna News

ಹಸಿವಿನಿಂದ ನಡೆದು ಕಾರ್ಮಿಕಳ ಸಾವು ಪ್ರಕರಣ : ಕಾರಣ ಬಹಿರಂಗ!

ಕಾಯಿಲೆಯಿಂದ ಮೃತಪಟ್ಟ ಮಹಿಳೆ: ಎಸ್‌.ಎಸ್‌. ನಕುಲ್‌ ಜಿಲ್ಲಾಧಿಕಾರಿ ಸ್ಪಷ್ಟನೆ| ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗಂಗಮ್ಮ ಅವರನ್ನು ವಿಮ್ಸ್‌ನಲ್ಲಿ ಚಿಕಿತ್ಸೆ| ಅವರಿಗೆ ಬೇಕಾದ ಊಟ, ಹಣ್ಣು ಮತ್ತಿತರ ಆಹಾರ ವಿತರಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರದೆ ಮೃತಪಟ್ಟಿದ್ದಾರೆ|

Ballari DC S S Nakul Reacts Over Woman Who Walked From Bengaluru To Sindhanur Dies
Author
Bengaluru, First Published Apr 8, 2020, 12:23 PM IST

ಬಳ್ಳಾರಿ(ಏ.08): ಬೆಂಗಳೂರಿಗೆ ದುಡಿಯಲು ಹೋಗಿದ್ದ ರಾಯಚೂರು ಜಿಲ್ಲೆಯ ಸಿಂಧನೂರಿನ ಕಟ್ಟಡ ಕಾರ್ಮಿಕಳಾದ ಗಂಗಮ್ಮ (29) ಉಪವಾಸದಿಂದ ನಡೆದು ನಡೆದು ಮಾ. 5ರಂದು ಪ್ರಾಣಬಿಟ್ಟಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಈ ವಿಷಯವನ್ನು ತಳ್ಳಿಹಾಕಿದ್ದು, ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.

"

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗಂಗಮ್ಮ ಅವರನ್ನು ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ ಬೇಕಾದ ಊಟ, ಹಣ್ಣು ಮತ್ತಿತರ ಆಹಾರವನ್ನು ವಿತರಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರದೆ ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ನೀಡಿದ್ದಾರೆ.

ಏನಿದು ಘಟನೆ ವಿವರ?:

ರಾಯಚೂರು ಜಿಲ್ಲೆ ಸಿಂಧನೂರಿನ ನಿವಾಸಿ ಗಂಗಮ್ಮ ಹಾಗೂ ಕುಟುಂಬ ಸದಸ್ಯರು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಗುಳೆ ಹೋಗಿದ್ದು, ಅಪಾರ್ಟ್‌ಮೆಂಟ್‌ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ಬಳಿಕ ಕಟ್ಟಡ ಮಾಲೀಕ ಹಣ ನೀಡಲಿಲ್ಲವಾದ್ದರಿಂದ ಊಟಕ್ಕಾಗಿ ಪರದಾಡಿದ್ದಾರೆ. ಸಿಂಧನೂರಿಗೆ ಮರಳಿ ಬರಲು 50 ಜನರು ಸೇರಿ ಟ್ರ್ಯಾಕ್ಟರ್‌ ಬಾಡಿಗೆ ಮಾಡಿಕೊಂಡು ಮಾ. 30ರಂದು ಬಂದಿದ್ದಾರೆ.

ತುಮಕೂರು ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಡೆದ ಬಳಿಕ ಇವರು ಹತ್ತಾರು ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಆನಂತರ ಟ್ರ್ಯಾಕ್ಟರ್‌ ಮಾಲೀಕ ಇವರನ್ನು ಸಂಪರ್ಕಿಸಿ ಮತ್ತೆ ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ. ಬಳ್ಳಾರಿ ಹೊರ ವಲಯದ ಚೆಕ್‌ಪೋಸ್ಟ್‌ನಲ್ಲಿ ಇವರನ್ನು ತಡೆದು ನಗರ ಹೊರ ವಲಯದ ಸರ್ಕಾರಿ ವಸತಿ ನಿಲಯದಲ್ಲಿ ಇರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಮ್ಮ ಸಾಕಷ್ಟುಬಳಲಿದ್ದರು. ಅವರನ್ನು ವಿಮ್ಸ್‌ಗೆ ದಾಖಲಿಸಲಾಗಿತ್ತು. ಮಾ. 5ರಂದು ಮೃತಪಟ್ಟಿದ್ದಾರೆ.

ಕಿಡ್ನಿ, ನ್ಯುಮೋನಿಯಾ, ಚರ್ಮ ಮತ್ತಿತರ ಕಾಯಿಲೆಯಿಂದ ಗಂಗಮ್ಮ ಬಳಲುತ್ತಿದ್ದರು. ಪ್ಲೇಟ್‌ಲೇಟ್ಸ್‌ ಕಡಿಮೆಯಾಗಿತ್ತು. ಕೂಡಲೇ ಸ್ಪಂದಿಸಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಧಿಕಾರಿ ಖುದ್ದು ಕಾಳಜಿ ವಹಿಸಿ ಆಸ್ಪತ್ರೆಗೆ ರವಾನಿಸಿದ್ದರು. ಚಿಕಿತ್ಸೆ ಫಲಿಸದೆ ಗಂಗಮ್ಮ ಮೃತಪಟ್ಟಿದ್ದಾರೆ ಎಂದು ಬಳ್ಳಾರಿಯ ವಿಮ್ಸ್‌ ಅಧೀಕ್ಷಕ ಡಾ. ಮರಿರಾಜ್‌ ಅವರು ಹೇಳಿದ್ದಾರೆ. 

Follow Us:
Download App:
  • android
  • ios