Asianet Suvarna News Asianet Suvarna News

ದೆಹಲಿ ಮಸೀದಿಯಿಂದ ಕೊರೋನಾ: ನಿಷೇಧದ ನಡುವೆಯೂ 15 ದಿನ ಧರ್ಮಸಭೆ!

ದೆಹಲಿ ಮಸೀದಿಯಿಂದ ದೇಶಾದ್ಯಂತ ಕೊರೋನಾ| ದೊಡ್ಡ ಕಾರ್ಯಕ್ರಮಕ್ಕೆ ನಿಷೇಧವಿದ್ದರೂ ದೆಹಲಿಯಲ್ಲಿ ಬೃಹತ್‌ ಧಾರ್ಮಿಕ ಕಾರ್ಯಕ್ರಮ ಆಯೋಜನೆ| ಜಮಾತ್‌ ಧರ್ಮಸಭೆಗೆ ಬಂದ ನೂರಾರು ಜನರಿಗೆ ಸೋಂಕು, ಇವರಿಂದ ದೇಶವ್ಯಾಪಿ ಹಬ್ಬಿದ ಸೋಂಕು

What is Tablighi Jamaat Organiser of Delhi event behind rise in India coronavirus count
Author
Bangalore, First Published Apr 1, 2020, 8:10 AM IST

ನವದೆಹಲಿ(ಏ.04): ಕೊರೋನಾ ನಿಗ್ರಹಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಿರುವಾಗಲೇ, ದೆಹಲಿಯ ಮಸೀದಿಯೊಂದು ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯೊಂದು ಇಡೀ ದೇಶಕ್ಕೆ ವ್ಯಾಪಕವಾಗಿ ಕೊರೋನಾ ಹಬ್ಬಿಸಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮರ್ಕಜ್‌ ನಿಜಾಮುದ್ದೀನ್‌ (ಬಂಗ್ಲೇವಾಲೆ) ಮಸೀದಿಯಲ್ಲಿ ತಬ್ಲೀಗಿ ಜಮಾತ್‌ ಸಂಘಟನೆ ಮಾಚ್‌ರ್‍ 1ರಿಂದ 15ರವರೆಗೆ ಧಾರ್ಮಿಕ ಸಭೆಯೊಂದನ್ನು ಹಮ್ಮಿಕೊಂಡಿದ್ದು, ಇದರಲ್ಲಿ ದೇಶ ವಿದೇಶಗಳ 8000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

ಇವರ ಪೈಕಿ ಕೆಲವರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಅಲ್ಲಿಗೆ ಆಗಮಿಸಿದ್ದವರನ್ನೆಲ್ಲಾ ಇದಿಗ ಪರೀಕ್ಷೆಗೆ ಗುರಿಪಡಿಸಲಾಗುತ್ತಿದೆ. ಅವರ ಪೈಕಿ ನೂರಾರು ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದಕ್ಕಿಂತ ಆತಂಕವಾಗಿ ವಿಷಯವೆಂದರೆ ಈಗ ಸೋಂಕು ಪತ್ತೆಯಾದವರು ಕರ್ನಾಟಕ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿದ್ದು, ಅಲ್ಲಿಯೂ ಇನ್ನಷ್ಟುಜನರಿಗೆ ಸೋಂಕು ಹಬ್ಬಿಸಿರುವ ಭೀತಿ ಎದುರಾಗಿದೆ.

ಕಳೆದ ವಾರ ಸುಮಾರು 1000ಕ್ಕೂ ಹೆಚ್ಚು ಜನರು ಮೊದಲ ಹಂತದಲ್ಲಿ ತೆರವುಗೊಂಡಿದ್ದು, ಅವರಲ್ಲಿ 6 ಮಂದಿ ತೆಲಂಗಾಣದ ವ್ಯಕ್ತಿಗಳು ಸೋಮವಾರ ಕೊರೋನಾ ವೈರಸ್‌ ತಗುಲಿ ಮೃತಪಟ್ಟಿದ್ದರು. ಇತ್ತೀಚೆಗೆ ಕರ್ನಾಟಕದ ತುಮಕೂರು ಜಿಲ್ಲೆ ಶಿರಾದ ಒಬ್ಬ ವೃದ್ಧ ಕೂಡ ಇದೇ ಕಾರಣಕ್ಕೆ ಬಲಿಯಾಗಿದ್ದ. ಇದರ ಬೆನ್ನಲ್ಲೇ ಸರ್ಕಾರ ಉಳಿದ 1033 ಜನರನ್ನು ಮಂಗಳವಾರ ತೆರವುಗೊಳಿಸಿದೆ.

ದಿಲ್ಲಿ ಮಸೀದಿ ಜಮಾತ್‌: ರಾಜ್ಯದ 9 ಜಿಲ್ಲೆಯಿಂದ 300 ಜನ ಭಾಗಿ!

ತೆರವುಗೊಳಿಸಿದ 1033 ಮಂದಿಯಲ್ಲಿ 24 ಜನರಲ್ಲೂ ಕೊರೋನಾ ವೈರಸ್‌ ಖಚಿತಪಟ್ಟಿದೆ. 334 ಜನರನ್ನು ಆಸ್ಪತ್ರೆಗೆ ಕಳಿಸಲಾಗಿದೆ. 700 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ. ಇದಲ್ಲದೆ ನಿಜಾಮುದ್ದೀನ್‌ಗೆ ಸಂಪರ್ಕಿಸುವ ರಸ್ತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್‌ ಮಾಡಲಾಗಿದೆ.

ತಬ್ಲೀಗಿ ಜಮಾತ್‌ ಎಂದರೇನು?

ತಬ್ಲೀಗಿ ಜಮಾತ್‌ ಎಂಬುದು ಮುಸ್ಲಿಮರ ಧರ್ಮಪ್ರಚಾರ ಹಾಗೂ ಶಿಕ್ಷಣ ಸಂಘಟನೆ. ಇದು ಜಾಗತಿಕ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು, 150 ದೇಶಗಳಲ್ಲಿ ಸಕ್ರಿಯವಾಗಿದೆ. 1926ರಲ್ಲಿ ಹರ್ಯಾಣದ ಮೇವಾತ್‌ನಲ್ಲಿ ಇದು ಮುಸ್ಲಿಂ ಮತ ಪಂಡಿತ ಮೌಲಾನಾ ಮೊಹಮ್ಮದ್‌ ಇಲಿಯಾಸ್‌ ಅವರಿಂದ ಸ್ಥಾಪನೆ ಆಯಿತು. ಮುಸ್ಲಿಮರು ಧರ್ಮಪರಿಪಾಲಕರಾಗಿರಬೇಕು ಎಂದು ಈ ಸಂಘಟನೆಯು ಜಾಗೃತಿ ಮೂಡಿಸುತ್ತದೆ. ತನ್ನದೇ ಆದ ಮತಪ್ರಚಾರಕರ ಮೂಲಕ ಇಸ್ಲಾಂ ಧರ್ಮ ಪರಿಪಾಲಿಸಬೇಕು ಎಂದು ಮುಸ್ಲಿಮರಲ್ಲಿ ತಿಳಿಹೇಳುತ್ತದೆ. ಇದರ ಕೇಂದ್ರ ಸ್ಥಳವು ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಅಲಾಮಿ ಮರ್ಕಜ್‌ ಬಂಗ್ಲೇವಾಲಿ ಮಸೀದಿ.

ತೀವ್ರವಾದಿ ಚಟುವಟಿಕೆ: ಹಲವು ದೇಶಗಳಲ್ಲಿ ನಿಷೇಧ

ತಬ್ಲೀಗಿ ಜಮಾತ್‌ ಸಂಘಟನೆಯನ್ನು ಉಜ್ಬೇಕಿಸ್ತಾನ, ತಜಕಿಸ್ತಾನ, ಕಜಕಸ್ತಾನ ಸೇರಿ ಹಲವು ಮಧ್ಯ ಏಷ್ಯಾ ದೇಶಗಳು ನಿಷೇಧಿಸಿವೆ. ಇದನ್ನು ತೀವ್ರವಾದಿ ಸಂಘಟನೆ ಎಂದು ಅವು ಪರಿಗಣಿಸಿವೆ. ಗ್ಲಾಸ್ಗೋ ವಿಮಾನ ನಿಲ್ದಾಣ ದಾಳಿಕೋರ ಕಫೀಲ್‌ ಅಹ್ಮದ್‌, ಇದೇ ಸಂಘಟನೆಯಲ್ಲಿದ್ದ ಎನ್ನಲಾಗಿದೆ. ಲಂಡನ್‌ನ 7/7 ಬಾಂಬರ್‌ಗಳಿಬ್ಬರು ಕೂಡ ಬ್ರಿಟನ್‌ನ ತಬ್ಲೀಗಿ ಮಸೀದಿಯಲ್ಲಿ ಪ್ರಾರ್ಥಿಸಿದ್ದರು. 2011ರಲ್ಲಿ ವಿಕಿಲೀಕ್ಸ್‌ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಅಲ್‌ ಖೈದಾ ಉಗ್ರರು ದಿಲ್ಲಿ ತಬ್ಲೀಗಿ ಜಮಾತ್‌ ಕೇಂದ್ರ ಕಚೇರಿಯನ್ನು ಪ್ರಯಾಣ ದಾಖಲೆ ಸೃಷ್ಟಿಸಲು ಬಳಸಿಕೊಂಡಿದ್ದರು ಎಂದು ಹೇಳಲಾಗಿತ್ತು.

ಆದೇಶ ಉಲ್ಲಂಘಿಸಿದ್ದು ಹೀಗೆ

- ಜನರು ಗುಂಪು ಸೇರಬಾರದೆಂಬ ಆದೇಶ ಉಲ್ಲಂಘನೆ

- ಮಸೀದಿಯಲ್ಲಿ ಬೀಡುಬಿಟ್ಟಸಾವಿರಾರು ಜನ

ನವದೆಹಲಿ: ಮಾಚ್‌ರ್‍ 2ನೇ ವಾರ ದಿಲ್ಲಿಯಲ್ಲಿ ನಡೆದ ತಬ್ಲೀಗಿ ಜಮಾತ್‌ನ ಧಾರ್ಮಿಕ ಸಮಾವೇಶವು ಲಾಕ್‌ಡೌನ್‌ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಸಮಾವೇಶ ಮುಗಿದ ನಂತರ ಮಾಚ್‌ರ್‍ 16ರಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ‘ಮಾಚ್‌ರ್‍ 31ರವರೆಗೆ ದಿಲ್ಲಿಯಲ್ಲಿ 50 ಜನರಿಗಿಂತ ಹೆಚ್ಚು ಸೇರುವ ಧಾರ್ಮಿಕ ಸಮಾವೇಶಗಳಿಗೆ ಅವಕಾಶವಿಲ್ಲ’ ಎಂದು ಆದೇಶಿಸಿದರು.

ಮತ್ತೊಂದು ಕೊರೋನಾ, ದಿಲ್ಲಿ ಮಸೀದಿಗೆ ಹೋಗಿಬಂದ 19 ಜನರು: ಕಲಬುರಗಿಯಲ್ಲಿ ಹೆಚ್ಚಿದ ಆತಂಕ

ಆದರೂ ತಬ್ಲೀಗಿ ಜಮಾತ್‌ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ 8000 ಜನರಲ್ಲಿ ಸುಮಾರು 3400 ಜನರು ಇನ್ನೂ ನಿಜಾಮುದ್ದೀನ್‌ನಲ್ಲಿರುವ ಮಸೀದಿಯಲ್ಲೇ ಬೀಡುಬಿಟ್ಟಿದ್ದರು. ಈ ನಡುವೆ, ಇದೇ ಸಭೆಗೆ ಬಂದಿದ್ದ 7 ಇಂಡೋನೇಷ್ಯಾ ನಾಗರಿಕರು ತೆಲಂಗಾಣಕ್ಕೆ ತೆರಳುವಾಗ ಮಾ.20ರಂದು ಕೊರೋನಾ ವೈರಸ್‌ ಪೀಡಿತರಾಗಿದ್ದು ದೃಢವಾಯಿತು. ಮಸೀದಿ ತೆರವು ಮಾಡುವಂತೆ ಪೊಲೀಸರು ಮಾ.23 ಹಾಗೂ 28ರಂದು 2 ನೋಟಿಸ್‌ ನೀಡಿದರೂ, ಸಂಪೂರ್ಣ ತೆರವು ಮಾಡಲಿಲ್ಲ. ಮಾ.23ರಂದು 1500 ಜನರು ತೆರಳಿದರು. ಮಾ.24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಆದೇಶ ಹೊರಡಿಸಿದರು. ಇದಾದ ಬಳಿಕವೂ 1000 ಜನರು ಮಸೀದಿಯಲ್ಲೇ ಇದ್ದರು ಎನ್ನಲಾಗಿದೆ. ‘ಮೋದಿ ಲಾಕ್‌ಡೌನ್‌ ಆದೇಶದ ಕಾರಣ ಮಸೀದಿಯಲ್ಲಿ ಇದ್ದವರಿಗೆ ತೆರಳಲು ಆಗಲಿಲ್ಲ’ ಎಂದು ತಬ್ಲೀಗಿ ಜಮಾತ್‌ ಹೇಳಿಕೊಂಡಿದೆ.

ಕೇಜ್ರಿವಾಲ್‌ ಆಕ್ರೋಶ, ಕೇಸು ದಾಖಲು

ನವದೆಹಲಿ: ಮರ್ಕಜ್‌ ನಿಜಾಮುದ್ದೀನ್‌ ಮಸೀದಿಯಲ್ಲಿ ಧಾರ್ಮಿಕ ಸಭೆ ಹಮ್ಮಿಕೊಂಡಿದ್ದರ ಬಗ್ಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಡೀ ವಿಶ್ವದಾದ್ಯಂತ ಜನರ ಕೊರೋನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಧಾರ್ಮಿಕ ಸಭೆಗಳಿಗೆ ನಿಷೇಧ ಹೇರಿದ್ದ ಹೊರತಾಗಿಯೂ, ಇಷ್ಟುದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೇಜವಾಬ್ದಾರಿಯ ವರ್ತನೆ. ದೆಹಲಿಯಲ್ಲಿ ಪತ್ತೆಯಾದ 94 ಪ್ರಕರಣಗಳ ಪೈಕಿ 24 ಪ್ರಕರಣಗಳು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರದ್ದೇ ಆಗಿದೆ ಎಂದು ಕಿಡಿಕಾರಿದ್ದಾರೆ. ಈ ನಡುವೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಧರ್ಮಸಭೆ ನಡೆಸಿದ ಮರ್ಕಜ್‌ನ ಮೌಲಾನಾ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸೋಂಕು ಹೇಗೆ ಹಬ್ಬಿರಬಹುದು?

ದೆಹಲಿ ಮಸೀದಿ ಕಾರ್ಯಕ್ರಮಕ್ಕೆ ಸೌದಿ ಅರೇಬಿಯಾ, ಮಲೇಷ್ಯಾ, ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಿಂದ ಬಂದಿದ್ದರು. ಈ ಪೈಕಿ ಕೆಲ ದೇಶಗಳು ಅತ್ಯಂತ ಹೆಚ್ಚು ಕೊರೋನಾ ಸೋಂಕುಪೀಡಿತ ದೇಶಗಳಾಗಿವೆ. ಹೀಗಾಗಿ ಅಲ್ಲಿಂದ ಕಾರ್ಯಕ್ರಮಕ್ಕೆ ಬಂದವರ ಮೂಲಕ ಇತರರಿಗು ಸೋಂಕು ಹಬ್ಬಿರುವ ಭೀತಿ ಇದೆ.

ತೆಲಂಗಾಣ, ಆಂಧ್ರದ 1500 ಮಂದಿ!

ಹೈದರಾಬಾದ್‌: ಭಾರತದಲ್ಲಿ ಕೊರೋನಾ ವೈರಾಣು ಹರಡುವಿಕೆಯ ಮುಖ್ಯ ಮೂಲವಾಗಿ ಮಾರ್ಪಟ್ಟಿರುವ ದಿಲ್ಲಿಯ ತಬ್ಲೀಗಿ ಜಮಾತ್‌ ಧರ್ಮಸಭೆಯಲ್ಲಿ ತೆಲಂಗಾಣದ 1000 ಮತ್ತು ಆಂಧ್ರದ 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಬೆಳಕಿಗೆ ಬಂದಿದೆ. ಈ ಸಮಾವೇಶದಲ್ಲಿ ಪಾಲ್ಗೊಂಡವರನ್ನು ಗುರುತಿಸಲಾಗಿದ್ದು, ಇವರ ಸಂಪರ್ಕಕ್ಕೆ ಬಂದವರು ಬಂದವರು ಯಾರು ಎಂಬುದನ್ನು ಗುರುತಿಸುವ ಕೆಲಸ ಆರಂಭಿಸಿದೆ. ಸಭೆಯಲ್ಲಿ ಪಾಲ್ಗೊಂಡ 6 ತೆಲಂಗಾಣ ಜನರು ಸಾವನ್ನಪ್ಪಿರುವ ಕಾರಣ ಸರ್ಕಾರಕ್ಕೆ ಆತಂಕ ಹೆಚ್ಚಿದೆ. ಈ 6 ಜನರ ಕುಟುಂಬವರನ್ನೂ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

300 ಪ್ರವಾಸಿಗರು ಕಪ್ಪುಪಟ್ಟಿಗೆ?

ತಬ್ಲೀಗಿ ಜಮಾತ್‌ ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ಮಾಚ್‌ರ್‍ 8ರಿಂದ 10ರವರೆಗೆ ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ 300 ವಿದೇಶೀಯರು ಟೂರಿಸ್ಟ್‌ ವೀಸಾ ಅಡಿ ಆಗಮಿಸಿ ಪಾಲ್ಗೊಂಡಿದ್ದರು. ಪ್ರವಾಸಿ ವೀಸಾವನ್ನು ಪ್ರವಾಸದ ಉದ್ದೇಶಕ್ಕೆ ಬಳಸಿಕೊಳ್ಳಬೇಕೇ ವಿನಾ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಈ 300 ಪ್ರವಾಸಿಗರನ್ನು ಭಾರತ ಸರ್ಕಾರ ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ. ಕಪ್ಪುಪಟ್ಟಿಗೆ ಒಮ್ಮೆ ಸೇರಿಸಲ್ಪಟ್ಟರೆ ಈ ಪ್ರವಾಸಿಗರು ಇನ್ನು ಭಾರತಕ್ಕೆ ಆಗಮಿಸುವಂತಿಲ್ಲ.

ಕಾನೂನು ಉಲ್ಲಂಘಿಸಿಲ್ಲ: ನಿಜಾಮುದ್ದೀನ್‌ ಮಸೀದಿ

ನವದೆಹಲಿ: ದಿಲ್ಲಿಯಲ್ಲಿ ಕೊರೋನಾ ವೈರಾಣುವಿನ ಕೇಂದ್ರವಾಗಿ ಮಾರ್ಪಟ್ಟಿರುವ ತಬ್ಲೀಗಿ ಜಮಾತ್‌ ಸಂಘಟನೆಯ ಕೇಂದ್ರ ಸ್ಥಳವಾದ ಮರ್ಕಜ್‌ ನಿಜಾಮುದ್ದೀನ್‌ ಮಸೀದಿಯು ತಾನು ಕಾನೂನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ‘ಲಾಕ್‌ಡೌನ್‌ಗಿಂತ ಮೊದಲೇ ಧರ್ಮಸಭೆ ಇತ್ತು. ಲಾಕ್‌ಡೌನ್‌ ಘೋಷಣೆ ಆದ ಬಳಿಕ ನಾವು ಧರ್ಮಸಭೆಗೆ ಬಂದವರನ್ನು ರಸ್ತೆಗೆ ಇಳಿಯಲು ಬಿಡದೇ ಮಸೀದಿ ಒಳಗೇ ಇರಿಸಿಕೊಂಡಿದ್ದೆವು. ಸಭೆಯ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೆವು’ ಎಂದು ನಿಜಾಮುದ್ದೀನ್‌ ಹೇಳಿದೆ.

ತಬ್ಲೀಗಿ ಪಾಯಿಂಟರ್ಸ್‌

- ಧಾರ್ಮಿಕ ಸಭೆಯಲ್ಲಿ ಭಾಗಿಯಾಗಲು 8000ಕ್ಕೂ ಹೆಚ್ಚು ಜನ ಬಂದಿದ್ದರು

- ಮಸೀದಿ 8 ಅಂತಸ್ತಿನದು. ಪ್ರತಿ ಹಾಲ್‌ನಲ್ಲಿ 300 ಜನ ತಂಗಿದ್ದರು

- ತೆಲಂಗಾಣದ 1000 ಜನರು ಇದರಲ್ಲಿ ಭಾಗಿ. ಇವರೆಲ್ಲ ಕ್ವಾರಂಟೈನಲ್ಲಿ. ಈ ಪೈಕಿ 6 ಮಂದಿ ಸಾವು

- 85 ಮೌಲ್ವಿಗಳು ಸೇರಿದಂತೆ ಈಗ 300 ಮಂದಿಗೆ ಜ್ವರ, ಕೆಮ್ಮು

- ದಿಲ್ಲಿ ಮಸೀದಿಯಲ್ಲಿ ತೆರವಾದ 1000 ಮಂದಿ ಪೆæೖಕಿ 24 ಮಂದಿಗೆ ಸೋಂಕು ಧೃಢ

- ಮಹಾರಾಷ್ಟ್ರದ ಒಂದೇ ಕುಟುಂಬದ 24 ಮಂದಿಗೆ ಸೋಂಕು

- ತಮಿಳುನಾಡಿನಲ್ಲಿ 980 ಮಂದಿ ಕ್ವಾರಂಟೈನ್‌, 38 ಮಂದಿಗೆ ಸೋಂಕು, 1 ಸಾವು

- ಜಮಾತ್‌ ಸಭೆಗೆ ಹೋಗಿದ್ದ ತುಮಕೂರಿನ ಶಿರಾದ ಒಬ್ಬ ಸಾವು

- ಅಂಡಮಾನ್‌ನ 9 ಮಂದಿಗೆ ಸೋಂಕು

- ಕರ್ನಾಟಕದ ಹತ್ತಾರು ಜನ ಇದರಲ್ಲಿ ಭಾಗಿ

Close

Follow Us:
Download App:
  • android
  • ios