ನವದೆಹಲಿ(ಮಾ.30): 21 ದಿನಗಳ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯ ಸಿಗದೆ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ಐದು ದಿನಗಳಲ್ಲಿ ಕೇರಳದಲ್ಲಿ 9, ಕರ್ನಾಟಕದಲ್ಲಿ 5 ಹಾಗೂ ಹೈದರಾಬಾದ್‌ನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಮದ್ಯವ್ಯಸನಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ನಡೆದಿವೆ.

ಮದ್ಯವ್ಯಸನಿಗಳು ಆತ್ಮಹತ್ಯೆಗೆ ಯತ್ನಿಸುವುದು ಅನೇಕ ರಾಜ್ಯ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಎಲ್ಲ ರಾಜ್ಯಗಳೂ ಪ್ರಮುಖ ಆಸ್ಪತ್ರೆಗಳನ್ನು ಕೊರೋನಾ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಿದ್ದು, ಡಿ-ಅಡಿಕ್ಷನ್‌ ಸೆಂಟರ್‌ಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ವಿತ್‌ಡ್ರಾಯಲ್‌ ಸಮಸ್ಯೆಗೆ ತುತ್ತಾಗುವ ಮದ್ಯ ವ್ಯಸನಿಗಳಿಗೆ ಚಿಕಿತ್ಸೆ ಸಿಗದೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯವ್ಯಸನಿಗಳಿಗೆ ಸೀಮಿತ ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡುವುದಕ್ಕೆ ಕೇರಳ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಈ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ.

ಮದ್ಯ ಬಂದ್‌ ಆಗಿ ಖಿನ್ನತೆ: ರಾಜ್ಯದ 7 ಜನ ಆತ್ಮಹತ್ಯೆ!

ಕೇರಳದ ಡಿ-ಅಡಿಕ್ಷನ್‌ ಸೆಂಟರ್‌ಗಳಲ್ಲಿ ಶನಿವಾರ ಕನಿಷ್ಠ 100 ಜನ ಮದ್ಯ ವ್ಯಸನಿಗಳು ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದಾರೆ ಎಂದು ಡಿ-ಎಡಿಕ್ಷನ್‌ ಕೇಂದ್ರಗಳ ಸಿಇಒ ತಿಳಿಸಿದ್ದಾರೆ. ರಾಜ್ಯದ ಕೌನ್ಸೆಲಿಂಗ್‌ ಕೇಂದ್ರಗಳಿಗೆ ಹಾಗೂ ಮಾನಸಿಕ ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ಮದ್ಯ ವ್ಯಸನಿಗಳ ಸಂಖ್ಯೆ ಕಳೆದ ಮೂರು ದಿನಗಳಲ್ಲಿ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

ಕೇರಳದಲ್ಲಿ ಕೊರೋನಾಕ್ಕೆ 1, ಮದ್ಯ ಸಿಗದೆ 9 ಸಾವು

ತಿರುವನಂತಪುರ: ಕೇರಳದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನ ಕೊರೋನಾ ಸೋಂಕು ಪೀಡಿತರಾಗಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಆದರೆ ಕೊರೋನಾ ನಿಗ್ರಹಕ್ಕೆ ಮಾಡಲಾದ ಲಾಕ್‌ಡೌನ್‌ನಿಂದ ಮದ್ಯ ಸಿಗದೆ 9 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ 7 ಜನ ಆತ್ಮಹತ್ಯೆ ಮಾಡಿಕೊಂಡು, ಓರ್ವ ಹೃದಯಾಘಾತದಿಂದ, ಮತ್ತೋರ್ವ ಆಫ್ಟರ್‌ಲೋಷನ್‌ ಸೇವಿಸಿ ಸಾವನ್ನಪ್ಪಿದ್ದಾರೆ.

ಕೇರಳ ಆರೋಗ್ಯ ಇಲಾಖೆಯ 2018ರ ವರದಿ ಪ್ರಕಾರ ರಾಜ್ಯದಲ್ಲಿ 4 ಲಕ್ಷ ನಿತ್ಯ ಮದ್ಯಪಾನ ಮಾಡುವ ಚಟ ಹೊಂದಿದ್ದಾರೆ. ಈ ಪೈಕಿ 50000ಕ್ಕೂ ಹೆಚ್ಚು ಜನ ಮದ್ಯಪಾನ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ 15000 ಜನ ನಿತ್ಯ ಮದ್ಯಪಾನ ಮಾಡದೇ ಹೋದಲ್ಲಿ ಗಂಭೀರ ಅಪಾಯಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ.

ವೈದ್ಯರು ಚೀಟಿ ಬರೆದುಕೊಟ್ಟರೆ ಮದ್ಯ

ತಿರುವನಂತಪುರ: ಮದ್ಯಪಾನ ಮಾಡದೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವವರ ನೆರವಿಗೆ ಕೇರಳ ಸರ್ಕಾರ ಧಾವಿಸಿದೆ. ವಿತ್‌ಡ್ರಾಯಲ್‌ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರಿಂದ ಚೀಟಿ ಬರೆಸಿಕೊಂಡು ಬಂದರೆ, ಅವರು ಸೂಚಿಸಿದಷ್ಟುಪ್ರಮಾಣದ ಮದ್ಯವನ್ನು ಸರ್ಕಾರಿ ಮದ್ಯದಂಗಡಿ ಮೂಲಕ ವಿತರಿಸಲು ಸರ್ಕಾರ ನಿರ್ಧರಿಸಿದೆ.

Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!

ಏನಿದು ವಿತ್‌ಡ್ರಾಯಲ್‌ ಸಮಸ್ಯೆ?

ಪ್ರತಿದಿನ ಮದ್ಯ ಸೇವಿಸುವವರಿಗೆ ಇದ್ದಕ್ಕಿದ್ದಂತೆ ಮದ್ಯ ಸಿಗುವುದು ನಿಂತುಹೋದರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಾಗುತ್ತವೆ. ಇದನ್ನು ವಿತ್‌ಡ್ರಾಯಲ್‌ ಸಮಸ್ಯೆ ಅಥವಾ ಕುಡಿತದ ಹಿಂತೆಗೆತ ಎನ್ನುತ್ತಾರೆ. ಅಂತಹ ವ್ಯಕ್ತಿಗೆ ಮದ್ಯ ಸಿಗದ ಮೊದಲ 8ರಿಂದ 12 ತಾಸುಗಳಲ್ಲಿ ನಡುಕ, ಚಡಪಡಿಕೆ, ಸಿಟ್ಟು, ಅತಿಯಾಗಿ ಬೆವರುವುದು, ತಲೆನೋವು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. 48ರಿಂದ 72 ಗಂಟೆಗಳಲ್ಲಿ ಭ್ರಮೆ, ಖಿನ್ನತೆ, ತಲೆ ಕೆಟ್ಟುಹೋದಂತಾಗುವುದು, ಜ್ವರ, ಮೂರ್ಛೆ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಂತರ ವ್ಯಕ್ತಿ ತನಗೆ ತಾನೇ ಹಾನಿ ಮಾಡಿಕೊಳ್ಳುವುದು, ಆತ್ಮಹತ್ಯೆಯಂತಹ ಯತ್ನಕ್ಕೆ ಕೈಹಾಕುವುದನ್ನು ಮಾಡಬಹುದು. ಇದಕ್ಕೂ ಮುನ್ನವೇ ಅವರನ್ನು ಡಿ-ಅಡಿಕ್ಷನ್‌ ಸೆಂಟರ್‌ ಅಥವಾ ಆಸ್ಪತ್ರೆಗೆ ಸೇರಿಸಿದರೆ ಪ್ರಾಣಾಪಾಯದಿಂದ ರಕ್ಷಿಸಬಹುದು.

ಕೊರೋನಾಗಿಂತಲು ಹೆಚ್ಚು ಸಾಯ್ತಾರೆ ಮದ್ಯ ಸಿಗದ ಮದ್ಯಪ್ರಿಯರು