ನವದೆಹಲಿ(ಏ.04): ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ, ದೇಶವ್ಯಾಪಿ 21 ದಿನಗಳ ಲಾಕ್‌ಡೌನ್‌ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ಕಳೆದ ಮೂರೇ ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗಿರುವುದು ಆತಂಕ ಮೂಡಿಸಿದೆ. ಮಂಗಳವಾರ 1500ರ ಗಡಿದಾಟಿದ್ದ ಸೋಂಕಿತರ ಸಂಖ್ಯೆ ಶುಕ್ರವಾರದ ಹೊತ್ತಿಗೆ 3000ರ ಗಡಿ ದಾಟುವ ಮೂಲಕ ಕೇವಲ 3 ದಿನದಲ್ಲಿ ದ್ವಿಗುಣವಾದಂತೆ ಆಗಿದೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ನೇತೃತ್ವದ ಉನ್ನತ ಮಟ್ಟದ ಸಚಿವರ ಸಮಿತಿ, ದೇಶದಲ್ಲಿ ಕೊರೋನಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ.

ಭಾರತ ಲಾಕ್‌ಡೌನ್ ಮೋದಿಯ ದೂರದೃಷ್ಟಿ ಹಾಗೂ ಧೈರ್ಯದ ನಿರ್ಧಾರ: WHO ರಾಯಭಾರಿ!

ಕಳೆದ 3 ದಿನಗಳಲ್ಲಿ ನಿತ್ಯವೂ ದೇಶವ್ಯಾಪಿ 500ರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಬ್ಲೀಘಿ ಜಮಾತ್‌ ಕಾರ್ಯಕರ್ತರಿಗೆ ಸೋಂಕು ತಗುಲಿದ ಪ್ರಕರಣಗಳು, ಒಟ್ಟಾರೆ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಾರಣವಾಗಿದೆ. ಒಟ್ಟು 3000 ಸೋಂಕಿತರಲ್ಲಿ ತಬ್ಲೀಘಿಗಳ ಪಾಲೇ 650ಕ್ಕೂ ಹೆಚ್ಚು ಎನ್ನುವುದೇ ಈ ಅಂಶಗಳನ್ನು ಸಾಬೀತುಪಡಿಸುತ್ತಿದೆ.

500 ಹೊಸ ಪ್ರಕರಣ:

ಈ ನಡುವೆ ಶುಕ್ರವಾರ ಭಾರತದಾದ್ಯಂತ 500ಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3050ಕ್ಕೆ ತಲುಪಿದೆ. ಶುಕ್ರವಾರ ತಮಿಳುನಾಡಿನಲ್ಲಿ 102, ದೆಹಲಿಯಲ್ಲಿ 91 ಮತ್ತು ತೆಲಂಗಾಣದಲ್ಲಿ 75 ಪ್ರಕರಣಗಳು ದಾಖಲಾಗುವ ಮೂಲಕ ಅತಿ ಹೆಚ್ಚು ಸೋಂಕು ದೃಢಪಟ್ಟರಾಜ್ಯಗಳಾಗಿ ಹೊರಹೊಮ್ಮಿವೆ. ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳು ಶುಕ್ರವಾರ ರಾತ್ರಿವರೆಗೆ 2547 ಜನರಿಗೆ ಸೋಂಕು ತಗಲಿದ್ದು, 62 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿವೆ.

ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದು ಲಕ್ಷ ಶವಬ್ಯಾಗ್‌ ಸಿದ್ಧತೆ..!

12 ಸಾವು: ಮತ್ತೊಂದೆಡೆ ಸೋಂಕಿತರ ಸಂಖ್ಯೆಯಂತೆ ಸಾವಿನ ಸಂಖ್ಯೆಯಲ್ಲೂ ಶುಕ್ರವಾರ ಗಣನೀಯ ಏರಿಕೆ ದಾಖಲಾಗಿದ್ದು ಒಂದೇ ದಿನ 12 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 88ಕ್ಕೆ ಏರಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 6, ಗುಜರಾತ್‌, ತೆಲಂಗಾಣ, ದೆಹಲಿಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ.