ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ವಿಚ್ಛೇದನ ಪಡೆದು ವರ್ಷಗಳು ಕಳೆದ್ರೂ ದಿನಕ್ಕೊಂದು ವಿವಾದ ತಲೆ ಎತ್ತುತ್ತಲೇ ಇದೆ. ಈಗ ಕೊಂಡ ಸುರೇಖಾ ಹೇಳಿಕೆ ತೀವ್ರ ಚರ್ಚೆ ಹುಟ್ಟುಹಾಕಿದೆ. ಆದ್ರೆ ಸಚಿವರ ವಿವಾದಾತ್ಮಕ ಆರೋಪ ಅಕ್ಕಿನೇನಿ ಕುಟುಂಬದ ಒಗ್ಗಟ್ಟಿನ ಗುಟ್ಟು ಬಿಚ್ಚಿಟ್ಟಿದೆ.
ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು (Actor Naga Chaitanya and actress Samantha Ruth Prabhu) ವಿಚ್ಛೇದನದ ಬಗ್ಗೆ ಸಚಿವೆ ಕೊಂಡ ಸುರೇಖಾ (Konda Surekha) ನೀಡಿರುವ ಹೇಳಿಕೆ, ಅಕ್ಕಿನೇನಿ ಕುಟುಂಬದ ಒಗ್ಗಟ್ಟನ್ನು ಮತ್ತಷ್ಟು ಬಲಗೊಳಿಸಿದೆ. ಸುರೇಖಾ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದು ಅಕ್ಕಿನೇನಿ (Akkineni) ಕುಟುಂಬ ಖಂಡಿಸಿದೆ. ನಾಗ ಚೈತನ್ಯ (Naga Chaitanya), ಸೂಪರ್ ಸ್ಟಾರ್ ನಾಗಾರ್ಜುನ (Nagarjuna), ಮಲತಾಯಿ ಅಮಲಾ ಮತ್ತು ಸಹೋದರ ಅಖಿಲ್ ಅಕ್ಕಿನೇನಿ (Akhil Akkineni), ಸುರೇಖಾ ಮಾತನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಾಗಾರ್ಜುನ್ ಸಹೋದರ, ಅಖಿಲ್ ಅಕ್ಕಿನೇನಿ, ನಾಗ ಚೈತನ್ಯ ಪರ ಹೇಳಿಕೆ ನೀಡಿದ್ದಾರೆ. ತಮ್ಮ ತಾಯಿಯ ಪೋಸ್ಟ್ ಮರುಟ್ವೀಟ್ ಮಾಡಿದ ಅವರು, ಪ್ರೀತಿಯ ತಾಯಿ, ನೀವು ಹೇಳಿದ ಪ್ರತಿಯೊಂದು ಮಾತನ್ನು ನಾನು ಬೆಂಬಲಿಸುತ್ತೇನೆ ಮತ್ತು ನಾನು ನಿಮ್ಮೊಂದಿಗೆ ಮತ್ತು ನಮ್ಮ ಕುಟುಂಬದೊಂದಿಗೆ ಇದ್ದೇನೆ. ಇಂಥ ಅಸಂಬದ್ಧ ಹೇಳಿಕೆ ಬಗ್ಗೆ ಜನರ ಮುಂದೆ ಮಾತನಾಡುವ ಸ್ಥಿತಿ ಬಂದಿರುವುದು ನನಗೆ ಬೇಸರ ತಂದಿದೆ. ಆದ್ರೆ ಕೆಲವೊಮ್ಮೆ ಅಂತಹ ಸಮಾಜಘಾತುಕರನ್ನು ಎದುರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಅಖಿಲ್ ಅಕ್ಕಿನೇನಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಮಂತಾ – ನಾಗ ಚೈತನ್ಯ ವಿಚ್ಛೇದನ ವಿವಾದ, ಕ್ಷಮೆ ಕೇಳಿದ ಕೊಂಡ ಸುರೇಖಾ
ನಾಗಾರ್ಜುನ ಅಕ್ಕಿನೇನಿ ಅವರ ಎರಡನೇ ಪತ್ನಿ, ನಟಿ ಅಮಲಾ ಅಕ್ಕಿನೇನಿ ಕೂಡ ತಮ್ಮ ಮಲ ಮಗ ನಾಗ ಚೈತನ್ಯ ಮತ್ತು ಅವರ ಮಾಜಿ ಪತ್ನಿ ಸಮಂತಾ ಬೆಂಬಲಕ್ಕೆ ನಿಂತಿದ್ದಾರೆ. ಮಹಿಳಾ ಸಚಿವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಟ್ಯಾಗ್ ಮಾಡಿ, ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಲಾ, ಮಹಿಳಾ ಮಂತ್ರಿಯೊಬ್ಬರು ರಾಕ್ಷಸರಾಗಿದ್ದಾರೆ. ಕೆಟ್ಟ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಮಾನ್ಯ ಜನರನ್ನು ರಾಜಕೀಯಕ್ಕೆ ಇಂಧನವಾಗಿ ಬಳಸಿಕೊಳ್ತಿದ್ದಾರೆ ಎಂಬುದನ್ನು ನೋಡಿ ಅಚ್ಚರಿಯಾಗುತ್ತದೆ. ಮೇಡಂ ಮಂತ್ರಿ, ಮರ್ಯಾದೆ ಇಲ್ಲದ ಮತ್ತು ನನ್ನ ಗಂಡನ ಬಗ್ಗೆ ಯಾವುದೇ ನಾಚಿಕೆ ಅಥವಾ ಸತ್ಯವಿಲ್ಲದೆ ಹೇಳುವ ಕಟ್ಟು ಕಥೆಗಳನ್ನು ನೀವು ನಂಬುತ್ತೀರಾ? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ನಾಯಕರು ಗಟಾರಕ್ಕೆ ಇಳಿದು ಅಪರಾಧಿಗಳಂತೆ ವರ್ತಿಸಿದರೆ ನಮ್ಮ ದೇಶಕ್ಕೆ ಏನಾಗುತ್ತದೆ? ರಾಹುಲ್ ಗಾಂಧಿ ಜೀ, ನಿಮಗೆ ಮಾನವ ಸಭ್ಯತೆಯ ಮೇಲೆ ನಂಬಿಕೆ ಇದ್ದರೆ ದಯವಿಟ್ಟು ನಿಮ್ಮ ರಾಜಕಾರಣಿಗಳಿಗೆ ಲಗಾಮು ಹಾಕಿ ಮತ್ತು ನಿಮ್ಮ ಸಚಿವರು ನನ್ನ ಕುಟುಂಬದವರ ಕ್ಷಮೆಯಾಚಿಸುವಂತೆ ಮತ್ತು ಅವರ ವಿಷಕಾರಿ ಹೇಳಿಕೆಗಳನ್ನು ಹಿಂಪಡೆಯುವಂತೆ ಹೇಳಿ. ಈ ದೇಶದ ನಾಗರಿಕರನ್ನು ರಕ್ಷಿಸಿ ಎಂದು ಅಮಲಾ ಬರೆದಿದ್ದಾರೆ.
ನಾಗಚೈತನ್ಯ, ನಟಿ ಸಮಂತಾ, ಅಕ್ಕಿನೇನಿ, ಜೂನಿಯರ್ ಎನ್ ಟಿಆರ್ ಕೂಡ ಸುರೇಖಾ ವಿರುದ್ಧ ಹರಿಹಾಯ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುರೇಖಾ ಆರೋಪವನ್ನು ಖಂಡಿಸಿದ್ದಾರೆ. ಅಕ್ಕಿನೇನಿ ಕುಟುಂಬ ಹಾಗೂ ಸಮಂತಾಗೆ ಬೆಂಬಲ ನೀಡಿರುವ ನಟ ನಾನಿ ಕೂಡ ಸಚಿವರ ಹೇಳಿಕೆಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಸಮಂತಾ ನಾಗಚೈತನ್ಯ ಡಿವೋರ್ಸ್‌ಗೆ ಕೆಟಿಆರ್ ಕಾರಣ : ತೆಲಂಗಾಣ ಸಚಿವೆಯ ಸ್ಫೋಟಕ ಹೇಳಿಕೆ
ತೆಲಂಗಾಣ ಸಂಪುಟ ಸಚಿವೆ ಕೊಂಡ ಸುರೇಖಾ ಬುಧವಾರ ತಮ್ಮ ರಾಜಕೀಯ ಪ್ರತಿಸ್ಪರ್ಧಿ, ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ.ಟಿ. ರಾಮರಾವ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೆಟಿಆರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ನಟಿ ಸಮಂತಾ ವಿಚ್ಛೇದನಕ್ಕೆ ಕೆ.ಟಿ.ರಾಮರಾವ್ ಅವರೇ ಕಾರಣ. ಆಗ ಸಚಿವರಾಗಿದ್ದ ಅವರು ನಟಿಯರ ಫೋನ್ ಟ್ಯಾಪ್ ಮಾಡಿ ನಂತರ ಅವರ ದೌರ್ಬಲ್ಯಗಳನ್ನು ಕಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದು ಎಲ್ಲರಿಗೂ ಗೊತ್ತು ಎಂದಿದ್ದರು. ಇದೇ ವಿವಾದ ಸೃಷ್ಟಿಸಿದೆ. ಅವರ ವಿರುದ್ಧ ಕೆ.ಟಿ. ರಾಮರಾವ್ ಲೀಗಲ್ ನೊಟೀಸ್ ಜಾರಿಮಾಡಿದ್ದು, ಸುರೇಖಾ, ನಟಿ ಸಮಂತಾ ಕ್ಷಮೆ ಕೇಳಿದ್ದಾರೆ.
