ಪ್ರಧಾನಿ ಸಾಕ್ಷ್ಯಚಿತ್ರಕ್ಕೆ ನಿಷೇಧ: ಈ ಹಿಂದೆಯೂ ಬ್ಯಾನ್ ಆಗಿದ್ದ ಏಳು ಚಿತ್ರಗಳಿವು
ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಬಿಬಿಸಿ ತಯಾರಿಸುವ ಸಾಕ್ಷ್ಯಚಿತ್ರವನ್ನು ಸರ್ಕಾರ ಬ್ಯಾನ್ ಮಾಡಿರುವ ಬೆನ್ನಲ್ಲೇ ಈ ಹಿಂದೆ ಬ್ಯಾನ್ ಆಗಿರುವ ಚಿತ್ರಗಳ ಚರ್ಚೆ ಶುರುವಾಗಿದೆ. ಅವು ಯಾವುವು?
ನವದೆಹಲಿ: 2002ರಲ್ಲಿ ಗುಜರಾತಿನಲ್ಲಿ ನಡೆದ ಗಲಭೆಗೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ಕಾರಣ ಎಂಬ ಕುರಿತಾದ ಸಾಕ್ಷ್ಯಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಂಗ್ಲೆಂಡ್ನ ರಾಷ್ಟ್ರೀಯ ಚಾನೆಲ್ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ -ಬಿಬಿಸಿ (British Broadcasting Corporation-BBC) ಇತ್ತೀಚೆಗೆ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಗುಜರಾತ್ ಗಲಭೆಗೆ ನರೇಂದ್ರ ಮೋದಿಯವರೇ ನೇರ ಕಾರಣ ಎಂದು ಬಿಂಬಿಸುವ ಎರಡು ಭಾಗಗಳ ಸರಣಿ ಸಾಕ್ಷ್ಯಚಿತ್ರ ಇದಾಗಿವೆ. ರಾಷ್ಟ್ರನಾಯಕನಾಗಿ ಪ್ರಧಾನಿ ಮೋದಿಯವರು (Narendra Modi) ಗುರುತಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಈ ಸಾಕ್ಷ್ಯಚಿತ್ರವು ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಆದರೆ ಈ ಸಾಕ್ಷ್ಯಚಿತ್ರದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಪಿತೂರಿಯಾಗಿದೆ ಎಂಬ ಬಗ್ಗೆ ಚರ್ಚೆಯೂ ಶುರುವಾಗಿದ್ದು, ಇದಾಗಲೇ ಈ ಸಾಕ್ಷ್ಯಚಿತ್ರ ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್‌ಗಳು ಮತ್ತು ಟ್ವಿಟರ್ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಈ ಸಾಕ್ಷ್ಯಚಿತ್ರದ ಹಿಂದಿರುವ ಕಾಣದ ಕೈಗಳು ಹಾಗೂ ಕಾಲ್ಪನಿಕ ಕಥೆ ಕಟ್ಟಲು ಸೇರಿಕೊಂಡಿರುವ ಮನಸ್ಸುಗಳನ್ನು ಪತ್ತೆ ಹಚ್ಚಿ, ಅವರ ಮೇಲೆ ದೂರು ದಾಖಲಿಸಬೇಕು ಎಂದು ಹಲವರು ಇದಾಗಲೇ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ. ಈ ಗಲಭೆಯಲ್ಲಿ ಮೋದಿ ಸರ್ಕಾರದ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ (Supreme court) ಕೂಡ ಹೇಳಿರುವಾಗ, ಅದರ ತೀರ್ಪನ್ನೂ ಧಿಕ್ಕರಿಸಿ ಮತ್ತೆ ಚುನಾವಣೆಯ ಹೊಸ್ತಿಲಿನಲ್ಲಿ ಗಲಭೆಯನ್ನು ಬಿಬಿಸಿ ಮತ್ತೆ ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅದೇ ಇನ್ನೊಂದೆಡೆ, ಕೇಂದ್ರ ಸರ್ಕಾರ ಈ ನಿಷೇಧ ಮಾಡಿದ್ದರೂ ಹಲವು ಕಡೆಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲಾಗುತ್ತಿದ್ದು, ಇದು ಕೂಡ ಪ್ರತಿಭಟನೆಗೆ ಕಾರಣವಾಗಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ನಿಷೇಧಿಸಿರುವ ಚಿತ್ರ, ಸಾಕ್ಷ್ಯಚಿತ್ರ ಇದೊಂದೆನಾ ಎಂಬ ಪ್ರಶ್ನೆಗೆ ಉತ್ತರ 'ಅಲ್ಲ'. ಅಸ್ಪಷ್ಟವಾದ ವಿಷಯ, ಲೈಂಗಿಕ ದೃಶ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಷಯಗಳು ಮತ್ತು ಘಟನೆಯನ್ನು ನಾಟಕೀಯವಾಗಿ ತೋರಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ, ಸಮುದಾಯದ ಜನರ ಭಾವನೆಗೆ ಧಕ್ಕೆ ತರುವ ವಿಷಯಗಳಿರುವ ಕಾರಣದಿಂದ ಅನೇಕ ಚಲನಚಿತ್ರಗಳನ್ನು ಈ ಹಿಂದಿನ ಸರ್ಕಾರಗಳು, ಸೆನ್ಸಾರ್ ಮಂಡಳಿ ಹಾಗೂ ಕೋರ್ಟ್ಗಳು ನಿಷೇಧಿಸಿವೆ. ಅವುಗಳ ಪೈಕಿ ಏಳು ಮುಖ್ಯವಾಗಿ ನಿಷೇಧಿತ ಚಿತ್ರಗಳು ಯಾವುವು? ಅವುಗಳನ್ನು ನಿಷೇಧಿಸಿದ್ದು ಏಕೆ ಎಂಬುದನ್ನು ಇಲ್ಲಿ ನೋಡೋಣ:
ಆಲಿಯಾ ಭಟ್ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್ ಮಾಡಿ ತಬ್ಬಿಬ್ಬುಗೊಳಿಸಿದ ನಟಿ
1. ಬ್ಯಾಂಡಿಟ್ ಕ್ವೀನ್ (Bandit Queen)
1996ರಲ್ಲಿ ತೆರೆ ಕಾಣಬೇಕಿದ್ದ ಶೇಖರ್ ಕಪೂರ್ ಅವರ ಬ್ಯಾಂಡಿಟ್ ಕ್ವೀನ್ ಚಲನಚಿತ್ರವನ್ನು ಬಿಡುಗಡೆಗೂ ಮೊದಲೇ ಬ್ಯಾನ್ ಮಾಡಲಾಗಿತ್ತು. ಚಿತ್ರವು ಆಕ್ರಮಣಕಾರಿಯಾಗಿದ್ದು, 'ಅಶ್ಲೀಲ' ಮತ್ತು 'ಅಸಭ್ಯ'ವಾಗಿದೆ ಎನ್ನುವ ಕಾರಣಕ್ಕೆ ಇದನ್ನು ಬ್ಯಾನ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಅತಿಯಾದ ರೀತಿಯಲ್ಲಿ ಲೈಂಗಿಕ ವಿಷಯ, ನಗ್ನತೆ ಮತ್ತು ಕಠೋರ ಭಾಷೆ ಬಳಕೆಯಾಗಿದೆ ಎನ್ನುವ ಕಾರಣಕ್ಕೆ ಚಲನಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡದೇ ಇರುವಂತೆ ಭಾರತೀಯ ಸೆನ್ಸಾರ್ ಮಂಡಳಿಯೂ ನಿಷೇಧ ಹೇರಿತ್ತು.
2. ಬ್ಲ್ಯಾಕ್ ಫ್ರೈಡೇ (Black Friday)
1993 ರಲ್ಲಿ ಮುಂಬೈನಲ್ಲಿ ನಡೆದಿದ್ದ ಗಲಭೆ ಮತ್ತು ನಂತರದ ತನಿಖೆಯನ್ನು ಆಧರಿಸಿದ ಚಿತ್ರ ಬ್ಲ್ಯಾಕ್ ಫ್ರೈಡೇ. ಅನುರಾಗ್ ಕಶ್ಯಪ್ ಅವರ ಈ ಚಿತ್ರವು ಹುಸೇನ್ ಜೈದಿ ಅವರ ಪುಸ್ತಕವನ್ನು ಆಧರಿಸಿದ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೇ ಕೇ ಮೆನನ್, ಪವನ್ ಮಲ್ಹೋತ್ರಾ, ಗಜರಾಜ್ ರಾವ್, ಆದಿತ್ಯ ಶ್ರೀವಾಸ್ತವ್ ಮತ್ತು ಇತರರು ನಟಿಸಿದ್ದಾರೆ. ಇದಕ್ಕೆ ಕಾರಣ, ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಸ್ಫೋಟದ ಪಿತೂರಿಯನ್ನು ಇದರಲ್ಲಿ ಉಲ್ಲೇಖಿಸಿದ್ದು, ಅದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲಾಗಿತ್ತು. ಆದ್ದರಿಂದ ಚಿತ್ರದ ಬಿಡುಗಡೆಗೆ ತಡೆ ಕೋರಿ ಭಾರತೀಯ ಸೆನ್ಸಾರ್ ಮಂಡಳಿಯು 2004ರಲ್ಲಿ ಬಾಂಬೆ ಹೈಕೋರ್ಟ್ಗೆ ಹೋಗಿದ್ದರಿಂದ ಅಲ್ಲಿ ಮನವಿ ಪುರಸ್ಕರಿಸಿ ತಡೆ ನೀಡಲಾಗಿತ್ತು.
3. ಫೈರ್ (Fire)
ಹಿಂದೂ ಕುಟುಂಬದಲ್ಲಿ ಇಬ್ಬರು ಅತ್ತಿಗೆಯರ ನಡುವಿನ ಸಲಿಂಗಕಾಮಿ ಸಂಬಂಧದ ಕಥಾವಸ್ತು ಇರುವ ಚಿತ್ರ ಫೈರ್. ದೀಪಾ ಮೆಹ್ತಾ ಅವರ ಈ ಚಿತ್ರವು ಜಾಗತಿಕವಾಗಿ ಮೆಚ್ಚುಗೆಯನ್ನು ಗಳಿಸಿದ್ದರೂ ಭಾರತದ ಮಟ್ಟಿಗೆ ಇದನ್ನು ಅತ್ಯಂತ ಕೀಳು ಚಿತ್ರ ಎಂದು ಬಿಂಬಿಸಲಾಯಿತು. ಚಿತ್ರದ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆ, ಪ್ರತಿಭಟನೆ ಸುರುವಾಗುತ್ತಲೇ ಚಿತ್ರ ಬ್ಯಾನ್ ಆಯಿತು. ಚಿತ್ರಮಂದಿರದಲ್ಲಿ ತೆರೆ ಕಾಣಿಸಲಿಲ್ಲ. ಅದೇ ಇನ್ನೊಂದೆಡೆ, ಈ ಚಿತ್ರದಲ್ಲಿ ನಟಿಸಿದ್ದ ಶಬಾನಾ ಅಜ್ಮಿ, ನಂದಿತಾ ದಾಸ್ ಮತ್ತು ಚಿತ್ರದ ನಿರ್ದೇಶಕಿ ದೀಪಾ ಮೆಹ್ತಾ ಅವರಿಗೆ ಕೊಲೆ ಬೆದರಿಕೆಗಳು ಬರತೊಡಗಿದ್ದರಿಂದ ಇದನ್ನು ಬ್ಯಾನ್ ಮಾಡಲಾಯಿತು.
4. ಕಾಮಸೂತ್ರ - ಎ ಟೇಲ್ ಆಫ್ ಲವ್ (Kama Sutra – A Tale Of Love)
ಮೀರಾ ನಾಯರ್ ಅವರ ಈಚಲನಚಿತ್ರವು 16ನೇ ಶತಮಾನದಲ್ಲಿ ನಾಲ್ಕು ಪ್ರೇಮಿಗಳ ಜೀವನದ ಸುತ್ತ ನಡೆಯುವ ಕಥಾ ಹಂದರವನ್ನು ಹೊಂದಿದೆ. ಇದು ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಲೈಂಗಿಕತೆಯನ್ನು ಬಿಂಬಿಸುವ ಹಿನ್ನೆಲೆಯಲ್ಲಿ ಭಾರತದಲ್ಲಿ ಇದನ್ನು ನಿಷೇಧಿಸಲಾಯಿತು. ಕಾಮಸೂತ್ರದ ಪರಿಕಲ್ಪನೆ ಹುಟ್ಟಿದ್ದೇ ಭಾರತ, ಇದರ ಹೊರತಾಗಿಯೂ ಭಾರತದಲ್ಲಿ ನಿಷೇಧ ಮಾಡಿದ್ದು ಸರಿಯಲ್ಲ ಎನ್ನುವ ವಾದವೂ ಇದೆ.
Attaullah Khan: ಗೆಳತಿ ಕೊಂದು ಜೈಲಲ್ಲಿ ಬರೆದ ಹಾಡುಗಳು ಸೂಪರ್ ಡೂಪರ್: ಬಾಲಿವುಡ್ ಗಾಯಕನ ರೋಚಕ ಕಥೆ!
5. ಪಾಂಚ್ (Paanch)
ಅನುರಾಗ್ ಕಶ್ಯಪ್ ಅವರ ನಿರ್ದೇಶನದ ಇನ್ನೊಂದು ಚಿತ್ರವೂ ಬ್ಯಾನ್ ಆಗಿದೆ. 1976-77ರಲ್ಲಿ ಪುಣೆಯಲ್ಲಿ ನಡೆದ ಜೋಶಿ-ಅಭಯಂಕರ್ ಸರಣಿ ಕೊಲೆಗಳ ಘಟನೆಗಳನ್ನು ಆಧರಿಸಿರುವ 'ಪಾಂಚ್' ಚಿತ್ರ 2006ರಲ್ಲಿ ತೆರೆ ಕಾಣಬೇಕಿತ್ತು. ಇದು ಅನುರಾಗ್ ಅವರ ಮೊದಲ ಚಿತ್ರವಾಗಿದ್ದು, ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಕೆ.ಕೆ. ಮೆನನ್, ಆದಿತ್ಯ ಶ್ರೀವಾಸ್ತವ್, ವಿಜಯ್ ಮೌರ್ಯ, ಶರತ್ ಸಕ್ಸೇನಾ ಮತ್ತು ಜಾಯ್ ಫರ್ನಾಂಡಿಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಬ್ಯಾನ್ ಆಗಲು ಕಾರಣ ಇದರಲ್ಲಿ ಬಳಸಿರುವ ಅಸಭ್ಯ ಭಾಷೆ ಮಾತ್ರವಲ್ಲದೇ ಮಾದಕ ದ್ರವ್ಯಗಳ ಸೇವನೆ ಕುರಿತು ಅತಿ ರಂಜಕವಾಗಿ ಈ ಚಿತ್ರದಲ್ಲಿ ತೋರಿಸಿರುವುದು. ಆದ್ದರಿಂದ ಭಾರತದಲ್ಲಿ ಇದಕ್ಕೆ ಎಂಟ್ರಿ ಸಿಗಲಿಲ್ಲ.
6. ಅನ್ಫ್ರೀಡಂ (Unfreedom)
ಸಲಿಂಗಕಾಮಿ ದಂಪತಿಯ ಕಥೆಯನ್ನು ಹೇಳುವ, ರಾಜ್ ಅಮಿತ್ ಕುಮಾರ್ ನಿರ್ದೇಶನದ ಅನ್ಫ್ರೀಡಂ ಚಿತ್ರವನ್ನೂ ಬ್ಯಾನ್ ಮಾಡಲಾಗಿತ್ತು. ಇದು 2014ರಲ್ಲಿ ಬಿಡುಗಡೆಯಾಗಬೇಕಿತ್ತು. ಆದಿಲ್ ಹುಸೇನ್, ಪ್ರೀತಿ ಗುಪ್ತಾ, ಭವಾನಿ ಲೀ ಮತ್ತು ವಿಕ್ಟರ್ ಬ್ಯಾನರ್ಜಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಲಭ್ಯವಿದೆ.
7. ಪರ್ಝಾನಿಯಾ (Parzania)
ಗುಜರಾತ್ ಗಲಭೆಯ ಸಮಯದಲ್ಲಿ ಕಾಣೆಯಾದ ಅಜರ್ ಎಂಬ ಹುಡುಗನ ಕಥಾ ಹಂದರವನ್ನು ಹೊಂದಿರುವ ರಾಹುಲ್ ಡೋಲಕಿಯಾ ನಿರ್ದೇಶನದ ಪರ್ಝಾನಿಯಾ ಚಿತ್ರವನ್ನು 2002ರಲ್ಲಿ ಬ್ಯಾನ್ ಮಾಡಲಾಗಿತ್ತು. ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಕೋರಿನ್ ನೆಮೆಕ್, ಶೀಬಾ ಚಡ್ಡಾ, ಆಸಿಫ್ ಬಸ್ರಾ, ಸಾರಿಕಾ ಠಾಕುರಾ ಮತ್ತು ರಾಜ್ ಜುಟ್ಶಿ ನಟಿಸಿದ್ದಾರೆ. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಭಜರಂಗದಳವು ಈ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಚಿತ್ರಮಂದಿರ ಮಾಲೀಕರನ್ನು ಒತ್ತಾಯಿಸಿದ್ದರಿಂದ ಅನಧಿಕೃತವಾಗಿ ಇದನ್ನು ನಿಷೇಧಿಸಲಾಯಿತು.