ಇನ್ನು ಕನ್ನಡದಲ್ಲಿ ಸಶಸ್ತ್ರಪಡೆ ಪರೀಕ್ಷೆ: ಇದೊಂದು ಐತಿಹಾಸಿಕ ನಿರ್ಧಾರ ಎಂದ ಮೋದಿ
ದಕ್ಷಿಣದ ರಾಜ್ಯಗಳ ಹಕ್ಕೊತ್ತಾಯಕ್ಕೆ ಮಣಿದ ಕೇಂದ್ರ ಗೃಹ ಸಚಿವಾಲಯ, ಹಿಂದಿ, ಇಂಗ್ಲಿಷ್ ಜತೆಗೆ 13 ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗೆ ಸಮ್ಮತಿ, 2024 ಜ.1ರಿಂದ ನಡೆಸುವ ಪರೀಕ್ಷೆಗಳಿಗೆ ಹೊಸ ಭಾಷಾ ನೀತಿ ಅನ್ವಯ.
ನವದೆಹಲಿ(ಏ.16): ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಕೇಂದ್ರೀಯ ಸಶಸ್ತ್ರ ಪಡೆಗಳ (ಸಿಎಪಿಎಫ್) ನೇಮಕಾತಿ ಪರೀಕ್ಷೆ ನಡೆಸಬೇಕೆಂಬ ದಕ್ಷಿಣ ರಾಜ್ಯಗಳ ಹಕ್ಕೊತ್ತಾಯವನ್ನು ಕೊನೆಗೂ ಕೇಂದ್ರ ಸರ್ಕಾರ ಮನ್ನಿಸಿದೆ. 2024 ಜ.1ರಿಂದ ಕೇಂದ್ರೀಯ ಸಶಸ್ತ್ರ ಪಡೆಗಳ ಕಾನ್ಸ್‌ಟೇಬಲ್ (ಸಾಮಾನ್ಯ ಸೇವೆ) ಹುದ್ದೆಗೆ ನಡೆಸುವ ನೇಮಕಾತಿಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಹಾಲಿ ಇರುವ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಹೊಸದಾಗಿ 13 ಭಾಷೆಗಳಲ್ಲಿ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ಬಣ್ಣಿಸಿದ್ದಾರೆ.
ಸಿಆರ್‌ಪಿಎಫ್ ಇತ್ತೀಚೆಗೆ 9212 ಹುದ್ದೆಗಳ ಭರ್ತಿ ಸಂಬಂಧ ದೇಶವ್ಯಾಪಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಕರ್ನಾಟಕದ 466 ಹುದ್ದೆಗಳು ಕೂಡಾ ಸೇರಿದ್ದವು. ಆದರೆ ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದರ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಾದೇಶಿಕ ಭಾಷೆಯಲ್ಲಿ ಅವಕಾಶ ನೀಡದ ಕಾರಣ ಸ್ಥಳೀಯ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ದೂರಿದ್ದರು. ಇದಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ತಮಿಳುನಾಡು ಸಿಎಂ ಸ್ಟಾಲಿನ್ ಮೊದಲಾದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಈ ಬಗ್ಗೆ ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ದೂರನ್ನೂ ಸಲ್ಲಿಸಿದ್ದರು.
ಅತಿ ಗಣ್ಯರ ಭದ್ರತಾ ಪಡೆಗೆ ಮಾನಸಿಕ ತಜ್ಞರ ನೇಮಕ!
ಇದರ ಹೊರತಾಗಿಯೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೇ ಪರೀಕ್ಷೆ ನಡೆಸುವ ತನ್ನ ನಿಲುವಿಗೆ ಅಂಟಿಕೊಂಡಿದ್ದ ಸಿಆರ್‌ಪಿಎಫ್ ‘ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ನಾವು ನಡೆಸುವ ಪರೀಕ್ಷೆಗಳನ್ನು ಎಂದೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಿಲ್ಲ. ಅದನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೇ ನಡೆಸಿಕೊಂಡು ಬರಲಾಗಿದೆ. ಈ ಹಿಂದೆ ಪರೀಕ್ಷೆ ನಡೆಸಿದ ವೇಳೆ ದಕ್ಷಿಣದ ಭಾರತದ ಅಭ್ಯರ್ಥಿಗಳು ಭಾಷೆಯ ಕಾರಣಕ್ಕೆ ಯಾವುದೇ ತೊಂದರೆ ಎದುರಿಸಿಲ್ಲ. ಅಭ್ಯರ್ಥಿಗಳ ಭಾಗವಹಿಸುವಿಕೆ ಸಾಮಾನ್ಯವಾಗಿತ್ತು’ ಎಂದು ಪಟ್ಟು ಹಿಡಿದಿತ್ತು.
ಮಣಿದ ಕೇಂದ್ರ:
ಸಿಆರ್‌ಪಿಎಫ್‌ನ ಈ ಹೇಳಿಕೆಗೆ ಮತ್ತೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ತನ್ನ ನಿಲುವನ್ನು ಬದಲಿಸಿರುವ ಕೇಂದ್ರ ಗೃಹ ಸಚಿವಾಲಯ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡ, ತಮಿಳು, ಅಸ್ಸಾಮಿ, ಬಂಗಾಳ, ಗುಜರಾತಿ, ಮರಾಠಿ, ಮಲಯಾಳಂ, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ನಿರ್ಧರಿಸಿದೆ.
‘ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಕೇಂದ್ರ ಗೃಹ ಸಚಿವಾಲಯವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ಅದರನ್ವಯ ಸಿಎಪಿಎಫ್ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಇತರೆ 13 ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಯುವಕರ ಸೇರ್ಪಡೆಯನ್ನು ಇನ್ನಷ್ಟುಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಸ್ಟಾಫ್ ಸೆಲೆಕ್ಷನ್ ಕಮಿಟಿ ಶೀಘ್ರವೇ ಅಗತ್ಯ ಬದಲಾವಣೆಗಳನ್ನು ಮಾಡಲಿದೆ’ ಎಂದು ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಸಿದ್ದಪಡಿಸಿದ ಹುಬ್ಬಳ್ಳಿ ಯುವಕ, ಶೀಘ್ರದಲ್ಲೇ ಸೇನೆಗೆ ಸೇರ್ಪಡೆ!
ಸಿಎಪಿಎಫ್ ಎಂದರೆ ಯಾವ ಪಡೆಗಳು?
ಕೇಂದ್ರೀಯ ಸಶಸ್ತ್ರ ಪಡೆಗಳ ವ್ಯಾಪ್ತಿಗೆ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಮತ್ತು ಎನ್‌ಎಸ್‌ಜಿ ಪಡೆಗಳು ಬರುತ್ತವೆ.
ಲಾಭ ಏನು?
- ಪ್ರಾದೇಶಿಕ ಭಾಷಾವಾರು ರಾಜ್ಯಗಳ ಅಭ್ಯರ್ಥಿಗಳಿಗೆ ಹಿಂದಿ, ಇಂಗ್ಲಿಷ್ ಕಲಿಕೆ ಕಡ್ಡಾಯವಾಗಿತ್ತು
- ಇನ್ನು ಕೇವಲ ಪ್ರಾದೇಶಿಕ ತಿಳಿದಿರುವವರು ಕೂಡಾ ಸುಲಭವಾಗಿ ಪರೀಕ್ಷೆಗೆ ಹಾಜರಾಗಬಹುದು
- ಪ್ರಾದೇಶಿಕ ರಾಜ್ಯಗಳ ಹುದ್ದೆಗಳು ಹಿಂದಿ ಭಾಷಿಕರ ರಾಜ್ಯಗಳ ಅಭ್ಯರ್ಥಿಗಳ ಪಾಲಾಗುವುದು ತಪ್ಪಲಿದೆ
- ಭಾಷೆ ಕಾರಣಕ್ಕೆ ಸಿಎಪಿಎಫ್ ಪರೀಕ್ಷೆಗಳಿಂದ ಹಿಂದೆ ಸರಿಯುತ್ತಿದ್ದ ದಕ್ಷಿಣದ ಅಭ್ಯರ್ಥಿಗಳ ಭಾಗವಹಿಸುವಿಕೆ ಹೆಚ್ಚಳ