ಕಿರೀಟಕ್ಕೆ ಹೇಗೆ ರತ್ನಮಣಿಗಳೇ ಆಕರ್ಷಣೆಯೋ ಹಾಗೆಯೇ ಕನ್ನಡ ಚಿತ್ರರಂಗವೆಂಬ ಕಿರೀಟದಲ್ಲಿ ಶಿವಮಣಿಯವರು ಕೂಡ ಒಂದು ಪ್ರಮುಖ ಆಕರ್ಷಣೆ. ನಿರ್ದೇಶಕರಾಗಿ  ಜಾಣ, ಜೋಶ್,ದೊರೆಯಂಥ ಚಿತ್ರಗಳ ಮೂಲಕ ನಿರ್ದೇಶಕ ಕ್ಷೇತ್ರದಲ್ಲಿ ದೊರೆಯಂತೆ ಕಂಗೊಳಿಸಿದ ಶಿವಮಣಿಯವರು ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಗಿ ನಟನೆ ಶುರು ಮಾಡಿ ಬಳಿಕ ಇದೀಗ ಪೋಷಕನಾಗಿ ಕೂಡ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ `ಬೆಲ್‌ಬಾಟಂ' ಸಿನಿಮಾದಲ್ಲಿನ ಒಂದು ಪಾತ್ರ ಅವರಿಗೆ ಸಾಲು ಸಾಲು ಅವಕಾಶಗಳನ್ನು ತಂದುಕೊಟ್ಟಿದೆ. `ಬೆಲ್ ಬಾಟಂ' ಸಿನಿಮಾದ ತಮಿಳು ರಿಮೇಕ್ ಮಾತ್ರವಲ್ಲ, ವಿಜಯ್ ಸೇತುಪತಿಯ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಆದರೆ ಪ್ರಸ್ತುತ ಸಿನಿಮಾರಂಗದ ಚಟುವಟಿಕೆ ಸಂಪೂರ್ಣವಾಗಿ ನಿಂತಿದೆ. ಕಾರಣ ಕೊರೊನ ವೈರಸ್ ಹರಡದಂತೆ ಮಾಡಲೇಬೇಕಾದಂಥ ಎಚ್ಚರಿಕೆ. ಒಂದಷ್ಟು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೊದಲ ಬಾರಿಗೆ ಸ್ಟಾರ್ ನಟರು ಬಿಡುವಲ್ಲಿರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂಥ ಸಂದರ್ಭದಲ್ಲಿ ಶಿವಮಣಿ ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದಾಗ ಅರಿವಾಗಿದ್ದು ಅವರು ಪುಸ್ತಕಗಳ ಲೋಕದಲ್ಲಿ ಮುಳುಗಿದ್ದಾರೆ ಎಂದು! ಪುಸ್ತಕಗಳು ಯಾವುವು? ಬೇರೇನು ವಿಶೇಷಗಳಿವೆ ಮೊದಲಾದ ಸಂಪೂರ್ಣ ಮಾಹಿತಿಗಾಗಿ ಸುವರ್ಣ ನ್ಯೂಸ್ ಡಾಟ್‌.ಕಾಮ್‌ನ ಈ ವಿಶೇಷ ಸಂದರ್ಶನ ಓದಿ. 

ಶಶಿಕರ ಪಾತೂರು


ಅನಿರೀಕ್ಷಿತವಾಗಿ ಎದುರಾಗಿರುವ ಈ ಬಿಡುವನ್ನು ಹೇಗೆ ನಿಭಾಯಿಸುತ್ತಿದ್ದೀರಿ? 
ಒಂದಷ್ಟು ಇತ್ರಗಳು ಕೈಯ್ಯಲ್ಲಿದ್ದವು. ಆದರೆ ಎಲ್ಲವೂ ಕರೊನಾ ವೈರಸ್‌ನಿಂದಾಗಿ ಮುಂದೆ ಹಾಕಲ್ಪಟ್ಟಿವೆ. ನಾನಾದರೂ ಪರವಾಗಿಲ್ಲ. ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ. ಆದರೆ ದಿನಗೂಲಿಯವರ ಪರಿಸ್ಥಿತಿ ನೆನೆಸಿಕೊಂಡರೆ ಭಯವಾಗುತ್ತದೆ. ಅವರು ಹೇಗೆ ಜೀವನ ನಿಭಾಯಿಸುತ್ತಾರೆ ಎನ್ನುವ ಕುರಿತು ಆತಂಕಗೊಂಡಿದ್ದೇನೆ. ಈಗ ನಾನು ತುಂಬ ಓದುತ್ತಿದ್ದೇನೆ. ಪರಮಹಂಸ ಯೋಗಾನಂದರ `ಯೋಗಿಯ ಆತ್ಮಕಥೆ'ಯನ್ನು ಓದುತ್ತಿದ್ದೇನೆ. ಅವರು ಅದರಲ್ಲಿ ರಿಯಾಲಿಟಿ, ಸನ್ಯಾಸ ಮತ್ತು ಸ್ಪಿರಿಚುವಾಲಿಟಿಯನ್ನು ಬ್ಲೆಂಡ್ ಮಾಡುತ್ತಾ ಹೇಳಿದ್ದಾರೆ. ಅಮೆರಿಕದ ಖ್ಯಾತ ಉದ್ಯಮಿ ಸ್ಟೀವ್ ಜಾಬ್ಸ್ ಅವರ ಮೆಚ್ಚಿನ ಪುಸ್ತಕ ಅದು! ಅದೇ ರೀತಿ ನೆಪೊಲಿಯನ್ ಹಿಲ್ ಅವರದ್ದು `ಥಿಂಕ್ ಬಿಗ್' ಈ ಎರಡು ಪುಸ್ತಕಗಳನ್ನು ಓದುತ್ತಿದ್ದೇನೆ. ಸಿನಿಮಾಗಳು, ವೆಬ್ ಸೀರೀಸ್ ನೋಡುತ್ತಿರುತ್ತೇನೆ. ಇದರೊಂದಿಗೆ ಎಂದಿನಂತೆ ವ್ಯಾಯಾಮ, ಯೋಗ ಕೂಡ ಮಾಡುತ್ತೇನೆ. `ತ್ರಿವಿಕ್ರಮ' ಚಿತ್ರದ ಡಬ್ಬಿಂಗ್ ನಡೀತಿದೆ.

ಮೊದಲು ಮಾನವನಾಗು: ಶಿವಣ್ಣ

`ತ್ರಿವಿಕ್ರಮ' ದಲ್ಲಿ ನಿಮ್ಮ ನಟನೆಯ ಅನುಭವ ಹೇಗಿತ್ತು ?
ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನನ್ನದು ಅದರಲ್ಲಿ ಮೇಜರ್ ನೆಗೆಟಿವ್ ಶೇಡ್ ಪಾತ್ರ.  ತುಂಬ ಪ್ಯಾಷನೇಟ್ ನಿರ್ಮಾಪಕರು. ಚೆನ್ನಾಗಿ ಖರ್ಚು ಮಾಡಿದ್ದಾರೆ. `ಕೆಜಿಎಫ್' ಸೇರಿದಂತೆ ಬಾಲಿವುಡ್ ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿದ ಅನ್ಬು-ಅರಿವು ಎನ್ನುವ ಫೈಟ್ ಮಾಸ್ಟರ್ಸ್ ಅವರ ಸಂಯೋಜನೆ ಅದ್ಭುತವಾಗಿತ್ತು. ನಿರ್ದೇಶಕರು ಕೂಡ ಸಿಕ್ಕಾಪಟ್ಟೆ ಡೆಡಿಕೇಟೆಡ್ ಆಗಿ ಕೆಲಸ ಮಾಡಿದ್ದಾರೆ. ದೊಡ್ಡ ಬಜೆಟ್ ಚಿತ್ರ. `ರೋಜ್', `ಲೀಡರ್‌'ನಂಥ ಚಿತ್ರ ಮಾಡಿದ್ದ ನಿರ್ದೇಶಕರು ಈ ಚಿತ್ರಕ್ಕಾಗಿ ಬೇರೇನೇ ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಡೆಡಿಕೇಶನ್ ಇದೆ.  ಸಿಂಗಾಪುರ, ಕಾಶ್ಮೀರ, ರಾಜಸ್ಥಾನ ಹೀಗೆ ತುಂಬ ಕಡೆ ಪ್ರಯಾಣಿಸಿ  ಮಾಡಲಾಗುತ್ತಿರುವಂಥ ಚಿತ್ರ. ನಾಯಕ ವಿಕ್ರಮ್‌ನನ್ನು ನೋಡುವಾಗ ನನಗೆ ಆರಂಭ ಕಾಲದ ರವಿಚಂದ್ರನ್ ಅವರನ್ನು ನೋಡಿದ ನೆನಪಾಗುತ್ತದೆ. ಆಗ ನಾನು ರವಿಚಂದ್ರನ್ ಅವರ ಎಲ್ಲ ಸಿನಿಮಾಗಳನ್ನು ನೋಡುತ್ತಿದ್ದೆ. ಪ್ರಳಯಾಂತಕ, ನಾನೇ ರಾಜ, ನಾನು ನನ್ನ ಹೆಂಡ್ತಿ, ಮೊದಲಾದ ಚಿತ್ರಗಳಲ್ಲಿ ನಟಿಸುವಾಗ ರವಿ ಸರ್ ಗೆ ಒಂದು ಬೇರೆಯದೇ ಆದ ಬಾಡಿ ಲ್ಯಾಂಗ್ವೇಜ್ ಇತ್ತು.   ನನಗೆ ವಿಕ್ಕಿಯನ್ನು ನೋಡುವಾಗ ಅದೇ ನೆನಪಾಗುತ್ತದೆ. ತುಂಬ ಡೆಡಿಕೇಟೆಡ್ ಹುಡುಗ. 

ಕನ್ನಡಿಗರು ವಿಕ್ರಮ್ ಬಗ್ಗೆ ಇರಿಸಿರುವ ನಿರೀಕ್ಷೆಗೆ ತಕ್ಕಂತೆ ಚಿತ್ರ ಬರುತ್ತಿದೆಯೇ?
ಖಂಡಿತವಾಗಿ. ನೈಸ್ ರೋಡಲ್ಲಿ ಒಂದು ಆಕ್ಷನ್ ಸೀನ್ ಮಾಡಿದ್ದೇವೆ. ನವೆಂಬರ್‌ನಲ್ಲಿ ಆರು ದಿನಗಳ ಕಾಲ ನಡೆದ ಆ ಆಕ್ಷನ್ ಸನ್ನಿವೇಶ ನಡೆಯುವಾಗ ವಿಪರೀತ ಚಳಿ ಮತ್ತು ಮಳೆಯೂ ಇತ್ತು. ಆದರೆ ಅಷ್ಟು ದಿನಗಳು ಕೂಡ ಕ್ಯಾರವಾನ್‌ಗೆ ಹೋಗದೆ ಸ್ಥಳದಲ್ಲೇ ಇದ್ದು ಭಾಗಿಯಾಗಿರುವುದಕ್ಕೆ ಆತನನ್ನು ಮೆಚ್ಚಲೇಬೇಕು. ಆತ್ಮ ವಿಶ್ವಾಸ ಮತ್ತು ಸ್ಪಷ್ಟತೆಯೊಂದಿಗೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಹುಡುಗ. ಜತೆಗೆ ಬೇರೆ ಯಾವುದೇ ಆಕರ್ಷಣೆಗಳತ್ತ ಮುಖ ಮಾಡುವುದಿಲ್ಲ. ಮೊದಲ ಚಿತ್ರದಲ್ಲೇ ತುಂಬ ಮೆಚ್ಯೂರ್ಡ್ ಆದ ವರ್ತನೆ ಕಾಣಬಹುದು. ತಾನೋರ್ವ ಸ್ಟಾರ್ ಪುತ್ರನೆಂಬ ಲಿಬರ್ಟಿ ಪಡೆದುಕೊಂಡು ಸ್ವೇಚ್ಛವಾಗಿದ್ದರೂ ಆತನನ್ನು ಅಲ್ಲಿ ಪ್ರಶ್ನಿಸುವವರು ಇರಲಿಲ್ಲ. ಆದರೆ ಆತ ಹಾಗೆಲ್ಲ ಇಲ್ಲ.  ಏನೇನೂ ಇಲ್ಲದೆ ಹಸಿವಿನಿಂದ ಇಂಡಸ್ಟ್ರಿಗೆ ಬಂದವನಲ್ಲಿ ಕಾಣುವಂಥ ಎನರ್ಜಿ ಇರುವಂಥ ಹುಡುಗ. ಸಂಪೂರ್ಣವಾಗಿ ನಿರ್ದೇಶಕರ ನಟ. ತುಂಬ ಭರವಸೆ ಮೂಡಿಸುವಂಥ ನಟ. ಮಾತ್ರವಲ್ಲ, ವಿಕ್ಕಿ ವಯಸ್ಸಿನಲ್ಲಿರುವ ಒಬ್ಬ ಎಳೆ ಮುಖದ ನಾಯಕ ನಮ್ಮ ಇಂಡಸ್ಟ್ರಿಯಲ್ಲಿಲ್ಲ. ಎಲ್ಲ ಸ್ಟಾರ್‌ಗಳು ಆತನ ವಯೋಮಾನ ಮೀರಿದವರೇ. ಅದನ್ನು ಬಳಸಿಕೊಳ್ಳುವ ಅದ್ಭುತ ಅವಕಾಶ ಇದೆ. ಚೆನ್ನಾಗಿ ಡಾನ್ಸ್ ಮಾಡುವ, ಫೈಟ್ ಮಾಡುವ ಹುಡುಗ. ಇವೆಲ್ಲದರ ಜತೆಗೆ ಪಕ್ಕದ್ಮನೆ ಹುಡುಗನ ಫೀಲ್ ಕೂಡ ನೀಡಬಲ್ಲ.ಅಲ್ಲದೆ ಆತನಿಗೆ ಕೂಡ ಏನೋ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿ ಬಿಡಬೇಕು ಎನ್ನುವ ಆಕಾಂಕ್ಷೆ ಇಲ್ಲ. ನೀಟಾಗಿ ಕೆರಿಯರ್ ಬಿಲ್ಡ್ ಮಾಡ್ಕೊಂಡು ಹೋಗೋಣ ಎನ್ನುವಂಥ ಮನಸ್ಥಿತಿ ಕಂಡು ಖುಷಿಯಾಗಿದೆ. 

ಬೆಳ್ಳಿ ಪರದೆ ಮಹಾರಾಣಿ ಕನ್ನಡ ಚಿತ್ರರಂಗದ ಬಗ್ಗೆ ಏನು ಹೇಳ್ತಾರೆ?

ಕಲಾವಿದನಾಗಿ ಹೊಸ ಮಾದರಿಯ ಪಾತ್ರಗಳಲ್ಲಿ ನಟಿಸಬೇಕೆನ್ನುವ ಕನಸಿದೆಯೇ? 
ನಾನು ಮೂಲತಃ ಒಬ್ಬ ನಿರ್ದೇಶಕ ಆಗಿರುವ ಕಾರಣ ಪಾತ್ರಗಳ ಕುರಿತಾದ ಕನಸುಗಳಿಗೆ ಕೊರತೆ ಇಲ್ಲ. ಏನೇನೋ ಮಾಡಬೇಕು ಅಂತ ಇದೆ. ಪರದೆ ಮೇಲೆ ಇಂಥ ಪಾತ್ರಗಳು ವರ್ಕಾಗುತ್ತವೆ ಅಂತ ಲೆಕ್ಕಾಚಾರಗಳಿವೆ. ಆದರೆ ನಿರ್ದೇಶಕರಿಗೂ ಅದು ಅನಿಸಬೇಕು. ಬೆಲ್ ಬಾಟಂ ಚಿತ್ರದ ಬಳಿಕ ಒಂದಷ್ಟು ಪ್ರಯೋಗಗಳು ನಡೆಯುತ್ತಿವೆ. ಕಳೆದ ವರ್ಷ ಒಂಬತ್ತು ಸಿನಿಮಾಗಳು ಸಿಕ್ಕವು. ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ, ಚಿರಂಜೀವಿ ಸರ್ಜಾರ `ಖಾಕಿ', ದಯಾಳ್ ಪದ್ಮನಾಭನ್ ನಿರ್ದೇಶನದ `ತ್ರಯಂಬಕಮ್' ಮೊದಲಾದವು ಹಾಗೆ ಸಿಕ್ಕಂಥ ಸಿನಿಮಾಗಳು. ಹೊಸಬರ ತಂಡದ `ವಿಶ್ವಾಮಿತ್ರ'ದಲ್ಲಿಯೂ ನಟಿಸಿದ್ದೇನೆ. ಅದು ಬಿಡುಗಡೆಗೆ ಬಾಕಿ ಇದೆ. `ಭಜರಂಗಿ 2'ರಲ್ಲಂತೂ ಯಂಗ್ ಮತ್ತು ಓಲ್ಡ್ ಎರಡು ಶೇಡ್‌ಗಳಲ್ಲಿರುವ ಖಳನಟನ ಪಾತ್ರವಿದೆ.