ಮನಸಿಂದ ಮಾಡಿದ ಸಿನಿಮಾ ಟ್ರೆಂಡ್ ಸೃಷ್ಟಿಸುತ್ತದೆ: ರಕ್ಷಿತ್ ಶೆಟ್ಟಿ

ಹೇಮಂತ್‌ ಎಂ ರಾವ್‌ ನಿರ್ದೇಶನದ, ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಸೈಡ್‌ ಎ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕುರಿತಂತೆ ರಕ್ಷಿತ್ ಶೆಟ್ಟಿ ಸಂದರ್ಶನ.

Rakshit Shetty sapta sagaradaache ello exclusive interview vcs

ರಾಜೇಶ್ ಶೆಟ್ಟಿ

ಮನು ಪಾತ್ರದಿಂದ ನೀವು ಗಳಿಸಿದ್ದೇನು, ಕಳೆದುಕೊಂಡಿದ್ದೇನು?

ನನಗೆ ಪ್ರತಿಯೊಂದು ಸಿನಿಮಾ ಒಂದು ಕಲಿಕೆ. ಅವನೇ ಶ್ರೀಮನ್ನಾರಾಯಣ ಮಾಡಿದಾಗ ನಾನು ಲಾಜಿಕಲ್ ಆಗಿ ಯೋಚಿಸುತ್ತಿದ್ದೆ. 777 ಚಾರ್ಲಿ ಅನ್‌ಕಂಡಿಷನಲ್‌ ಲವ್‌ ಏನೆಂಬುದನ್ನು ಕಲಿಸಿತು. ಈ ಮೂರು ಸಿನಿಮಾಗಳ ಜರ್ನಿ ನನ್ನ ಬದುಕಿನಲ್ಲಿ ಮಹತ್ವದ್ದು. ಲಾಜಿಕ್‌ ಮತ್ತು ಇಮೋಷನ್ ಎರಡನ್ನೂ ಬ್ಯಾಲೆನ್ಸ್‌ ಮಾಡುವುದು ಹೇಗೆ ಎಂಬ ಹುಡುಕಾಟದಲ್ಲಿ ಇದ್ದೆ. ಸಿನಿಮಾ ಮಾಡುವವರಿಗೆ ಪರಂವಃ ಕಟ್ಟುವ ಜವಾಬ್ದಾರಿ ಇತ್ತು. ಅದು ಮುಗಿದಿದೆ. ಇನ್ನು ನಾನು ನನ್ನ ಕತೆ ಹೇಳಬೇಕಿದೆ. ಇಲ್ಲಿಗೆ ಒಂದು ಸರ್ಕಲ್ ಪೂರ್ತಿಯಾಗಿದೆ. ಅದು ಸಿನಿಮಾ ಮಾತ್ರ ಅಲ್ಲ, ನನ್ನ ಬದುಕಿನದ್ದು ಕೂಡ.

ಈ ಶೀರ್ಷಿಕೆ ಹೇಳುವುದೇನು?

ಹಳೆಯ ಕಾಲದಲ್ಲಿ ಇಂಥಾ ಶೀರ್ಷಿಕೆ ಇಡುತ್ತಿದ್ದರು. ಈಗ ಅಪರೂಪ ಆಗಿದೆ. ಅಂಥಾ ಹೆಸರು ಇಡಬೇಕು ಅನ್ನುವುದು ನಮ್ಮ ಆಸೆ. ಹೇಮಂತ್‌ ಮೊದಲು ಈ ಹೆಸರು ಹೇಳಿದಾಗ ಚೆನ್ನಾಗಿದೆ ಅನ್ನಿಸಿತ್ತು. ಆದರೆ ಇಡೀ ಸಿನಿಮಾ ಒಂದು ಕಾವ್ಯದಂತೆ ಇರುತ್ತದೆ ಎಂಬ ಐಡಿಯಾ ನನಗೆ ಇರಲಿಲ್ಲ. ಈಗ ನೋಡಿದಾಗ ಹೆಸರೇ ಎಲ್ಲವನ್ನೂ ಹೇಳುತ್ತದೆ.

ಟ್ರೆಂಡ್‌ಗೆ ತಕ್ಕಂಥಾ ಸಿನಿಮಾ ಮಾಡೋ ಜಾಯಮಾನ ನಂದಲ್ಲ : ಹೇಮಂತ್‌ ರಾವ್

ಈಗ ವೇಗ, ಸೌಂಡು ಜಾಸ್ತಿ. ಮೌನ, ಸಾವಧಾನ ಕಡಿಮೆ. ಇಂಥಾ ಹೊತ್ತಲ್ಲಿ ಪೊಯೆಟಿಕ್ ದಾರಿ ಹಿಡಿದ್ದೀರಿ..

ಮನಸಿನಿಂದ ಮಾಡಿದ ಸಿನಿಮಾ ಟ್ರೆಂಡ್‌ ಸೃಷ್ಟಿಸುತ್ತದೆ ಎಂದು ನಾನು ನಂಬಿದ್ದೇನೆ. ಆ ಎರಡು ಪಾತ್ರಗಳು ಮನಸ್ಸಲ್ಲಿ ಕುಳಿತರೆ ಸಿನಿಮಾ ಮನಸ್ಸಿಗೆ ಇಳಿಯುತ್ತದೆ. ಇಂಥಾ ಸಿನಿಮಾಗೆ ಎಷ್ಟು ಮಂದಿ ಸಿದ್ಧರಾಗಿದ್ದಾರೆ ಎಂಬ ಕುತೂಹಲ ನನಗಿದೆ. ನೋಡಿದವರು ಮನಸಾರೆ ಮೆಚ್ಚಿ ಇನ್ನೊಬ್ಬರಿಗೆ ಹೇಳಿದರೆ ಹೊಸತೊಂದು ದಾರಿ ಇಲ್ಲಿಂದ ಶುರುವಾಗುತ್ತದೆ.

ಪಾತ್ರಗಳನ್ನು ಎಷ್ಟು ನಿಮ್ಮದಾಗಿಸಿಕೊಳ್ಳುತ್ತೀರಿ?

ಪಾತ್ರವನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇವೆಯೋ ಅಷ್ಟು ಚೆನ್ನಾಗಿ ಅದನ್ನು ಬೆಳೆಸಬಹುದು. ಹಿಂದೆ ತಿರುಗಿ ನನ್ನ ಸಿನಿಮಾಗಳನ್ನು ನಾನು ನೋಡಿದಾಗ, ನಾನು ಆ ಪಾತ್ರಗಳನ್ನು ಸೆಟ್‌ನಿಂದ ಕೆಲವು ಪರ್ಸೆಂಟ್‌ಗಳಷ್ಟು ಅಂಶವನ್ನು ಮನೆಗೂ ತೆಗೆದುಕೊಂಡು ಹೋಗುತ್ತೇನೆ ಅನ್ನಿಸುತ್ತದೆ. ಶೇ.20ರಿಂದ 30 ಆ ಪಾತ್ರ ನನ್ನ ರಿಯಲ್‌ ಬದುಕಿನಲ್ಲೂ ಇರುತ್ತದೆ. ಆಗ ನಾನು ಸೆಟ್‌ಗೆ ಬಂದಾಗ ಮತ್ತೆ 100 ಪರ್ಸೆಂಟ್‌ ಆ ಪಾತ್ರವೇ ಆಗುವುದಕ್ಕೆ ಸುಲಭವಾಗುತ್ತದೆ.

ಸಿನಿಮಾದಲ್ಲಿ ನಿಮ್ಮನ್ನು ಹೆಚ್ಚು ತಾಕಿದ್ದು ಯಾವುದು?

ಇಂಥಾ ಇಂಟೆನ್ಸ್ ಪಾತ್ರವನ್ನು ನಾನು ಇದುವರೆಗೆ ಮಾಡಿರಲಿಲ್ಲ. ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಜೊತೆಗೆ ನಟಿಸಬೇಕಿತ್ತು. ಆ ಪಾತ್ರದ ಭಾವನೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ಇಲ್ಲಿ ರುಕ್ಮಿಣಿಯವರು ತುಂಬಾ ಚೆನ್ನಾಗಿ ಪ್ರಿಯಾ ಪಾತ್ರದಲ್ಲಿ ಆವರಿಸಿದ್ದರು. ಅವರೇ ಅಷ್ಟು ಲೀನವಾಗಿರಬೇಕಾದರೆ ನಾನು ಮನುವಾಗುವುದು ತುಂಬಾ ಮುಖ್ಯವಾಗಿತ್ತು.

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ

ಮನು ಪಾತ್ರದಿಂದ ನೀವು ಕಳಚಿಕೊಳ್ಳುವುದು ಯಾವಾಗ?

ನಾನು ನನ್ನನ್ನೇ, ನನ್ನ ಮಾತುಗಳನ್ನೇ ಗಮನಿಸುತ್ತಾ ಇರುತ್ತೇನೆ. ನಾನು ಯಾಕೆ ಹಾಗೆ ಮಾತನಾಡಿದೆ, ಅದರ ಹಿಂದೆ ಇರುವ ಕಾರಣ ಏನು ಎಂದು ಯೋಚಿಸುತ್ತೇನೆ. ನಾವು ಮನುಷ್ಯರಾಗಿ ಬದಲಾಗುತ್ತಲೇ ಇರುತ್ತೇವೆ. ಹೋಗ್ತಾ ಹೋಗ್ತಾ ನಮ್ಮೊಳಗಿನ ಸಮಸ್ಯೆ ನಮಗೆ ಗೊತ್ತಾಗುತ್ತಾ ಹೋಗುತ್ತೇವೆ. ಒಬ್ಬ ಕಲಾವಿದನಾಗಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಬೇರೆ ಬೇರೆ ಪಾತ್ರಗಳ ಮೂಲಕ ನನ್ನ ನೋಡುತ್ತೇನೆ. ಸದ್ಯ ಮನು ನನ್ನೊಳಗೆ ಇದ್ದಾನೆ. ನಾನು ಪೂರ್ತಿಯಾಗಿ ಆಚೆ ಬಂದಿಲ್ಲ. ಸೈಡ್ ಬಿ ಬಂದ ಮೇಲೆ ಮನುವಿನಿಂದ ನಾನು ಆಚೆ ಬರುತ್ತೇನೆ. ಯಾಕೆಂದರೆ ಆಮೇಲೆ ರಿಚರ್ಡ್ ಆ್ಯಂಟನಿ ಶುರುವಾಗುತ್ತದೆ. ರಿಚ್ಚಿ ಬರುವಾಗ ನಾನು ಮತ್ತೆ ಹಳೆಯ ರಕ್ಷಿತ್ ಆಗಿರಲೇಬೇಕು.

ಸೈಡ್ ಎ, ಸೈಡ್ ಬಿ ಈ ಎರಡರ ಪ್ರಯಾಣದ ಸಾರ್ಥಕತೆ ಏನು?

ಒಂದು ಬಾವಿ ಇರುತ್ತದೆ. ಆ ಬಾವಿಯಲ್ಲಿ ಹೂಳು ತುಂಬಿಕೊಂಡಿದೆ. ಆ ಹೂಳು ನಮಗೆ ಯಾವುದಕ್ಕೂ ಬೇಡ. ಅದನ್ನು ಸ್ವಚ್ಛ ಮಾಡಬೇಕು. ನಾನು ಸೈಡ್‌ ಎಯಲ್ಲಿ ಬಾವಿಗೆ ಇಳಿದು ಸ್ವಚ್ಛ ಮಾಡುತ್ತಿದ್ದೇನೆ. ಆ ಕ್ರಿಯೆಯಲ್ಲಿ ಬಾವಿಯ ನೀರಿನ ಬಣ್ಣ ಬದಲಾಗಿದೆ. ಸೈಡ್ ಬಿ ಬರುವಾಗ ನಾನು ಮತ್ತಷ್ಟು ಆಳಕ್ಕಿಳಿದು ಸ್ವಚ್ಛ ಮಾಡುತ್ತಿರುತ್ತೇನೆ. ಎಷ್ಟು ಸ್ವಚ್ಛವಾಗಿದೆ ಎಂದು ನನಗಿನ್ನೂ ತಿಳಿದಿಲ್ಲ. ಆದರೆ ನನ್ನೊಳಗೆ ಏನೋ ಒಂದು ಬದಲಾವಣೆ ಆಗಿದೆ. ಮನುಷ್ಯರಾಗಿ ನಾವು ಬೆಳೆಯಬೇಕು. ನಮ್ಮೊಳಗೆ ನಮಗೆ ಗೊತ್ತೇ ಆಗದೆ ನೆಗೆಟಿವ್‌ ಯೋಚನೆಗಳು ಹುಟ್ಟಿಕೊಂಡು ಬಿಟ್ಟಿರುತ್ತವೆ. ಒಳಗೆ ದುರಾಸೆ, ಅಭದ್ರತೆ ಇರುತ್ತದೆ. ಅದನ್ನು ಕಂಡುಕೊಳ್ಳಬೇಕಾದರೆ ಕಣ್ಣು ಮುಚ್ಚಿ ನೋಡಬೇಕು. ಕಣ್ಣು ಮುಚ್ಚಿರುವಾಗಲೇ ಒಳಗಿರುವುದು ಕಾಣಿಸುತ್ತದೆ. ನಾವು ನಮ್ಮನ್ನು ಎಷ್ಟು ಮರೆತುಬಿಟ್ಟಿದ್ದೇವೆ ಎಂದು ತಿಳಿಯುತ್ತದೆ. ನಮ್ಮ ನಂಬಿಕೆಯ ಬುಡ ಅಲ್ಲಾಡಿದಾಗ ನಾವು ಅಲ್ಲೇ ನಿಲ್ಲಬೇಕು. ಸ್ವಲ್ಪ ಸಮಯ ತೆಗೆದುಕೊಳ್ಳಬೇಕು. ನಂತರ ಮುಂದುವರಿಯಬೇಕು. ಅದೆಲ್ಲವೂ ತಿಳಿದಾಗ ನಾವು ಬೆಳೆಯುತ್ತೇವೆ. ಒಬ್ಬ ಕಲಾವಿದವಾಗಿ, ವ್ಯಕ್ತಿಯಾಗಿ ಬೆ‍ಳೆಯುತ್ತೇನೆ. ನನ್ನೊಳಗನ್ನು ಸ್ವಚ್ಛಗೊಳಿಸಿದಾಗ ಮಾತ್ರ ನಾನು ನನ್ನ ಕತೆಯನ್ನು ಹೇಳಬಹುದು. ಮುಂದೆ ನನ್ನ ಕತೆಯನ್ನು ಹೇಳುವುದಕ್ಕೆ, ತಿಳಿಯಾಗುವುದಕ್ಕೆ ಈ ಪ್ರಯಾಣ ನನಗೆ ಬೆಳಕಾಗಿದೆ.

Latest Videos
Follow Us:
Download App:
  • android
  • ios