ಮಕ್ಕಳಿರೋ ಆ ಹೆಣ್ಣಿಗ್ಯಾಕೆ ಅಷ್ಟು ಒಂಟಿತನ ಕಾಡಿದ್ದು? ರಾಜ್ ಬಿ ಶೆಟ್ಟಿಗ್ಯಾಕೆ ಫೋನ್ ಮಾಡಿದ್ರು?

ರಾಜ್ ಬಿ ಶೆಟ್ಟಿ ನಟನೆ, ನಿರ್ದೇಶನದ, ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‌ ಜೊತೆ ಮಾತುಕತೆ.

Raj B Shetty Swathi Mutthina Male Haniye exclusive interview vcs

ರಾಜೇಶ್ ಶೆಟ್ಟಿ

ಹಿನ್ನೆಲೆ ಆಕರ್ಷಕವಾಗಿದೆ. ಹೆಸರು ಪೊಯೆಟಿಕ್ ಆಗಿದೆ. ಆದರೆ ಕತೆಯಲ್ಲಿ ಸಾವು ಇದೆ. ಹೇಳಹೊರಟಿರುವುದು ಏನು?

ಈ ಸಿನಿಮಾವನ್ನು painful poem ಎನ್ನಬಹುದು. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಅಲ್ಲಲ್ಲಿ ಪೊಯೆಟಿಕ್ ಗುಣ ಇತ್ತು. ಅದಕ್ಕೂ ಮಿಗಿಲಾಗಿ ಪೊಯೆಟಿಕ್ ಗುಣ ಇರುವಂತಹ ಒಂದು ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾ. ಕಾವ್ಯ ಓದುವಾಗ ಮನಸ್ಸಲ್ಲಿ ಹಲವಾರು ಚಿತ್ರಗಳಿರುತ್ತವೆ, ಅದನ್ನು ಸಂಗೀತದ ಹದಕ್ಕೆ ತಂದರೆ ಹೇಗಿರುತ್ತದೆ ಎಂಬುದಕ್ಕೆ ಪೂರಕವಾಗಿ ರೂಪುಗೊಂಡಿರುವ ಚಿತ್ರ. ನನ್ನ ಸಿನಿಮಾಗಳಲ್ಲಿಯೇ ಕೊಂಚ ಸಂಕೀರ್ಣ ವಸ್ತು ಇರುವ ಸಿನಿಮಾ.

ಸಿನಿಮಾದಂತಹ ಮಾಧ್ಯಮದಲ್ಲಿ ಸಂಕೀರ್ಣ ವಸ್ತು ಜನರಿಗೆ ತಲುಪಿಸುವುದು ಸುಲಭವೇ?

ಕಷ್ಟ. ಸಂಕೀರ್ಣ ವಸ್ತು ಇದ್ದಾಗ ಅದು ದೊಡ್ಡ ಸಮೂಹಕ್ಕೆ ತಲುಪುವುದಿಲ್ಲ ಎಂಬುದು ಗೊತ್ತಿರುತ್ತದೆ. ಅದಕ್ಕೆ ಎಷ್ಟು ಕಡಿಮೆ ಬಜೆಟ್‌ನಲ್ಲಿ ಕತೆ ಹೇಳುವುದಕ್ಕೆ ಸಾಧ್ಯ ಎಂದು ನೋಡಬೇಕು. ಈ ಸಿನಿಮಾವನ್ನು ನಾವು 18 ದಿನದಲ್ಲಿ ಚಿತ್ರೀಕರಣ ಮಾಡಿದ್ದೇವೆ.

ನನ್ನ ಜೀವನಕ್ಕೆ ತದ್ವಿರುದ್ಧ ಕತೆ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್‌ ಕೃಷ್ಣ

ಕತೆ ಹೊಳೆದ ಸಂದರ್ಭ ಯಾವುದು?

ಒಂದು ಸಲ ದೂರದ ಪರಿಚಯದ ಮನೆಗೆ ಹೋಗಿದ್ದೆ. ಅಲ್ಲೊಬ್ಬರು ಮಹಿಳೆ ಸಿಕ್ಕಿದ್ದರು. ನಾನು ಆ ಭೇಟಿಯನ್ನು ಮರೆತು ಬಿಟ್ಟಿದ್ದೆ. ಅದಾದ ಒಂದು ವರ್ಷದ ಬಳಿಕ ಅವರು ನನ್ನ ನಂಬರ್‌ ಕಲೆಕ್ಟ್‌ ಮಾಡಿ ಫೋನ್ ಮಾಡಿದರು. ನಾವು ಪರಸ್ಪರ ಅಪರಿಚಿತರು. ಅವರಿಗೆ ಏನೋ ಹೇಳಬೇಕಿತ್ತು. ಆದರೆ ಹೇಳುವಷ್ಟು ಆತ್ಮೀಯತೆ ಇರಲಿಲ್ಲ. ಆಕೆ ಸುಮಾರು ಹೊತ್ತು ಫೋನಲ್ಲಿಯೇ ಅತ್ತರು. ನನಗೆ ಆಗ ಏನೂ ಅನ್ನಿಸಲಿಲ್ಲ. ಅವರಿಗೆ ಮದುವೆಯಾಗಿ 15 ವರ್ಷ ಆಗಿತ್ತು. ಮಕ್ಕಳಿದ್ದರು. ಆದರೆ ಅವರು ಆ ಯಾರಿಗೂ ಹೇಳಲು ಸಾಧ್ಯವಾಗದ ವಿಷಯ ನನಗೆ ಹೇಳಬೇಕು ಅಂತ ಬಂದಿದ್ದಾರೆ ಅಂದ್ರೆ ಅವರು ಎಷ್ಟು ಲೋನ್ಲಿಯಾಗಿ ಇರಬೇಕು ಅಂತ ಆಮೇಲೆ ಹೊಳೆಯಿತು. ಹಾಗೆ ಲೋನ್ಲಿಯಾಗಿರುವ ಸ್ತ್ರೀಯರನ್ನು ನಾನು ಜೀವನದಲ್ಲಿ ನೋಡುತ್ತಲೇ ಬಂದಿದ್ದೇನೆ. ಆ ಪಾತ್ರದ ಹುಡುಕಾಟ ಮಾಡುತ್ತಾ ಈ ಸಿನಿಮಾದ ಕತೆ ಆಯಿತು.

ನಿಮ್ಮ ಹಿಂದಿನ ಸಿನಿಮಾಗಳಿಗಿಂತ ಈ ಪಾತ್ರ ಭಿನ್ನ. ಹೇಗೆ ಸಿದ್ಧವಾದಿರಿ?

ಆ ಪಾತ್ರಕ್ಕೆ ಕವನಗಳು, ಪೇಂಟಿಂಗ್‌ ಇಷ್ಟ. ಓದಿಕೊಂಡಿದ್ದಾನೆ. ಅವನ ಭಾಷೆ ಚೆನ್ನಾಗಿದೆ. ತನಗೆ ಸಮಯ ತುಂಬಾ ಕಡಿಮೆ ಇದೆ ಅನ್ನುವುದೂ ಅವನಿಗೆ ಗೊತ್ತಿದೆ. ಅವನಿಗೆ ಸರಿ ತಪ್ಪು ಅಂತ ಏನೂ ಇಲ್ಲ. ಬಂದಿದ್ದು ಬಂದ ಹಾಗೆ ಬದುಕನ್ನು ಆನಂದಿಸುತ್ತಾನೆ. ಅವನು ಸ್ಟ್ರಾಂಗ್ ಇದ್ದಾನೆ. ಅನಾರೋಗ್ಯ ಇರುವುದರಿಂದ ಸ್ವಲ್ಪ ವೀಕ್ ಇದ್ದಾನೆ. ಅದಕ್ಕೆ ತಕ್ಕಂತೆ ನಾನು ಮಾನಸಿಕವಾಗಿ, ದೈಹಿಕವಾಗಿ ಸಿದ್ಧವಾಗುತ್ತಾ ಹೋದೆ.

ನಾನು ಒಳ್ಳೆಯ ಆ್ಯಕ್ಟರ್‌ ಆಗಬೇಕು, ಬಾಡಿ ಬಿಲ್ಡರ್‌ ಅಲ್ಲ: ಅಭಿಷೇಕ್ ಅಂಬರೀಶ್‌

ಈ ಸಿನಿಮಾ ಏನನ್ನು ದಾಟಿಸುತ್ತದೆ?

ಈ ಸಿನಿಮಾ ಪ್ರಶ್ನೆಯನ್ನು ಕೇಳುತ್ತದೆ. ಅನ್‌ಕಂಫರ್ಟೆಬಲ್‌ ಆದ ಪ್ರಶ್ನೆ. ನಾವು ಸಿನಿಮಾದ ಮೂಲಕ ಮಾಡಬೇಕಾಗಿದ್ದು ಅದನ್ನೇ ಅನ್ನಿಸುತ್ತದೆ. ಪ್ರಶ್ನೆ ಹುಟ್ಟು ಹಾಕಬೇಕು. ಅವರವರು ಅವರವರ ಉತ್ತರ ಅವರವರದೇ ರೀತಿಯಲ್ಲಿ ಕಂಡುಕೊಳ್ಳುತ್ತಾರೆ. ಪ್ರೇಕ್ಷಕರು ಈ ಸಿನಿಮಾ ಕೇಳುವ ಪ್ರಶ್ನೆಗೆ ಉತ್ತರ ಹುಡುಕುತ್ತಾರೋ, ಅನ್‌ಕಂಫರ್ಟೆಬಲ್‌ ಆಗುತ್ತಾರೋ ನೋಡಬೇಕು.

ಈ ಸಿನಿಮಾದಿಂದ ಪಡಕೊಂಡಿದ್ದೇನು, ಕಳಕೊಂಡಿದ್ದೇನು?

ಈ ಸಿನಿಮಾ let it go ಅನ್ನುವುದನ್ನು ಪ್ರತೀ ಬಾರಿಯೂ ಹೇಳುತ್ತಿತ್ತು. ನಾನು ಪಡಕೊಂಡಿದ್ದು ಅದನ್ನು. ಎಲ್ಲವನ್ನೂ ಕಳೆದುಕೊಂಡ ಮೇಲೆಯೇ ಪಡೆದುಕೊಂಡಿದ್ದು.

ಪ್ರಯಾಣ ಎಲ್ಲಿಗೆ ಬಂದು ನಿಂತಿದೆ?

ಖಾಲಿಯಾಗಿದ್ದೇನೆ ಅನ್ನಿಸುತ್ತಿದೆ. ಹಾಗಂತ ಕತೆ ಹೊಳೀತಾ ಇಲ್ಲ ಅಂತಲ್ಲ. ಒಳಗೊಂದು ಹಸಿವು ಇರುತ್ತದಲ್ಲ. ಕಲಿಕೆಯ ಹಸಿವು. ಅದನ್ನು ತುಂಬಿಕೊಳ್ಳಬೇಕು. ನಾನು ಮತ್ತು ನನ್ನ ತಂಡ ಮತ್ತೆ ಮುಗ್ಧತೆಯ ಕಡೆಗೆ ಸಾಗುವ ಪ್ರಯತ್ನದಲ್ಲಿದ್ದೇವೆ. ಉತ್ತಮ ಕತೆ ಹೇಳಬೇಕು, ಉತ್ತಮ ಸಿನಿಮಾ ಮಾಡಬೇಕು. ಓದಬೇಕು. ಬರೆಯಬೇಕು. ಕಲಿಯಬೇಕು. ತುಂಬಿಕೊಳ್ಳಬೇಕು.

Latest Videos
Follow Us:
Download App:
  • android
  • ios