Asianet Suvarna News Asianet Suvarna News

'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

ಇದೇ ಡಿಸಂಬರ್ 20 ಂದು ದಬಾಂಗ್- 3 ತೆರೆಗೆ ಬರುತ್ತಿದೆ. ಕಿಚ್ಚ ಸುದೀಪ್ ಸಲ್ಮಾನ್ ಎದುರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ದಬಾಂಗ್- 3? ಸಲ್ಮಾನ್ ಜೊತೆಗಿನ ಒಡನಾಟದ ಬಗ್ಗೆ ಸುದೀಪ್ ಕನ್ನಡ ಪ್ರಭದ ಜೊತೆ ಮಾತನಾಡಿದ್ದಾರೆ. 

Bollywood Dabangg 3 Kiccha Sudeep interview with Kannada Prabha
Author
Bengaluru, First Published Dec 14, 2019, 10:34 AM IST

ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ ‘ದಬಾಂಗ್ 3’ ಸಿನಿಮಾ ಡಿ. 20 ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಆ ಸಿನಿಮಾ, ಸಲ್ಮಾನ್ ಖಾನ್ ಬಗ್ಗೆ ವಿವರವಾಗಿ ಮಾತಾಡಿದ್ದಾರೆ ಕಿಚ್ಚ.

‘ದಬಾಂಗ್ 3’ ಕನ್ನಡಕ್ಕೆ ಬರಲು ನೀವೇ ಕಾರಣವಂತೆ...

ಬರಲಿ ಬಿಡಿ, ಬೇರೆ ಭಾಷೆಯವರು ಕನ್ನಡ ಮಾತನಾಡ್ತೀವಿ, ಕನ್ನಡಕ್ಕೆ ಬರ್ತೀವಿ ಅಂದ್ರೆ ಬೇಡ ಅನ್ನೋದಿಕ್ಕೆ ಆಗುತ್ತಾ? ಬರಬೇಕು. ಬನ್ನಿ ಅಂತ ನಾವು ಯಾರನ್ನೋ ಕರೆದೆವು ಎನ್ನುವುದಕ್ಕಿಂತ ಇಲ್ಲಿಗೆ ಬರೋದಿಕ್ಕೆ ಅವರೇ ಒಲವು ತೋರಿಸಿದ ಮೇಲೆ ಇಲ್ಲೊಂದು ಬೆಳವಣಿಗೆ ಆಗಿದ್ದು ಅಲ್ಲವೇ? ಇದು ಕೂಡ ಆಗಿದ್ದು ಹೀಗೆಯೇ. ಸ್ವತಃ ಸಲ್ಮಾನ್ ಖಾನ್ ಅವರೇ ಕನ್ನಡ ಮಾತಾಡ್ತೀನಿ, ಕನ್ನಡಕ್ಕೆ ಬರ್ತೀನಿ ಅಂದಾಗಲೇ ಇದು ಕನ್ನಡಕ್ಕೆ ಬರ್ತೀರೋದು. ಇದನ್ನೆಲ್ಲ ನಾನೇಕೆ ಸರ್ಪೋಟ್ ಮಾಡ್ತಿದೀನಿ ಅಂದ್ರೆ, ನಮ್ಮ ಮಾರ್ಕೆಟ್‌ಗೂ ಅಲ್ಲಿ ಜಾಗ ಸಿಗಬೇಕು. ನಮ್ಮ ಭಾಷೆ ಕಮ್ಮಿ ಇಲ್ಲ ಅನ್ನೋದು ಅವರಿಗೂ ಗೊತ್ತಾಗಬೇಕು.

‘ದಬಾಂಗ್ ೩’ಚಿತ್ರಕ್ಕೆ ಮೊದಲು ಅಪ್ರೋಚ್ ಮಾಡಿದ್ದು ಯಾರು? ಆಗ ನಿಮಗನಿಸಿದ್ದು ಏನು?

ಫಸ್ಟ್ ಟೈಮ್ ನಂಗೆ ಕಾಂಟ್ಯಾಕ್ಟ್ ಮಾಡಿದ್ದು ಡೈರೆಕ್ಟರ್ ಪ್ರಭುದೇವ. ಅವರು ಈ ಕ್ಯಾರೆಕ್ಟರ್ ಬಗ್ಗೆ ಹೇಳಿದ್ರು. ಹಾಗಂತ ನೆಗೆಟಿವ್ ರೋಲ್ ನಂಗೇನು ಹೊಸತೇನು ಆಗಿರಲಿಲ್ಲ. ಆದಾಗಲೇ ತಮಿಳು, ತೆಲುಗಿನಲ್ಲಿ ನಾನು ಅಭಿನಯಿಸಿದ್ದ ಸಿನಿಮಾಗಳ ಬಗ್ಗೆ ಅವರಿಗೂ ಗೊತ್ತಿತ್ತು. ವಿಲನ್ ಪಾತ್ರ. ಬಲ್ಲಿ ಸಿಂಗ್ ಅಂತ ಅದರ ಹೆಸರು, ನೀವು ಸಲ್ಮಾನ್ ಖಾನ್ ಎದುರು, ತುಂಬಾ ಸ್ಟ್ರಾಂಗ್ ಆಗಿರುತ್ತೆ ಅಂತೆಲ್ಲ ಹೇಳಿದ್ರು. ಸಲ್ಮಾನ್ ಖಾನ್ ಅವರಂತಹ ಅಷ್ಟು ದೊಡ್ಡ ನಟರ ಎದುರು ಅಭಿನಯಿಸುವ ಅವಕಾಶ ಸಿಗುತ್ತದೆಯಲ್ಲ, ಬರ್ತೀನಿ ಬಿಡಿ ಅಂದೆ.

ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಲ್ಲು- ಸೋನಾಕ್ಷಿ ಸೀರೆ ರೊಮ್ಯಾನ್ಸ್‌!

ವಿಲನ್ ಆಗುವುದು ಬೇರೆ ಭಾಷೆಗಳಿಗೆ ಓಕೆ, ಆದ್ರೆ ಇಲ್ಲಿ ನೀವು ವಿಲನ್ ಆಗಿ ಇನ್ನೊಬ್ಬ ಸ್ಟಾರ್ ಕಡೆಯಿಂದ ಹೊಡೆತ ತಿನ್ನೋದನ್ನು ಫ್ಯಾನ್ಸ್ ಸಹಿಸಿಕೊಳ್ತಾರಾ?

ಅವರಿಗೆ ಖುಷಿ ಕೊಡಬೇಕು ಅಂತಲೇ ಇಷ್ಟು ದಿನ ಸಿನಿಮಾ ಮಾಡುತ್ತಾ ಬಂದಿದ್ದೇನೆ. ಈಗ ನನ್ನ ಖುಷಿಗೆ ಅಂತ ಮಾಡುವ ಸಿನಿಮಾಗಳಿಗೆ ಅವರ ಬೆಂಬಲ ಬೇಕು. ಸಿನಿಮಾ ನೋಡಿ ಖುಷಿ ಪಡಬೇಕು. ಹೀರೋ ಕೈಲಿ ಹೊಡೆತ ತಿಂದಿದ್ದು ಇದು ಮೊದಲಲ್ಲ. ತೆಲುಗಿನ ‘ಈಗ’ ಚಿತ್ರದಲ್ಲಿ ಒಂದು ನೊಣದಿಂದ ನಾನು ಒದೆ ತಿಂದಿಲ್ಲವೇ? ಸಿನಿಮಾ ಅಂದಾಗ ವಿಲನ್ ಮುಂದೆ ಹೀರೋ ಗೆಲ್ಲಲೇಬೇಕು. ಈ ಪಾತ್ರವನ್ನು ನಾನು ಹಣಕ್ಕಾಗಿಯೋ, ಶೋಕಿಗಾಗಿಯೋ ಒಪ್ಪಿಕೊಂಡಿದ್ದಲ್ಲ.ಸಲ್ಮಾನ್ ಖಾನ್ ಜತೆಗೆ ಸಿಗುವ ಅವಕಾಶ ಯಾರ್ ಮಿಸ್ ಮಾಡ್ಕೊಳ್ತಾರೆ? ಸಿನಿಮಾವನ್ನು ಸಿನಿಮಾದ ರೀತಿಯಲ್ಲಿಯೇ ನೋಡಲು ಬಿಡಿ.

ದಬಾಂಗ್ ಚಿತ್ರದ ಹಿಂದಿನ ಎರಡು ಸರಣಿಗೆ ಹೋಲಿಸಿದರೆ ಮೂರನೇ ಚಾಪ್ಟರ್ ಹೇಗೆ ಭಿನ್ನ?

ಸಾಕಷ್ಟು ವಿಶೇಷತೆ ಮತ್ತು ವಿಭಿನ್ನತೆಗಳಿವೆ. ಅವತ್ತಿನ ಬಜೆಟ್‌ಗೂ, ಇವತ್ತಿನ ಸಿನಿಮಾದ ಬಜೆಟ್‌ಗೂ ದೊಡ್ಡ ವ್ಯತ್ಯಾಸ ಇದೆ. ಹಾಗೆಯೇ ಆಡಿಯನ್ಸ್ ಮೆಂಟಾಲಿಟಿ ಕೂಡ ಈಗ ಚೇಂಜ್ ಆಗಿದೆ. ಅದಕ್ಕೆ ತಕ್ಕಂತೆ ಈ ಸಿನಿಮಾ ಬಂದಿದೆ. ಸ್ಟೋರಿ ಲೈನ್ ಕೂಡ ಚೇಂಜ್ ಇದೆ. ಇನ್ನಷ್ಟು ಎಂಟರ್‌ಟೈನರ್ ಆಗಿದೆ.

ದಬಾಂಗ್‌-3 ಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ ಕಿಚ್ಚ ಸುದೀಪ್

ದಬಾಂಗ್ 3 ಮೂಲಕ ಬಾಲಿವುಡ್‌ನಲ್ಲಿ ನಿಮಗೆ ಇನ್ನಷ್ಟು ಅವಕಾಶಗಳು ಸಿಕ್ಕು, ಅಲ್ಲಿಯೇ ಬ್ಯುಸಿ ಆಗುವ ಸಾಧ್ಯತೆಗಳು ಹೆಚ್ಚಿವೆ ಎನಿಸುತ್ತೆ...

ಅವಕಾಶ ಬರಲಿ ಬಿಡಿ, ಬಂದ್ರೇನು ತಪ್ಪಿದೆ. ಆದ್ರೆ, ಕನ್ನಡಕ್ಕೆ ಬನ್ನಿ ಅಂತ ಅಲ್ಲಿನವರನ್ನೇ ನಾವು ಕರೆದುಕೊಂಡು ಬರುತ್ತಿರುವಾಗ ಅಲ್ಲಿಗೆ ಹೋಗಿ ಬ್ಯುಸಿ ಆಗುವ ಅನಿವಾರ್ಯತೆ ನನಗಿದೆ ಅಂತ ಎನಿಸುತ್ತಿಲ್ಲ. ಇಲ್ಲಿಯೇ ಹೊಟ್ಟೆ ತುಂಬಾ ಊಟ ಸಿಗುತ್ತಿದೆ. ನನ್ನ ಸಿನಿಮಾ ನೋಡುವ ಜನ ಇದ್ದಾರೆ. ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ಆದ್ರೂ ನಟ ಅಂದ್ಮೇಲೆ ಅವಕಾಶಗಳು ಬರುತ್ತವೆ. ಅವಕಾಶ ಸಿಕ್ಕಾಗ ಹಿಂದಿಯಾದ್ರೂ ಸರಿ, ತೆಲುಗಿನಲ್ಲಾದರೂ ಸರಿ, ಸಿನಿಮಾ ಮಾಡುತ್ತಾ ಹೋಗಬೇಕು.

ದಬಾಂಗ್‌ 3 ಕನ್ನಡ ಟ್ರೇಲರ್‌ಗೆ ಸಲ್ಮಾನ್ ಖಾನ್ ಅವರದ್ದೇ ವಾಯ್ಸ್ ಇತ್ತು, ಅವರಿಗೆ ಕನ್ನಡದ ಮೇಲಿನ ಪ್ರೀತಿಯ ಬಗ್ಗೆ ಹೇಳೋದಾದ್ರೆ...

ಅವರ ಕಮಿಟ್ ಮೆಂಟ್ ಬಗ್ಗೆ ಎಷ್ಟು ಹೇಳಿದ್ರು ಸಾಲದು. ಫಸ್ಟ್ ಟೈಮ್ ಕನ್ನಡಕ್ಕೆ ಬರ್ತಾ ಇದ್ದೇನೆ, ಸುದೀಪ್ ಅವರೇ ಕನ್ನಡದ ಟ್ರೇಲರ್‌ಗೆ ನಾನೇ ವಾಯ್ಸ್ ಕೊಟ್ಟರೆ ಹೇಗಿರುತ್ತೆ ಅಂತ ಕೇಳಿದ್ರು. ಅವರಿಗೆ ತಾವೇ ಡಬ್ ಮಾಡ್ಬೇಕೆನ್ನುವ ಹಸಿವು, ತುಡಿತ ಇರೋದನ್ನು ನಾನು ಕಂಡೆ. ಚೆನ್ನಾಗಿರುತ್ತೆ ಟ್ರೈ ಮಾಡಿ ಅಂದೆ. ಅದನ್ನುವರು ಮಾಡಿದ್ರು. ಆನಂತರ ಅವರ ಕನ್ನಡದ ಮಾತಿಗೆ ಇಲ್ಲಿ ಮಿಶ್ರ ಪ್ರತಿಕ್ರಿಯೆ ಬಂದವು. ಚೀನಿ ಭಾಷೆ ಗೊತ್ತಿರದ ನಮಗೆ ಮೊದಲ ಸಲ ಮಾತನಾಡಿದರೆ ಹೇಗಿರುತ್ತೆ? ಭಾಷೆಯ ಸ್ಲ್ಯಾಂಗ್ ಹೇಗಿತ್ತು ಎನ್ನುವುದಕ್ಕಿಂತ ಅವರ ಪ್ರಯತ್ನಕ್ಕೆ ಮೆಚ್ಚುಗೆ ಹೇಳಲೇಬೇಕು. ನಂಗಂತೂ ಅವರ ಈ ಬದ್ಧತೆ ಇಷ್ಟ ಆಯಿತು.

ವೆಸ್ಟರ್ನ್ ಸೆಟ್, ಇಂಡಿಯನ್ ಫೀಲ್; ಅವನೇ ಶ್ರೀಮನ್ನಾರಾಯಣ ಸ್ಪೆಷಲ್ ಇದು!

ಸಲ್ಮಾನ್ ಖಾನ್ ವ್ಯಕ್ತಿತ್ವ ಮತ್ತು ಅವರೊಂದಿಗಿನ ನಿಮ್ಮ ಒಡನಾಟದ ಬಗ್ಗೆ ಹೇಳೋದಾದ್ರೆ...
ಗ್ರೇಟ್ ಪರ್ಸನಾಲಿಟಿ. ತಕ್ಷಣಕ್ಕೆ ಅವರು ಅರ್ಥವಾಗುವುದು ಕಷ್ಟ. ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯವೂ ಬೇಕೆನಿಸುತ್ತೆ. ಆದ್ರೆ ಅವರನ್ನು ಅರ್ಥ ಮಾಡಿಕೊಂಡರೆ ಅವರ ಒಳ್ಳೆಯತನ ಗೊತ್ತಾಗುತ್ತೆ. ಅವರಿಗೆ ಸೆನ್ಸ್ ಆಫ್ ಕಾಮಿಡಿ ಚೆನ್ನಾಗಿದೆ. ಫನ್ ಮಾಡುತ್ತಲೇ ಹತ್ತಿರ ಆಗುತ್ತಾರೆ. ಈ ರೀತಿಯ ವ್ಯಕ್ತಿತ್ವ ಇರುವುವರು ಅಪರೂಪ.

ಸಲ್ಮಾನ್ ಖಾನ್ ನಿಮ್ಮನ್ನು ತುಂಬಾ ಇಷ್ಟಪಡಲು ಕಾರಣ ಏನು?

ಅದು ನಂಗೊತ್ತಿಲ್ಲ. ಅವರಿಗೆ ನಾನು ಇಷ್ಟ. ಅವರೊಂದಿಗೆ ಕಳೆಯುವ ಕ್ಷಣಗಳೇ ಅದ್ಭುತ. ಚಿತ್ರೀಕರಣದ ವೇಳೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ನನ್ನ ಕ್ಯಾರೆಕ್ಟರ್‌ಗೆ ಇನ್ನಷ್ಟು ಡೈಲಾಗ್ ಬೇಕು ಅಂತ ಅವರೇ ಬರೆದಿದ್ದಾರೆ. ನಿಮ್ಮ ಜತೆಗೆ ನಾನು ಕನ್ನಡಕ್ಕೆ ಬರ್ತೀನಿ ಅಂತ ಕನ್ನಡ ಮಾತನಾಡಿದ್ದಾರೆ. ಇದೆಲ್ಲ ನನ್ನ ಮೇಲೆ ಅವರಿಟ್ಟ ಪ್ರೀತಿ.

- ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios