ವಿಶ್ವಸಂಸ್ಥೆ(ಏ.01): ಕೊರೋನಾ ವೈರಸ್‌ನಿಂದಾಗಿ ವಿಶ್ವವು ತಲ್ಲಣಿಸುತ್ತಿರುವ ನಡುವೆಯೇ ಭಾರತ ಹಾಗೂ ಚೀನಾ ಹೊರತುಪಡಿಸಿದರೆ ಮಿಕ್ಕೆಲ್ಲ ದೇಶಗಳು ಕೊರೋನಾ ಕಾರಣ ಆರ್ಥಿಕ ಹಿಂಜರಿತ ಅನುಭವಿಸಲಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಮುನ್ಸೂಚನೆ ನೀಡಿದೆ.

ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳು ಆರ್ಥಿಕ ಕುಸಿತದಿಂದ ಕಂಗೆಡಲಿವೆ. ಲಕ್ಷಾಂತರ ಕೋಟಿ ಡಾಲರ್‌ ಹಾನಿ ಸಂಭವಿಸಲಿದೆ. ವಿಶ್ವದಲ್ಲಿ ಅಭಿವೃದ್ಧಿಶೀಲ ದೇಶಗಳ ಪ್ರಮಾಣವೇ ಶೇ.66ರಷ್ಟುಇದೆ. ಹೀಗಾಗಿ ಈ ದೇಶಗಳಿಗೆ ನೆರವು ನೀಡಲು 2.5 ಲಕ್ಷ ಕೋಟಿ ಡಾಲರ್‌ ಪ್ಯಾಕೇಜ್‌ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ.

ಜಿಡಿಪಿ ಇಳಿದರೂ ಭಾರತವೇ ಅತಿ ವೇಗದಲ್ಲಿ ಬೆಳೆಯುವ ಆರ್ಥಿಕತೆ!

ವಿಶ್ವಸಂಸ್ಥೆಯ ವ್ಯಾಪಾರ ಅಂಗವಾದ ವಿಶ್ವಸಂಸ್ಥೆ ವ್ಯಾಪಾರ ಹಾಗೂ ಅಭಿವೃದ್ಧಿ ಸಭೆ (ಯುಎನ್‌ಸಿಟಿಎಡಿ) ‘ಅಭಿವೃದ್ಧಿಶೀಲ ದೇಶಗಳಿಗೆ ಕೊರೋನಾ ಶಾಕ್‌’ ಎಂಬ ವರದಿ ಸಿದ್ಧಪಡಿಸಿದೆ. ಅದರಲ್ಲಿ ಕೊರೋನಾ ಕಾರಣದಿಂದಾಗಿ ವಿಶ್ವದಲ್ಲಿ ಮುಂದಿನ 2 ವರ್ಷದಲ್ಲಿ 2 ಲಕ್ಷ ಕೋಟಿಯಿಂದ 3 ಲಕ್ಷ ಕೋಟಿ ಡಾಲರ್‌ವರೆಗೆ ಬಂಡವಾಳ ಹರಿವು ಇಳಿಮುಖವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಚೀನಾದಲ್ಲಿ ಸೋಂಕು ಕಾಣಿಸಿಕೊಂಡ 2 ತಿಂಗಳ ತರುವಾಯ, ಅಭಿವೃದ್ಧಶೀಲ ದೇಶಗಳು ಬಂಡವಾಳ ಹಿಂಪಡೆಯುವಿಕೆ, ಕರೆನ್ಸಿ ಮೌಲ್ಯದಲ್ಲಿ ಭಾರೀ ಇಳಿಕೆ, ರಫ್ತು ಆದಾಯದಲ್ಲಿ ಇಳಿಕೆ, ಪ್ರವಾಸಿಗರ ಆದಾಯದಲ್ಲಿ ಭಾರೀ ನಷ್ಟಅನುಭವಿಸಿವೆ ಎಂದು ವರದಿ ಹೇಳಿದೆ.

ವಿಶ್ವದೆಲ್ಲೆಡೆ ಆರ್ಥಿಕ ಕುಸಿತದ ಛಾಯೆ ಆವರಿಸಲಿದ್ದರೂ ಕೊರೋನಾ ಕೇಂದ್ರ ಸ್ಥಾನವಾದ ಚೀನಾ ಹಾಗೂ ಭಾರತಕ್ಕೆ ಈ ಬಿಸಿ ತಟ್ಟುವ ಸಾಧ್ಯತೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಏಕೆ ಈ ದೇಶಗಳಿಗೆ ಕುಸಿತದ ಬಿಸಿ ತಾಗದು ಎಂಬ ಬಗ್ಗೆ ವಿವರಣೆ ಇಲ್ಲ.