ಇನ್ವೆಸ್ಟ್‌ ಕರ್ನಾಟಕ: ಭರವಸೆಯೇ ಆಯ್ತು, ಹುಬ್ಬಳ್ಳಿಗೆ ಕೈಗಾರಿಕೆ ಬರೋದ್ಯಾವಾಗ?

ಬಜೆಟ್‌ ನಿರೀಕ್ಷೆ- ಭಾಗ-1
ರಾಜ್ಯದ ದೊರೆ ಸಿದ್ದರಾಮಯ್ಯ ಮತ್ತೊಂದು ಬಜೆಟ್‌ ಮಂಡಿಸಲು ಸಿದ್ಧವಾಗಿದ್ದಾರೆ. ಆದರೆ, ತಮ್ಮ ಸರ್ಕಾರ ರಚನೆಯಾದ ಬಳಿಕ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಯಾವ ಬೇಡಿಕೆಗಳನ್ನು ಈವರೆಗೂ ಈಡೇರಿಲ್ಲ. ಬರೀ ಘೋಷಣೆಗಳಾಗಿಯೇ ಉಳಿದಿವೆ. ಇವುಗಳ ಮಧ್ಯೆಯೇ ಮತ್ತಷ್ಟು ನಿರೀಕ್ಷೆ, ಮತ್ತಷ್ಟು ಭರವಸೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜನತೆ ಇಟ್ಟುಕೊಂಡಿದೆ. ಹಾಗಾದರೆ ಈ ಸಲದ ಬಜೆಟ್‌ ಮೇಲೆ ಜನರ ನಿರೀಕ್ಷೆಗಳೇನು? ಎಂಬುದರ ಕುರಿತು ಬೆಳಕು ಚೆಲ್ಲಲು ಕನ್ನಡಪ್ರಭ ಇಂದಿನಿಂದ ಸರಣಿ ಲೇಖನಗಳನ್ನು ಪ್ರಕಟಿಸಲಿದೆ. ಅದರ ಮೊದಲ ಭಾಗ ಇಲ್ಲಿದೆ.

When will Industry come to Hubballi grg

ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.13):  ಉತ್ತರ ಕರ್ನಾಟಕದ ಯುವ ಸಮೂಹಕ್ಕೆ ಸರಿಯಾಗಿ ಕೆಲಸವೇ ಸಿಗುವುದಿಲ್ಲ. ಇಲ್ಲಿ ಕಲಿತವರು ದೂರದ ಮುಂಬೈ, ಬೆಂಗಳೂರು, ಗೋವಾ, ಪುಣೆಗೆ ಹೋಗುವುದು ತಪ್ಪುತ್ತಿಲ್ಲ. ಹೀಗಾಗಿ, ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಕು ಎಂಬುದು ಬಹುದಶಕಗಳ ಬೇಡಿಕೆ. ಸಿದ್ದರಾಮಯ್ಯ ಸರ್ಕಾರದ ಮೇಲೂ ಇಲ್ಲಿನ ಯುವ ಜನತೆ ಇದೇ ಬೇಡಿಕೆಯನ್ನು ಪ್ರಮುಖವಾಗಿ ಇಟ್ಟುಕೊಂಡಿದೆ.

ಹಾಗಂತ ಈ ಸಿದ್ದರಾಮಯ್ಯ ಸರ್ಕಾರವಾಗಲಿ, ಹಿಂದಿನ ಸರ್ಕಾರಗಳಾಗಲಿ ಕೈಗಾರಿಕೆ ಸ್ಥಾಪನೆಗಳಿಗೆ ಯಾವ ಕೆಲಸವನ್ನೇ ಮಾಡಿಲ್ಲ ಅಂತೇನೂ ಇಲ್ಲ. ಪ್ರತಿ ಬಜೆಟ್‌ನಲ್ಲಿ ಘೋಷಣೆ ಮಾಡುವುದನ್ನು ತಪ್ಪಿಸುವುದಿಲ್ಲ. ಘೋಷಣೆಗಳನ್ನು ಭರಪೂರವಾಗಿಯೇ ಮಾಡುತ್ತದೆ. ಆದರೆ, ಅದನ್ನು ಕಾರ್ಯರೂಪಕ್ಕೆ ಮಾತ್ರ ತರುವುದೇ ಇಲ್ಲ.

ಸಹಕಾರಿ ಕ್ಷೇತ್ರ ಹಾಳಾಗಲು ಹಿಂದಿನ ಸರ್ಕಾರವೇ ಕಾರಣ: ಶಾಸಕ ಜಿ.ಟಿ.ದೇವೇಗೌಡ ಆರೋಪ

ಇನ್ವೆಸ್ಟ್‌ ಕರ್ನಾಟಕ:

ಯಡಿಯೂರಪ್ಪ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ, ಈ ಭಾಗದಲ್ಲಿ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುವುದಕ್ಕಾಗಿಯೇ ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಎಂಬ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಿದ್ದುಂಟು. ಇಡೀ ಉತ್ತರ ಕರ್ನಾಟಕವನ್ನೇ ಕೇಂದ್ರೀಕೃತವನ್ನಾಗಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ಆಗ ನಿರೀಕ್ಷೆಗೂ ಮೀರಿ ₹83 ಸಾವಿರ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನವೂ ಆಯಿತು. ಆ ಬಳಿಕ ಶೆಟ್ಟರ ಸಚಿವರಾಗಿ ಇರುವ ವರೆಗೂ ಕೆಲವೊಂದಿಷ್ಟು ಕೈಗಾರಿಕೆಗಳು ಇಲ್ಲಿಗೆ ಬಂದಿದ್ದುಂಟು. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ಸ್ಥಾಪನೆಯಾಯಿತು. ಧಾರವಾಡದಲ್ಲಿ ಯುಫ್ಲೆಕ್ಸ್‌ ಸೇರಿದಂತೆ ಕೆಲ ಕೈಗಾರಿಕೆಗಳು ಬಂದವು. ಆಮೇಲೆ ಅವರ ಸಚಿವಗಿರಿ ಹೋಯ್ತು. ವಾಗ್ದಾನ ಮಾಡಿದ್ದ ಕೈಗಾರಿಕೆಗಳ ಫೈಲ್‌ಗಳು ಮೂಲೆ ಸೇರಿದವು.

ಈ ನಡುವೆ ಅತ್ಯಂತ ನಿರೀಕ್ಷೆ ಇಟ್ಟುಕೊಂಡಿದ್ದ ಎಫ್‌ಎಂಸಿಜಿ ಕ್ಲಸ್ಟರ್‌ ಕಥೆಯಂತೂ ಹೇಳುವಂತೆಯೇ ಇಲ್ಲ. ಸರ್ಕಾರವೇ ಮೊದಲು ಪ್ರತಿ ಎಕರೆಗೆ ₹95 ಲಕ್ಷ ನಿಗದಿಪಡಿಸಿತ್ತು. ಆದರೆ, ಇದೀಗ ₹1.39 ಕೋಟಿ ನಿಗದಿ ಮಾಡಿದೆ. ಹೀಗಾಗಿ, ಕೈಗಾರಿಕೋದ್ಯಮಿಗಳು ಬರಲು ಹಿಂಜರಿಯುತ್ತಿದ್ದಾರೆ.

ಬರೀ ಘೋಷಣೆ:

ಇನ್ನು ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜುಲೈನಲ್ಲಿ ಕಾಂಗ್ರೆಸ್‌ ಸರ್ಕಾರ ಬಜೆಟ್ ಮಂಡಿಸಿತು. ಕೈಗಾರಿಕೆಗಳಲ್ಲಿ ಹೊಸ ಬದಲಾವಣೆಯನ್ನೇ ಮಾಡುತ್ತೇವೆ ಎಂಬಂತೆ ಘೋಷಣೆಗಳನ್ನು ಮಾಡಿತು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಹಲವೆಡೆ ಕೈಗಾರಿಕೆ ವಸಾಹತುಗಳ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ಆದರೆ, ಈ ವರೆಗೂ ಅದರ ಬಗ್ಗೆ ಯಾರೊಬ್ಬರು ಚಕಾರವನ್ನೇ ಎತ್ತುತ್ತಿಲ್ಲ. ಮಾತೆತ್ತಿದ್ದರೆ ಬರೀ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದನ್ನೇ ಹೇಳುತ್ತಾರೆ. ಹಾಗಂತ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದು, ಅವುಗಳ ಬಗ್ಗೆ ಹೇಳುವುದು ತಪ್ಪು ಅಂತ ಅಲ್ಲ. ಆದರೆ, ಗ್ಯಾರಂಟಿ ಯೋಜನೆ ಜತೆ ಜತೆಗೆ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೆಲಸಗಳಾಗಲಿ. ಅದಕ್ಕಾಗಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಿ ಎಂಬ ಬೇಡಿಕೆ ಇಲ್ಲಿನ ಯುವ ಸಮೂಹದ್ದು.

ಈ ಕೈಗಾರಿಕೆಗಳು ಬರಲಿ:

ಪ್ರತಿ ವರ್ಷದ ಬಜೆಟ್‌ ವೇಳೆಯೂ ವಸ್ತುಪ್ರದರ್ಶನದ ಕೇಂದ್ರದ ಉನ್ನತೀಕರಣ ಮಾಡಬೇಕು ಎಂಬ ಬೇಡಿಕೆ ಕೇಳಿ ಬರುತ್ತದೆ. ಆದರೆ, ಈ ಬಗ್ಗೆ ಸರ್ಕಾರಗಳು ಸ್ಪಂದಿಸುವುದಿಲ್ಲ. ಈ ಸಲವಾದರೂ ಸ್ಪಂದಿಸುವ ಕೆಲಸವಾಗಬೇಕು. ಉತ್ತರ ಕರ್ನಾಟಕದಲ್ಲಿ ಕೃಷಿಯೇ ಪ್ರಧಾನವಾಗಿದೆ. ಹೀಗಾಗಿ, ಕೃಷಿ ಉತ್ಪನ್ನಗಳ ಆಧಾರದ ಮೇಲೆ ಕೈಗಾರಿಕೆ, ಕೃಷಿ ಸಲಕರಣಗಳ ತಯಾರಿಕಾ ಘಟಕ ಸ್ಥಾಪಿಸಬೇಕು. ಆಹಾರೋತ್ಪನ್ನಗಳ ಸಂಸ್ಕರಣೆ, ರಫ್ತು ಮಾಡಲು ಪೂರಕವಾದ ಮಾರುಕಟ್ಟೆಗೆ ಅನುಕೂಲವಾಗುವಂತೆ ಕೋಲ್ಡ್‌ ಸ್ಟೋರೇಜ್‌ ಸ್ಥಾಪಿಸಬೇಕು. ಕೃಷಿ ಆಧಾರಿತ ಸ್ಟಾರ್ಟಪ್‌ಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಕೆಲಸವಾಗಲಿ.

ವರಿಷ್ಠರು ಲೋಕಸಭೆಗೆ ಸ್ಪರ್ಧಿಸಲು ಸೂಚಿಸಿದರೆ ಸಿದ್ಧ: ಜಗದೀಶ ಶೆಟ್ಟರ್‌

ಸಾಫ್ಟ್‌ವೇರ್ಟೆ ಕ್ನಾಲಜಿ ಪಾರ್ಕ್‌ ಮಾದರಿಯಲ್ಲಿ ಸಣ್ಣ ಸಣ್ಣ ಉತ್ಪಾದನಾ ಘಟಕಗಳಿಗೆ ಬಹುಪಯೋಗಿ ಬಳಕೆದಾರರ ಮಳಿಗೆಗಳ ಕಟ್ಟಡ ನಿರ್ಮಿಸಬೇಕು. ಧಾರವಾಡದಲ್ಲಿ ಬೃಹತ್‌ ಜವಳಿ ಪಾರ್ಕ್‌ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಬರುವ ಕೈಗಾರಿಕೋದ್ಯಮಿಗಳಿಗೆ ಮೊದಲು ನೀಡಿದ್ದ ವಾಗ್ದಾನದಂತೆ ಭೂಮಿ ದರವನ್ನು ಇಳಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಲ್ಲಿನ ಕೈಗಾರಿಕೋದ್ಯಮಗಳು ಸರ್ಕಾರದ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಯಾವ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಸಾಗಾಣಿಕೆ ಕಾರಿಡಾರ್‌ಗೆ ಒತ್ತು ನೀಡಿ

ಗತಿ ಶಕ್ತಿ ಯೋಜನೆಯಡಿ ಸಿಮೆಂಟ್‌, ಉಕ್ಕು, ವಿದ್ಯುತ್‌ ಸಾಗಾಣಿಕೆಗೆ ಪ್ರತ್ಯೇಕವಾದ ರೈಲ್ವೆ ಕಾರಿಡಾರ್‌ ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಘೋಷಿಸಿದೆ. ಸಿಮೆಂಟ್‌ ಹಾಗೂ ಉಕ್ಕು ಕಾರಿಡಾರ್‌ನ್ನು ಕರ್ನಾಟಕದ ಉತ್ತರ ಭಾಗದಲ್ಲಿ ಸ್ಥಾಪಿಸಿದರೆ ಹೆಚ್ಚು ಅನುಕೂಲ. ಏಕೆಂದರೆ ಈ ಭಾಗದಲ್ಲಿ ಸಿಮೆಂಟ್‌ ಹಾಗೂ ಉಕ್ಕಿನ ಕಾರ್ಖಾನೆಗಳು ಸಾಕಷ್ಟಿವೆ. ಅದಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ಅದನ್ನು ಈ ಬಜೆಟ್‌ನಲ್ಲಿ ಘೋಷಿಸಬೇಕು.

Latest Videos
Follow Us:
Download App:
  • android
  • ios