ಕಾರು ಹಳೇದಾಯಿತು ಎಂದು ಮಾರಿದರೂ ಕಟ್ಟಬೇಕು ಶೇ.18ರಷ್ಟು ಜಿಎಸ್‌ಟಿ, ಹೊಸ ನೀತಿ!

ಕಾರು ಹಳೇದಾಯಿತು, ಹೊಸ ಕಾರು ಖರೀದಿಸಬೇಕು, ಅಥವಾ ಸೆಕೆಂಡ್ ಕಾರು ಖರೀದಿಬೇಕು ಅನ್ನೋ ಪ್ಲಾನ್‌ನಲ್ಲಿದ್ದರೆ ಇನ್ನು ಮುಂದೆ ಇವೆಲ್ಲವೂ ದುಬಾರಿ. ಕಾರಣ ಹಳೇ ಕಾರು ಮಾರಾಟ ಮಾಡಿದರೂ ಶೇಕಡಾ 18ರಷ್ಟು ಜಿಎಸ್‌ಟಿ ಪಾವತಿಸಬೇಕು. ಹೊಸ ನೀತಿಗೆ ಜಿಎಸ್‌ಟಿ ಕೌನ್ಸಿಲ್ ಅನುಮೋದನೆ ನೀಡಿದೆ.

Used vehicle sales attract 18 percent gst under new gst council policy ckm

ನವದೆಹಲಿ(ಡಿ.22)  ಜಿಎಸ್‌ಟಿ ತನ್ನ ಹಿಡಿತ ಬಿಗಿಗೊಳಿಸುತ್ತಿದೆ. ಆರಂಭದಲ್ಲೇ ಕೆಲ ವಸ್ತುಗಳ ಮೇಲಿದ್ದ ದುಬಾರಿ ಜಿಎಸ್‌ಟಿ ಇದೀಗ ಬಹುತೇಕರು ಜೇಬಿಗೆ ಕತ್ತರಿ ಹಾಕುವಂತೆ ಮಾಡುತ್ತಿದೆ. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಹಲವು ನಿರ್ಣಯಗಳಿಗೆ ಅನುಮತಿಯೂ ಸಿಕ್ಕಿದೆ. ಈ ಪೈಕಿ ಹಳೇ ವಾಹನಗಳ ಮಾರಾಟ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಏರಿಸಲಾಗಿದೆ. ಶೇಕಡಾ 12ರಷ್ಟಿದ್ದ ಜಿಎಸ್‌ಟಿ ತೆರಿಗೆಯನ್ನು ಇದೀಗ 18ಕ್ಕೆ ಏರಿಸಲಾಗಿದೆ. ಹೀಗಾಗಿ ನೀವು ಹಳೇ ವಾಹನ ಮಾರಾಟ ಮಾಡಿದರೂ ಶೇಕಡಾ 18 ರಷ್ಟು ಜಿಎಸ್‌ಟಿಯನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. 

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳ ಪೈಕಿ ಹಳೇ ವಾಹನ ಮಾರಾಟ ಮೇಲಿನ ಜಿಎಸ್‌ಟಿ ಏರಿಕೆಯೂ ಸೇರಿದೆ. ಈ ನಿರ್ಧಾರಕ್ಕೆ ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆ ತಜ್ಞರು ಸೇರಿದಂತೆ ಉದ್ದಿಮೆದಾರರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವ್ಯಾಪಾರ ವಹಿವಾಟನ್ನು ಸಂಪೂರ್ಣ ಕಡಿತಗೊಳಿಸಲಿದೆ ಎಂದು ಎಚ್ಚರಿಸಿದೆ. ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಡಿ ಹಳೇ ವಾಹನಗಳ ಎಂಜಿನ್ 1200ಸಿಸಿಗಿಂತ ಮೇಲ್ಪಟ್ಟದ್ದಾಗಿದ್ದರೆ ಶೇಕಡಾ 18 ರಷ್ಟು ಜಿಎಸ್‌ಟಿ ಪಾವತಿಸಬೇಕು. 

ಡೀಸೆಲ್ ವಾಹನವಾಗಿದ್ದರೆ 1500 ಸಿಸಿ ಎಂಜಿನ್ ಮೇಲ್ಪಟ್ಟದ್ದಾಗಿದ್ದರೆ ಶೇಕಡಾ 18 ರಷ್ಟು ಮಾರಾಟದ ವೇಳೆ ಜಿಎಸ್‌ಟಿ ತೆರಿಗೆ ಪಾವತಿಸಬೇಕು. ಇದೇ ಜಿಎಸ್‌ಟಿ ಅಡಿ ಹಳೇ ಎಲೆಕ್ಟ್ರಿಕ್ ವಾಹನವನ್ನು ಸೇರಿಸಲಾಗಿದೆ. ಇದೀಗ ಹಳೇ ಎಲೆಕ್ಟ್ರಿಕ್ ವಾಹನವನ್ನು ಮಾರಾಟ ಮಾಡಿದರೆ ಸರ್ಕಾರಕ್ಕೆ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ಪಾವತಿಸಬೇಕು. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರ ಭಾರಿ ತೆರಿಗೆ ವಿನಾಯಿತಿ ಸೇರಿದಂತೆ ಸಬ್ಸಿಡಿ ನೀಡಿತ್ತು. ಆದರೆ ಇದೀಗ ಹಳೇ ಎಲೆಕ್ಟ್ರಿಕ್ ವಾಹನ ಮಾರಾಟದ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿದೆ. ಇದು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಕಾರಣ ಹೊಸ ಎಲೆಕ್ಟ್ರಿಕ್ ವಾಹನ ಖರೀದಿ ವೇಳೆ ತೆರಿಗೆ ಶೇಕಾಡ 5ರಷ್ಟು ಮಾತ್ರ. ಆದರೆ ಅದೇ  ಎಲೆಕ್ಟ್ರಿಕ್ ವಾಹನ ಮಾರಾಟ ಬಳಸಿದ ವಾಹನ ಅಡಿಯಲ್ಲ ಮಾರಾಟ ಮಾಡುವಾಗ ಶೇಕಡಾ 18 ರಷ್ಟು ತೆರಿಗೆ ಪಾವತಿಸಬೇಕು. ಇದು ಜನರನ್ನು ಎಲೆಕ್ಟ್ರಿಕ್ ವಾಹನ ಖರೀದಿ ಹಾಗೂ ಬಳಕೆಯಿಂದ ದೂರವಿಡಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.  

ಇನ್ನು ಬಳಸಿದ ವಾಹನಗಳ ರಿಪೇರಿ, ಬಿಡಿ ಭಾಗಗಳ ಮೇಲೆ ಈಗಾಗಲೇ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಹೊಸ ಜಿಎಸ್‌ಟಿ ನೀತಿ ಹೊಸ ವಾಹನಗಳ ಖರೀದಿಗೆ ಸಣ್ಣ ಪ್ರಮಾಣದಲ್ಲಿ ಉತ್ತೇಜನ ನೀಡುವ ಸಾಧ್ಯತೆ ಇದೆ. ಆದರೆ ಭಾರತ ಬಳಸಿದ ವಾಹನ ಮಾರಾಟದಲ್ಲಿ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಗೆ ತೀವ್ರ ಹೊಡೆತ ನೀಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಪ್ರಮುಖವಾಗಿ ಹಳೇ ಕಾರು ಮಾರಾಟ ಮಾಡುವ ಡೀಲರ್ಸ್, ಶೋ ರೂಂಗಳು ಶೇಕಡಾ 18 ರಷ್ಟು ಜಿಎಸ್‌ಟಿ ಪಾವತಿಸಬೇಕು. ಆದರೆ ವೈಯುಕ್ತಿಕವಾಗಿ ಹಳೇ ಕಾರನ್ನು ಆಪ್ತರಿಗೆ ಅಥವಾ ಇತರರಿಗೆ ಮಾರಾಟ ಮಾಡುವಾಗ ಹಿಂದಿನಂತೆ ಶೇಕಡಾ 12ರಷ್ಟು ತೆರಿಗೆ ಪಾವತಿಸಬೇಕು. ಬಳಸಿದ ಎಲೆಕ್ಟ್ರಿಕ್‌ ವಾಹನಗಳನ್ನು ಯಾವುದೇ ಕಂಪನಿಗಳು ಮಾರಾಟ ಮಾಡಿದಲ್ಲಿ ಅದರ ಲಾಭದ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಲಾಗಿದೆ.  

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
 

Latest Videos
Follow Us:
Download App:
  • android
  • ios