ಉದ್ದು, ತೊಗರಿಬೇಳೆ ಬಲು ದುಬಾರಿ; ಆರು ವಾರಗಳಲ್ಲಿ ಶೇ.15ರಷ್ಟು ಬೆಲೆ ಹೆಚ್ಚಳ
*ಮಳೆಯಿಂದ ಬೆಳೆ ಹಾನಿ
*ಬೇಳೆಗಳ ಸಂಗ್ರಹಣೆಯಲ್ಲಿ ಇಳಿಕೆ
*ತೊಗರಿ,ಉದ್ದು ಬೆಳೆಯುವ ಪ್ರದೇಶದಲ್ಲಿ ಇಳಿಕೆ
ನವದೆಹಲಿ (ಜು.10): ಕಳೆದ ಆರು ವಾರಗಳಲ್ಲಿ ತೊಗರಿ ಬೇಳೆ ಹಾಗೂ ಉದ್ದಿನ ಬೇಳೆ ಬೆಲೆಗಳು ಶೇ.15ಕ್ಕಿಂತಲೂ ಅಧಿಕ ಏರಿಕೆ ಕಂಡಿವೆ. ಹೊಲಗಳು ಜಲಾವೃತಗೊಂಡು ಬೆಳೆ ಹಾನಿಯಾಗಿರುವ ಜೊತೆಗೆ ಸದ್ಯದ ಮುಂಗಾರು ಅವಧಿಯಲ್ಲಿ ಕೂಡ ಬಿತ್ತನೆಯಲ್ಲಿ ಇಳಿಕೆಯಾಗಿದೆ. ಇನ್ನು ಬೇಳೆಗಳ ಸಂಗ್ರಹಣೆ ಕೂಡ ತಗ್ಗಿದೆ. ಉತ್ತಮ ಗುಣಮಟ್ಟದ ತೊಗರಿ ಬೇಳೆ ಗಿರಾಣಿ ಹೊರಗಿನ ಬೆಲೆ ಮಹಾರಾಷ್ಟ್ರದ ಲತುರ್ ನಲ್ಲಿ ಕಳೆದ ಆರು ವಾರಗಳಲ್ಲಿ ಕೆಜಿಗೆ 97ರೂ.ನಿಂದ 115ರೂ.ಗೆ ಏರಿಕೆಯಾಗಿದೆ. ಇನ್ನು ಕೃಷಿ ಸಚಿವಾಲಯ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಬಿತ್ತನೆ ಮಾಹಿತಿ ಪ್ರಕಾರ ತೊಗರಿ ಬೆಳೆಯುವ ಪ್ರದೇಶ ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.4.6ರಷ್ಟು ಕಡಿಮೆಯಿದೆ. ಉದ್ದು ಬೆಳೆಯುವ ಪ್ರದೇಶ ಕೂಡ ಶೇ.2ರಷ್ಟು ಕಡಿಮೆ ಇದೆ. ತೊಗರಿ ಬೆಳೆಯುವ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಹೊಲಗಳು ಜಲಾವೃತಗೊಂಡಿರುವ ಕಾರಣ ಬೆಳೆ ಹಾನಿಯ ಅಪಾಯ ಹೆಚ್ಚಿದೆ. 'ತೊಗರಿ ಬೇಳೆಯ ದೊಡ್ಡ ಸಂಗ್ರಹಣೆಯಿಲ್ಲ. ಇನ್ನು ರೈತರು ಸೋಯಾಬಿನ್ ಬೆಳೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವ ಕಾರಣ ತೊಗರಿ ಬಿತ್ತನೆಯಲ್ಲಿ ಇಳಿಕೆಯಾಗಿದೆ' ಎಂದು ಮಹಾರಾಷ್ಟ್ರದ ಕಾಳುಗಳ ರಫ್ತುದಾರ ಹರ್ಷಾ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಆಫ್ರಿಕಾದಿಂದ (Africa) 5,00,000 ಟನ್ ಗಳಷ್ಟು ತೊಗರಿ ಬೇಳೆ ರವಾನೆಯ ನಿರೀಕ್ಷೆಯಲ್ಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ತಲುಪುವ ನಿರೀಕ್ಷೆಯಿದೆ' ಎಂದು ಹರ್ಷಾ ರೈ ಹೇಳಿದ್ದಾರೆ. ಇನ್ನು ಭಾರೀ ಮಳೆಯಿಂದ ಉದ್ದಿನ (urad) ಬೆಳೆಗೆ ಕೂಡ ಹೆಚ್ಚಿನ ಹಾನಿಯಾಗುವ ಸಾಧ್ಯತೆಯಿದೆ. ಆದರೂ ಪೂರೈಕೆ ವ್ಯವಸ್ಥೆಯಲ್ಲಿ ಈ ತನಕ ಯಾವುದೇ ಒತ್ತಡ ಕಂಡುಬಂದಿಲ್ಲ. ಆಮದು ಹೆಚ್ಚುವ ನಿರೀಕ್ಷೆ ಇದಕ್ಕೆ ಕಾರಣವಾಗಿದೆ. 'ಮಹಾರಾಷ್ಟ್ರ (Maharastra), ಕರ್ನಾಟಕ (Karnataka) ಹಾಗೂ ಗುಜರಾತ್ ನಲ್ಲಿ (Gujarat) ಉದ್ದಿನ ಬೆಳೆಗೆ ಸ್ವಲ್ಪ ಹಾನಿಯಾಗಿದ್ದರೂ ಕೂಡ ಈ ಬೆಳೆ ಬೆಳೆಯುವ ಎರಡನೇ ಅತೀದೊಡ್ಡ ಉತ್ಪಾದಕ ರಾಜ್ಯಗಳಾದ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಬೆಳೆ ಉತ್ತಮ ಸ್ಥಿತಿಯಲ್ಲೇ ಇದೆ' ಎಂದು 4 ಪಿ ಇಂಟರ್ ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ಬಿ. ಕೃಷ್ಣಮೂರ್ತಿ ತಿಳಿಸಿದ್ದಾರೆ. 'ಮಳೆ ಹಾನಿಯ ಹೊರತಾಗಿ ಕೂಡ ಉದ್ದಿನ ಬೆಲೆಗಳು ಉತ್ತಮ ಸ್ಥಿತಿಯಲ್ಲೇ ಇವೆ. ಮಯನ್ಮಾರ್ ನಿಂದ ಆಮದು ಹೆಚ್ಚುವ ನಿರೀಕ್ಷೆಯಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ
'ಕರೆನ್ಸಿ ವಿವಾದದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಯನ್ಮಾರ್ ನಿಂದ ಭಾರತಕ್ಕೆ ಹೆಚ್ಚಿನ ಉದ್ದು ಬಂದಿಲ್ಲ. ತಿಂಗಳ ಉದ್ದಿನ ಆಮದಿನಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಇಳಿಕೆಯಾಗಿತ್ತು. ಈಗ ಮಯನ್ಮಾರ್ ರಫ್ತುದಾರರಿಗೆ ಕರೆನ್ಸಿ ವಿಚಾರ ಸಕಾರಾತ್ಮಕವಾಗಿ ಪರಿಣಮಿಸಿದ್ದು, ಇದು ನಮಗೆ ಮಯನ್ಮಾರ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ದು ಆಮದು ಮಾಡಿಕೊಳ್ಳಲು ನೆರವಾಗಿದೆ' ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಐಟಿಆರ್ ಪರಿಶೀಲನೆ ನಡೆಸಲು ಮರೆಯಬೇಡಿ; ಅಂತಿಮ ಗಡುವು ಮೀರಿದ್ರೆ ಬೀಳುತ್ತೆ 5000 ರೂ. ದಂಡ
ಇನ್ನು ಒಂದು ವರ್ಷದಿಂದ ಹೆಚ್ಚಿದ್ದ ಮಸೂರ ಬೆಲೆ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಿದೆ. ಆಮದಾಗಿರುವ ಇದರ ಬೆಲೆ ಜೂನ್ 29ರಂದು ಕೆಜಿಗೆ 71.50ರೂ. ಇದ್ರೆ, ಆಗಸ್ಟ್ 8ರಂದು 67ರೂ.ಗೆ ಇಳಿಕೆಯಾಗಿತ್ತು. ಇನ್ನು ಕಡಲೆ ಹಾಗೂ ಹೆಸರು ಬೇಳೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತದಲ್ಲಿ ಗೋಧಿ (Wheat) ಬೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು ಶೇ. 14ರಷ್ಟು ಹೆಚ್ಚಳವಾಗಿದೆ. ಮೈದಾ (Maida),ಬಿಸ್ಕೆಟ್ಸ್ (Biscuits),ಗೋಧಿ ಹಿಟ್ಟು (Wheat flour) ಹಾಗೂ ರವೆಗೆ ( suji) ಭಾರೀ ಬೇಡಿಕೆ ಸೃಷ್ಟಿಯಾಗಿರೋದು ಹಾಗೂ ಮಳೆಯ ಸೀಸನ್ ಕಾರಣದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿರೋದು ಇದಕ್ಕೆ ಕಾರಣ. ಇನ್ನು ಗೋಧಿ ಬೆಲೆಯೇರಿಕೆ ತಡೆಯಲು ಕೇಂದ್ರ ಸರ್ಕಾರ ಆಗಸ್ಟ್ 14ರಿಂದ ಜಾರಿಗೆ ಬರುವಂತೆ ಮೈದಾ, ರವೆ ಹಾಗೂ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹೇರಿದೆ.