Asianet Suvarna News Asianet Suvarna News

Union Budget 2024: ಬಜೆಟ್ ಮಂಡನೆ ದಿನಾಂಕವನ್ನು ಫೆ.28ರಿಂದ ಫೆ.1ಕ್ಕೆ ಬದಲಾಯಿಸಿದ್ದು ಏಕೆ ಗೊತ್ತಾ?

ಕೇಂದ್ರ ಮಧ್ಯಂತರ ಬಜೆಟ್ 2024 ಫೆ.1ರಂದು ಮಂಡನೆಯಾಗಲಿದೆ. ಈ ಹಿಂದೆ ಕೇಂದ್ರ ಬಜೆಟ್ ಅನ್ನು ಫೆ.28ರಂದು ಮಂಡಿಸಲಾಗುತ್ತಿತ್ತು.ಆದರೆ, 2017ನೇ ಸಾಲಿನಿಂದ ಫೆ.1ರಂದು ಮಂಡಿಸಲಾಗುತ್ತಿದೆ. ಈ ಬದಲಾವಣೆಗೆ ಕಾರಣವೇನು? 

Union Budget 2024 Why was Budget presentation date changed to February 1 anu
Author
First Published Jan 27, 2024, 5:10 PM IST

ನವದೆಹಲಿ (ಫೆ.27): ಕೇಂದ್ರ ಮಧ್ಯಂತರ ಬಜೆಟ್ 2024 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಏಪ್ರಿಲ್, ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಈ ಬಜೆಟ್ ನಲ್ಲಿ ಮಹತ್ವದ ಘೋಷಣೆಯೇನೂ ಇರೋದಿಲ್ಲ. ಕೆಲವು ವರ್ಷಗಳ ಹಿಂದೆ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಂಡಿಸಲಾಗುತ್ತಿತ್ತು. ಅದೂ ಕೊನೆಯ ವಾರದಲ್ಲಿ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 28ರಿಂದ ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು. ಆ ನಂತರದಿಂದ 
ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸುವ ಸಂಪ್ರದಾಯ ಆರಂಭವಾಯಿತು. ಹಾಗಾದ್ರೆ ಕೇಂದ್ರ ಬಜೆಟ್ ಮಂಡನೆ ದಿನಾಂಕ ಬದಲಾಗಿದ್ದು ಹೇಗೆ? ಇದಕ್ಕೇನು ಕಾರಣ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

ಎಂದಿನಿಂದ ಈ ಬದಲಾವಣೆ?
ಕೇಂದ್ರ ಬಜೆಟ್ ಮಂಡನೆ ದಿನಾಂಕ ಫೆ.28ರಿಂದ ಫೆಬ್ರವರಿ 1ಕ್ಕೆ ಬದಲಾಗಿದ್ದು 2017 ರಲ್ಲಿ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 2017ರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡುವ ಮೂಲಕ ಈ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅಲ್ಲಿಂದ ಮುಂದೆ ಪ್ರತಿ ವರ್ಷ ಫೆ.1ರಂದೇ ಬಜೆಟ್ ಮಂಡಿಸುವ ಕ್ರಮ ಮುಂದುವರಿಯಿತು. ಅಲ್ಲದೆ, ಇದೇ ಸಮಯದಲ್ಲಿ ರೈಲ್ವೆಗೆ ಪ್ರತ್ಯೇಕ ಬಜೆಟ್ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ಕೂಡ ಕೈಗೊಳ್ಳಲಾಯಿತು. ಅಲ್ಲದೆ, ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ಜೊತೆಗೆ ವಿಲೀನಗೊಳಿಸಲಾಯಿತು. 

Union Budget 2024: ತೆರಿಗೆಯಿಂದ ಹಿಡಿದು ರಿಯಲ್ ಎಸ್ಟೇಟ್ ತನಕ, ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳೇನು?

ಬಜೆಟ್ ಅಂದ್ರೇನು?
ಕೇಂದ್ರ ಬಜೆಟ್ ವಾರ್ಷಿಕ ಹಣಕಾಸು ಹೇಳಿಕೆಯಾಗಿದ್ದು, ಮುಂಬರುವ ಆರ್ಥಿಕ ವರ್ಷದ ಯೋಜಿತ ವೆಚ್ಚಗಳು ಹಾಗೂ ಆದಾಯಗಳನ್ನು ಪ್ರಸ್ತುತಪಡಿಸುವ ಸರ್ಕಾರಿ ದಾಖಲೆಯಾಗಿದೆ. ಈ ದಾಖಲೆಯನ್ನು ಸಂಸತ್ತಿನ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ. ಈ ಸಂಪ್ರದಾಯವನ್ನು ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು 1860ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. 

ಬಜೆಟ್ ದಿನಾಂಕ ಬದಲಾವಣೆಗೆ ಕಾರಣವೇನು?
ಕೇಂದ್ರ ಬಜೆಟ್ ಮಂಡನೆ ದಿನಾಂಕದಲ್ಲಿ ಬದಲಾವಣೆ ಮಾಡಲು ನಿರ್ದಿಷ್ಟ ಕಾರಣಗಳಿವೆ. ಫೆ.1ರಂದು ಬಜೆಟ್ ಮಂಡಿಸುವ ಸಂಪ್ರದಾಯವನ್ನು ಬ್ರಿಟಿಷ್ ಸರ್ಕಾರ ಪ್ರಾರಂಭಿಸಿತ್ತು. ಹೀಗಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ 92 ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಅಭ್ಯಾಸವನ್ನು ಕೊನೆಗೊಳಿಸಲು ತಿಂಗಳ ಕೊನೆಯ ದಿನದ ಬದಲಿಗೆ ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುವುದು ಎಂದು ಜೇಟ್ಲಿ ಅಂದು ಘೋಷಿಸಿದ್ದರು. 

ಇನ್ನು ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡನೆ ಮಾಡೋದ್ರಿಂದ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ನೀತಿಗಳು ಮತ್ತು ಬದಲಾವಣೆಗಳಿಗೆ ಸಿದ್ಧತೆ ನಡೆಸಲು ಸರ್ಕಾರಕ್ಕೆ ಕಡಿಮೆ ಸಮಯಾವಧಿ ಇರುತ್ತದೆ. ಹೀಗಾಗಿ ಫೆಬ್ರವರಿ ಮೊದಲ ದಿನ ಬಜೆಟ್ ಮಂಡನೆ ಮಾಡೋದ್ರಿಂದ ಸರ್ಕಾರಕ್ಕೆ ಹೊಸ ನೀತಿಗಳು ಮತ್ತು ಬದಲಾವಣೆಗಳನ್ನು ಜಾರಿಗೆ ತರಲು ಸಾಕಷ್ಟು ಸಮಯಾವಕಾಶ ಸಿಗಲಿದೆ. ಈ ಕಾರಣದಿಂದ ಕೂಡ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. 

Union Budget 2024:ಈ ಬಾರಿಯ ಬಜೆಟ್ ನಲ್ಲಿಆದಾಯ ತೆರಿಗೆಗೆ ಸಂಬಂಧಿಸಿ ಏನು ನಿರೀಕ್ಷಿಸಬಹುದು?

ಬಜೆಟ್ ಮಂಡನೆ ಸಮಯದಲ್ಲೂ ಈ ಹಿಂದೆ ಬದಲಾವಣೆ
ಇನ್ನು ಈ ಹಿಂದೆ ಅಂದರೆ 1999ರ ತನಕ ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿಎ ಸರ್ಕಾರ ಈ ಸಮಯವನ್ನು ಬೆಳಗ್ಗೆ 11ಗಂಟೆಗೆ ಬದಲಾಯಿಸಿತು. 

ಭಾರತದಲ್ಲಿ ಬ್ರಿಟಿಷ್ ಅಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಬ್ರಿಟನ್ ಸಯಮ ಆಧಾರಿಸಿ ಇಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಬ್ರಿಟನ್ ನಲ್ಲಿ ಬೆಳಗ್ಗೆ 11ಗಂಟೆಯೆಂದರೆ ಭಾರತದಲ್ಲಿ ಸಂಜೆ 5 ಗಂಟೆ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಹಲವು ವರ್ಷಗಳ ಕಾಲ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, 1999-2000ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಅಂದಿನ ಎನ್ ಡಿಎ ಸರ್ಕಾರದ ವಿತ್ತ ಸಚಿವ ಯಶ್ವಂತ್ ಸಿನ್ಹಾ ಬಜೆಟ್ ಮಂಡನೆ ಸಮಯವನ್ನು ಬೆಳಗ್ಗೆ 11ಗಂಟೆಗೆ ನಿಗದಿಪಡಿಸಿದರು. ಅಲ್ಲಿಂದ ಮುಂದೆ ಪ್ರತಿವರ್ಷ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡಿಸುವ ಕ್ರಮವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. 


 

Follow Us:
Download App:
  • android
  • ios