ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?
7 ವರ್ಷಗಳ ಬಳಿಕ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
ನವದೆಹಲಿ (ಜೂ.21): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಕೇಂದ್ರ ಬಜೆಟ್‌ನ ಚರ್ಚೆ ಆರಂಭವಾಗಿದೆ. ಅದಕ್ಕೆ ಕಾರಣ ಆದಾಯ ತೆರಿಗೆ ಮಿತಿ. ಒಂದೆಡೆ ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿ ಏರಿಕೆ ಆಗುತ್ತಿದೆ. ಇನ್ನೊಂದೆಡೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಕಾಲಕಾಲಕ್ಕೆ ಸಂಬಳ ಏರಿಕೆ, ತುಟ್ಟಿಭತ್ಯೆಯನ್ನು ನೀಡುವ ಕೆಲಸ ಮಾಡುತ್ತಿದೆ. ಆದರೆ, ಖಾಸಗಿ ಕಂಪನಿಗಳ ಉದ್ಯೋಗಿಗಳು ಹಾಗೂ ಸಣ್ಣ ಸಣ್ಣ ವೃತ್ತಿಯಲ್ಲಿದ್ದವರಿಗೆ ಕೇಂದ್ರ ಸರ್ಕಾರ ನೇರವಾಗಿ ಮಾಡಬಹುದಾದ ಅತ್ಯಂತ ಸಣ್ಣ ಮಟ್ಟದ ಸಹಾಯವೆಂದರೆ, ಅದು ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಾಡುವುದು. ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹ್ಯಾಟ್ರಿಕ್ ಸಾಧನೆ ಮಾಡಿದ ಬಳಿಕ ಮೋದಿ ಸರ್ಕಾರ ಮೊಟ್ಟ ಮೊದಲ ಬಜೆಟ್‌ಗೆ ಸಿದ್ದತೆ ನಡೆಸ್ತಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್ ನೀಡುವ ಸಾಧ್ಯತೆಗಳು ದಟ್ಟವಾಗಿ ಕಂಡಿವೆ.
ಕೇಂದ್ರದ ಮೋದಿ ಸರ್ಕಾರ 7 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಡಿಮೆ ಆದಾಯ ಇರುವ ಆದಾಯ ತೆರಿಗೆ ಪಾವತಿದಾರರಿಗೆ ಸ್ವಲ್ಪ ತೆರಿಗೆ ಕಡಿತದ ರಿಲೀಫ್ ಕೊಡುವ ಸಾಧ್ಯತೆ ಇದೆ. ಈ ಮಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಗಳು ತಿಳಿಸಿವೆ. ಜನರಲ್ಲಿ ಖರೀದಿ ಸಾಮರ್ಥ್ಯ ವೃದ್ಧಿ ಮಾಡೋ ನಿಟ್ಟಿನಲ್ಲಿ ಆದಾಯ ತೆರಿಗೆಯ ಪ್ರಮಾಣವನ್ನು ಕಡಿತ ಮಾಡುವ ಪ್ರಸ್ತಾಪ ಮಾಡಲಾಗಿದೆ. ಪ್ರಸ್ತುತ ದೇಶದಲ್ಲಿ 5 ಲಕ್ಷದಿಂದ 15 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಆದಾಯ ತೆರಿಗೆದಾರರಿಗೆ ಶೇ. 5 ರಿಂದ ಶೇ. 20ರವರೆಗೆ ಆದಾಯ ತೆರಿಗೆ ವಿಧಿಸಲಾಗುತ್ತಿದೆ. ಈ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೆರಿಗೆ ದರದಲ್ಲಿ ಬದಲಾವಣೆ ಆಗಬೇಕು ಎಂದು ಹೆಚ್ಚಿನವರು ಬಯಸಿದ್ದಾರೆ. ಹೊಸ ತೆರಿಗೆ ಪದ್ದತಿಗೆ ವರ್ಗಾವಣೆ ಆಗಿರುವವರಿಗೆ ದೊಡ್ಡ ಪ್ರಮಾಣದಲ್ಲಿ ಈ ಲಾಭ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಜುಲೈ 2ನೇ ವಾರದ ವೇಳೆ ಈ ಮಾತಿಗೆ ಅಂತಿಮ ರೂಪ ಸಿಗಬಹುದು. ಏಕೆಂದರೆ, ಈ ಪ್ರಸ್ತಾವನೆಗೆ ಸ್ವತಃ ಪ್ರಧಾನಿ ಮೋದಿ ಅವರ ಕಚೇರಿ ಕೂಡ ಅನುಮೋದನೆ ನೀಡಬೇಕಿದೆ. ಈ ನಿರ್ಧಾರದಿಂದ ಸರ್ಕಾರದ ಆದಾಯದಲ್ಲಿ ಸಣ್ಣ ಪ್ರಮಾಣದ ನಷ್ಟವಾಗೋದು ನಿಜವಾದರೂ, ಆದದಾಯ ತೆರಿಗೆ ಮಿತಿ ಏರಿಕೆ ಅನ್ನೋದು ಅತ್ಯಂತ ಜನಪ್ರಿಯ ಘೋಷಣೆ. ಇದು ಮಧ್ಯಮ ವರ್ಗದವರ ಹಿತ ಕಾಪಾಡುವ ಅಂಶವಾಗಿದೆ. ಇದರಿಂದಾಗಿ ಆರ್ಥಿಕ ಕೊರತೆ ಶೇ. 5.1ಕ್ಕೆ ನಿಲ್ಲುವ ಸಾಧ್ಯತೆ ಇದೆ.
ಮಹಾದಾಖಲೆಗೆ ನಿರ್ಮಲಾ ಸಜ್ಜು, ಜುಲೈ 22ಕ್ಕೆ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ!
ಇನ್ನು ಸಣ್ಣ ರೈತರಿಗೆ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರ ವರ್ಷಕ್ಕೆ ನೀಡುತ್ತಿರುವ 6 ಸಾವಿರ ರೂ. ಹಣಕಾಸಿನ ನೆರವನ್ನು 8 ಸಾವಿರ ರೂ.ಗೆ ಏರಿಕೆ ಮಾಡುವ ಪ್ರಸ್ತಾವ ಕೂಡಾ ಇದೆ. ಕನಿಷ್ಟ ಉದ್ಯೋಗ ಖಾತ್ರಿ ಯೋಜನೆಯ ವಾರ್ಷಿಕ ವೇತವನ್ನೂ ಬಜೆಟ್‌ನಲ್ಲಿ ಹೆಚ್ಚಿಸಬಹುದು ಎನ್ನಲಾಗಿದೆ.
ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯರ ಸಲಹೆ ಕೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಮೂಲಗಳ ಪ್ರಕಾರ ಜುಲೈ 22 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಸಿದ್ಧತಾ ಸಭೆ ನಡೆಸಿದ್ದಾರೆ. ಇದರೊಂದಿಗೆ ಹಣಕಾಸು ತಜ್ಞರು, ವಾಣಿಜ್ಯ ಸಂಘಟನೆಗಳು, ಕೈಗಾರಿಕೆಗಳ ಮುಖ್ಯಸ್ಥರ ಜೊತೆಗೆ ಸಭೆ ಕೂಡ ನಡೆದಿದೆ.
ಹಳೆಯ ತೆರಿಗೆ ಪದ್ದತಿ ಅಡಿ ತಮ್ಮ ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ 60 ವರ್ಷ ವಯಸ್ಸಿನ ಒಳಗಿನ ಆದಾಯ ತೆರಿಗೆ ದಾರರಿಗೆ ವಾರ್ಷಿಕ 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 2.5 ಲಕ್ಷದಿಂದ 5 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ, 5 ಲಕ್ಷದಿಂದ 10 ಲಕ್ಷದವರೆಗೆ ಶೇ. 20ರಷ್ಟು ತೆರಿಗೆ ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ. ಹೊಸ ತೆರಿಗೆ ಪದ್ದತಿ ಅಡಿ 3 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 3 ರಿಂದ 6 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ, 6 ರಿಂದ 9 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 10ರಷ್ಟು ತೆರಿಗೆ, 9 ರಿಂದ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 15ರಷ್ಟು ತೆರಿಗೆ, 12 ರಿಂದ 15 ಲಕ್ಷ ರೂ.ವರೆಗಿನ ಅದಾಯಕ್ಕೆ ಶೇ. 20ರಷ್ಟು ತೆರಿಗೆ ಹಾಗೂ 15 ಲಕ್ಷ ರೂ. ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ. 30ರಷ್ಟು ಆದಾಯ ತೆರಿಗೆ ಇದೆ.