ನವದೆಹಲಿ[ಫೆ.20]: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸಲು ತೈಲ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಹೊರೆ ಇಳಿಸಿಕೊಳ್ಳುವ ದಾರಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.

ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳೂ ಎಷ್ಟುಹೆಚ್ಚಿಸಬೇಕು ಎಂಬುದರ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಆ ಏರಿಕೆ 4ರಿಂದ 5 ರು.ನಷ್ಟುಇರಬಹುದು ಎಂದು ಮೂಲಗಳು ತಿಳಿಸಿವೆ. ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ದರದಲ್ಲಿ ಪೂರೈಸುತ್ತಿವೆ. ಆದರೆ ಇದೀಗ ಅಡುಗೆ ಅನಿಲ ಬೆಲೆ ಹೆಚ್ಚಳದಿಂದಾಗಿ ಸಬ್ಸಿಡಿ ಮೊತ್ತವೂ ದುಪ್ಪಟ್ಟಾಗಿದೆ. 2021ರವರೆಗೂ ಬೆಲೆ ಇದೇ ರೀತಿ ಏರಿಕೆಯಾದರೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಡುಗೆ ಅನಿಲ ಸಬ್ಸಿಡಿಗೆಂದು ನಿಗದಿಪಡಿಸಿರುವ 35605 ಕೋಟಿ ರು. ಮೊತ್ತವನ್ನೂ ಇದು ದಾಟಿ ಹೋಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೆ ಸಿಲಿಂಡರ್ ಬೆಲೆ ಭಾರೀ ಏರಿಕೆ: ನೀವಿಗ ತುಂಬ ಬೇಕಿರುವುದು...!

ಈ ಕುರಿತು ಪ್ರತಿಕ್ರಿಯೆ ಬಯಸಿದಾಗ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮಗೆ ಆ ಬಗ್ಗೆ ತಿಳಿದಿಲ್ಲ ಎಂದು ಹೇಳುತ್ತಿವೆ. ಕೆಲವು ವರದಿಗಳ ಪ್ರಕಾರ 2019ರ ಜುಲೈನಿಂದ 2020ರ ಜನವರಿವರೆಗೆ ಅಡುಗೆ ಅನಿಲ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯಲ್ಲಿ 63 ರು. ಹೆಚ್ಚಳವಾಗಿದೆ. ಇದು ತಿಂಗಳಿಗೆ ಸರಾಸರಿ 9 ರು.ನಂತೆ ಏರಿಕೆಯಾಗಿದೆ.

2016-17ರಲ್ಲೂ ಇದೇ ರೀತಿ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯನ್ನು ಆರಂಭದಲ್ಲಿ 2 ರು.ನಂತೆ ಮಾಸಿಕ ಏರಿಸಲಾಗಿತ್ತು. ಬಳಿಕ ಏರಿಕೆಯನ್ನು 4 ರು.ಗೆ ಹೆಚ್ಚಿಸಲಾಗಿತ್ತು. ಉಜ್ವಲಾ ಯೋಜನೆಯಡಿ ಬಡವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ನೀಡುವ ಸರ್ಕಾರ, ಮತ್ತೊಂದೆಡೆ ದರ ಏರಿಕೆ ಮಾಡುವ ಮೂಲಕ ತದ್ವಿರುದ್ಧ ಧೋರಣೆ ಅನುರಿಸುತ್ತಿದೆ ಎಂಬ ಟೀಕೆ ಬಂದ ಹಿನ್ನೆಲೆಯಲ್ಲಿ ಆ ಪರಿಷ್ಕರಣೆಯನ್ನು ನಿಲ್ಲಿಸಲಾಗಿತ್ತು.