ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು[ಫೆ.24]: ಮೈಸೂರು ಹಾಗೂ ಶಿವಮೊಗ್ಗ ನಗರ ವ್ಯಾಪ್ತಿಯ ಎಲ್ಲಾ ರೀತಿಯ ಆಸ್ತಿ ನೋಂದಣಿ ವ್ಯವಹಾರಗಳಿಗೂ ‘ಡಿಜಿಟಲ್‌ ಪ್ರಾಪರ್ಟಿ ಕಾರ್ಡ್‌’ ಕಡ್ಡಾಯಗೊಳಿಸಿದ್ದ ಆದೇಶಕ್ಕೆ ಕಂದಾಯ ಇಲಾಖೆ ತಡೆ ನೀಡಿದೆ.

- ಈ ಮೂಲಕ ರಾಜ್ಯದ ಎಲ್ಲಾ ನಗರಗಳಲ್ಲೂ ಆಸ್ತಿ ನೋಂದಣಿ ವ್ಯವಹಾರಗಳಿಗೆ ‘ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್ಸ್ (ಯುಪಿಓಆರ್‌)’ ಯೋಜನೆಯಡಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಸಲುವಾಗಿ ಪ್ರಾಯೋಗಿಕವಾಗಿ ಕರ್ನಾಟಕ ನೋಂದಣಿ ನಿಯಮ 1965ಕ್ಕೆ ತಿದ್ದುಪಡಿ ಮಾಡಿ ಮೈಸೂರು ನಗರ ಹಾಗೂ ಶಿವಮೊಗ್ಗ ನಗರಗಳಲ್ಲಿ ‘ಯುಪಿಓಆರ್‌’ ಯೋಜನೆ ಜಾರಿಗೊಳಿಸಲಾಗಿತ್ತು. ಯೋಜನೆಯಡಿ ಪ್ರತಿಯೊಂದು ಆಸ್ತಿಯ ದಾಖಲೆಗಳನ್ನೂ ಡಿಜಿಟಲೀಕರಣಗೊಳಿಸಿ ‘ಪ್ರಾಪರ್ಟಿ ಕಾರ್ಡ್‌’ ವಿತರಿಸಲಾಗಿತ್ತು.

ಅಲ್ಲದೆ ಚುನಾವಣೆಯಲ್ಲಿ ಮತ ಚಲಾವಣೆ ಮತ್ತು ಸರಕಾರಿ ಸೌಲಭ್ಯ ಪಡೆಯಲು ಮತದಾರರ ಗುರುತಿನ ಚೀಟಿ ಕಡ್ಡಾಯ ಮಾಡಿದಂತೆ ಆಸ್ತಿ ಹಾಗೂ ಆಸ್ತಿಗೆ ಸಂಬಂಧಿಸಿದ ಯಾವುದೇ ಕರಾರು ನೋಂದಣಿಗೆ 2019ರ ಮೇ 1 ರಿಂದ ಆಸ್ತಿ ಗುರುತು ಪತ್ರ (ಪ್ರಾಪರ್ಟಿ ಕಾರ್ಡ್‌) ಕಡ್ಡಾಯಗೊಳಿಸಲಾಗಿತ್ತು. ಆಸ್ತಿ ಮಾರಾಟದ ಕರಾರುಪತ್ರ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು, ಜಿಪಿಎ ನೋಂದಣಿ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯ ಎಲ್ಲಾ ವ್ಯವಹಾರಗಳಿಗೂ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡಲಾಗಿತ್ತು. ಆಸ್ತಿ ಗುರುತು ಪತ್ರ (ಪ್ರಾಪರ್ಟಿ ಕಾರ್ಡ್‌) ಇಲ್ಲದೆ ಹೋದರೆ ಯಾವುದೇ ಕರಾರು ನೋಂದಣಿ ಕಾರ್ಯ ನಡೆಯುವಂತಿರಲಿಲ್ಲ.

ಆರಂಭದಲ್ಲೇ ವಿಫಲ:

ಪ್ರಾಯೋಗಿಕವಾಗಿ ಶಿವಮೊಗ್ಗ, ಮೈಸೂರಿನಲ್ಲಿ ಪ್ರಾರಂಭಿಸಲಾಗಿತ್ತು. ಯೋಜನೆ ಯಶಸ್ವಿಯಾದ ಬಳಿಕ ಮುಂದಿನ ಹಂತದಲ್ಲಿ ಮಂಗಳೂರು ಹಾಗೂ ಧಾರವಾಡ ನಗರಗಳಿಗೆ ವಿಸ್ತರಿಸಿ ಬಳಿಕ ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿತ್ತು.

ಆದರೆ, ನಿಗದಿತ ಅವಧಿಯಲ್ಲಿ ಪ್ರಾಪರ್ಟಿ ಕಾರ್ಡ್‌ ಮಾಡದಿರುವುದು, ಪ್ರಾಪರ್ಟಿ ಕಾರ್ಡ್‌ ಮಾಡುವಲ್ಲಿ ಉಂಟಾದ ಸಮಸ್ಯೆ, ತಾಂತ್ರಿಕ ಸಮಸ್ಯೆ, ಸರ್ವರ್‌ ಡೌನ್‌ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಯೋಜನೆ ತೀವ್ರ ಟೀಕೆ ಎದುರಿಸಿತು. ಶಿವಮೊಗ್ಗದಲ್ಲಿ ಯುಪಿಓಆರ್‌ನಿಂದ ಶೇ.95ರಷ್ಟುಸರ್ವೆ ಮುಗಿದಿದ್ದು ನಕಾಶೆ ಪೂರ್ಣಗೊಳಿಸಲಾಗಿದೆ. ಶಿವಮೊಗ್ಗ ನಗರದಲ್ಲಿ 82 ಸಾವಿರ ಆಸ್ತಿ ಇದ್ದು, ಅರ್ಧದಷ್ಟುಮಂದಿಗೆ ಇನ್ನೂ ಕಾರ್ಡ್‌ ವಿತರಿಸಿಲ್ಲ ಎನ್ನಲಾಗಿದೆ. ಜತೆಗೆ ಮೈಸೂರಲ್ಲಿ 2.05 ಲಕ್ಷ ಪ್ರಾಪರ್ಟಿಗಳಿದ್ದು ಅದರಲ್ಲಿ 1 ಲಕ್ಷ ಪ್ರಾಪರ್ಟಿ ಕಾರ್ಡ್‌ ಸಿದ್ಧಪಡಿಸಲಾಗಿದೆ. ಆದರೆ, ಯುಪಿಓಆರ್‌ ಕಾರ್ಯಕ್ರಮ ಅನುಷ್ಠಾನದಲ್ಲಿ ಮೈಸೂರು ನಗರವು ಶಿವಮೊಗ್ಗದಷ್ಟೂಸಾಧನೆ ಮಾಡಿಲ್ಲ.

ಯೋಜನೆ ತಡೆ ಹಿಡಿದು ಆದೇಶ:

ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿಗಳು ಇತ್ತೀಚೆಗೆ ಆದೇಶ ಹೊರಡಿಸಿದ್ದು, ಯುಪಿಓಆರ್‌ ಯೋಜನೆಯಡಿ ಆಸ್ತಿಗಳ ನೋಂದಣಿ ಸಮಯದಲ್ಲಿ ಪಿ.ಆರ್‌. ಕಾರ್ಡ್‌ ಕಡ್ಡಾಯಗೊಳಿಸುವ ಬಗ್ಗೆ ಸಾರ್ವಜನಿಕರಿಂದ, ಸ್ಥಳೀಯ ಸಂಸ್ಥೆಗಳಿಂದ ಸಾಕಷ್ಟುಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ಪೂರ್ಣ ಪ್ರಮಾಣವಾಗಿ ಸಮಸ್ಯೆಗಳನ್ನು ಬಗೆಹರಿಸುವ ತನಕ ಶಿವಮೊಗ್ಗ ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪಿ.ಆರ್‌. ಕಾರ್ಡ್‌ ಕಡ್ಡಾಯಗೊಳಿಸಿರುವ ಆದೇಶವನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ ಎಂದು ಆದೇಶಿಸಿದ್ದಾರೆ. ಅಲ್ಲದೆ, ಮೈಸೂರಿನಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲು ಮೌಖಿಕ ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಯೋಜನೆ ಜಾರಿಯಾಗಿದ್ದು ಏಕೆ?

ಆಸ್ತಿ ನೋಂದಣಿಯಲ್ಲಿ ಆಗುತ್ತಿರುವ ವಂಚನೆ ತಡೆಗಟ್ಟಲು ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್‌ (ಯುಪಿಓಆರ್‌) ಯೋಜನೆ ಜಾರಿಗೊಳಿಸಲಾಗಿತ್ತು. ಆಸ್ತಿಗಳ ಮಾಲೀಕತ್ವದ ವಿಷಯದಲ್ಲಿ ಬಹಳಷ್ಟುಗೊಂದಲಗಳಿವೆ. ದಾಖಲೆ ಪತ್ರಗಳಲ್ಲಿರುವುದಕ್ಕೂ ನಿಜವಾದ ಆಸ್ತಿಗೂ ಬಹಳ ವ್ಯತ್ಯಾಸವಿರುತ್ತದೆ. ಸರ್ವೆ ನಂಬರ್‌ಗಳಲ್ಲೂ ತಪ್ಪುಗಳು ನಮೂದಾಗಿವೆ. ಹೀಗಾಗಿ ಎಲ್ಲ ರೀತಿಯ ಸ್ಥಿರಾಸ್ತಿಗಳ ಸರ್ವೆ ನಡೆಸಿ ಆಸ್ತಿಗಳ ದಾಖಲೀಕರಣ ಮತ್ತು ನಕಾಶೆ ಸಿದ್ಧಪಡಿಸಲಾಗುತ್ತದೆ. ಪ್ರತಿ ಆಸ್ತಿಗೂ ಗುರುತಿನ ಸಂಖ್ಯೆ ನಮೂದಿಸಿ ಗುರುತು ಪತ್ರವನ್ನು ಆಸ್ತಿಯ ಮಾಲೀಕರಿಗೆ ವಿತರಿಸಲಾಗುತ್ತದೆ. ಇದರಿಂದ ಯಾರದೋ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಮಾರಾಟ ಮಾಡುವ, ಸಮರ್ಪಕ ಅಳತೆ ಮತ್ತು ತಪ್ಪಾಗಿ ಸರ್ವೆ ನಂಬರ್‌ ದಾಖಲಾಗುವುದನ್ನು ತಪ್ಪಿಸುವುದು ಈ ಆಸ್ತಿ ಗುರುತು ಪತ್ರದ ಉದ್ದೇಶವಾಗಿತ್ತು.