Asianet Suvarna News Asianet Suvarna News

RBI Repo Rate: ರೆಪೋ ದರ ಎಂದರೇನು? ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಸಮಸ್ಯೆ ಖಚಿತ

RBI Repo Rate Hiked: ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಇಂದು ಪತ್ರಿಕಾಗೋಷ್ಠಿ ನಡೆಸಿ ರೆಪೋ ದರ ಮತ್ತೆ ಹೆಚ್ಚಿಸಿರುವ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುತ್ತಿರುವ ಹಣದುಬ್ಬರವನ್ನು ತಡೆಯಲು ರೆಪೋ ದರವನ್ನು ಹೆಚ್ಚು ಮಾಡಲಾಗುತ್ತದೆ. ಕಳೆದ ತಿಂಗಳು ಸಹ ರೆಪೋ ದರ ಏರಿಸಲಾಗಿತ್ತು. 

RBI hikes repo rate by 50 basis points emi to get costlier
Author
Bengaluru, First Published Jun 8, 2022, 10:48 AM IST

ನವದೆಹಲಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಇಂದು ಪತ್ರಿಕಾಗೋಷ್ಠಿ ನಡೆಸಿ ರೆಪೋ ದರ ಏರಿಸಿರುವ ಬಗ್ಗೆ ಮಾಹಿತಿ ನೀಡಿದರು. ಕಳೆದ ತಿಂಗಳು 40 ಬೇಸಿಸ್‌ ಪಾಯಿಂಟ್ಸ್‌ ಏರಿಕೆ ಮಾಡಲಾಗಿತ್ತು. ಇಂದು ಮತ್ತೆ 50 ಬೇಸಿಸ್‌ ಪಾಯಿಂಟ್ಸ್‌ ಏರಿಕೆ ಮಾಡಲಾಗಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಿಗೆ ಈ ಏರಿಕೆ ದುಬಾರಿಯಾಗಲಿದೆ. ಗೃಹ ಸಾಲ, ಪರ್ಸನಲ್‌ ಲೋನ್‌ ಸೇರಿದಂತೆ ಎಲ್ಲ ರೀತಿಯ ಸಾಲಗಳ ಇಎಂಐ ಏರಿಕೆಯಾಗಲಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ರೆಪೋ ದರ ಏರಿಕೆ ಮಾಡಿದ ಬಗ್ಗೆ ಘೋಷಣೆ ಮಾಡಿದ್ದು, 50 ಬೇಸಿಸ್‌ ಪಾಯಿಂಟ್ಸ್‌ ಹೆಚ್ಚಳ ಮಾಡಲಾಗಿದೆ. ಇದರಿಂದ ಒಟ್ಟಾರೆ ಬಡ್ಡಿ ದರ 4.90 ಆಗಿದ್ದು ಜನಸಾಮಾನ್ಯರಿಗೆ ದುಬಾರಿಯಾಗಿ ಪರಿಣಮಿಸಲಿದೆ.  

ಇದನ್ನೂ ಓದಿ: Repo Rate Hike:ನಿರೀಕ್ಷೆಯಂತೆ ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ; ಸಾಲಗಾರರಿಗೆ ಗಾಯದ ಮೇಲೆ ಬರೆ

ಏನಿದು ರೆಪೋ ದರ? 
ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ. ಆರ್ ಬಿಐ ನಿರ್ದಿಷ್ಟ ದರದಲ್ಲಿ ಈ ಬ್ಯಾಂಕುಗಳಿಗೆ ಸಾಲ ನೀಡುತ್ತದೆ. ರೆಪೋ ದರ ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. ಉದಾಹರಣೆಗೆ ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ರೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಇದ್ರಿಂದ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಅದೇ ರೆಪೋ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಹೀಗಾಗಿ ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ, ಇದ್ರಿಂದ ಸಹಜವಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಇದ್ರಿಂದ ಆರ್ಥಿಕತೆಗೆ ಹಣದ ಹರಿವು ತಗ್ಗುತ್ತದೆ. ಆ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಸರಳವಾಗಿ ಹೇಳಬೇಕೆಂದ್ರೆ ರೆಪೋ ದರ ಹೆಚ್ಚಳವಾದ್ರೆ ಹಣದುಬ್ಬರ ತಗ್ಗುತ್ತದೆ. ಅದೇ ರೆಪೋ ದರ ಇಳಿಕೆಯಾದ್ರೆ ಹಣದುಬ್ಬರ ಏರಿಕೆಯಾಗುತ್ತದೆ. 

ಇದನ್ನೂ ಓದಿ: EPF Vs NPS: ನಿವೃತ್ತಿ ನಂತರದ ಬದುಕಿಗೆ ಯಾವುದು ಬೆಸ್ಟ್? ಇಪಿಎಫ್ ಅಥವಾ ಎನ್ ಪಿಎಸ್?

ಸಾಲಗಳ ಬಡ್ಡಿದರ ಹೆಚ್ಚಳ
ರೆಪೋ ದರ ಏರಿಕೆಯಿಂದ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿವೆ. ಹೀಗಾಗಿ  ಗೃಹಸಾಲಗಳು , ವಾಹನಸಾಲಗಳು ಸೇರಿದಂತೆ ಎಲ್ಲ ವಿಧದ ಸಾಲಗಳ ಬಡ್ಡಿದರ ಹೆಚ್ಚಳವಾಗಲಿದೆ. ಈಗಾಗಲೇ  ಗೃಹ, ವಾಹನ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳು ಒಮ್ಮೆ ಹೆಚ್ಚಳ ಮಾಡಿ ಆಗಿದೆ. ಈಗ ಇನ್ನೊಮ್ಮೆ ಹೆಚ್ಚಳ ಮಾಡಲಿದ್ದು, ಸಾಲ ಪಡೆದವರ ಮೇಲಿನ ಹೊರೆ ಹೆಚ್ಚಿದೆ.

ಬಡ್ಡಿದರ ಏರಿಕೆಗೆ ಕಾರಣವೇನು? 
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆಯಾಗಿದೆ ಎಂದು ಆರ್ ಬಿಐ ಗರ್ವನರ್ ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಚಿಲ್ಲರೆ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಸಹನಾ ಮಟ್ಟವನ್ನು ಮೀರಿದೆ. ಕಳೆದ ಏಪ್ರಿಲ್‌ನಲ್ಲಿ ಅದು ಶೇ.7.79ಕ್ಕೆ ತಲುಪುವ ಮೂಲಕ 8 ವರ್ಷದ ಗರಿಷ್ಠ ಮಟ್ಟಮುಟ್ಟಿತ್ತು. ಕೇಂದ್ರ ಸರ್ಕಾರವು ಆರ್‌ಬಿಐಗೆ ಹಣದುಬ್ಬರ ಪ್ರಮಾಣವನ್ನು ಶೇ.4ರಲ್ಲಿ ಕಾಪಾಡುವಂತೆ ಸೂಚಿಸಿದೆ. ಆದರೂ ಶೇ.2ರಷ್ಟುಏರುಪೇರಿಗೆ ಅವಕಾಶ ಕಲ್ಪಿಸಿದೆ. ಆದರೆ ಇದೀಗ ಆ ಮಿತಿಯೂ ಮೀರಿರುವ ಹಿನ್ನೆಲೆಯಲ್ಲಿ ಆರ್‌ಬಿಐ  ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

Latest Videos
Follow Us:
Download App:
  • android
  • ios