ಬೆಂಗಳೂರು[ಫೆ.17]: ಈಗಾಗಲೇ ಸೇಲ್‌ ಅಗ್ರಿಮೆಂಟ್‌ ಹಾಕಿರುವ ಸ್ವತ್ತನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಸಿಬ್ಬಂದಿ ತಮಗೆ ಇ-ಹರಾಜಿನಲ್ಲಿ ಮಾರಾಟ ಮಾಡಿ .2.25 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಉತ್ತರಹಳ್ಳಿ ಮುಖ್ಯರಸ್ತೆಯ ಚಿಕ್ಕಲಸಂದ್ರ ನಿವಾಸಿ ಬಾಲಕೃಷ್ಣ ಎಂಬುವರು ವಂಚನೆಗೊಳಗಾದವರು. ಬಾಲಕೃಷ್ಣ ಅವರು ಕೊಟ್ಟದೂರಿನ ಮೇರೆಗೆ ಆರೋಪಿಗಳಾದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಮೋದಿ, ರಹೇಜಾ ಟವರ್‌ ಶಾಖೆಯ ವ್ಯವಸ್ಥಾಪಕ ಮುರಳಿ, ಸಿಬ್ಬಂದಿಯಾದ ಮಿರ್ಚಿ ವಿಕ್ಟರ್‌, ಮನೋಹರ್‌ ಹಾಗೂ ರವಿ ಕುಮಾರ್‌ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹನುಮಂತನಗರ ಪೊಲೀಸರು ಹೇಳಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನವರು ಎಂ.ಜಿ.ರಸ್ತೆಯಲ್ಲಿರುವ ರಹೇಜಾ ಟವರ್‌ ಕಟ್ಟಡದ 26 ಮತ್ತು 27 ಸಂಖ್ಯೆಯಲ್ಲಿರುವ ಸ್ವತ್ತನ್ನು ಸಾರ್ವಜನಿಕ ಬಹಿರಂಗ ಹರಾಜು ಕರೆದಿದ್ದರು. ಈ ವಿಚಾರ ತಿಳಿದ ಬಾಲಕೃಷ್ಣ ಅವರು ಕಳೆದ ವರ್ಷ ಮೇ 20ರಂದು ಆನ್‌ಲೈನ್‌ ಮೂಲಕ .2.25 ಕೋಟಿಗೆ ಇ-ಹರಾಜು ಕೂಗಿದ್ದರು. ಈ ಪೈಕಿ ಸ್ವತಿಗೆ ಗೊತ್ತುಪಡಿಸಿದ ಹಣದ ಪೈಕಿ .50 ಲಕ್ಷ ಹಣವನ್ನು ಆರ್‌ಟಿಜಿಎಸ್‌ ಮೂಲಕ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಜಮೆ ಮಾಡಿದ್ದರು. ಉಳಿದ .1.50 ಕೋಟಿ ಹಣವನ್ನು ಫೆ.3ರಂದು ಜಮೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು ಹಾಗೂ ಇತರೆ ಆರೋಪಿಗಳು ದೂರುದಾರರಿಗೆ ಸೇಲ್‌ ಸರ್ಟಿಫಿಕೇಟ್‌ ನೀಡಿದ್ದರು. ಬಳಿಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸ್ವತ್ತನ್ನು ನೋಂದಾಯಿಸಿಕೊಳ್ಳುವ ಸಲುವಾಗಿ ವಿಚಾರಣೆ ಮಾಡಲು ಬಾಲಕೃಷ್ಣ ಅವರು ತೆರಳಿದ್ದರು.

ಈ ವೇಳೆ ಬಸವನಗುಡಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಈಗಾಗಲೇ ಬ್ಯಾಂಕ್‌ಗೆ ಸಂಬಂಧಪಟ್ಟಮನೋಹರ್‌ ಎಂಬ ವ್ಯಕ್ತಿಯು ರವಿಕುಮಾರ್‌ ಎಂಬ ವ್ಯಕ್ತಿಗೆ ಸೇಲ್‌ ಅಗ್ರಿಮೆಂಟ್‌ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಬ್ಯಾಂಕ್‌ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ನನಗೆ ವಂಚನೆ ಮಾಡುವ ಉದ್ದೇಶದಿಂದ ಸರ್ಟಿಫಿಕೇಟ್‌ ನೀಡಿ ಎರಡು ಕೋಟಿ ಹಣ ಲಪಾಟಾಯಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಲಕೃಷ್ಣ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಹನುಮಂತರ ನಗರ ಪೊಲೀಸರು ವಿವರಿಸಿದರು.