ದುಡ್ಡು ಕೊಟ್ರೂ ಸೀಟ್ ಇಲ್ಲ,ಇದು ರೈಲಿನ ಎಸಿ ಕೋಚ್ ಸ್ಥಿತಿ; ಫೋಟೋ ಹಂಚಿಕೊಂಡು ಅಸಮಾಧಾನ ಹೊರಹಾಕಿದ ಮಹಿಳೆ
ರೈಲಿನ ಪ್ರಯಾಣ ಸುಖಕರವಾಗಿರಲಿ ಎಂದು ಎಸಿ ಕೋಚ್ ಬುಕ್ ಮಾಡಿದ ಮಹಿಳೆಯೊಬ್ಬರು ಸಾಮಾನ್ಯ ಬೋಗಿಯಂತೆ ಅಲ್ಲಿ ಕೂಡ ಜನರು ತುಂಬಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಜೊತೆಗೆ ರೈಲ್ವೆ ಪ್ರಯಾಣದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ ಕಾಮೆಂಟ್ಸ್ ಬಂದಿವೆ.
ನವದೆಹಲಿ (ಮಾ.21): ಮಹಿಳೆಯೊಬ್ಬರು 'ಎಕ್ಸ್' ನಲ್ಲಿ ಹಂಚಿಕೊಂಡ ಜನರಿಂದ ಕಿಕ್ಕಿರಿದ ಚೇತಕ್ ಎಕ್ಸ್ ಪ್ರೆಸ್ ರೈಲಿನ ಥರ್ಡ್ ಟೈರ್ ಎಸಿ ಕೋಚ್ ಒಳಗಿನ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಎಸಿ ಕೋಚ್ ಫೋಟೋ ಜೊತೆಗೆ ಈ ರೈಲಿನಲ್ಲಿ ದೆಹಲಿಯಿಂದ ಚಿತ್ತೂರ್ ಗೆ ಪ್ರಯಾಣಿಸುವಾಗ ಟಾಯ್ಲೆಟ್ ಗೆ ತೆರಳೋದು ಎಷ್ಟು ಕಷ್ಟವಾಗಿತ್ತು ಎಂಬ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ರೈಲ್ವೇಸ್ ಒಂದು ಜೋಕ್ ಆಗಿದೆ. ಜನರಲ್ ಕ್ಲಾಸ್ ಮಾದರಿಯಲ್ಲೇ ಈ ಕೋಚ್ ನಲ್ಲಿ ಕೂಡ ಕಷ್ಟಪಡಬೇಕೆಂದ್ರೆ ಮತ್ಯಾಕೆ ನಾವು ಎಸಿಗೆ ಪಾವತಿ ಮಾಡ್ಬೇಕು?' ಎಂದು ಪ್ರಶ್ನಿಸಿದ್ದಾರೆ. ದೆಹಲಿಯಿಂದ ಚಿತ್ತೂರ್ ಗೆ ಆರಾಮದಾಯಕವಾಗಿ ಪ್ರಯಾಣ ಮಾಡಲು ಮಹಿಳೆಯರ ಗುಂಪೊಂದು ಚೇತಕ್ ಎಕ್ಸ್ ಪ್ರೆಸ್ ನಲ್ಲಿ ಥರ್ಡ್ ಎಸಿ ಕೋಚ್ ಸೀಟುಗಳನ್ನು ಬುಕ್ ಮಾಡಿತ್ತು. ಆದರೆ, ಪ್ರಯಾಣಕ್ಕೂ ಕೆಲವು ಗಂಟೆಗಳ ಮುನ್ನ ಕೋಚ್ ಟಿಕೆಟ್ ರಹಿತ ಪ್ರಯಾಣಿಕರಿಂದ ತುಂಬಿರೋದನ್ನು ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಈ ಸಂದರ್ಭದಲ್ಲಿ ಕೋಚ್ ಜನರಿಂದ ತುಂಬಿರುವ ಫೋಟೋವನ್ನು ಮಹಿಳೆಯೊಬ್ಬರು ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಭಾರತೀಯ ರೈಲ್ವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈಲಿನ ಟಿಕೆಟ್ ಹೊಂದಿದ್ದರೂ ನನಗೆ ಪ್ರಯಾಣದುದ್ದಕ್ಕೂ ಆರಾಮದಾಯಕವಾಗಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ನಿಲಿಶಾ ಮಂತ್ರಿ ಎಂಬ 'ಎಕ್ಸ್' ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, 'ಚೇತಕ್ ಎಕ್ಸ್ ಪ್ರೆಸ್ 20473 ರೈಲಿನಲ್ಲಿನ ಥರ್ಡ್ ಟೈರ್ ಎಸಿಯ ಪರಿಸ್ಥಿತಿ ಇದು' ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಚಿವಾಲಯ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಅಧಿಕೃತ ಟಿಟ್ಟರ್ ಹ್ಯಾಂಡಲ್ ಗೆ ಇದನ್ನು ಟ್ಯಾಗ್ ಮಾಡಿರುವ ಆಕೆ, 'ರೈಲ್ವೇಸ್ ಜೋಕ್ ಆಗಿದೆ. ಜನರಲ್ ಕ್ಲಾಸ್ ಮಾದರಿಯಲ್ಲಿ ಕಷ್ಟಪಡೋದಾದ್ರೆ ನಾವು ಏಕೆ ಎಸಿ ಕೋಚ್ ಗೆ ಪಾವತಿ ಮಾಡ್ಬೇಕು?' ಎಂದು ಪ್ರಶ್ನಿಸಿದ್ದಾರೆ.
ಆ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಟ್ಯಾಗ್ ಮಾಡಿದ್ದು, 'ಹಣ ಕೊಟ್ಟರೂ ಸರಿಯಾಗಿ ಕುಳಿತುಕೊಳ್ಳಲು ಜಾಗವಿಲ್ಲ' ಎಂದು ಬರೆದಿದ್ದಾರೆ. ರೈಲು ಪ್ರಯಾಣದ ಸಂದರ್ಭದಲ್ಲಿ ಟಾಯ್ಲಟೆ ಗೆ ಹೋಗೋದು ಎಷ್ಟು ಕಷ್ಟವಾಗಿತ್ತು ಎಂಬುದನ್ನು ಕೂಡ ಆಕೆ ವಿವರಿಸಿದ್ದಾರೆ. ಅಲ್ಲಿ ಮಕ್ಕಳೊಂದಿಗೆ ಅನೇಕ ಮಹಿಳೆಯರಿದ್ದರು. ಅವರಿಗೆ ಕುಳಿತುಕೊಳ್ಳಲು ಸೀಟ್ ಇರಲಿಲ್ಲ. ರೈಲಿಗೆ ಏಕಾಏಕಿ ಹತ್ತಿಕೊಂಡವರೆಲ್ಲ ಸುತ್ತಮುತ್ತಲಿನ ಜನರೊಂದಿಗೆ ದಬ್ಬಾಳಿಕೆಯಿಂದ ನಡೆದುಕೊಳ್ಳುತ್ತಿದ್ದರು' ಎಂದು ಆಕೆ ವಿವರಿಸಿದ್ದಾರೆ.
ಮಂತ್ರಿ ಅವರ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈರಲ್ ಆಗಿತ್ತು. 1.8 ಮಿಲಿಯನ್ ಗೂ ಅಧಿಕ ಜನರು ಈ ವಿಡಿಯೋ ನೋಡಿದ್ದಾರೆ. ಇನ್ನು ಅನೇಕ ಜನರು ಈ ಫೋಟೋವನ್ನು ರೀಟ್ವೀಟ್ ಮಾಡಿದ್ದು, ಕಾಮೆಂಟ್ಸ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು 'ಅಶ್ವಿನಿ ವೈಷ್ಣವ್ ಸರ್, ಯಾವಾಗ ನಾವು ಉತ್ತಮ ರೈಲ್ವೆ ಪ್ರಯಾಣದ ಅನುಭವ ಪಡೆಯಬಹುದು? ನೀವು ಹಾಗೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದೀರಿ. ಆದರೆ, ಈ ಸಮಸ್ಯೆಯನ್ನು ಪರಿಹರಿಸಬೇಕಿದೆ' ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ.
ಸೇವಾ ಶುಲ್ಕ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಬರೆ, ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಆದಾಯ; ಯಾವ ಸೇವೆಗೆ ಎಷ್ಟು ಶುಲ್ಕ?
ಇನ್ನೊಬ್ಬರು 'ನನ್ನ ಒಬ್ಬರು ಸ್ನೇಹಿತರು ಎರಡು ಅಥವಾ ಮೂರು ದಿನಗಳ ಹಿಂದೆ ಪರೀಕ್ಷೆಗಾಗಿ ಬಿಹಾರಕ್ಕೆ ತೆರಳಿದ್ದರು. ಜನರು ಒಂದೇ ಗೇಟ್ ನಿಂದ ಎಸಿ ಟೈರ್ ಗೆ ಪ್ರವೇಶಿಸುತ್ತಿದ್ದ ಕಾರಣ ಆತನಿಗೆ ರೈಲಿನ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಟೈರ್- ಒನ್ ಟಿಕೆಟ್ ಖರೀದಿಸಿದ್ದರೂ ಆತ ಮರುದಿನ ಬರಬೇಕಾಯಿತು!' ಎಂದು ಪ್ರತಿಕ್ರಿಯಿಸಿದ್ದಾರೆ.
'ಅಲ್ಲಿ ಪ್ರಗತಿ ಸಾಧಿಸಲು ಸಾಕಷ್ಟಿದೆ. ಆದರೆ, ಅದಕ್ಕೆ ಸಮಯ ಹಿಡಿಯುತ್ತದೆ. 2008ರಲ್ಲಿ ಹೋಳಿ ಅಥವಾ ದೀಪಾವಳಿಗೆ ನಾನು ಅಲಹಬಾದ್ ನಿಂದ ಪಾಟ್ನಾಕ್ಕೆ ರೈಲಿನಲ್ಲಿ ಹೋಗುತ್ತಿದ್ದೆ. ಆ ಸಮಯದಲ್ಲಿ ನನಗೆ ನನ್ನ ರಿಸರ್ವ್ ಬರ್ಥ್ ತಲುಪಲು ಸಾಧ್ಯವಾಗಿರಲಿಲ್ಲ. ಇದು ಆ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿ. ಇನ್ನೂ ಉತ್ತಮಗೊಳ್ಳಲು ರೈಲ್ವೆಯನ್ನು ಖಾಸಗೀಕರಣಗೊಳಿಸೋದು ಉತ್ತಮ' ಎಂದು ಇನ್ನೊಬ್ಬರು ಶೇರ್ ಮಾಡಿದ್ದಾರೆ.