ತೂತ್ತುಕುಡಿ[ಜ.23]: ಬ್ಯಾಂಕ್‌ಗಳಲ್ಲಿ ಆಗ್ಗಿಂದಾಗ್ಗೆ ನಡೆಸುವ ಕೆವೈಸಿ (ನೋ ಯುವರ್‌ ಕಸ್ಟಮರ್‌) ದಾಖಲೆಗಳ ಪರಿಷ್ಕರಣೆ ಸಂಬಂಧ ಬ್ಯಾಂಕೊಂದು ನೀಡಿದ ಜಾಹೀರಾತು, ಗ್ರಾಹಕರನ್ನು ಕಂಗಾಲು ಮಾಡಿ, ಬ್ಯಾಂಕಿಗೆ ದೌಡಾಯಿಸುವಂತೆ ಮಾಡಿದ ಘಟನೆ ತಮಿಳುನಾಡಿನ ತೂತ್ತುಕುಡಿ ಸಮೀಪದ ಕಾಯಲ್‌ಪಟ್ಟಿಣಂ ಎಂಬಲ್ಲಿ ನಡೆದಿದೆ.

ಇಲ್ಲಿನ ಭಾರತೀಯ ಸೆಂಟ್ರಲ್‌ ಬ್ಯಾಂಕ್‌, ಇತ್ತೀಚೆಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಈ ಕೆಳಕಂಡ ದಾಖಲೆಗಳ ಪೈಕಿ ಯಾವುದಾದರೊಂದನ್ನು ನೀಡಿ ನಿಮ್ಮ ಕೆವೈಸಿ ಪರಿಷ್ಕರಿಸಿ ಎಂದು ಸೂಚಿಸಿತ್ತು. ಅದರೊಳಗೆ ಆಧಾರ್‌, ಪಡಿತರ ಚೀಟಿ, ಮತಚೀಟಿ, ವಾಹನ ಚಾಲನೆ ಪರವಾನಗಿ, ಪಾನ್‌, ಪಾಸ್‌ಪೋರ್ಟ್‌ ಮತ್ತು ಎನ್‌ಪಿಆರ್‌ ಪೈಕಿ ಯಾವುದಾದರೂ ಒಂದನ್ನು ನೀಡಿ ಎಂದು ಸೂಚಿಸಲಾಗಿತ್ತು.

ಆದರೆ ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‌ಪಿಆರ್‌) ಕೂಡಾ ದಾಖಲೆ ಪಟ್ಟಿಯಲ್ಲಿ ಇದ್ದಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಕೆಳಕಂಡ ಯಾವುದಾದರೂ ಒಂದು ದಾಖಲೆಗಳ ಪೈಕಿ ಒಂದು ಎನ್ನುವುದರ ಬದಲು ಯಾರೋ, ಈ ಎಲ್ಲಾ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ 2020ರ ಜ.31ರಿಂದ ಬ್ಯಾಂಕ್‌ ಖಾತೆ ನಿಷ್ಕ್ರಿಯಗೊಳಿಸಲಾಗುವುದು ಎಂದು ವದಂತಿ ಹಬ್ಬಿಸಿದ್ದಾರೆ.

ಮುಸ್ಲಿಮರೇ ಹೆಚ್ಚಾಗಿರುವ ಪಟ್ಟಣದಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜನ ಭಾರೀ ಸಂಖ್ಯೆಯಲ್ಲಿ ಬ್ಯಾಂಕ್‌ಗೆ ಲಗ್ಗೆ ಇಟ್ಟು ಖಾತೆಯಲ್ಲಿದ್ದ ಹಣವನ್ನೆಲ್ಲಾ ಹಿಂಪಡೆದಿದ್ದಾರೆ. ಇನ್ನೊಂದಿಷ್ಟುಜನ ಆನ್‌ಲೈನ್‌ ಮೂಲಕವೇ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಗ್ರಾಹಕರಿಗೆ ಏನೆಲ್ಲಾ ಸ್ಪಷ್ಟನೆ ನೀಡಿದರೂ, ಜನರ ಆತಂಕ ಕಡಿಮೆಯಾಗದೆ ಈಗಲೂ ನಿತ್ಯವೂ ಬ್ಯಾಂಕ್‌ಗೆ ಆಗಮಿಸಿ ಹಣ ಹಿಂದಕ್ಕೆ ಪಡೆಯುತ್ತಿದ್ದಾರಂತೆ.

ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ