ಪೆಟ್ರೋಲ್, ಡೀಸೆಲ್, ಗ್ಯಾಸ್ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ!
ಪೆಟ್ರೋಲ್, ಡೀಸೆಲ್, ಗ್ಯಾಸ್ ಜಿಎಸ್‌ಟಿ ವ್ಯಾಪ್ತಿಗಿಲ್ಲ: ನಿರ್ಮಲಾ| ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ| ರಾಜ್ಯಗಳೂ ಇರುವ ಜಿಎಸ್‌ಟಿ ಮಂಡಳಿ ಹೇಳಬೇಕು| ಇನ್ನೂ ಆ ಮಂಡಳಿಯಿಂದ ಶಿಫಾರಸು ಬಂದಿಲ್ಲ: ಸಚಿವೆ
ನವದೆಹಲಿ(ಮಾ.16): ದಿನೇದಿನೇ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕೆಂಬ ಕೂಗು ಕೇಳಿಬರುತ್ತಿರುವಾಗಲೇ, ‘ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್, ವೈಮಾನಿಕ ಇಂಧನ, ನೈಸರ್ಗಿಕ ಅನಿಲಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪ ಸದ್ಯದ ಮಟ್ಟಿಗೆ ಇಲ್ಲ’ ಎಂದು ಕೇಂದ್ರ ಸರ್ಕಾರ ಅತ್ಯಂತ ಸ್ಪಷ್ಟಮಾತುಗಳಲ್ಲಿ ಹೇಳಿದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಎಂದಿನಿಂದ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಜಿಎಸ್‌ಟಿ ಮಂಡಳಿ ಶಿಫಾರಸು ಮಾಡಬೇಕು ಎಂದು ಕಾನೂನು ಹೇಳುತ್ತದೆ. ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯಗಳೂ ಇವೆ. ಆದರೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ಪರಿಧಿಗೆ ತರಬೇಕು ಎಂಬ ಕುರಿತು ಜಿಎಸ್‌ಟಿ ಮಂಡಳಿ ಈವರೆಗೂ ಶಿಫಾರಸು ಮಾಡಿಲ್ಲ. ಆದಾಯದ ಮೇಲಿನ ಪರಿಣಾಮ ಸೇರಿದಂತೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ಸಂದರ್ಭದಲ್ಲಿ ಜಿಎಸ್‌ಟಿ ಮಂಡಳಿ ಈ ಐದು ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಸ್ತಾಪವನ್ನು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಒಂದು ಡಜನ್‌ಗಿಂತ ಅಧಿಕ ಕೇಂದ್ರ ಹಾಗೂ ರಾಜ್ಯಗಳ ತೆರಿಗೆಯನ್ನು ವಿಲೀನಗೊಳಿಸಿ 2017ರ ಜು.1ರಿಂದ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಆದರೆ ಅದರ ವ್ಯಾಪ್ತಿಯಿಂದ ತೈಲೋತ್ಪನ್ನಗಳನ್ನು ಹೊರಗಿಡಲಾಗಿದೆ. ಈ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯಗಳು ಆದಾಯವನ್ನು ಅವಲಂಬಿಸಿವೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಜಿಎಸ್‌ಟಿ ವ್ಯಾಪ್ತಿಗೆ ಇವನ್ನು ತಂದಿಲ್ಲ.
ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಸರ್ಕಾರಗಳೂ ತೆರಿಗೆ ದರಗಳನ್ನು ಕಡಿತಗೊಳಿಸಿಲ್ಲ. ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಹೋಗಿದೆ. ಹೀಗಾಗಿ ಜಿಎಸ್‌ಟಿ ಪರಿಧಿಗೆ ತೈಲೋತ್ಪನ್ನಗಳನ್ನು ತರಬೇಕು ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಜಿಎಸ್‌ಟಿ ಪರಿಧಿಗೆ ತಂದರೆ, ಕಚ್ಚಾ ವಸ್ತುವಿಗೆ ತೈಲ ಕಂಪನಿಗಳು ಪಾವತಿಸುತ್ತಿರುವ ತೆರಿಗೆ ಉಳಿತಾಯವಾಗಿ, ಅದು ಗ್ರಾಹಕರಿಗೆ ವರ್ಗಾವಣೆಯಾಗಲಿದೆ. ದೇಶಾದ್ಯಂತ ಒಂದೇ ರೀತಿಯ ತೆರಿಗೆ ದರ ಜಾರಿಗೆ ಬರಲಿದೆ.
ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆ 13 ರು. ಹೆಚ್ಚಳ: ಕೇಂದ್ರ
ಕಳೆದೊಂದು ವರ್ಷದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು 12.92 ರು. ಹಾಗೂ ಡೀಸೆಲ್ ಮೇಲಿನ ಸುಂಕವನ್ನು 15.97 ರು.ನಷ್ಟುಏರಿಕೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ವರ್ಷದ ಹಿಂದೆ ಲೀಟರ್ ಪೆಟ್ರೋಲ್ ಮೇಲೆ 19.98 ರು. ಉತ್ಪಾದನಾ ಸುಂಕ ವಿಧಿಸಲಾಗುತ್ತಿತ್ತು. ಅದು ಈಗ 32.9 ರು.ಗೆ ಹೆಚ್ಚಳವಾಗಿದೆ. ಡೀಸೆಲ್ ಮೇಲಿನ ಉತ್ಪಾದನಾ ಸುಂಕವನ್ನು 15.83 ರು.ನಿಂದ 31.8 ರು.ಗೆ ಹೆಚ್ಚಳ ಮಾಡಲಾಗಿದೆ. ಸದ್ಯದ ಹಣಕಾಸು ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಮೂಲಸೌಕರ್ಯ ಹಾಗೂ ಇನ್ನಿತರೆ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಉತ್ಪಾದನಾ ತೆರಿಗೆಯನ್ನು ಪರಿಷ್ಕರಿಸಲಾಗಿದೆ ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.