Asianet Suvarna News Asianet Suvarna News

ಯುಪಿಐ ಪಾವತಿ ತಪ್ಪಾಗಿ ಬೇರೆ ಖಾತೆಗೆ ಹೋದ್ರೆ ಟೆನ್ಷನ್ ಬಿಡಿ, NPCI ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ

ಯುಪಿಐ ಪಾವತಿ ಸಮಯದಲ್ಲಿ ಕೆಲವೊಮ್ಮೆ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಹೀಗೆ ಆದಾಗ ಏನು ಮಾಡೋದು ಎಂದು ತಲೆಬಿಸಿ ಮಾಡಿಕೊಳ್ಳಬೇಡಿ. ಎನ್ ಪಿಸಿಐ ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ. 
 

Money transfer in wrong account while doing UPI what you can do anu
Author
First Published Nov 23, 2023, 2:21 PM IST

Business Desk:ಇತ್ತೀಚಿನ ದಿನಗಳಲ್ಲಿ ಯುಪಿಐ ಸಾಕಷ್ಟು ಜನಪ್ರಿಯತೆ ಗಳಿಸಿದೆ. . ನಗದು ಹಣವನ್ನು ಜೇಬಿನಲ್ಲಿಟ್ಟುಕೊಂಡು ತಿರುಗಬೇಕಾದ ಅನಿವಾರ್ಯತೆಯನ್ನು ಯುಪಿಐ ತಪ್ಪಿಸಿರುವ ಕಾರಣ ಇದರ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೊರಗಡೆ ಹೋಗುವಾಗ ಕೈಯಲ್ಲಿ ಮೊಬೈಲ್ ಇದ್ರೆ ಸಾಕು, ಏನು ಬೇಕಾದರೂ ಖರೀದಿಸಬಹುದು. ಮೊಬೈಲ್ ನಲ್ಲಿ ಯುಪಿಐ ಅಪ್ಲಿಕೇಷನ್ ಇದ್ರೆ ಸಾಕು ಹಣ ವರ್ಗಾವಣೆ ಕೆಲಸ ಬಲು ಸರಳ. ಸಣ್ಣ ಮೊತ್ತವೇ ಆಗಿರಬಹುದು ಇಲ್ಲವೇ ದೊಡ್ಡದು, ದೇಶಾದ್ಯಂತ ಯಾವ ಮೂಲೆಯಿಂದ ಬೇಕಾದರೂ ಕೆಲವೇ ಸೆಕೆಂಡ್ ಗಳಲ್ಲಿ ಯುಪಿಐ ಪಾವತಿ ಮಾಡಬಹುದು. ಆದರೆ, ಈ ಯುಪಿಐ ಪಾವತಿಯಿಂದ ಅನೇಕ ಬಾರಿ ಸಂಕಷ್ಟ ಎದುರಾಗೋದು ಇದೆ.  ಎಷ್ಟೋ ಬಾರಿ ಗಡಿಬಿಡಿಯಿಂದ ಅಥವಾ ಇನ್ಯಾವುದೋ ಒತ್ತಡದಿಂದ ಮಾಡಿದ ಚಿಕ್ಕ ತಪ್ಪಿನಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ತಿಳಿಯದೆ ತಪ್ಪಾದ ಯುಪಿಐ ಖಾತೆಗೆ ಹಣ ವರ್ಗಾವಣೆ ಮಾಡುತ್ತವೆ. ಆದರೆ, ನಂತರ ಅದನ್ನು ಮರಳಿ ಪಡೆಯಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆದರೆ, ಈ ರೀತಿ ಸಂಕಷ್ಟ ಎದುರಾದ ಸಂದರ್ಭದಲ್ಲಿ ಒಂದು ಸರಳ ಉಪಾಯವಿದೆ? ಹಾಗಾದ್ರೆ ಏನದು? ಇಲ್ಲಿದೆ ಮಾಹಿತಿ.

NPCI ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ
ನೀವು ತಪ್ಪು ಖಾತೆಗೆ ಯುಪಿಐ ಮುಖಾಂತರ ಹಣ ವರ್ಗಾವಣೆ ಮಾಡಿದ್ದರೆ ಎನ್ ಪಿಸಿಐ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬಹುದು. ಅದು ಹೇಗೆ?
*ಮೊದಲಿಗೆ npci.org.in ಭೇಟಿ ನೀಡಿ.
*ಆ ಬಳಿಕ ‘What do we do – UPI’ಆಯ್ಕೆ ಮಾಡಿ.
*‘Dispute Redressal Mechanism’ಆಯ್ಕೆ ಮಾಡಿ. 
*ನಂತರ ದೂರುಗಳು ಹಾಗೂ ಫೀಡ್ ಬ್ಯಾಕ್ ನೀಡಲು ಅರ್ಜಿ ಆಯ್ಕೆ ಮಾಡಿ.
*ನಂತರ ದೂರು ಅರ್ಜಿಯಲ್ಲಿ ‘Transaction’ಆಯ್ಕೆ ಮಾಡಿ. ಆ ಬಳಿಕ ವರ್ಗಾವಣೆ ವಿಧಾನ, ಇಶ್ಯೂ, ವಹಿವಾಟು ಐಡಿ, ಬ್ಯಾಂಕ್ ಹೆಸರು, ಮೊತ್ತ, ವರ್ಗಾವಣೆ ದಿನಾಂಕ, ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ಆಯ್ಕೆ ಮಾಡಿ.

ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಬಳಕೆದಾರರು ಪ್ರತಿದಿನ ಎಷ್ಟು ಯುಪಿಐ ಪಾವತಿ ಮಾಡ್ಬಹುದು?

*‘Issue’ವಿಭಾಗದಲ್ಲಿ ಅನೇಕ ಆಯ್ಕೆಗಳಿರುತ್ತವೆ. ಆದರೆ, ನೀವು  ‘incorrectly transferred to another account’ಆಯ್ಕೆ ಮಾಡಬೇಕು. 
*ನೀವು ನಿಮ್ಮ ದೂರಿಗೆ ನಿಮ್ಮ ಹೇಳಿಕೆಗಳನ್ನು ದಾಖಲಿಸಬಹುದು. ಅಲ್ಲದೆ, ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಅಪ್ಲೋಡ್ ಮಾಡಬಹುದು. 
*ನಂತರ submit button ಮೇಲೆ ಕ್ಲಿಕ್ ಮಾಡಿ. 
ನಿಮ್ಮ ದೂರನ್ನು ಪರಿಶೀಲಿಸಿ ಅದರಲ್ಲಿ ಸತ್ಯಾಂಶವಿದೆ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕ 24 ಗಂಟೆಗಳೊಳಗೆ ಆ ಹಣವನ್ನು ಮರಳಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. 

ಯುಪಿಐ ಬಳಕೆದಾರರೇ ಎಚ್ಚರ: ನೀವು ಇದನ್ನು ಮಾಡದಿದ್ದರೆ ನಿಮ್ಮ ಯುಪಿಐ ಐಡಿ ಶೀಘ್ರದಲ್ಲೇ ಬಂದ್‌ ಆಗುತ್ತೆ!

ಬೇರೆ ಆಯ್ಕೆಗಳೇನಿವೆ?
ಒಂದು ವೇಳೆ ನೀವು ಹಣವನ್ನು ತಪ್ಪಾದ ಯುಪಿಐ ಖಾತೆಗೆ ಹಣ ವರ್ಗಾಯಿಸಿದ್ದರೆ 18001201740 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ಈ ಸಂದರ್ಭದಲ್ಲಿ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡಿ. ಆ ಬಳಿಕ ನಿಮ್ಮ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಎಲ್ಲ ಮಾಹಿತಿಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ. ಬ್ಯಾಂಕ್ ಸಂಖ್ಯೆ ಅಥವಾ ಮನವಿ ಸಂಖ್ಯೆಯನ್ನು ಬ್ಯಾಂಕ್ ಮ್ಯಾನೇಜರ್ ನಿಮಗೆ ನೀಡುತ್ತಾರೆ. ಇನ್ನು ನೀವು bankingombudsman.rbi.org.in ಮೇಲ್ ಮಾಡುವ ಮೂಲಕ ಕೂಡ ನಿಮ್ಮ ದೂರು ದಾಖಲಿಸಬಹುದು. ಆರ್ ಬಿಐ ಮಾರ್ಗಸೂಚಿಗಳ ಅನ್ವಯ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ದೂರು ದಾಖಲಿಸಿದ ಬಳಿಕ 48 ಗಂಟೆಗಳೊಳಗೆ ಹಣವನ್ನು ರೀಫಂಡ್ ಮಾಡಬೇಕು. 


 

Follow Us:
Download App:
  • android
  • ios