ಅಣಬೆಯಿಂದ ಅರಳಿದ ಬದುಕು: 1 ಪ್ಯಾಕೆಟ್‌ನಿಂದ ಆರಂಭವಾದ ಉದ್ಯಮ, ಈಗ ಪ್ರತಿದಿನ 40 ಸಾವಿರ ರೂ. ಆದಾಯ!
* ಅಣಬೆಯಿಂದ ಬಂಗಾರವಾದ ಬದುಕಲು
* ಒಂದು ಪ್ಯಾಕೇಟ್‌ನಿಂದ ಆರಂಭವಾದ ಉದ್ಯಮದಿಂದೀಗ ಭಾರೀ ಆದಾಯ
* ಇದು ಕೇರಳದ ತಾಯಿ, ಮಗನ ಯಶಸ್ಸಿನ ಕತೆ
-ಜಗದೀಶ್ ಬಳಂಜ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ , ಉಜಿರೆ
ನಾವು ಬದುಕಿನಲ್ಲಿ ಇಡುವ ಸಣ್ಣ ಹೆಜ್ಜೆಗಳೇ ಮಹತ್ತರ ವಾದುದನ್ನು ಸಾಧಿಸುವುದಕ್ಕೆ ದಾರಿಯಾಗುತ್ತದೆ. ಹಾಗೆಯೇ ತಾಯಿ ಮಗ ಸೇರಿ ಒಂದು ಸಣ್ಣ ಪ್ಯಾಕೆಟ್‌ನಿಂದ ಪ್ರಾರಂಭಿಸಿದ ಅಣಬೆ ಕೃಷಿ ಈಗ ದಿನಕ್ಕೆ 40,000 ಸಾವಿರ ಆದಾಯ ನೀಡುವ ಮೂಲಕ ಅವರ ಬದುಕು ಬದಲಿಸಿದೆ.
ಕೇರಳದ ರಾಜ್ಯದ ಎರ್ನಾಕುಲಂ ಮೂಲದವರಾದ ಜಿತು ಥಾಮಸ್ ಮತ್ತು ಅವರ ತಾಯಿ ಲೀನಾ ಥಾಮಸ್ ಅವರು ಆರಂಭಿಸಿದ ಲೀನಾ ಮಶ್ರೂಮ್ ಫಾರ್ಮ್ ಆರಂಭಗೊಂಡ ನಾಲ್ಕು ವರ್ಷಗಳಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಿದೆ.
ಜೀತು ಥಾಮಸ್ ಅವರು ಆರಂಭದಲ್ಲಿ ಅಣಬೆ ಕೃಷಿಯತ್ತ ಮುಖ ಮಾಡಿದ್ದು ತಾಯಿಯೊಂದಿಗೆ ವಿರಾಮದ ಸಮಯವನ್ನು ಕಳೆಯುದಕ್ಕಾಗಿ ಆದರೆ ಇದೆ ಮುಂದೆ ಉದ್ಯಮವಾಗಿ ಕೈ ಹಿಡಿಯಿತು. ಮೊದಲ ಬಾರಿಗೆ ಪ್ಯಾಕೆಟ್‌ನಲ್ಲಿ ಕೆಲವು ಅಣಬೆ ಬೀಜಗಳನ್ನು ಬಿತ್ತಿದಾಗ ಜೀತು ವಯಸ್ಸು ಕೇವಲ 19 .
" ಆರಂಭದ ದಿನಗಳಲ್ಲಿ ನಾನು ಅಣಬೆ ಕೃಷಿಗೆ ಸಂಬಂಧಿಸಿದಂತೆ ಬಹಳಷ್ಟು ಓದುತ್ತಿದ್ದೆ ಆನ್‌ಲೈನ್ ಸಂಶೋಧನೆಯು ನನ್ನ ದಾರಿಯನ್ನು ಸುಲಭಗೊಳಿಸಿತು " ಎಂದು 31 ವರ್ಷದ ರೈತ ಜೀತು ಹೇಳುತ್ತಾರೆ.
ಪ್ರಸ್ತುತ ಅಮ್ಮ ಮತ್ತು ಮಗ 5,000 ಚದರ ಅಡಿ ಜಮೀನು ಮತ್ತು ಪಿರವಂನಲ್ಲಿರುವ ಅವರ ಮನೆಯ ಸಮೀಪವಿರುವ ಲ್ಯಾಬ್ ನಲ್ಲಿ ಅಣಬೆ ಕೃಷಿ ಮಾಡುತ್ತಿದ್ದಾರೆ.ಅಲ್ಲಿ ಪ್ರತಿದಿನ 80-100 ಕೆಜಿ ಅಣಬೆಯನ್ನು ಉತ್ಪಾದಿಸಲಾಗುತ್ತದೆ. ಅವರ ದೈನಂದಿನ ಆದಾಯ 35,000-40,000 ರೂ ಗಳಷ್ಟಿದೆ.
"ವೈಜ್ಞಾನಿಕ ವಿಧಾನಗಳನ್ನು ಬಳಸುವುದರಿಂದ ಅಲ್ಪಾವಧಿಯಲ್ಲಿಯೇ ಯಶಸ್ವಿಯಾಗಿದೆ. ಸರಿಯಾದ ಯೋಜನೆಯಿಂದಾಗಿ ಅಣಬೆ ಮಾರಾಟದಲ್ಲಿ ಯಾವುದೇ ದೊಡ್ಡ ಕುಸಿತವಿಲ್ಲದೆ ಎರಡು ಪ್ರವಾಹಗಳು ಮತ್ತು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯು ಜೀವನ ನಡೆಸಲು ಸಾಧ್ಯವಾಯಿತು" ಎಂದು ಜೀತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
"ಅಣಬೆಗಳು ಬೆಳೆಯಲು ನಿಯಂತ್ರಿತ ಹವಾಮಾನದ ಅಗತ್ಯವಿದೆ, ಅಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಬಾರದು. ಸರಿಯಾದ ಕೂಲಿಂಗ್ ಸಿಸ್ಟಮ್ನ ಸ್ಥಾಪನೆಯು ಅಗತ್ಯವಿದೆ. ಸಾಮಾನ್ಯವಾಗಿ 5,000 ಚೀಲಗಳನ್ನು ಮಾತ್ರ ಇರಿಸುವ ಜಾಗದಲ್ಲಿ ಸುಮಾರು 20,000 ಚೀಲಗಳನ್ನು ಇರಿಸಬಹುದಾದ ರೀತಿಯಲ್ಲಿ ನಾವು ಕೊಠಡಿ ಮತ್ತು ಅದರ ಸೆಟ್ಟಿಂಗ್‌ಗಳನ್ನು ವಿನ್ಯಾಸಗೊಳಿಸಿದ್ದೇವೆ, ”ಎಂದು ಜಿತು ವಿವರಿಸುತ್ತಾರೆ.
ಜಿತು ಭೌತಶಾಸ್ತ್ರದಲ್ಲಿ ಪದವಿ ಮತ್ತು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದವರು ಕೋರ್ಸ್ ಮುಗಿದ ಕೆಲವು ವರ್ಷಗಳ ಕಾಲ ಅವರು ಎನ್.ಜಿ.ಓ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟು ವರ್ಷಗಳಲ್ಲಿ ಅಣಬೆ ಬೇಸಾಯವು ಕೇವಲ ಉಪಕಸುಬಾಗಿತ್ತು . ಅಣಬೆ ಕೃಷಿಯ ಸಾಮರ್ಥ್ಯ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಅದರ ಬೇಡಿಕೆಯನ್ನು ಅರಿತ ನಂತರ ಅವರು ಪೂರ್ಣಾವಧಿಯ ಕೃಷಿಕರಾದರು.
ನಾನು ಯಾವಾಗಲೂ ಕೃಷಿಯಲ್ಲಿ ಮಗನ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದೇನೆ ಮತ್ತು ಈಗ ಕೃಷಿಯನ್ನು ನೋಡಿಕೊಳ್ಳುತ್ತಿದ್ದೇನೆ. ಹೊಸಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಕಠಿಣ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ನನ್ನ ಮಗ ಪರಿಣಿತನಾಗಿದ್ದಾನೆ”ಎಂದು 55 ವರ್ಷದ ಲೀನಾ ಹೇಳುತ್ತಾರೆ.
ಕೃಷಿ ವಿಜ್ಞಾನ ಕೇಂದ್ರ, ಕುಮಾರಕೋಮ್ ನಡೆಸಿದ ಒಂದು ದಿನದ ಕಾರ್ಯಾಗಾರದಲ್ಲಿ ಜಿತು ಭಾಗವಹಿಸಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಔಪಚಾರಿಕ ತರಬೇತಿಯನ್ನು ಇವರೆಗೆ ಪಡೆದಿಲ್ಲ. “ದೇಶದಲ್ಲಿ ಅಣಬೆ ಬೇಸಾಯ ವ್ಯಾಪಕವಾಗಿದ್ದರೂ, ತಂಪಾದ ವಾತಾವರಣವಿರುವ ವಿದೇಶಿ ದೇಶಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಆದ್ದರಿಂದ ನಮ್ಮ ಹವಾಮಾನ ಪರಿಸ್ಥಿತಿಗಳಲ್ಲಿ ಇದನ್ನು ನಿರ್ವಹಿಸುವಾಗ, ಕಸ್ಟಮೈಸೇಶನ್ ತುಂಬಾ ಅವಶ್ಯಕವಾಗಿದೆ" ಎಂಬುದು ಜೀತು ಅವರ ಅಭಿಪ್ರಾಯ.
ಲೀನಾದಲ್ಲಿ 11 ಸಿಬ್ಬಂದಿಗಳಿದ್ದು, ಎಲ್ಲರೂ ನೆರೆಹೊರೆಯ ಮಹಿಳೆಯರಿದ್ದಾರೆ. ಉತ್ಪನ್ನಗಳನ್ನು 200 ಗ್ರಾಂ ಪ್ಯಾಕೆಟ್‌ಗಳಾಗಿ ತಯಾರಿಸಲಾಗುತ್ತದೆ ಮತ್ತು 30 ಕಿಮೀ ವ್ಯಾಪ್ತಿಯಲ್ಲಿರುವ ಸ್ಥಳೀಯ ತರಕಾರಿ ಅಂಗಡಿಗಳು, ಸೂಪರ್ಮಾರ್ಕೆಟ್‌ಗಳು ಮತ್ತು ಬೇಕರಿಗಳಲ್ಲಿ ವಿತರಿಸಲಾಗುತ್ತದೆ. ಒಂದು ಪ್ಯಾಕೆಟ್‌ನ ಬೆಲೆ 80 ರೂ. ಇದನ್ನು ಹೊರಗಡೆ ಗಾಳಿ ಸೋಕುವಂತೆ ಇರಿಸಿದರೆ ಎರಡು ದಿನಗಳಲ್ಲಿ ಬಳಸಬೇಕು ಮತ್ತು ರೆಫ್ರಿಜರೇಟರ್‌ನಲ್ಲಿ ಇರಿಸಿದರೆ ಐದು ದಿನಗಳವರೆಗೆ ಉಳಿಯುತ್ತದೆ. ಕೇರಳದಲ್ಲಿ ಅಣಬೆಗೆ ಸ್ಥಿರವಾದ ಮಾರುಕಟ್ಟೆ ಇರುವುದರಿಂದ ತಮ್ಮ ಉತ್ಪನ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ತಾಯಿ ಮಗ ಹೇಳುತ್ತಾರೆ.
ಹೀಗೆ ಹವ್ಯಾಸವಾಗಿ ಆರಂಭಗೊಂಡ ಕೃಷಿಯೊಂದನ್ನು ಜೀವನದ ದಾರಿಯಾಗಿ ರೂಪಿಸಿಕೊಂಡು ಯಶಸ್ಸಿನ ಮೆಟ್ಟಿಲೇರಿದ ಜೀತು ಮತ್ತು ಲೀನಾ ಅವರ ಕಥೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುವುದೇ ಈ ಲೇಖನದ ಆಶಯ.