Business : ಮದುವೆಗೆ ಹಣ ಖರ್ಚು ಮಾಡೋದ್ರಲ್ಲಿ ಭಾರತೀಯರು ಮುಂದೆ
ಮದುವೆ ಅಂದ್ರೆ ಎರಡು ಜೋಡಿ ಮಾತ್ರವಲ್ಲ ಎರಡು ಕುಟುಂಬ ಒಂದಾಗುತ್ತದೆ. ಮದುವೆ ಸಂಭ್ರಮದಲ್ಲಿ ಇಡೀ ಊರು ಮಿಂದೇಳುತ್ತೆ. ಈ ಮದುವೆಯಿಂದ ಸಂಭ್ರಮ ಮಾತ್ರವಲ್ಲ ಅನೇಕ ಉದ್ಯಮಕ್ಕೆ ಆದಾಯ ಸಿಗುತ್ತೆ. ಮದುವೆ ವಿಷ್ಯದಲ್ಲಿ ಭಾರತೀಯರು ಅಮೆರಿಕಾವನ್ನು ಹಿಂದಿಕ್ಕಿದ್ದಾರೆ.
ಮದುವೆ ಜೀವನದ ದೊಡ್ಡ ಘಟ್ಟ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮದುವೆ ಹಾಗೆ ಆಗ್ಬೇಕು, ಹೀಗೆ ಆಗ್ಬೇಕು ಅಂತಾ ಕನಸು ಕಾಣ್ತಾರೆ. ಭಾರತದಲ್ಲಿ ಮದುವೆ ಅಂದ್ರೆ ಅದು ಹಬ್ಬ. ಮಗು ಹುಟ್ಟುತ್ಲೆ ಮದುವೆಗೆ ಅಂತ ಪಾಲಕರು ಹಣ ಕೂಡಿಡಲು ಶುರು ಮಾಡ್ತಾರೆ. ಪ್ರತಿಯೊಂದು ಕುಟುಂಬವೂ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಅತೀ ಬಡ ಕುಟುಂಬದಲ್ಲೂ ಮದುವೆ ಅಂತಾ ಬಂದ್ರೆ ಸಾಲ ಮಾಡಿಯಾದ್ರೂ ಐವತ್ತು ಸಾವಿರಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಮದುವೆ ಮಾಡ್ತಾರೆ. ಇನ್ನು ಶ್ರೀಮಂತರ ಮದುವೆ ಬಗ್ಗೆ ಕೇಳಲೇಬೇಡಿ. ಕೋಟಿ ಕೋಟಿ ಲೆಕ್ಕದಲ್ಲಿ ಮದುವೆಗೆ ಹಣ ಖರ್ಚಾಗುತ್ತದೆ. ದೇಶದಲ್ಲಿ ನಡೆಯುವ ಈ ಮದುವೆಗಳು ದೇಶದ ಆರ್ಥಿಕತೆಯ ದೃಷ್ಟಿಯಿಂದಲೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ಭಾರತದಲ್ಲಿ ಮದುವೆ ಉದ್ಯಮವು ಸುಮಾರು 130 ಬಿಲಿಯನ್ ಡಾಲರ್ ಅಂದ್ರೆ 10 ಲಕ್ಷ ಕೋಟಿ ತಲುಪಿದೆ.
ಆಹಾರ (Food), ದಿನಸಿ ನಂತ್ರ ಮದುವೆ (Marriage) ಮಾರುಕಟ್ಟೆ ದೇಶದ ಎರಡನೇ ಅತ್ಯಂತ ದೊಡ್ಡ ಮಾರುಕಟ್ಟೆ (Market) ಯಾಗಿದೆ. ಒಂದು ಕುಟುಂಬದಲ್ಲಿ ಮದುವೆ ಆಯ್ತು ಅಂದ್ರೆ ಅನೇಕ ಕ್ಷೇತ್ರದ ಜನರಿಗೆ ಉದ್ಯೋಗ ಸಿಗುತ್ತದೆ. ಅಡುಗೆ, ಮದುವೆ ಹಾಲ್, ಡೆಕೋರೇಷನ್ ಸೇರಿದಂತೆ ಸಣ್ಣಪುಟ್ಟ ಉದ್ಯಮಗಳೂ ಬ್ಯುಸಿ ಆಗುತ್ವೆ. ಭಾರತದ ಮದುವೆ ಉದ್ಯಮದ ಬಗ್ಗೆ ಬಂಡವಾಳ ಮಾರುಕಟ್ಟೆ ಸಂಸ್ಥೆ ಜೆಫರೀಸ್ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಭಾರತದ ಮದುವೆ ಮಾರುಕಟ್ಟೆ, ಅಮೆರಿಕಾ ಮಾರುಕಟ್ಟೆಗಿಂತ ದೊಡ್ಡದು ಎಂದು ವರದಿಯಲ್ಲಿ ಹೇಳಲಾಗಿದೆ. ವರದಿ ಪ್ರಕಾರ, ಭಾರತದ ಮದುವೆ ಮಾರುಕಟ್ಟೆ ಅಮೆರಿಕಾ ಮಾರುಕಟ್ಟೆಗಿಂತ ಎರಡು ಪಟ್ಟು ಹೆಚ್ಚಿದೆ. ಆದ್ರೆ ಚೀನಾ ಮಾರುಕಟ್ಟೆಗಿಂತ ಕಡಿಮೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
12ನೇ ಮಗುವಿಗೆ ತಂದೆಯಾದ ಎಲಾನ್ ಮಸ್ಕ್, ಕಳೆದ 5 ವರ್ಷದಲ್ಲಿ 6 ಬಾರಿ ಅಪ್ಪನ ಪಟ್ಟ!
ಬಂಡವಾಳ ಮಾರುಕಟ್ಟೆ ಸಂಸ್ಥೆ ಜೆಫರೀಸ್ ವರದಿಯಲ್ಲಿ, ಭಾರತದಲ್ಲಿ ಮದುವೆಗೆ ಎಷ್ಟು ಖರ್ಚು ಮಾಡಲಾಗುತ್ತದೆ ಎಂಬುದನ್ನು ಹೇಳಲಾಗಿದೆ. ಆಭರಣ, ಅಡುಗೆ ಸೇರಿದಂತೆ ಎಲ್ಲ ಖರ್ಚನ್ನು ಲೆಕ್ಕ ಹಾಕಿದ್ರೆ ಭಾರತದಲ್ಲಿ ಒಂದು ಮದುವೆಗೆ ಸುಮಾರು 12.5 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಅಚ್ಚರಿಯ ವಿಷ್ಯ ಏನೆಂದ್ರೆ ಭಾರತದ ಪ್ರತಿಯೊಬ್ಬ ವ್ಯಕ್ತಿಯ ಜಿಡಿಪಿಗಿಂತ ಐದು ಪಟ್ಟು ಇದು ಹೆಚ್ಚಿದೆ. ವ್ಯಕ್ತಿಯ ಜಿಡಿಪಿ 2.4 ಲಕ್ಷ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನೊಂದು ರೂಪದಲ್ಲಿ ನೋಡೋದಾದ್ರೆ ಮದುವೆಗೆ ಖರ್ಚು ಮಾಡುವ ಹಣ ಕುಟುಂಬದ ವಾರ್ಷಿಕ ಆದಾಯಕ್ಕಿಂತ ಹೆಚ್ಚಿದೆ. ವ್ಯಕ್ತಿಯ ಕುಟುಂಬದ ಆದಾಯ ನಾಲ್ಕು ಲಕ್ಷವಿದ್ರೆ ಮದುವೆ ಖರ್ಚು ಅದ್ರ ಮೂರು ಪಟ್ಟು ಹೆಚ್ಚಿರುತ್ತದೆ.
ಐಷಾರಾಮಿ ಮದುವೆಯಲ್ಲಿ ಹೋಟೆಲ್, ಊಟೋಪಚಾರ, ಅಲಂಕಾರ ಮತ್ತು ಮನರಂಜನೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತದೆ. ಸುಮಾರು 20 -30 ಲಕ್ಷ ಖರ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದ್ರಲ್ಲಿ ಆಭರಣ ಹಾಗೂ ಪ್ರಯಾಣ, ಬಟ್ಟೆ ಖರ್ಚನ್ನು ಸೇರಿಸಲಾಗಿಲ್ಲ. ವರದಿ ಪ್ರಕಾರ, ಮದುವೆಗೆ ಜನರು ಹೆಚ್ಚು ಖರ್ಚು ಮಾಡೋದು ಆಭರಣಕ್ಕೆ. ಅದ್ರ ನಂತ್ರ ಬರೋದು ಅಡುಗೆ. ಹಾಗಾಗಿಯೇ ಈ ಎರಡೂ ಕ್ಷೇತ್ರಗಳು ತಲಾ ಶೇಕಡಾ 40ರಿಂದ 26ರಷ್ಟು ಆದಾಯವನ್ನು ಪಡೆಯುತ್ತವೆ. ಈವೆಂಟ್, ಫೋಟೋಗ್ರಫಿ, ಜವಳಿ ಉದ್ಯಮಗಳು ಕೂಡ ಮದುವೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸುತ್ತವೆ. ಅಲಂಕಾರ ಕ್ಷೇತ್ರ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಶೇಕಡಾ 10ರಷ್ಟು ಆದಾಯವನ್ನು ಮದುವೆ ಸಮಯದಲ್ಲಿ ಅಲಂಕಾರ ಕ್ಷೇತ್ರ ಪಡೆಯುತ್ತದೆ. ಭಾರತದ ಮದುವೆ ಬಗ್ಗೆ ಈ ಹಿಂದೆ ಹೇಳಿದ್ದ ಮೋದಿ, ಭಾರತದಲ್ಲಿಯೇ ಡೆಸ್ಟಿನೇಷನ್ ವೆಡ್ಡಿಂಗ್ ಮಾಡುವ ಕರೆ ನೀಡಿದ್ದರು.