Asianet Suvarna News Asianet Suvarna News

ಕೊರೋನಾ ಕಾಲದಲ್ಲೂ ಭಾರತಕ್ಕೆ ಭರ್ಜರಿ ಹೂಡಿಕೆ, 4.8 ಲಕ್ಷ ಕೋಟಿ ಎಫ್‌ಡಿಐ!

* ಕೋವಿಡ್‌ ಹೊರತಾಗಿಯೂ ಭಾರತದಲ್ಲಿ 2020ರಲ್ಲಿ 4.8 ಲಕ್ಷ ಕೋಟಿ ಎಫ್‌ಡಿಐ!

* ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಾದ ದೇಶಗಳಲ್ಲಿ ಭಾರತ ನಂ.5

* 2019ಕ್ಕೆ ಹೋಲಿಸಿದರೆ 2020ರಲ್ಲಿ ಎಫ್‌ಡಿಕೆ ಪ್ರಮಾಣ ಶೇ.27ರಷ್ಟು ಏರಿಕೆ

* ವಿಶ್ವದಾದ್ಯಂತ ಇಳಿಕೆ ಗತಿ ಇದ್ದರೂ, ಭಾರತ ಸೇರಿ ಕೆಲ ದೇಶಗಳಲ್ಲಿ ಎಫ್‌ಡಿಐ ಹೆಚ್ಚಳ

India Received 64 Billion Dollars FDI In 2020 Fifth Largest In World UN pod
Author
Bangalore, First Published Jun 22, 2021, 8:29 AM IST

 

ವಿಶ್ವಸಂಸ್ಥೆ: ಕೋವಿಡ್‌ ಅಲೆಯಿಂದಾಗಿ ವಿಶ್ವದ ಬಹುತೇಕ ದೇಶಗಳು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಳಿಕೆಯನ್ನು ದಾಖಲಿಸಿದ್ದರೆ, ವಿಶ್ವದ ಹೊಸ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲುಡುತ್ತಿರುವ ಭಾರತದಲ್ಲಿ 2020ನೇ ಸಾಲಿನಲ್ಲಿ 64 ಶತಕೋಟಿ ಡಾಲರ್‌ (ಅಂದಾಜು 4.80 ಲಕ್ಷ ಕೋಟಿ ರು.) ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಈ ಮೂಲಕ ಅತಿ ಹೆಚ್ಚು ಎಫ್‌ಡಿಐ ಸ್ವೀಕರಿಸಿದ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ನಂ.5 ಸ್ಥಾನಕ್ಕೇರಿದೆ ಎಂದು ವರದಿಯೊಂದು ತಿಳಿಸಿದೆ.

ವ್ಯಾಪಾರ, ಹೂಡಿಕೆ, ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮಿತಿಯಾದ ‘ಯುಎನ್‌ ಕಾನ್ಫರೆನ್ಸ್‌ ಆನ್‌ ಟ್ರೇಡ್‌ ಆ್ಯಂಡ್‌ ಡೆವಲಪ್‌ಮೆಂಟ್‌’ ಬಿಡುಗಡೆ ಮಾಡಿರುವ ‘ವಿಶ್ವ ಹೂಡಿಕೆ ವರದಿ 2021’ರಲ್ಲಿ ಈ ಮಾಹಿತಿ ನೀಡಲಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಿಶ್ವದಾದ್ಯಂತ ಎಫ್‌ಡಿಐ ಹೂಡಿಕೆ ಇಳಿಕೆಯಾಗಿದೆ. 2019ರಲ್ಲಿ 112 ಲಕ್ಷ ಕೋಟಿ ರು.( 1.5 ಲಕ್ಷ ಕೋಟಿ ಡಾಲರ್‌) ಇದ್ದ ಜಾಗತಿಕ ಎಫ್‌ಡಿಐ, 2020ರಲ್ಲಿ ಅಂದಾಜು 75 ಲಕ್ಷ ಕೋಟಿ ರು.ಗೆ (1 ಲಕ್ಷ ಕೋಟಿ ಡಾಲರ್‌)ಗೆ ಇಳಿಕೆಯಾಗಿದೆ. ಅಂದರೆ ಒಟ್ಟಾರೆ ಶೇ.35ರಷ್ಟುಇಳಿಕೆಯಾಗಿದೆ. ಇದಲ್ಲದೆ ಕೋವಿಡ್‌ ಅಲೆಯ, ಈಗಾಗಲೇ ಮಾಡಿರುವ ಹೂಡಿಕೆಗಳ ಬಗ್ಗೆಯೂ ಕಂಪನಿಗಳು ಮರು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಏರಿಕೆ:

ಭಾರತದಲ್ಲಿ 2019ರಲ್ಲಿ 3.82 ಲಕ್ಷ ಕೋಟಿ ರು.ನಷ್ಟಿದ್ದ ಎಫ್‌ಡಿಐ, 2020ರಲ್ಲಿ 4.80 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು ಶೇ.27ರಷ್ಟುಹೆಚ್ಚಳ. ಒಟ್ಟಾರೆ ಎಫ್‌ಐಡಿ ಹೂಡಿಕೆ ಪಟ್ಟಿಯಲ್ಲಿ ಭಾರತ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಮೂಲಸೌಕರ್ಯ ಮತ್ತು ಸೇವೆಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಬಂದಿದೆ. ಅದರ ಪರಿಣಾಮ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ತಂತ್ರಜ್ಞಾನ ಆಧರಿತ ವಲಯದ ಹೊಸ ಯೋಜನೆಗಳಲ್ಲಿ ಹೆಚ್ಚಿನ ಎಫ್‌ಡಿಐ ಹರಿದುಬಂದಿದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ನಡೆದ ಖರೀದಿ ಪ್ರಕ್ರಿಯೆಗಳು ಕೂಡಾ ಒಟ್ಟಾರೆ ಕೂಡಾ ಹೂಡಿಕೆ ಏರಿಕೆಗೆ ಕಾರಣವಾಗಿದೆ. ಅದರಲ್ಲಿ ಅಮೆಜಾನ್‌ ಮಾಡಿದ 2.8 ಶತಕೋಟಿ ಡಾಲರ್‌ (21000 ಕೋಟಿ ರು) ಪ್ರಮುಖವಾದುದು ಎಂದು ವರದಿ ಹೇಳಿದೆ.

ಭವಿಷ್ಯ ಏನು?;

2ನೇ ಅಲೆಯನ್ನು ಭಾರತ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. 2ನೇ ಅಲೆಯು ಈಗಾಗಲೇ ಹಲವು ಹೊಸ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 2ನೇ ಅಲೆಯ ಮುಖ್ಯವಾಗಿ ಆಟೋಮೊಬೈಲ್‌ ಕ್ಲಸ್ಟರ್‌ಗಳನ್ನು ಹೊಂದಿರುವ ಮಹಾರಾಷ್ಟ್ರ ಮತ್ತು ಮಾಹಿತಿ ತಂತ್ರಜ್ಞಾನದ ವಲಯಗಳನ್ನು ಹೊಂದಿರುವ ಕರ್ನಾಟಕ ರಾಜ್ಯಗಳ ಮೇಲೆ ಪರಿಣಾಮ ಬೀರಿದೆ. 2ನೇ ಅಲೆಯು ಉತ್ಪಾದನೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿರುವುದರ ಜೊತೆಗೆ ಹೊಸ ಹೂಡಿಕೆಯನ್ನು ಮತ್ತಷ್ಟುವಿಳಂಬ ಮಾಡಿದೆ.

ಇದೆಲ್ಲದರ ಹೊರತಾಗಿಯೂ ಭಾರತದ ಆರ್ಥಿಕತೆಯ ತಳಹದಿ ಭದ್ರವಾಗಿರುವುದು ಮಧ್ಯಮ ಅವಧಿಯಲ್ಲಿ ಹೂಡಿಕೆಗೆ ಭಾರತವನ್ನು ಉತ್ತಮ ತಾಣವನ್ನಾಗಿಯೇ ಪರಿಗಣಿಸುವಂತೆ ಮಾಡಿದೆ. ಅಲ್ಲದೆ ಭಾರತದ ಮಾರುಕಟ್ಟೆಗಾತ್ರವು ಕೂಡಾ ಹೂಡಿಕೆದಾರರಿಗೆ ದೇಶವು ಆಕರ್ಷಣೀಯವಾಗಿ ಮಾಡಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೂಡಿಕೆ ಇನ್ನಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಎಫ್‌ಡಿಐ ಹೂಡಿಕೆಯ ಟಾಪ್‌ 5 ದೇಶಗಳು (ಲಕ್ಷ ಕೋಟಿ ರು.ಗಳಲ್ಲಿ)

ದೇಶ  2019 2020
ಅಮೆರಿಕ 19.57 11.70
ಚೀನಾ 10.57 11.17
ಹಾಂಕ್‌ಕಾಂಗ್‌  5.50 8.92
ಸಿಂಗಾಪುರ 8.55 6.82
ಭಾರತ 3.82 4.80

Follow Us:
Download App:
  • android
  • ios