ಮುಂಬೈ[ಫೆ.27]: ಅತಿ ಹೆಚ್ಚಿನ ಶತಕೋಟ್ಯಧಿಪತಿಗಳನ್ನು ಹೊಂದಿರುವ ಜಗತ್ತಿನ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ವಿಶೇಷವೆಂದರೆ ಭಾರತದಲ್ಲಿ 2019ರಲ್ಲಿ ಪ್ರತಿ ತಿಂಗಳು ಸರಾಸರಿ ಮೂವರು ಶತಕೋಟ್ಯಧೀಶರು ಸೃಷ್ಟಿ ಆಗಿದ್ದಾರೆ.

ಭಾರತದಲ್ಲಿ 34 ಹೊಸ ಶತಕೋಟ್ಯಧೀಶರ ಉಗಮವಾಗಿದ್ದು, ಈ ಮೂಲಕ ಭಾರತದಲ್ಲಿ ಶತಕೋಟ್ಯಧೀಶರ ಸಂಖ್ಯೆ 138ಕ್ಕೆ ಏರಿಕೆ ಆಗಿದೆ. ವಿದೇಶದಲ್ಲಿರುವ ಭಾರತೀಯ ಮೂಲದ ಕೋಟ್ಯಧಿಪತಿಗಳನ್ನು ಪರಿಗಣಿಸಿದರೆ ಈ ಸಂಖ್ಯೆ 170ಕ್ಕೆ ಏರಿಕೆ ಆಗಲಿದೆ.

2020ರ ಹುರೂನ್‌ ಜಾಗತಿಕ ಶ್ರೀಮಂತರ ಪಟ್ಟಿಪಟ್ಟಿಬಿಡುಗಡೆ ಆಗಿದ್ದು, ಮುಕೇಶ್‌ ಅಂಬಾನಿ 4.69 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಈ ಬಾರಿಯೂ ಭಾರತದ ನಂ.1 ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮುಕೇಶ್‌ ಅಂಬಾನಿ ಸಂಪತ್ತಿಗೆ ಪ್ರತಿ ಗಂಟೆಗೆ 7 ಕೋಟಿ ರು. ಸೇರ್ಪಡೆ ಆಗುತ್ತಿದೆ.

ಹಿಂದುಜಾ ಕುಟುಂಬ 1.89 ಲಕ್ಷ ಕೋಟಿ ರು.ನೊಂದಿಗೆ ಎರಡನೇ ಸ್ಥಾನ ಮತ್ತು 1.19 ಲಕ್ಷ ಕೋಟಿ ರು.ನೊಂದಿಗೆ ಗೌತಮ್‌ ಅದಾನಿ ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇನ್ನು 799 ಶತಕೋಟ್ಯಧೀಶರನ್ನು ಹೊಂದಿರುವ ಚೀನಾ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 626 ಶತಕೋಟ್ಯಧೀಶರೊಂದಿಗೆ ಅಮೆರಿಕ 2ನೇ ಸ್ಥಾನದಲ್ಲಿದೆ.