GST ಹೆಚ್ಚಳದ ಭೀತಿ ದೂರ; ಶೇ.5 ತೆರಿಗೆ ಸ್ಲ್ಯಾಬ್ ಶೇ.8ಕ್ಕೆ ಏರಿಕೆ ವರದಿಯಲ್ಲಿ ಹುರುಳಿಲ್ಲ: ಕೇಂದ್ರ ಸರ್ಕಾರ
*ಶೇ.5ರ ಸ್ಲ್ಯಾಬ್ ರದ್ದುಗೊಳಿಸಿ ಶೇ.3 ಹಾಗೂ ಶೇ.8ರ ಜಿಎಸ್ ಟಿ ಸ್ಲ್ಯಾಬ್ ಪರಿಚಯಿಸಲಾಗೋದು ಎಂಬ ಬಗ್ಗೆ ವರದಿ
*ಜಿಎಸ್ ಟಿ ಮಂತ್ರಿಗಳ ಸಮೂಹ ಇನ್ನಷ್ಟೇ ಅಂತಿಮ ವರದಿ ಸಿದ್ಧಪಡಿಸಬೇಕಿದೆ
* ಇನ್ನೂ ನಿಗದಿಯಾಗದ ಜಿಎಸ್ ಟಿ ಮಂಡಳಿ ಸಭೆ
ನವದೆಹಲಿ (ಏ.19): ಪ್ರಸ್ತುತ ವಿಧಿಸಲಾಗುತ್ತಿರೋ ಶೇ.5 ತೆರಿಗೆ ಸ್ಲ್ಯಾಬ್ ರದ್ದುಗೊಳಿಸಿ ಅದನ್ನು ಶೇ.8ಕ್ಕೇರಿಸಲು ಜಿಎಸ್ ಟಿ ಮಂಡಳಿ (GST Council) ಸಿದ್ಧತೆ ನಡೆಸಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರೋ ಕೇಂದ್ರ ಸರ್ಕಾರ, ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದೆ.
ಪ್ರಸ್ತುತ ಚಾಲ್ತಿಯಲ್ಲಿರೋ ಶೇ.5 ಸರಕು ಮತ್ತು ಸೇವಾ ತೆರಿಗೆ (GST) ಸ್ಲ್ಯಾಬ್ ರದ್ದುಗೊಳಿಸಿ, ಶೇ.3 ಹಾಗೂ ಶೇ.8ರ ಸ್ಲ್ಯಾಬ್ ಪರಿಚಯಿಸಲು ಜಿಎಸ್ ಟಿ ಮಂಡಳಿ ಯೋಜನೆ ರೂಪಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಬಳಕೆಯಲ್ಲಿರೋ ಹಾಗೂ ಸದ್ಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕೆಲವು ವಸ್ತುಗಳನ್ನು ಶೇ.3 ಜಿಎಸ್ ಟಿ ಸ್ಲ್ಯಾಬ್ ಅಡಿ ತರಲಾಗುತ್ತದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಆದ್ರೆ ಈ ವರದಿಗಳು ಕೇವಲ ಊಹೆಗಳಾಗಿದ್ದು,ಇವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ, ಸರ್ಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿವೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮುಂದಿನ ತಿಂಗಳು ಮತ್ತೊಂದು 'ದುಬಾರಿ ಹೊಡೆತ'?
ಜಿಎಸ್ ಟಿ ದರ ಪರಿಷ್ಕರಣೆಗೆ ಸಂಬಂಧಿಸಿ ವಿಮರ್ಶೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತೆ ಜಿಎಸ್ ಟಿ ಕೌನ್ಸಿಲ್ ಗೆ ಶಿಫಾರಸ್ಸು ಮಾಡಲು ಕಳೆದ ವರ್ಷ ರಾಜ್ಯಗಳ ಮಂತ್ರಿಗಳ ಸಮೂಹ (GoM) ರಚಿಸಲಾಗಿದೆ.ಈ ಮಂತ್ರಿಗಳ ಸಮೂಹಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಸ್ಥರಾಗಿದ್ದಾರೆ. ಈ ಸಮೂಹದಲ್ಲಿ ಪಶ್ಚಿಮ ಬಂಗಾಳ, ಕೇರಳ ಹಾಗೂ ಬಿಹಾರದ ಮಂತ್ರಿಗಳು ಸದಸ್ಯರಾಗಿದ್ದಾರೆ. ಈ ಮಂತ್ರಿಗಳ ಸಮೂಹ (GoM) ಜಿಎಸ್ ಟಿ ದರಗಳ ಬಗ್ಗೆ ಪರಿಶೀಲನೆ ನಡೆಸಿ ಇನ್ನಷ್ಟೇ ಅಂತಿಮ ವರದಿ ಸಿದ್ಧಪಡಿಸಬೇಕಿದೆ. ಮಂತ್ರಿಗಳ ಸಮೂಹ ಅಂತಿಮಗೊಳಿಸಿದ ಶಿಫಾರಸ್ಸುಗಳನ್ನು ಜಿಎಸ್ ಟಿ ಮಂಡಳಿಗೆ ಕಳುಹಿಸಲಾಗುತ್ತದೆ. ಜಿಎಸ್ ಟಿ ಮಂಡಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯಸ್ಥರಾಗಿದ್ದು, ರಾಜ್ಯಗಳ ವಿತ್ತ ಸಚಿವರು ಈ ಮಂಡಳಿಯ ಸದಸ್ಯರಾಗಿದ್ದಾರೆ. ಆದರೆ, ಜಿಎಸ್ ಟಿ ದರಗಳ ಬದಲಾವಣೆ ಬಗ್ಗೆ ಈ ತನಕ ಮಂತ್ರಿಗಳ ಸಮೂಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅಲ್ಲದೆ, ಜಿಎಸ್ ಟಿ ಮಂಡಳಿ ಸಭೆ ದಿನಾಂಕ ಕೂಡ ಇನ್ನು ನಿಗದಿಯಾಗಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕ ಪ್ರವಾಸದಲ್ಲಿರೋ ಕಾರಣ ಅವರು ಅಲ್ಲಿಂದ ಹಿಂತಿರುಗಿದ ಬಳಿಕ ಸಭೆ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ.
ಜಿಎಸ್ ಟಿ ಸದ್ಯ ಶೇ.5,ಶೇ.12,ಶೇ.18 ಹಾಗೂ ಶೇ.28 ಸ್ಲ್ಯಾಬ್ ಗಳಲ್ಲಿವೆ. ಇನ್ನು ಚಿನ್ನ ಹಾಗೂ ಚಿನ್ನಾಭರಣಗಳಿಗೆ ಮಾತ್ರ ಶೇ.3 ಜಿಎಸ್ ಟಿ ಇದೆ. ಅಲ್ಲದೆ, ಅನ್ ಬ್ರ್ಯಾಂಡೆಡ್ ಹಾಗೂ ಪ್ಯಾಕ್ ಮಾಡದ ಆಹಾರ ಪದಾರ್ಥಗಳು ಸೇರಿದಂತೆ ಕೆಲವು ವಸ್ತುಗಳು ಪ್ರಸ್ತುತ ಜಿಎಸ್ ಟಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಶೇ.5ರ ಸ್ಲ್ಯಾಬ್ ರದ್ದುಗೊಳಿಸಿ ಆ ಜಾಗಕ್ಕೆ ಶೇ.3 ಹಾಗೂ ಶೇ.8ರ ಜಿಎಸ್ ಟಿ ಸ್ಲ್ಯಾಬ್ ಪರಿಚಯಿಸಲಾಗೋದು ಎಂಬ ಬಗ್ಗೆ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಿವೆ. ಇದು ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತಷ್ಟು ಹೊಡೆತ ನೀಡಲಿದೆ ಎಂದು ಹೇಳಲಾಗಿತ್ತು. ರಾಜ್ಯಗಳಿಗೆ ನೀಡುತ್ತಿರುವ ಜಿಎಸ್‌ಟಿ ಪರಿಹಾರವನ್ನು ಪೂರ್ತಿ ನಿಲ್ಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅದಕ್ಕೆ ಪ್ರತಿಯಾಗಿ ರಾಜ್ಯಗಳ ಆದಾಯ ಹೆಚ್ಚಿಸಲು ಮತ್ತು ತನ್ನ ಆದಾಯವನ್ನೂ ಹೆಚ್ಚಿಸಿಕೊಳ್ಳಲು ಜಿಎಸ್‌ಟಿ ಹೆಚ್ಚಿಸುವ ಚಿಂತನೆಯಲ್ಲಿದೆ ಎಂದು ಕೂಡ ಹೇಳಲಾಗಿತ್ತು.
ಶೇ.5ರ ಜಿಎಸ್ ಟಿ ಸ್ಲ್ಯಾಬ್ ಅನ್ನು ಶೇ.7 ಅಥವಾ ಶೇ.8 ಅಥವಾ ಶೇ.9ಕ್ಕೇರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಜಿಎಸ್ ಟಿ ಮಂಡಳಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದೆ.