Asianet Suvarna News Asianet Suvarna News

ಭಾರತಕ್ಕೆ ಟ್ರಂಪ್ ಸುಂಕ ಹೊಡೆತ ನಿಜವಾದ ಪರಿಣಾಮ ಎಷ್ಟು?

ಜಿಎಸ್‌ಪಿ ಕಾರ‌್ಯಕ್ರಮದಡಿ ಪ್ರಮುಖ ಫಲಾನುಭವಿ ದೇಶವಾಗಿದ್ದ ಭಾರತವನ್ನು ಈ ಪ್ರಯೋಜನದಿಂದ ಹೊರಹಾಕಿದ ಬಳಿಕ, ಅಮೆರಿಕದ ವಾಣಿಜ್ಯ ಯುದ್ಧದ ಮುಂದಿನ ಟಾರ್ಗೆಟ್ ಟರ್ಕಿ ದೇಶವಾಗಿದೆ. ಇದು ಅತಿ ಹೆಚ್ಚು ಪ್ರಯೋಜನ ಪಡೆಯುತ್ತಿರುವ 5 ನೇ ರಾಷ್ಟ್ರ.

Donald Trump terminates India's preferential trade status under GSP
Author
Bengaluru, First Published Jun 3, 2019, 4:07 PM IST

ಭಾರತದಿಂದ ರಫ್ತಾಗುವ ಕೆಲವು ಸರಕುಗಳಿಗೆ ಅಮೆರಿಕದಲ್ಲಿ ಸುಂಕ ವಿನಾಯ್ತಿ ನೀಡಲಾಗುತ್ತಿತ್ತು. ಜಗತ್ತಿನ ಹಲವಾರು ಅಭಿವೃದ್ಧಿಶೀಲ ದೇಶಗಳ ಸರಕುಗಳಿಗೆ ಅಮೆರಿಕವು ಹೀಗೆ ಸುಂಕ ವಿನಾಯ್ತಿ ನೀಡುವ ಜಿಎಸ್‌ಪಿ ಎಂಬ ವ್ಯವಸ್ಥೆ ಹೊಂದಿದೆ.

ಇದಕ್ಕೆ ಪ್ರತಿಯಾಗಿ ಭಾರತ ಕೂಡ ಅಮೆರಿಕದ ಸರಕುಗಳಿಗೆ ಇಲ್ಲಿನ ಮಾರುಕಟ್ಟೆಯಲ್ಲಿ ಕೆಂಪು ಹಾಸಿನ ಸ್ವಾಗತ ನೀಡಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತವು ಅಮೆರಿಕದ ಕೆಲ ಸರಕುಗಳಿಗೆ ದುಬಾರಿ ತೆರಿಗೆ ವಿಧಿಸಿದ್ದರಿಂದ ಹಾಗೂ ಇನ್ನು ಕೆಲ ಅಮೆರಿಕದ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಲು ನಿರಾಕರಿಸಿದ್ದರಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಾಗಿದ್ದರು.

ಹೀಗಾಗಿ ಅವರು ಭಾರತಕ್ಕೆ ನೀಡಿದ್ದ ಜಿಎಸ್‌ಪಿ ಸ್ಥಾನವನ್ನು ರದ್ದುಪಡಿಸಿದ್ದು, ಅದು ಜೂನ್ 5 ರಿಂದ ಜಾರಿಗೆ ಬರುತ್ತಿದೆ. ಇದರ ಒಳಮರ್ಮ ಏನು? ಅಮೆರಿಕ ಹಠಾತ್ ಈ ನಿರ್ಧಾರಕ್ಕೆ ಬಂದಿದ್ದು ಏಕೆ? ದೊಡ್ಡಣ್ಣನ ಈ ನಿರ್ಧಾರದಿಂದ ಭಾರತದ ಮೇಲಾಗುವ ಪರಿಣಾಮ ಏನು? ಪೂರ್ಣ ವಿವರ ಇಲ್ಲಿದೆ.

ಏನಿದು ಜಿಎಸ್‌ಪಿ?

ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಾಮಾನ್ಯವಾಗಿ ಆ ದೇಶಗಳಿಗೆ ಆಮದು ಸುಂಕದಿಂದ ವಿನಾಯ್ತಿ ನೀಡುತ್ತಿವೆ. ಅಮೆರಿಕ ಕೂಡ ಕೆಲವು ಆಪ್ತ ದೇಶಗಳಿಗೆ ಸಾಮಾನ್ಯೀಕೃತ ಆದ್ಯತಾ ವ್ಯವಸ್ಥೆ (ಜಿಎಸ್‌ಪಿ)ಯಡಿ ವ್ಯಾಪಾರ ವಹಿವಾಟು ನಡೆಸಲು ವಿಶೇಷ ಸ್ಥಾನಮಾನ ನೀಡಿದೆ. ಇಂತಹ ರಾಷ್ಟ್ರಗಳಿಂದ ಆಮದಾಗುವ ಕೆಲ ಸರಕುಗಳಿಗೆ ಸುಂಕ ವಿನಾಯ್ತಿ ನೀಡಲಾಗುತ್ತದೆ.

ಒಟ್ಟು 129 ಫಲಾನುಭವಿ ದೇಶಗಳ 2,000 ಉತ್ಪನ್ನಗಳಿಗೆ ಸುಂಕ ವಿನಾಯ್ತಿಯನ್ನು ಅಮೆರಿಕ ಕಲ್ಪಿಸಿದೆ. ಭಾರತ ಇದರ ಬಹುದೊಡ್ಡ ಫಲಾನುಭವಿ ದೇಶವಾಗಿದೆ. ಸದ್ಯ ಭಾರತಕ್ಕೆ ನೀಡಲಾಗಿರುವ ಜಿಎಸ್‌ಪಿ ಸ್ಥಾನಮಾನವನ್ನು ಹಿಂಪಡೆಯುವ ಬಗ್ಗೆ ಮಾರ್ಚ್ 5 ರಂದೇ ಅಂದರೆ ಲೋಕಸಭೆ ಚುನಾವಣೆಗೂ ಮೊದಲೇ ಅಮೆರಿಕ ಘೋಷಣೆ ಮಾಡಿತ್ತು.

60 ದಿನಗಳ ನೋಟಿಸ್ ಅವಧಿ ಮೇ 3 ಕ್ಕೆ ಕೊನೆಗೊಂಡಿದೆ. ಆದರೂ ಹೊಸ ಸರ್ಕಾರ ಬರುವವರೆಗೆ ವಿನಾಯ್ತಿ ಮುಂದುವರೆಸುವುದಾಗಿ ಹೇಳಿ ಜೂ.5 ಕ್ಕೆ ಭಾರತಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದಾಗುತ್ತದೆ ಘೋಷಿಸಲಾಗಿದೆ.

ಇದರರ್ಥ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ವಹಿವಾಟು ನಿಂತೇಹೋಯಿತು ಎಂದಲ್ಲ. ಭಾರತದಿಂದ ಜಿಎಸ್‌ಪಿ ಯೋಜನೆಯಡಿ ರಫ್ತಾಗುವ ಸರಕುಗಳಿಗೆ ನೀಡಲಾಗುತ್ತಿದ್ದ ತೆರಿಗೆ ವಿನಾಯ್ತಿ ಇನ್ನು ಮುಂದೆ ಸಿಗುವುದಿಲ್ಲ ಅಷ್ಟೆ

ಅಮೆರಿಕಕ್ಕೇಕೆ ಭಾರತದ ಮೇಲೆ ಕೋಪ?

ಅಮೆರಿಕವು ಆದ್ಯತಾ ಸುಂಕ ವ್ಯವಸ್ಥೆಯ ಪ್ರಯೋಜನಕ್ಕೆ ಅರ್ಹತೆ ಪಡೆದ ದೇಶಗಳ ವಾಹನಗಳ ಬಿಡಿಭಾಗಗಳು, ಜವಳಿ ಉತ್ಪನ್ನಗಳು ಸೇರಿದಂತೆ 2 ಸಾವಿರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸುತ್ತಿಲ್ಲ. 2017 ರಲ್ಲಿ ಭಾರತ ಈ ಜಿಎಸ್‌ಪಿಯಡಿ ಸುಮಾರು 39,900 ಕೋಟಿ ರು. ಮೊತ್ತದ ಸರಕುಗಳಿಗೆ ರಫ್ತು ಸುಂಕ ವಿನಾಯ್ತಿ ಪಡೆದುಕೊಂಡಿತ್ತು.

ಆದರೆ ನಮ್ಮ ಸರಕುಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಅವಕಾಶ ನೀಡಲಾಗುತ್ತಿಲ್ಲ ಎಂಬ ಭಾವನೆಯನ್ನು ಅಮೆರಿಕ ಹೊಂದಿತ್ತು. ಹೀಗಾಗಿ ಭಾರತಕ್ಕೆ ಜಿಎಸ್‌ಪಿಯಡಿ ವಿಶೇಷ ಸ್ಥಾನಮಾನ ನೀಡುವುದರಲ್ಲಿ ಅರ್ಥವಿಲ್ಲ ಎಂದು ಟ್ರಂಪ್ ನಿರ್ಧರಿಸಿದ್ದಾರೆ.

ಇದಕ್ಕೂ ಮೊದಲು ಭಾರತದ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಸಮಾನವಾದ ಅವಕಾಶ ನೀಡಲಾಗುತ್ತಿಲ್ಲ ಎಂದು ಅಮೆರಿಕದ ವೈದ್ಯಕೀಯ ಸಾಧನ ಮತ್ತು ಹೈನು ಉದ್ಯಮಗಳು ದೂರಿದ್ದವು. ಜೊತೆಗೆ ಸ್ಟೆಂಟ್‌ಗಳಂತಹ ಉತ್ಪನ್ನಗಳ ಮೇಲೆ ಭಾರತ ದರ ನಿಗದಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅಮೆರಿಕ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ಇದು ಸಣ್ಣ ವ್ಯವಹಾರ ಎನ್ನುತ್ತಿದೆ ಭಾರತ!

ವಿಶ್ವದ ದೊಡ್ಡಣ್ಣನ ನಿರ್ಣಯ ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಜಾಗತಿಕ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಕೂಡ ಇದು ಬಹುದೊಡ್ಡ ವ್ಯವಹಾರ ಎಂಬಂತೆ ಬಿಂಬಿಸುತ್ತಿದೆ. ಆದರೆ ಇದರಿಂದ ಭಾರತಕ್ಕೆ ಹೇಳಿಕೊಳ್ಳುವಂತಹ ನಷ್ಟವೇನೂ ಆಗುವುದಿಲ್ಲ ಎಂದು ಸ್ವತಃ ಭಾರತ ಸರ್ಕಾರ ಹೇಳಿಕೊಳ್ಳುತ್ತಿದೆ.

ಏಕೆಂದರೆ ಭಾರತ ವಾರ್ಷಿಕ 260 ಕೋಟಿ ಡಾಲರ್ (ಸುಮಾರು 40 ಸಾವಿರ ಕೋಟಿ ರು.) ಮೌಲ್ಯದ ಸರಕು ಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿದ್ದರೆ, 19 ಕೋಟಿ ಡಾಲ ರ್ ಮೌಲ್ಯದ ರಫ್ತಿಗೆ ಮಾತ್ರ ಜಿಎಸ್‌ಪಿ ಅಡಿಯಲ್ಲಿ ಸುಂಕ ವಿನಾಯ್ತಿ ದೊರೆಯುತ್ತಿತ್ತು.

ಉದಾಹರಣೆಗೆ 2018 ರಲ್ಲಿ ಭಾರತವು ಅಮೆರಿಕದಿಂದ 1768 ಕೋಟಿ ರು. ಮೌಲ್ಯದ ರಫ್ತಿಗೆ ಮಾತ್ರ ತೆರಿಗೆ ವಿನಾಯ್ತಿ ಪಡೆದಿದೆ. ಭಾರತ-ಅಮೆ ರಿಕದ ಒಟ್ಟು ವ್ಯವಹಾರಕ್ಕೆ ಹೋಲಿಸಿದರೆ ಇದು ಚಿಕ್ಕ ಮೊತ್ತ. ಚಿನ್ನಾ ಭರಣ, ಕೃಷಿ ಉತ್ಪನ್ನಗಳ ರಫ್ತಿಗೆ ಕಷ್ಟ ಅಮೆರಿಕ ನೀಡಿರುವ ಈ ಶಾಕ್‌ನಿಂದ ಒಟ್ಟಾರೆ ರಫ್ತಿನ ಮೇಲೆ ಹೆಚ್ಚೇನೂ ಪ್ರಭಾವ ಬೀರದಿದ್ದರೂ ಚಿನ್ನಾಭರಣ, ಲೆದರ್, ವೈದ್ಯಕೀಯ ಸಲಕರಣಗಳು, ರಾಸಾಯನಿಕಗಳು ಮತ್ತು ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು ಮತ್ತು ಸ್ಪರ್ಧೆ ಹೆಚ್ಚಾಗಬಹುದು ಎಂದು ಭಾರತೀಯ ರಫ್ತು ಸಂಘಟನೆ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ. ಜೊತೆಗೆ ಅಮೆರಿಕದ ನಿರ್ಣಯದಿಂದ ಭಾರತದ ರಫ್ತು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ರಫ್ತು ಉದ್ಯಮ ಬಿಕ್ಕಟ್ಟಿಗೆ ಒಳಗಾಗಲಿದೆ. 60 ದಿನಗಳ ಮೊದಲೇ ಟ್ರಂಪ್ ಈ ಬಗ್ಗೆ ಘೋಷಿಸಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷ ದೂರಿದೆ. ಭಾರತ ಈ ಮೂಲಕ ಎರಡು ಆಘಾತಕ್ಕೆ ಒಳಗಾಗಿದೆ. ಈ ಹಿಂದೆ ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಿರಲು ಭಾರತ ನಿರ್ಧರಿಸಿದೆ. ಇದರಿಂದಲೂ ಭಾರತಕ್ಕೆ ಹೊಡೆತವೇ ಹೆಚ್ಚು ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

ಜಿಎಸ್‌ಪಿ ನೀತಿ ಇರೋದು ಅಮೆರಿಕದಲ್ಲೊಂದೇ ಅಲ್ಲ!

ರಫ್ತಿಗೆ ಉತ್ತೇಜನ ನೀಡಿ ಬಡ ದೇಶಗಳ ಅಭಿವೃದ್ಧಿಗೆ ನೆರವು ನೀಡುವುದೇ ಜಿಎಸ್‌ಪಿ ಕಾರ‌್ಯಕ್ರಮದ ಉದ್ದೇಶ ಎಂದು ಅಮೆರಿಕ ಹೇಳಿಕೊಳ್ಳುತ್ತದೆ. ಕೇವಲ ಅಮೆರಿಕ ಮಾತ್ರವಲ್ಲ ಮುಂದುವರೆದ ದೇಶ ಎಂದು ಕರೆಸಿಕೊಳ್ಳುವ ಅನೇಕ ದೇಶಗಳು ಬಡ ದೇಶಗಳ ವ್ಯಾಪಾರಕ್ಕೆ ಅನುಕೂಲ ಮಾಡಿ ಕೊಟ್ಟು ಆ ದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಸುಂಕ ವಿನಾಯ್ತಿ ನೀಡುತ್ತಿವೆ. ಯುರೋಪಿಯನ್ ಯೂನಿಯನ್, ಬ್ರಿಟನ್, ಜಪಾನ್ ಮುಂತಾದ ದೇಶಗಳು ಹೀಗೆ ಸುಂಕ ವಿನಾಯ್ತಿ ನೀಡುತ್ತಿವೆ.

ಭಾರತಕ್ಕಾದ ನಷ್ಟ ಚೀನಾಕ್ಕಾದ ಲಾಭ!

ಎಫ್‌ಐಇಒ ಅಧ್ಯಕ್ಷ ಗಣೇಶ್ ಕುಮಾರ್ ಅವರ ಪ್ರಕಾರ, ಅಮೆರಿಕದ ಈ ನಿರ್ಧಾರದಿಂದ ಭಾರತದ ನೆರೆಯ ರಾಷ್ಟ್ರ ಚೀನಾಗೆ ಪರೋಕ್ಷವಾಗಿ ಲಾಭವಾಗಲಿದೆ. ಏಕೆಂದರೆ, ಅಮೆರಿಕವು ಭಾರತದಿಂದ ಪೂರೈಕೆಯಾಗುವ ಸರಕುಗಳಿಗೆ ಸುಂಕ ವಿನಾಯ್ತಿ ವಾಪಸ್ ಪಡೆದಿದ್ದರಿಂದ ಸೆಕ್ಷನ್ 301 ರ ಪಟ್ಟಿಯಲ್ಲಿರುವ ಸರಕುಗಳ ಪೂರೈಕೆಯನ್ನು ಭಾರತ ಕಡಿಮೆ ಮಾಡಬಹುದು. ಆಗ ಆ ವಸ್ತುಗಳನ್ನು ಚೀನಾ ಪೂರೈಸು ತ್ತದೆ. ಹೀಗಾಗಿ ಚೀನಾ ಪರೋಕ್ಷವಾಗಿ ಲಾಭ ಪಡೆಯುತ್ತದೆ. 2019 ರ ಮೊದಲ ಎರಡು ತಿಂಗಳಲ್ಲಿ ಸೆಕ್ಷನ್ 301 ಪಟ್ಟಿಯ ಲ್ಲಿರುವ ವಸ್ತುಗಳನ್ನು ಪೂರೈಸುವಲ್ಲಿ ಭಾರತ ಮೊದಲ ಸ್ಥಾನ ಪಡೆದಿತ್ತು. ಆ ಸ್ಥಾನ ಇನ್ನು ಚೀನಾದ್ದಾಗಬಹುದು. 

Follow Us:
Download App:
  • android
  • ios