DHL ಕೊರಿಯರ್ ಹೆಸರಲ್ಲಿ QR ಕೋಡ್ ವಂಚನೆ ಪತ್ತೆ, ಪಾರ್ಸೆಲ್ ಸ್ವೀಕರಿಸುವ ಮುನ್ನ ಇರಲಿ ಎಚ್ಚರ!
ಕ್ಯೂಆರ್ ಕೋಡ್ ಮೂಲಕ ಹೊಸ ಹೊಸ ರೂಪದಲ್ಲಿ ಭಾರಿ ವಂಚನೆ ನಡೆಯುತ್ತಿದೆ. ಇದೀಗ DHL ಕೊರಿಯರ್ ಹೆಸರಿನಲ್ಲಿ ವಂಚಕರು ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಆರ್ಡರ್ ವಸ್ತುಗಳ ಡೆಲಿವರಿ ನಡುವೆ ಈ ತಂತ್ರ ಪ್ರಯೋಗಿಸಲಾಗುತ್ತಿದೆ.
ನವದೆಹಲಿ(ಡಿ.22) ಡಿಜಿಟಲ್ ಜಗತ್ತಿನಲ್ಲಿ ವಂಚನೆ ಪ್ರಮಾಣವೂ ಹೆಚ್ಚು, ವಿಧಾನವೂ ಹೊಸದು. ಪ್ರತಿ ಬಾರಿ ಹೊಸ ರೂಪ, ಹೊಸ ವಿಧಾನದ ಮೂಲಕ ಅಮಾಯಕರನ್ನು ವಂಚನೆ ಮಾಡಲಾಗುತ್ತಿದೆ. ಇದೇ ಕಾರಣದಿಂದ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದೀಗ ದೇಶ ವಿದೇಶಗಳಲ್ಲಿ ಕೊರಿಯರ್ ಸೇವೆ ನೀಡುತ್ತಿರುವ ಜನಪ್ರಿಯ ಡಿಹೆಚ್ಎಲ ಹೆಸರಿನಲ್ಲಿ ಭಾರಿ ವಂಚನೆ ಪತ್ತೆಯಾಗಿದೆ. ಡಿಹೆಚ್‌ಎಲ್ ಹೆಸರಿನಲ್ಲಿ ಪಾರ್ಸೆಲ್ ಮಿಸ್ ಆಗಿದೆ, ನೀವು ನಾಟ್‌ರೀಚೆಬಲ್ ಎಂದೆಲ್ಲಾ ಹೇಳಿ ವಂಚನೆ ಮಾಡುತ್ತಿರುವುದು ಬಯಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ನಿಮ್ಮ ಖಾತೆಯ ಮೊತ್ತ ಖಾಲಿಯಾಗಲಿದೆ. ಇಷ್ಟೇ ಅಲ್ಲ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಲಿದೆ.
ಭಾರತ, ಸಿಂಗಾಪುರ, ಐರ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ DHL ಕೋರಿಯರ್ ಕ್ಯೂಆರ್ ಕೋಡ್ ಸ್ಕ್ಯಾಮ್ ಪತ್ತೆಯಾಗಿದೆ. ಮೊದಲ ನೋಟಕ್ಕೆ ಮಾತ್ರವಲ್ಲ, ಕೂಲಂಕುಷವಾಗಿ ಪರಿಶೀಲಿಸಿದರೂ ಇದರ ಹಿಂದೆ ವಂಚಕರ ಕೈವಾಡವಿದೆ ಅನ್ನೋದು ಗೊತ್ತಾಗುವುದಿಲ್ಲ. ಹಣ ಕಳೆದುಕೊಂಡ ಬಳಿಕ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
HSRP ನಂಬರ್ ಪ್ಲೇಟ್ ಬುಕಿಂಗ್ ವೇಳೆ ಮೋಸಹೋಗಬೇಡಿ, ಕರ್ನಾಟಕದಲ್ಲಿ QR ಹಗರಣ ಬೆಳಕಿಗೆ!
ಏನಿದು DHL ಕೂರಿಯರ್ ಕ್ಯೂಆರ್ ಕೋಡ್ ಸ್ಕ್ಯಾಮ್
DHL ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರಿಯರ್ ಸರ್ವೀಸ್ ನೀಡುತ್ತಿದೆ. ಪ್ರತಿ ಸೇವೆಯಲ್ಲೂ ಗ್ರಾಹಕರ ಜೊತೆ ನಿರಂತರ ಸಂಪರ್ಕ ಹೊಂದಿರುತ್ತದೆ. ಸಾಮಾನ್ಯವಾಗಿ DHL ಕೊರಿಯರ್ ಮೂಲಕ ಆರ್ಡರ್ ನಿರ್ದಿಷ್ಠ ಸಮಯದಲ್ಲಿ, ಹೇಳಿದ ದಿನಾಂಕದಂದೇ ತಲುಪುತ್ತದೆ. ಪಾರ್ಸೆಲ್ ಬರುವ ಮೊದಲು ಕರೆ ಅಥವಾ ಮೆಸೆಜ್ ಸೂಚನೆ ಬರಲಿದೆ. ಒಂದು ವೇಳೆ ಕರೆ ಸಿಗದಿದ್ದರೆ, ಮೆಸೇಜ್ ಡೆಲಿವರಿ ಆಗದಿದ್ದರೆ, ಅಥವಾ ಡೆಲಿವರಿ ಎಜೆಂಟ್ ಪಾರ್ಸೆಲ್ ತಂದಾಗ ವಿಳಾದಲ್ಲಿ ಯಾರೂ ಇರದೇ ಇದ್ದರೆ, ಪಾರ್ಸೆಲ್ ನೇರವಾಗಿ ಡಿಹೆಚ್‌ಎಲ್ ಕಚೇರಿಗೆ ಮರಳಲಿದೆ.
ಬಳಿಕ DHL ನಿಮಗೊಂದು ಪಾರ್ಸೆಲ್ ಕುರಿತು ಕಾರ್ಡ್ ಕಳುಹಿಸಲಿದೆ. ಪಾರ್ಸೆಲ್ ತಂದಾಗ ನೀವು ನಾಟ್ ರೀಚೆಬಲ್ ಆಗಿದ್ದೀರಿ. ನಿಮ್ಮ ಸಂಪರ್ಕಿಸಲು ಸಾಧ್ಯವಾಗಿಲ್ಲ, ವಿಳಾಸದಲ್ಲಿ ಇರಲಿಲ್ಲ ಅನ್ನೋ ಕಾರಣದ ಈ ಕಾರ್ಡ್‌ನಲ್ಲಿ ನಿಮ್ಮ ಪಾರ್ಸೆಲ್‌ನ್ನು ಬೇರೆ ದಿನ, ಬೇರೆ ಸಮಯ, ಬೇರೆ ವಿಳಾಸ ಅಥವಾ ಅದೇ ವೇಳಾಸಕ್ಕೆ ಮರು ಹೊಂದಿಸಲು DHL ಅವಕಾಶ ನೀಡುತ್ತದೆ. ಕಾರ್ಡ್‌ನಲ್ಲಿ ಕ್ಯೂಆರ್ ಸ್ಕ್ಯಾನ್ ಕೋಡ್ ನೀಡಲಾಗಿರುತ್ತದೆ. ಈ ಕೋಡ್ ಸ್ಕ್ಯಾನ್ ಮಾಡಿ ಪಾರ್ಸೆಲ್‌ನ್ನು ಯಾವ ದಿನ ಬೇಕು ಈ ದಿನ ಡೆಲಿವರಿ ಮಾಡುವಂತೆ ಮಾಡಲು ಸಾಧ್ಯವಿದೆ. ಆದರೆ ವಂಚಕರು ಇದೇ ಕಾರ್ಡನ್ನು ಸ್ವಲ್ಪವೂ ಅನುಮಾನ ಬರದಂತೆ ನಕಲು ಮಾಡಿದ್ದಾರೆ.
ಹೀಗೆ ಪಾರ್ಸೆಲ್ ಮಿಸ್ ಮಾಡಿಕೊಂಡ, ಯಾವ ವಸ್ತುವನ್ನು ಆರ್ಡರ್ ಮಾಡದ ಹಲವರಿಗೆ ಕಳುಹಿಸಲಾಗುತ್ತದೆ. ಈ ಕಾರ್ಡ್‌ನಲ್ಲಿ ನೀವು ಹಣ ಪಾವತಿಸಿ ಎಂದು ಹೇಳಿರುವುದಿಲ್ಲ, ಕೇವಲ ನಿಮ್ಮ ಪಾರ್ಸೆಲ್ ಬೇರೆ ದಿನ ಸ್ವೀಕರಿಸಲು ಸ್ಕ್ಯಾನ್ ಮಾಡಿ ದಿನಾಂಕ ಅಥವಾ ಇತರ ಮಾಹಿತಿ ಬದಲಾಯಿಸಿ ಎಂದಷ್ಟೆ ಇರುತ್ತದೆ. DHL ಕಳುಹಿಸಿದ ಕಾರ್ಡ್ ಆಗಿದ್ದರೆ ಇಷ್ಟು ಮಾಡಿದರೆ ಸಾಕು, ಆದರೆ ವಂಚಕರು ಕಳುಹಿಸಿದ ಕಾರ್ಡ್ ಸ್ಕ್ಯಾನ್ ಮಾಡಿದರೆ ಅದು DHL ವೆಬ್‌ಸೈಟ್‌ಗೆ ಲಿಂಕ್ ಆಗುವುದಿಲ್ಲ. ಬೇರೆ ವೆಬ್‌ಸೈಟ್ ತೆರೆದುಕೊಳ್ಳಲಿದೆ. ಇದು ಕೂಡ DHL ರೀತಿಯಲ್ಲೇ ಇರಲಿದೆ.ಹೀಗಾಗಿ ಯಾವುದೇ ಅನುಮಾನಗಳು ಬರುವುದಿಲ್ಲ. ನಿಮ್ಮ ಮಾಹಿತಿ, ಫೋನ್ ನಂಬರ್, ವಿಳಾಸ, ಸೇರಿದಂತೆ ಹಲವು ಮಾಹಿತಿ ದಾಖಲಿಸಿ,ಬಳಿಕ ಪಾರ್ಸೆಲ್ ದಿನಾಂಕ ಬದಲಿಸಲು ಸೂಚಿಸುತ್ತದೆ. ದಿನಾಂಕ ಬದಲಿಸಿದ ಬಳಿಕ ದಂಡದ ರೂಪದಲ್ಲಿ 50 ರೂಪಾಯಿ, 100 ರೂಪಾಯಿ ಕಟ್ಟಲು ಸೂಚಿಸುತ್ತದೆ. ಕೆಲವೊಮ್ಮೆ ಹಣ ವಹಿವಾಟು ಇರುವುದಿಲ್ಲ. ಆದರೆ ಮೊಬೈಲ್ ನಂಬರ್, ಒಟಿಪಿ ನಮೂದಿಸಲು ಸೂಚಿಸುತ್ತದೆ. ಇಷ್ಟು ಮಾಡಿದರೆ ಸಾಕು ಖಾತೆಯಲ್ಲಿರುವ ಹಣ ಖಾಲಿಯಾಗಲಿದೆ. ಜೊತೆಗೆ ಬ್ಯಾಂಕ್ ಸೇರಿದಂತೆ ಹಲವು ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಲಿದೆ.
ಕ್ಯೂಆರ್ ಕೋಡ್ ಮೂಲಕ ರಾಮ ಮಂದಿರ ದೇಣಿಗೆ ಸಂಗ್ರಹ ವಂಚನೆ ಬಯಲು, VHP ಎಚ್ಚರಿಕೆ!
ಏನು ಮಾಡಬೇಕು?
DHL ಪಾರ್ಸೆಲ್ ರಿಶೆಡ್ಯೂಲ್ ಕಾರ್ಡ್ ಅಥವಾ ಸೂಚನೆ ಬಂದಿದ್ದರೆ, ಅಧಿಕೃತ DHL ವೆಬ್‌ಸೈಟ್‌ಗೆ ತೆರಳಿ ಪರಿಶೀಲಿಸಿ, ನಿಮ್ಮ ಪಾರ್ಸೆಲ್, ಆರ್ಡರ್ ನಂಬರ್ ವಿಚಾರಿಸಿದರೆ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ನಕಲಿ, ವಂಚಕರ ಲಿಂಕ್ ಕ್ಲಿಕ್ ಮಾಡಬೇಡಿ. ಅಧಿಕೃತ DHL ವೆಬ್‌ಸೈಟ್ ಮಾತ್ರ ತೆರೆದು ಪಾರ್ಸೆಲ್ ಸ್ವೀಕರಿಸಲು ದಿನಾಂಕ ಬದಲಿಸಿ. ಹೊರಗಿನ ಯಾವುದೇ ವೆಬ್‌ಸೈಟ್ ಮೂಲಕ ಲಿಂಕ್ ಮೂಲಕ ನಿಮ್ಮ ಮಾಹಿತಿ ಹಂಚಿಕೊಳ್ಳಬೇಡಿ.