ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್ ಆರಂಭ| ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ| ಅನ್ನದಾತನ ನೆನೆಯುತ್ತಾ ಬಜೆಟ್ ಆರಂಭಿಸಿದ ಕುಮಾರಸ್ವಾಮಿ| ಬಜೆಟ್ ನಲ್ಲಿ ರೈತ ಸಮುದಾಯಕ್ಕೆ ಭರ್ಜರಿ ಕೊಡುಗೆ| ರೈತ ಸಿರಿ ಯೋಜನೆಯಡಿ ರಿಧಾನ್ಯ ವ್ಯವಸಾಯಕ್ಕೆ ರೈತರಿಗೆ ಪ್ರತಿ ಹೆಕ್ಟರ್ ಗೆ 10 ಸಾವಿರ ರೂ.

CM Kumarswamy Presenting State Budget in Vidhansoudha

ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ.

ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.

ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ರೈತರೊಂದಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಸಿಎಂ ಭರವಸೆ ನೀಡಿದರು.

ಸಾಲಮನ್ನಾವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಸಾಲಮನ್ನಾ ಮಾಡಿಯೇ ಸಿದ್ಧ ಎಂದು ಕುಮಾರಸ್ವಾಮಿ ಈ ವೇಳೆ ವಾಗ್ದಾನ ಮಾಡಿದರು. 

ಅದರಂತೆ ರಾಜ್ಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ನೀಡಿದ ಆದ್ಯತೆಯತ್ತ ನೋಡುವುದಾದರೆ..

1. ಕೃಷಿ ಹೊಂಡ ಸ್ಥಾಪನೆಗೆ 250 ಕೋಟಿ ರೂ. ಮೀಸಲು
2. ಇಸ್ರೇಲ್ ಮಾದರಿಯಲ್ಲಿ ಕಿರು ನೀರಾವರಿ ಯೋಜನೆ. ಇದಕ್ಕೆ 145 ಕೋಟಿ ರೂ. ಮೀಸಲು.
3. ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ವ್ಯವಸಾಯಕ್ಕೆ ರೈತರಿಗೆ ಪ್ರತಿ ಹೆಕ್ಟರ್ ಗೆ 10 ಸಾವಿರ ರೂ.ದಂತೆ ನೇರ ನಗದು ವರ್ಗಾವಣೆ
4. ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಕೇವಲ ವಿಮೆ ಕಂಪನಿಗಳಿಗೆ ಸಹಾಯ ಮಾಡುತ್ತಿದ್ದು, ರಾಜ್ಯದಲ್ಲಿ ಹೊಸ ವಿಮೆ ಯೋಜನೆಗೆ ನೀಲನಕ್ಷೆ ಸಿದ್ಧ.
5. ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್. ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾವು ಉತ್ಪನ್ನ ಸಂಸ್ಕರಣ ಘಟಕ ಮತ್ತು ಕೋಲಾರದಲ್ಲಿ ಟೊಮೆಟೋ ಉತ್ಪನ್ನ ಸಂಸ್ಕರಣ ಘಟಕ. ಇದಕ್ಕಾಗಿ 20 ಕೋಟಿ ರೂ. ಮೀಸಲು.
6. ಬರ ಪರಿಹಾರಕ್ಕಾಗಿ ಪ್ರತಿ ಜಿಲ್ಲಾ ಪಂಚಾಯ್ತಿಗೆ 30 ಕೋಟಿ ರೂ. ಬಿಡುಗಡೆ. ಒಟ್ಟು 300 ಕೋಟಿ ರೂ. ಮೀಸಲು.
7. ಸಾವಯವ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ 35 ಕೋಟಿ ರೂ. ಮೀಸಲು.
8. ರಾಮನಗರ ಮತ್ತು ಹಾವೇರಿಯಲ್ಲಿ ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂ. ಮೀಸಲು.
9. ಚಾಮರಾಜನಗರದಲ್ಲಿರುವ ರೇಷ್ಮೆ ಕಾರ್ಖಾನೆಗೆ 5 ಕೋಟಿ ರೂ. ಮೀಸಲು.

10. 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶು ಚಿಕಿತ್ಸಾ ಕೇಂದ್ರ ಸ್ಥಾಪನೆ.
11. ಹಾಲು ಉತ್ಪಾದನೆ ಪ್ರೋತ್ಸಾಹಧನ 6ರೂ. ಹೆಚ್ಚಳ.
12. ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ. ಮೀಸಲು.

13. ಶೂನ್ಯ ಬಂಡವಾಳ ಕೃಷಿ ಯೋಜನೆ ಜಾರಿ

14. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ.

15. ಸಾವಯವ ಕೃಷಿಗೆ 35 ಕೋಟಿ ರೂ. ಅನುದಾನ.
16. ಕೃಷಿ ವಿಶ್ವವಿದ್ಯಾಲಯಕ್ಕೆ 40 ಕೋಟಿ ಅನುದಾನ.

17.ತೋಟಗಾರಿಕೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್​.
18. ಜೇನು ಕೃಷಿಗೆ 5 ಕೋಟಿ ರೂ. ಅನುದಾನ.

ಕೃಷಿ:
ಕೃಷಿ ವಲಯದಲ್ಲಿ ರೈತರು ಎರಡು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾರಣದಿಂದ ಬೆಳೆಯ ಇಳುವರಿಯಲ್ಲಿ ಆಗುವ ಕುಸಿತ. ತಾವು ಬೆಳೆದಿರುವ ಬೆಳೆಗೆ ನ್ಯಾಯಯುತ ಬೆಲೆ ಸಿಗದೇ ಇರುವುದು.
         
ಆಯವ್ಯಯ 2019-2021  ಮೊದಲಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಹಮ್ಮಿಕೊಂಡಿರುವ ಕ್ರಮಗಳನ್ನು ಸಿಎಂ ವಿವರಿಸಿದರು. 

ಕೃಷಿ ಭಾಗ್ಯ ಯೋಜನೆಯಡಿ ಒಣಭೂಮಿ ರೈತರಿಗೆ ಸಂರಕ್ಷಿತ ನೀರು ಒದಗಿಸಲು ಕೃಷಿ ಹೊಂಡಗಳನ್ನು ಸ್ಥಾಪಿಸಲು ಸಹಾಯಧನ ನೀಡುವ ಕಾರ್ಯಕ್ರಮವನ್ನು ಈ ಸಾಲಿನಲ್ಲಿಯೂ ಮುಂದುವರೆಸಲಾಗಿದೆ. ಇದಕ್ಕಾಗಿ 250 ಕೋಟಿ ರೂ.ಗಳನ್ನು ವೆಚ್ಚ ಮಾಡಲು ನಿಧರ್ಧರಿಸಲಾಗಿದೆ. 

ಶೂನ್ಯ ಬಂಡವಾಳ ಕೃಷಿಯನ್ನು ನಮ್ಮ ರಾಜ್ಯದಲ್ಲಿ  2018-19ನೇ ಸಾಲಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಕೃಷಿ ಪರಿಕರಗಳಿಗಾಗಿ ಯಾವುದೇ ರೀತಿಯ ಹಣವನ್ನು ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಅಲ್ಲದೇ, ಈ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ಅನುದಾನವನ್ನು ನೀಡಲಾಗಿರುತ್ತದೆ. 

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು 2019-20ನೇ ಸಾಲಿನಲ್ಲಿ 40 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಸಾವಯವ ಕೃಷಿಯು ಇತ್ತೀಚೆನ ದಿನಗಳಲ್ಲಿ ಜನಪ್ರಿಯವಾಗಿದೆ. ಹಾಗೂ ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ರೈತರು ಈ ಬೆಳೆಯನ್ನು ಬೆಳೆಯಲು ಉತ್ತೇಜಿಸಲು ಈ ವರ್ಷವು ಸಹಾ ಈ ಯೋಜನೆಯನ್ನು  ಮುಂದುವರೆಸಿ ಇದಕ್ಕೆ 35 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ. 

ಸಾವಯವ ಕೃಷಿ ಹಾಗೂ ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಒದಗಿಸಲು ಹಾಗೂ ಈ ಉತ್ಪನ್ನಗಳ ಮಾರುಕಟ್ಟೆಯ ಬಲವರ್ಧನೆ ಅಂದರೆ, ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದಡಿ ಅರ್ಹ ಉದ್ದಿಮೆದಾರರು ಹಾಗೂ ನವೋದ್ಯಮಿಗಳಿಗೆ ಶೇ.50ರ ದರದಲ್ಲಿ ಪ್ರೋತ್ಸಾಹಧನವನ್ನು ನೀಡಲಾಗುವುದು. 

ಈ ಉದ್ದೇಶಕ್ಕಾಗಿ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. ಕಡಿಮೆ ನೀರನ್ನು ಉಪಯೋಗಿಸಿ, ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯುವ ಉದ್ದೇಶದಿಂದ  2018-19ನೇ ಸಾಲಿನಲ್ಲಿ ಇಸ್ರೇಲ್ ಮಾದರಿಯ ಕಿರು ನೀರಾವರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಳೆದ ಆರು ತಿಂಗಳಿನಲ್ಲಿ ಈ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿ ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ  2019-20ನೇ ಸಾಲಿಗೆ 145 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಎಂಬ ಹೊಸ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯಲ್ಲಿ ಸಿರಿಧಾನ್ಯಗಳ ವಿಸ್ತೀರ್ಣವನ್ನು ವಿವಿಧ ಹಂಗಾಮುಗಳಲ್ಲಿ ಹೆಚ್ಚಿಸಲು ಒಟ್ಟಾರೆ 10,000 ಹೆಕ್ಟೇರ್‌ಗಳಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ.ಗಳಂತೆ ರೈತರಿಗೆ ಅನುದಾನವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುವುದು. 

ಈ ಉದ್ದೇಶಕ್ಕಾಗಿ 10 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಅಧಿಕ ಮಳೆ ಬೀಳುವ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭತ್ತದ ವಿಸ್ತೀರ್ಣ ಹಾಗೂ ಇಳುವರಿ ಸಹ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ, ಕರಾವಳಿ ಹಾಗೂ ಮಲೆನಾಡಿನ ರೈತರನ್ನು ಉತ್ತಮವಾಗಿ ಭತ್ತವನ್ನು ಬೆಳೆಯಲು ಪ್ರೇರೇಪಿಸಲು ಹೆಕ್ಟೇರ್‌ಗೆ 7,500 ರೂ.ಗಳಂತೆ ಪ್ರೋತ್ಸಾಹ ಧನವನ್ನು ಕರಾವಳಿ ಪ್ಯಾಕೇಜ್ ಎನ್ನುವ ಕಾರ್ಯಕ್ರಮದ ಮೂಲಕ ನೀಡಲು ಉದ್ದೇಶಿಸಲಾಗಿದ್ದು, 5 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.  

ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಉನ್ನತೀಕರಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಅನುದಾನ ನೀಡಲಾಗುವುದು. ಅಲ್ಲದೇ, ಕರ್ನಾಟಕ ರಾಜ್ಯ ಬೀಜ ನಿಗಮಕ್ಕೂ ಸಹ ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರೂ.ಳನ್ನು ನಿಗದಿಪಡಿಸಿದೆ. ಮೇಲಿನ ಎಲ್ಲಾ ಯೋಜನೆಗಳನ್ನು ಅಳವಡಿಸಿಕೊಂಡು ಕೃಷಿಕರು ಬೆಳೆಯನ್ನು ಬಿತ್ತಿದ ನಂತರವೂ, ಕೃಷಿ ಇಳುವರಿ ಮಳೆಯನ್ನು ಅವಲಂಬಿಸಿರುತ್ತದೆ. 

ಒಣ ಬೇಸಾಯ ಪದ್ಧತಿ ಇರುವ ಕೃಷಿ ಪ್ರದೇಶಗಳಲ್ಲಿ ರೈತರು ರಾಜ್ಯದ ಒಂದಲ್ಲ ಒಂದು ಪ್ರದೇಶದಲ್ಲಿ ಬರಕ್ಕೆ ತುತ್ತಾಗುತ್ತಿರುತ್ತಾರೆ. ಇದಲ್ಲದೆ, ಹಲವು ಸಲ ಅತಿವೃಷ್ಟಿಯಿಂದಲೂ ಸಹ ಬೆಳೆ ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಲೆಂದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೇ ಸರ್ಕಾರವ ಹೊಸ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರುವಲ್ಲಿ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲು ಉದ್ದೇಶಿಸಿದೆ.  
 
ಉತ್ತರ ಹಾಗೂ ದಕ್ಷಿಣ ಕರ್ನಾಟಕ್ಕೆ ಒಂದರಂತೆ ವಿಶ್ವ ದರ್ಜೆಯ ಶಾಶ್ವತ ಕೃಷಿ ಪ್ರಾತ್ಯಕ್ಷಿತೆ ಕೇಂದ್ರವನ್ನು ಸ್ಥಾಪಿಸಿದ್ದಲ್ಲಿ, ಶಾಲಾ ಮಕ್ಕಳು ಹಾಗೂ ರೈತರು ತಮಗೆ ಅಗತ್ಯವಿರುವಾಗ ಭೇಟಿ ನೀಡಿ ವಿವಿಧ ಬೆಳೆಗಳ ಬಗ್ಗೆ ಮಾಹಿತಿ, ಬೆಳೆಯುವ ಕೃಷಿ ತಂತ್ರಜ್ಞಾನ, ಕೊಯ್ಲು ವಿಧಾನ, ಕೊಯ್ಲೋತ್ತ ಸಂಸ್ಕರಣಾ ಮಾಹಿತಿಗಳ ಬಗ್ಗೆ ವಿವರ ಪಡೆಯಬಹುದಾಗಿದೆ. 

ಈ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕದ ಕೃಷಿ ಪ್ರಾತ್ಯಕ್ಷಿತೆ ಸಂಸ್ಥೆಯನ್ನು ಮಂಡ್ಯ ಜಿಲ್ಲೆಯ ವಿ.ಸಿ. ಫಾರಂನಲ್ಲಿ ಹಾಗೂ ಉತ್ತರ ಕರ್ನಾಟಕದ ಕೃಷಿ ಪ್ರಾತ್ಯಕ್ಷಿತೆಯನ್ನು ರಾಯಚೂರಿನ ಸಿಂಧನೂರು ತಾಲ್ಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರಾತ್ಯಕ್ಷಿತೆ ಕೇಂದ್ರಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಎಲ್ಲಾ ವಿಭಾಗಗಳ ಪ್ರಾತ್ಯಕ್ಷಿತೆಗಳನ್ನು ಏರ್ಪಡಿಸಲಾಗುವುದು. 

ಈ ಸ್ಥಳಕ್ಕೆ ಬರುವ ಶಾಲಾ ಮಕ್ಕಳು ಹಾಗೂ ರೈತ ಸಮುದಾಯಗಳಿಗೆ ವಸತಿ, ಊಟ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು. ಈ ಕಾರ್ಯಕ್ರಮಗಳಿಗೆ  2019-20ನೇ ಸಾಲಿನಲ್ಲಿ 10 ಕೋಟಿ ರೂ. ಒದಗಿಸಲಾಗಿದೆ. 

ತೋಟಗಾರಿಕೆ:

ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ದಾಳಿಂಬೆ ಹಾಗೂ ದಾಕ್ರ್ಷಿ ಬೆಳೆಗಾರರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಬೆಳೆಗಾರರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರವು 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. 

ರಾಜ್ಯದ ಮಾವು, ಟೊಮೆಟೋ ಹಾಗೂ ಇತರೆ ತೋಟಗಾರಿಕಾ ಬೆಳೆಗಳಿಗೆ ಸುಸ್ಥಿರ ಮಾರುಕಟ್ಟೆ, ಉತ್ತಮ ದರ ಒದಗಿಸುವುದರ ಮುಖೇನ ರೈತರ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಲು, ರಾಮನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕಗಳನ್ನು ಹಾಗೂ ಕೋಲಾರದಲ್ಲಿ ಟೊಮೆಟೋ ಉತ್ಪನ್ನಗಳ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 

ಈ ಕಾರ್ಯಕ್ರಮಕ್ಕಾಗಿ 2019-20ನೇ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆ ಉತ್ತೇಜನ ಸಂಬಂಧಿತ ಚಟುವಟಿಕೆಗಳಾದ ತರಬೇತಿ, ಕೊಯ್ಲೋತ್ತರ ವ್ಯವಸ್ಥೆ, ಮೌಲ್ಯವರ್ಧನೆ, ಪರಿಪೋಷಣಾ ಕೇಂದ್ರಗಳು ಸಂಸ್ಕರಣೆ, ಸರಬರಾಜು ಸರಪಳಿ, ಮಾರುಕಟ್ಟೆ ಬಲವರ್ಧನೆ, ಅಂಕಿ ಅಂಶಗಳ ಸಂಗ್ರಹಣೆ, ಮಾರ್ಕೆಟ್ ಇಂಟಲಿಜೆನ್ಸ್ ಹಾಗೂ ಇತರೆ ಬೆಂಬಲ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಖಾಸಗಿ ಸಹಭಾಗಿತ್ವದಲ್ಲಿ ಒಂದು ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ  2 ಕೋಟಿ ರೂ.ಗಳ ಅನುದಾನ ಪ್ರಸ್ತಾಪಿಸಲಾಗಿದೆ.  

ರಾಜ್ಯದಲ್ಲಿ ಜೇನುಗಾರಿಕೆಯನ್ನು ರೈತರಿಗೆ ಸುಸ್ಥಿರ ಮತ್ತು ನಿರಂತರ ಆದಾಯ ತರುವ ಉದ್ದಿಮೆಯನ್ನಾಗಿ ರೂಪಿಸುವ ಉದ್ದೇಶದಿಂದ ಜೇನುಕೃಷಿಯನ್ನು ಇನ್ನಷ್ಟು ಉತ್ತೇಜಿಸಲು 2019-20ನೇ ಸಾಲಿನಲ್ಲಿ 5 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. 69. ರಾಜ್ಯದಲ್ಲಿ ಸುಮಾರು 1,12,000 ರೈತರು 50,000 ಎಕರೆ ಪ್ರದೇಶದಲ್ಲಿ ಮಿಡಿ ಸೌತೆಯನ್ನು ಬೆಳೆಯುತ್ತಿದ್ದಾರೆ. 

ಈ ಬೆಳೆಯು ಬಹುತೇಕ ವಿದೇಶಕ್ಕೆ ರಫ್ತಾಗುತ್ತಿದ್ದು ಇದರ ಈಗಿನ ಮೌಲ್ಯ ಸುಮಾರು 1,285 ಕೋಟಿ ರೂ. ಗಳಾಗಿರುತ್ತದೆ.  ಈ ಮೌಲ್ಯವನ್ನು ಇನ್ನೂ ಹೆಚ್ಚಿಸಲು ಹಾಗೂ ಮಿಡಿ ಸೌತೆ ಬೆಳೆಗಾರರ ಅನುಕೂಲಕ್ಕಾಗಿ 6 ಕೋಟಿ ರೂ.ಗಳ ಒಂದು ವಿಶೇಷ ಪ್ಯಾಕೇಜನ್ನು ಘೋಷಿಸಲಾಗಿದೆ. 

ರೇಷ್ಮೆ:

ದೇಶದ ಒಟ್ಟು ರೇಷ್ಮೆ ಬೆಳೆಯಲ್ಲಿ ಶೇ.50ರಷ್ಟು ಕರ್ನಾಟಕದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತದಿಂದ ರೇಷ್ಮೆ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೇಷ್ಮೆ ವಿಸ್ತರಣಾ ಚಟುವಟಿಕೆ ಕೈಗೊಳ್ಳಲು ಅನೇಕ ಪ್ರಗತಿಪರ ರೇಷ್ಮೆ ಕೃಷಿಕರಿಗೆ ಹೆಚ್ಚಿನ ತರಬೇತಿ ನೀಡಿ ಅವರುಗಳಿಗೆ ಗೌರವಧನ ನೀಡಿ ರೇಷ್ಮೆ ವಿಸ್ತರಣಾ ಕಾರ್ಯಕರ್ತರನ್ನಾಗಿ ಬಳಸಿಕೊಂಡು ರೇಷ್ಮೆ ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡುವ ಉದ್ದೇಶ ಹೊಂದಲಾಗಿದೆ. ಈ ಉದ್ದೇಶಕ್ಕಾಗಿ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ. 

ಸಂತೇಮರಹಳ್ಳಿಯ ರೇಷ್ಮೆ ಕಾರ್ಖಾನೆಯಲ್ಲಿ ಹೊಸ ತಾಂತ್ರಿಕತೆಯ ರೀಲಿಂಗ್ ಯಂತ್ರೋಪಕರಣಗಳನ್ನು ಅಳವಡಿಸಿ, ಆ ಭಾಗದ ಜನರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ. . 

ಚಾಮರಾಜನಗರದಲ್ಲಿರುವ ರೇಷ್ಮೆ ಕಾರ್ಖಾನೆಯು ಕಾರ್ಮಿಕರ ಕೊರತೆಯಿಂದ ಸ್ಥಗಿತಗೊಂಡಿದೆ. ಅನೇಕ ಯಂತ್ರಗಳು ಸಹ ಹಳೆಯದಾಗಿವೆ. ಈ ಸಂಸ್ಥೆಯನ್ನು ಪುನಃಶ್ಚೇತನಗೊಳಿಸಿದ್ದಲ್ಲಿ, ಹಿಂದುಳಿದ ಚಾಮರಾಜನಗರ ಜಿಲ್ಲೆಗೆ ಅನುಕೂಲವಾಗಲಿದೆ. ಈ ಉದ್ದೇಶದಿಂದ ಮುಚ್ಚಿರುವ ರೇಷ್ಮೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು 2019-20ನೇ ಸಾಲಿನಲ್ಲಿ 5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.

ರಾಮನಗರ ಮತ್ತು ಹಾವೇರಿಯಲ್ಲಿ ರೇಷ್ಮೆ ಮಾರುಕಟ್ಟೆಗಳ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಚನ್ನಪಟ್ಟಣದಲ್ಲಿರುವ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್‌ನ ಫಿಲೇಚರ್ ಕಾರ್ಖಾನೆಯು ಸದ್ಯಕ್ಕೆ ಮುಚ್ಚಲಾಗಿದೆ. ಈ ಕಾರ್ಖಾನೆಯ ಭೂಮಿ ಅತ್ಯಂತ ಪ್ರಮುಖ ಪ್ರದೇಶದಲ್ಲಿ ಇರುವುದರಿಂದ, ಈ ಸ್ಥಳದಲ್ಲಿ ಕರ್ನಾಟಕದ ರೇಷ್ಮೆ ಬಗ್ಗೆ ಮಾಹಿತಿ ನೀಡುವ ಎಂಪೋರಿಯಂನಲ್ಲಿ ಕರ್ನಾಟಕದ ರೇಷ್ಮೆ ವಲಯದ ಸಾಧನೆಗಳನ್ನು ಪ್ರದರ್ಶಿಸಲಾಗುವುದು ಹಾಗೂ ರೇಷ್ಮೆ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ಪ್ರಸ್ತಾಪಿಸಲಾಗಿದೆ. 

ಪಶುಸಂಗೋಪನೆ:

ಪಶುಪಾಲನಾ ಇಲಾಖೆಯ ತಜ್ಞ ಪಶುವೈದ್ಯರ ಸೇವೆಯನ್ನು ಬಳಸಿಕೊಂಡು ಪಶುಪಾಲಕರ ಮನೆಯ ಬಾಗಿಲಲ್ಲಿ ರೋಗಗ್ರಸ್ಥ ಜಾನುವಾರುಗಳಿಗೆ ವಿಶೇಷ ತುರ್ತು ಚಿಕಿತ್ಸೆ ನೀಡಲು 2 ಕೋಟಿ ರೂ. ವೆಚ್ಚದಲ್ಲಿ 15 ಜಿಲ್ಲೆಗಲ್ಲಿ ಸುಸಜ್ಜಿತ ಪಶುಚಿಕಿತ್ಸಾ ವಾಹನಗಳ ವ್ಯವಸ್ಥೆ ಮಾಡಲಾಗುವುದು.

ಬಡ ಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಪೂರೈಸುವ ದೃಷ್ಟಿಯಿಂದ ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 10,000 ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು ಪ್ರೋತ್ಸಾಹ ನೀಡಲಾಗುವುದು. 2019-20ನೇ ಸಾಲಿನಲ್ಲಿ ದೇಶೀಯ ಕುರಿ ತಳಿಗಳಲ್ಲಿ  ಅವಳಿ-ಜವಳಿ ಸಂತಾನೋತ್ಪತ್ತಿಯನ್ನು ಅಭಿವೃದ್ಧಿಗೊಳಿಸುವ ಯೋಜನೆಗೆ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.  ಈ ಯೋಜನೆಗೆ 2019-20ನೇ ಸಾಲಿನಲ್ಲಿ 2 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ

ಕರ್ನಾಟಕ ಸರ್ಕಾರ ರಾಜ್ಯದ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈಗಾಗಲೇ ಪ್ರತಿ ಲೀಟರ್ ಹಾಲು ಉತ್ಪಾದನೆಗೆ 5 ರೂ.ನಂತೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 6 ರೂ.ಗಳಿಗೆ ಹೆಚ್ಚಿಸಲಾಗುವುದು. 2019-20ನೇ ಸಾಲಿನಲ್ಲಿ ಈ ಯೋಜನೆಗೆ 1,459 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಒಟ್ಟಾರೆಯಾಗಿ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂ.ಗಳನ್ನು ನಮ್ಮ ಸರ್ಕಾರವು ವಿನಿಯೋಗಿಸಲಿದೆ.   

ಮೀನುಗಾರಿಕೆ: 

ಮೀನುಗಾರರ ಹಾಗೂ ಮೀನುಗಾರರ ದೋಣಿಗಳ ಸುರಕ್ಷತೆಯ ನಿಟ್ಟಿನಲ್ಲಿ ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿ.ಎ.ಟಿ. ಉಪಕರಣವನ್ನು ಶೇ.50ರಷ್ಟು ಸಹಾಯಧನ ನೀಡಿ ಅಳವಡಿಸಿಕೊಳ್ಳಲು ಪ್ರೋತ್ಸಾ  ನೀಡಲಾಗುವುದು. ಈ ಉದ್ದೇಶಕ್ಕಾಗಿ 3 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 

ರಾಜ್ಯದಲ್ಲಿ ಲಭ್ಯವಿರುವ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ ಸಿಗಡಿ ಮತ್ತು ಮೀನು ಕೃಷಿಯನ್ನು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ 1 ಲಕ್ಷ ರೂ.ಳ ಘಟಕ ವೆಚ್ಚಕ್ಕೆ ಶೇ.50ರಷ್ಟು ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 400 ಘಟಕಗಳಿಗೆ ಸಹಾಯಧನ ನೀಡುವ ಉದ್ದೇಶದಿಂದ 2 ಕೋಟಿ ರೂ.ಗಳನ್ನು ನೀಡಲಾಗಿದೆ. 

ಒಳನಾಡಿನ ಕೆರೆಗಳಲ್ಲಿನ ಮೀನುಗಾರಿಕೆ ಗುತ್ತಿಗೆಗಳನ್ನು ಸಂಘ ಸಂಸ್ಥೆಗಳ ಬದಲಾಗಿ ಸ್ಥಳೀಯ ಮೀನುಗಾರರಿಗೆ ಮೀಸಲಿಡುವ ಕುರಿತು ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ರಾಜ್ಯದಲ್ಲಿ ಮೀನುಗಾರರ ವಸತಿ ಬೇಡಿಕೆಗಳನ್ನು ಪೂರೈಸಲು ಈ ಸಾಲಿನಲ್ಲಿಯೂ ಕೂಡ ಮತ್ಸ್ಯಾಶ್ರಯ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ. ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಚಾಲ್ತಿಯಲ್ಲಿರುವ 2500 ಮನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.    

ಉಡುಪಿ ಜಿಲ್ಲೆಯ ಮಲ್ಪೆ ಕಡಲು ತೀರದ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗಾಗಿ ಒಂದು ಜೆಟ್ಟಿಯನ್ನು ನಿರ್ಮಿಸಲಾಗುವುದು ಮತ್ತು ಅಲ್ಲಿನ ಮೀನುಗಾರರಿಗೆ ಸಹಾಯವಾಗುವಂತೆ ಒಂದು ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇತರೆ ನೈರ್ಮಲ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 15 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ.  

ರೈತರಿಗೆ ತಾವು ಬೆಳೆದಿರುವ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗುವಂತೆ ಮಾಡುವುದು ನನ್ನ ಸರ್ಕಾರದ ದೊಡ್ಡ ಧ್ಯೇಯವಾಗಿದೆ ಎಂದು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ 12 ಅಧಿಸೂಚಿತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ರೈತ ಕಣಜ ಯೋಜನೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. 

ಈ ಯೋಜನೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ವರ್ಷವಿಡೀ ಒಂದು ಶಾಶ್ವತ ಸಂಗ್ರಹಣಾ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.  2019-20ನೇ ಸಾಲಿನಲ್ಲಿ 510 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈರುಳ್ಳಿ, ಆಲೂಗಡ್ಡೆ ಹಾಗೂ ಟೊಮೆಟೊ ಉತ್ಪನ್ನಗಳ ಬೆಲೆ ಕುಸಿತ ಉಂಟಾದ ಸಮಯದಲ್ಲಿ, ಸದರಿ ಉತ್ಪನ್ನಗಳಿಗೆ ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ಗೆ ಮೂಲ ಬೆಲೆ ನಿಗದಿಪಡಿಸಿ, ಮೂಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾದಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯಡಿ ವ್ಯತ್ಯಾಸದ ಮೊತ್ತವನ್ನು ಪ್ರೋತ್ಸಾಹಧನವಾಗಿ ಪಾವತಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 

ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಆರು ಸಿರಿಧಾನ್ಯಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡಿ, ಸಿರಿಧಾನ್ಯ ಉತ್ಪಾದಕ ಒಕ್ಕೂಟಗಳ ಮುಖಾಂತರ ರೈತರಿಂದ ಹಾಪ್‌ಕಾಮ್ಸ್, ನಂದಿನಿ ಔಟ್‌ಲೆಟ್ ಮುಂತಾದವುಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ರೂಪಿಸಲಾಗುವುದು. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು. .

ಗದಗ, ಹಾವೇರಿ, ಕುಂದಗೋಳ, ಹುಬ್ಬಳ್ಳಿ ಹಾಗೂ ಅಣ್ಣಿಗೇರಿಯಲ್ಲಿ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗುವುದು. ಈ ಉದ್ದೇಶಕ್ಕೆ 160 ಕೋಟಿ ರೂ.ಗಳನ್ನು ನೀಡಲಾಗುವುದು. ಮೇಲಿನ ಕ್ರಮಗಳಿಂದ ರೈರಿಗೆ ಸೂಕ್ತ ಬೆಲೆಯನ್ನು ಪಡೆಯಲು ಅನುಕೂಲವಾಗುವುದು. 

ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 300 ಎಕರೆ ಕೃಷಿ ಭೂಮಿಯಲ್ಲಿ 100 ರೈತರನ್ನು ಒಳಗೊಂಡ 500 ಸಂಯುಕ್ತ ಬೇಸಾಯಸಹಕಾರ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ 5 ಕೋಟಿ ರೂ. ಅನುದಾನ ಒದಗಿಸಲಾಗವುದು. 

ಈ ಯೋಜನೆಯಡಿಯ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ.3ರಷ್ಟು ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ನೀಡಲು ಉದ್ದೇಶಿಸಲಾಗಿದೆ.

Latest Videos
Follow Us:
Download App:
  • android
  • ios